ಮೈಸೂರು ಜಿಲ್ಲೆ, ಕೃಷ್ಣರಾಜ ನಗರದ ವಾರ್ಡ್ 2 ರ ಒಂದನೇ ಕ್ರಾಸ್ ನಲ್ಲಿರುವ ಕುಡಿಯುವ ನೀರಿನ ಟ್ಯಾಂಕ್ ಶಿಥಿಲಾವಸ್ಥೆಯಲ್ಲಿದ್ದು ಕುಸಿಯುವ ಹಂತದಲ್ಲಿದೆ. ಅಪಾಯ ಎದುರಾಗುವ ಮುನ್ನ ಪುರಸಭೆ ಅಧಿಕಾರಿಗಳು, ಸ್ಥಳೀಯ ಜನ ಪ್ರತಿನಿಧಿಗಳು ಗಮನ ಹರಿಸಿ ತೆರುವುಗೊಳಿಸಬೇಕಿದೆ.
ಕೃಷ್ಣರಾಜ ನಗರದ ವಿನಾಯಕ ಬಡಾವಣೆಯಲ್ಲಿ ಕುಡಿಯುವ ನೀರಿನ ಸಂಗ್ರಹಣಾ ಟ್ಯಾಂಕ್ ಇದ್ದು. ಈಗಾಗಲೇ ನೀರಿನ ಸರಬರಾಜು ನಿರ್ವಹಣೆ ಸ್ಥಗಿತಗೊಂಡಿದೆ. ಕಾರಣ ಹಲವಾರು ವರ್ಷಗಳೇ ಕಳೆದಿದ್ದು ಸುಸ್ಥಿತಿಯಲ್ಲಿಲ್ಲ. ಹಳೆಯದಾದ ವಾಟರ್ ಟ್ಯಾಂಕ್ ಸಧ್ಯ ಬಳಕೆಯಲಿಲ್ಲ. ಲಕ್ಷಾಂತರ ಲೀಟರ್ ಸಾಮರ್ಥ್ಯದ ವಾಟರ್ ಟ್ಯಾಂಕ್ ಆಗಿದ್ದು ರಸ್ತೆ ಬದಿಯಲ್ಲಿದೆ. ಸರ್ಕಾರಿ ಹೆರಿಗೆ ಆಸ್ಪತ್ರೆ ಹಿಂಭಾಗದ ರಸ್ತೆಯಲ್ಲಿದ್ದು ಸುತ್ತಲೂ ವಾಸದ ಮನೆಗಳಿವೆ, ವಾಹನಗಳ ಸಂಚಾರವಿರುವ ಬಡಾವಣೆ. ಉಪಯುಕ್ತವಲ್ಲದ, ಬಳಕೆಗೆ ಬಾರದ ವಾಟರ್ ಟ್ಯಾಂಕ್ ತೆರವುಗೊಳಿಸಿಲ್ಲ. ಒಂದು ವೇಳೆ ಬಳಕೆಯ ವಾಟರ್ ಟ್ಯಾಂಕ್ ಆಗಿದ್ದು ಶಿಥಿಲವಾಗಿದೆ ಅಪಾಯವಿದೆ ಎಂದರೆ ಅದನ್ನ ತೆರವು ಮಾಡಿಸಬೇಕಾದ್ದು ಪುರಸಭೆಯ ಜವಾಬ್ದಾರಿ.
ಅಪಾಯಕ್ಕೆ ಎಡೆ ಮಾಡಿಕೊಟ್ಟಂತಿರುವ ವಾಟರ್ ಟ್ಯಾಂಕ್ ರಸ್ತೆ ಪಕ್ಕದಲ್ಲಿದ್ದು ಸುತ್ತಲೂ ಮನೆಗಳು ಇರುವಾಗ ಮಳೆ, ಗಾಳಿಗೆ ಇಲ್ಲಾ ಸಾಮರ್ಥ್ಯ ಕಳೆದುಕೊಂಡು ಕುಸಿದುಬಿಟ್ಟರೆ ಸುತ್ತಲಿನ ಅಷ್ಟು ಮನೆಗಳಿಗೆ ಒಂದಲ್ಲಾ, ಒಂದು ರೀತಿ ಅಪಾಯ ಉಂಟು ಮಾಡುವ ಸಾಧ್ಯತೆಯಿದೆ. ಅದರಲ್ಲೂ, ಬೃಹತ್ತಾದ ವಾಟರ್ ಟ್ಯಾಂಕ್ ಧಾರಾಶಾಹಿಯಾದರೆ ಕುಸಿತದ ರಭಸಕ್ಕೆ ಅಕ್ಕಪಕ್ಕದ ಮನೆಗಳಿಗೆ ಹಾನಿಯಾಗಬಹುದು. ಜನ ಓಡಾಟವಿರುವುದರಿಂದ ಅಪಾಯ ನಿರ್ಲಕ್ಷ್ಯ ಮಾಡುವಂತಿಲ್ಲ.

ಈಗಾಗಲೇ ವಾಟರ್ ಟ್ಯಾಂಕ್ ಕಂಬಗಳು (ಪಿಲ್ಲರ್ ) ಗಾರೆ ಕಿತ್ತಿದೆ, ಕಬ್ಬಿಣ ತುಕ್ಕು ಹಿಡಿದು ಹೊರ ಕಾಣುತ್ತಿದೆ. ಶಿಥಿಲವಾಗಿದ್ದು ಸಾಮರ್ಥ್ಯ ಕುಸಿದಿದೆ. ಸುಭದ್ರವಾಗಿಲ್ಲ, ಆಗಲೋ ಈಗಲೋ ಅನ್ನುವಂತಿದೆ. ಹೀಗಿರುವಾಗ, ಪುರಸಭೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಬಾರದು.
ಕುಡಿಯುವ ನೀರಿನ ನಿರ್ವಹಣೆ ಜವಾಬ್ದಾರಿ ಹೊಂದಿರುವ ಪುರಸಭೆ ಹಳೆಯದಾದ, ಅಪಾಯಕಾರಿ ವಾಟರ್ ಟ್ಯಾಂಕ್ ನ್ನು ಇನ್ನು ಹಾಗೆಯೇ ಬಿಟ್ಟಿರುವುದು ಸೂಕ್ತವಲ್ಲ. ಯಾವುದಾದರೂ ಸಮಯದಲ್ಲಿ ನೆಲಕ್ಕುರುಳಿದರೆ ಏನಾದರೂ ಅನಾಹುತ ಘಟಿಸಿದರೆ ಹೊಣೆ ಹೊರುವವರು ಯಾರು?

ಹಳೆಯದಾದ ವಾಟರ್ ಟ್ಯಾಂಕ್ ಜನ ವಾಸ ಮಾಡುವ, ಸುತ್ತಲೂ ಮನೆಗಳಿರುವ,ವಾಹನ ಓಡಾಟದಿಂದ ಕೂಡಿರುವ ರಸ್ತೆ ಬದಿಯಲ್ಲಿ ಹಾಗೆ ಬಿಟ್ಟಿರುವುದು ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತದೆ. ಕೂಗಳತೆ ದೂರದಲ್ಲಿ ಸರ್ಕಾರಿ ಹೆರಿಗೆ ಆಸ್ಪತ್ರೆ, ತಾಲ್ಲೂಕು ಕಚೇರಿ, ಲೋಕೋಪಯೋಗಿ ಇಲಾಖೆ ಕಚೇರಿಗಳು ಸಹ ಹತ್ತಿರದಲ್ಲೇ ಇದೆ.
ಗಮನಕ್ಕೆ ಇಲ್ಲದೆ, ಜನನಿಬಿಡ ಪ್ರದೇಶವಾಗಿದ್ದು ಯಾರಿಗೂ ಏನು ಸಮಸ್ಯೆ ಆಗಲಾರದು ಅನ್ನುವಂತಿದ್ದರೆ ನಿರ್ಲಕ್ಷ್ಯ ವಹಿಸಿದ್ದಕ್ಕೂ ಒಂದು ಸಬೂಬು ಹೇಳಲು ಸಾಧ್ಯವಿತ್ತು. ಆದರೆ, ಹಳೆಯದಾದ ವಾಟರ್ ಟ್ಯಾಂಕ್ ಇರುವ ಸ್ಥಳ ಯಾವ ಸಬೂಬು ಹೇಳಲು ಆಗುವುದಿಲ್ಲ.
ಹೆಚ್ಚುಕಮ್ಮಿಯಾದರೆ ನೇರವಾಗಿ ಜನರ ಮೇಲೆ ಪರಿಣಾಮ ಬೀರುತ್ತದೆ. ಇಂತಹದ್ದರ ಕಡೆ ಪುರಸಭೆ ಗಮನ ಹರಿಸಿಲ್ಲ. ನೀರು ಸರಬರಾಜು ಮಾಡುವ ನೀರು ಘಂಟಿಗಳಾದರೂ ಗಮನಕ್ಕೆ ತರಬಹುದಿತ್ತು. ಅದು ಸಹ ಮಾಡಿಲ್ಲ. ಇನ್ನ ಅಧಿಕಾರಿಗಳು ಇತ್ತಕಡೆ ಭೇಟಿಕೊಟ್ಟು ಪರಿಶೀಲನೆ ಮಾಡಿ ಕ್ರಮ ಕೈಗೊಂಡು ವಾಟರ್ ಟ್ಯಾಂಕ್ ತೆರವು ಮಾಡಬಹುದಿತ್ತು. ಆದರೆ, ಇದುವರೆಗೆ ಅಂತಹ ಪ್ರಯತ್ನ ಮಾಡಿಲ್ಲ.

ಸ್ಥಳೀಯ ನಿವಾಸಿ ಗಣೇಶ್ ಮಾತನಾಡಿ ” ವಾಟರ್ ಟ್ಯಾಂಕ್ ತುಂಬಾ ಹಳೆಯದು. ರಸ್ತೆ ಪಕ್ಕದಲ್ಲಿ ಇದೆ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರು ಓಡಾಡುತ್ತಾರೆ. ಕಚೇರಿಗಳಿಗೆ, ಶಾಲೆಗೆ ತೆರಳುವ ರಸ್ತೆ. ಇನ್ನ ಮನೆಗಳು ಹತ್ತಿರದಲ್ಲಿ ಇದ್ದಾವೆ. ಮಳೆಗಾಳಿ ಸಂದರ್ಭದಲ್ಲಿ ಭಯ ಆಗ್ತಾ ಇರುತ್ತೆ. ಯಾರಾದ್ರೂ ಈ ಸುತ್ತಲೂ ಹೋಗ್ತಾ, ಬರ್ತಾ ಇದ್ರೆ ಬೇರೆ ಕಡೆ ಓಡಾಡಿ ಅಂತ ನಾನೆ ಸಾಕಷ್ಟು ಭಾರಿ ಹೇಳಿದ್ದೀನಿ. ಇದರಿಂದ ಯಾವತ್ತಿದ್ದರೂ ತೊಂದರೆ ಇದ್ದಿದ್ದೇ. ಈ ಕೂಡಲೇ ಅಧಿಕಾರಿಗಳು ಗಮನ ಹರಿಸಿ ವಾಟರ್ ಟ್ಯಾಂಕ್ ತೆರವುಗೊಳಿಸಬೇಕು ” ಎಂದು ಮನವಿ ಮಾಡಿದರು.
ನಿವೃತ್ತ ನೌಕರರಾದ ಶಾಂತರಾಜು ಮಾತನಾಡಿ ” ಅವಶ್ಯಕತೆ ಇಲ್ಲ ಅಂದ ಮೇಲೆ ದುಸ್ಥಿತಿಯಲ್ಲಿ ಇರುವ ಟ್ಯಾಂಕ್ ಇಟ್ಟುಕೊಂಡು ಎನ್ ಮಾಡ್ತಾರೆ? ಉಪಯೋಗದಲ್ಲಿ ಇರುವ ವಾಟರ್ ಟ್ಯಾಂಕ್ ಆಗಿದ್ದರು ಸರಿ ಸಾಮರ್ಥ್ಯ ಇಲ್ಲ, ಶಿಥಿಲವಾಗಿದೆ ಅದರಿಂದ ಅಪಾಯ ಆಗಬಹುದು ಎನ್ನವುದು ಕಂಡುಬಂದರೆ ಕೂಡಲೇ ತೆರವು (ಡೆಮೋಲಿಷನ್ ) ಮಾಡಬೇಕು. ಅದೇನು ಮಾಡದೆ ಹೀಗೆ ರಸ್ತೆ ಬದಿ ಇರೋದು ಒಳ್ಳೆಯದು ಅಲ್ಲ. ಯಾರಿಗಾದರೂ ತೊಂದರೆ ಆದರೆ ಅದಕ್ಕೆ ಪುರಸಭೆಯವರೇ ನೇರ ಹೊಣೆ ” ಎಂದರು.

ವಿದ್ಯಾರ್ಥಿ ಪ್ರಗತ್ ಮಾತನಾಡಿ ” ಇದರಿಂದ ಏನು ಉಪಯೋಗ ಇಲ್ಲ. ಹಾಗೆ ನೀರಿನ ಸಮಸ್ಯೆ ಇಲ್ಲ. ಬಳಕೆ ಇಲ್ಲದ ಟ್ಯಾಂಕ್ ಇರೋದು ಒಳ್ಳೆಯದು ಅಲ್ಲ. ಈ ರಸ್ತೆಯಲ್ಲಿ ಓಡಾಡುವಾಗ ಮನೆಯವರು ಹೇಳ್ತಾರೆ ವಾಟರ್ ಟ್ಯಾಂಕ್ ಕಡೆ ಹೋಗಬೇಡ ಬೇಕಾದರೆ ಬಳಸಿಕೊಂಡು ಹಿಂದಿನ ರಸ್ತೆಯಲ್ಲಿ ಹೋಗು. ಅಲ್ಲೇನಾದರು ಹೋದ್ರೆ ಬಯ್ಯುತ್ತಾರೆ.
ವಾಟರ್ ಟ್ಯಾಂಕ್ ಶಿಥಿಲ ಆಗಿರೋದಕ್ಕೆ ಇಲ್ಲಿ ಯಾರು ಹೆಚ್ಚಾಗಿ ನಿಲ್ಲೋದು, ಕೂರೋದು ಮಾಡಲ್ಲ. ಆಟ ಆಡಲು ಯಾರು ಬರಲ್ಲ. ಮಳೆ ಬರುವಾಗ ಯಾರು ನಿಲ್ಲೋದು ಇಲ್ಲ. ಇದನ್ನ ಹೊಡೆದುರುಳಿಸಿ ಮಕ್ಕಳಿಗೆ ಆಟ ಆಡೋದಕ್ಕೆ ಮೈದಾನ ಮಾಡಿಕೊಡಬೇಕು ” ಎಂದು ಮನವಿ ಮಾಡಿದರು.

ಆಟೋ ಡ್ರೈವರ್ ಇಜಾಜ್ ಅಹಮದ್ ಮಾತನಾಡಿ ” ತುಂಬಾ ವರ್ಷಗಳಿಂದ ಇರೋ ಟ್ಯಾಂಕ್ ಇದು.ದೂರಾನು ಇಲ್ಲ ಮನೆ, ಆಸ್ಪತ್ರೆ, ರಸ್ತೆ ಪಕ್ಕದಲ್ಲೇ ಇದೆ. ಯಾವುದೇ ಬಿಲ್ಡಿಂಗ್, ಮನೆ, ಯಾವುದೇ ಆಗಲಿ ಅದಕ್ಕೂ ಇಷ್ಟು ವರ್ಷ ಅಂತ ಬಾಳಿಕೆ ಅಂತ ಇರುತ್ತೆ. ಉಪಯೋಗ ಮಾಡಲು ಆಗಲ್ಲ ಅಂದಮೇಲೆ ಬೇರೆಯವರಿಗೆ ಅದರಿಂದ ತೊಂದರೆಯಾಗಬಾರದು. ಇದು ಬೇರೆ ತುಂಬಾ ಎತ್ತರ ಇದೆ. ದೊಡ್ಡ ಟ್ಯಾಂಕ್. ಏನಾದ್ರು ಬಿದ್ದೋದರೆ ತೊಂದರೆ ಆಗೇ ಆಗುತ್ತೆ. ಅಂತಹ ಪರಿಸ್ಥಿತಿ ಬರೋದಕ್ಕೂ ಮುಂಚೆ ವಾಟರ್ ಟ್ಯಾಂಕ್ ತೆಗೆಯೋದು ಒಳ್ಳೆಯದು ” ಎಂದರು.

ಅನಂತ ರಾಜು ಮಾತನಾಡಿ ” ಕೆ ಆರ್ ನಗರದಲ್ಲೇ ಪ್ರಮುಖ ಬಡಾವಣೆಯಿದು. ಪಕ್ಕದ ರಸ್ತೆಯಲ್ಲಿ ಎಲ್ಲಾ ಸರ್ಕಾರಿ ಕಚೇರಿಗಳು ಇರೋದು. ಅಲ್ಲದೆ, ಎಲ್ಲಾ ಓಡಾಟ ಮಾಡ್ತಾರೆ. ಅಧಿಕಾರಿಗಳು ಓಡಾಡ್ತಾರೆ ಕಣ್ಣು ಕಾಣಿಸೋದು ಇಲ್ವಾ. ಹಳೆಯ ಟ್ಯಾಂಕ್ ಶಿಥಿಲಗೊಂಡಿದೆ ಏನಾದ್ರು ಆದ್ರೆ ಏನು ಅಂತ ಒಬ್ಬರಿಗೂ ಯೋಚನೆ ಇಲ್ಲ. ಮುಂದಿನ ರಸ್ತೆಯಲ್ಲಿ ಎಂಎಲ್ಸಿ ಹೆಚ್. ವಿಶ್ವನಾಥ್ ಅವರ ಮನೆ ಕೂಡ ಇದೆ. ಅವರಿಗೂ ಸಹ ಗೊತ್ತಿರದೆ ಏನಿರಲ್ಲ. ಜನ ಪ್ರತಿನಿಧಿಗಳು ಸಹ ಗಮನ ಹರಿಸಿ ಆದಷ್ಟು ಬೇಗ ವಾಟರ್ ಟ್ಯಾಂಕ್ ತೆರವು ಮಾಡಿಸಲಿ ” ಎಂದು ವಿನಂತಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಕೊಡಗು | ಮುಂಗಾರು ಮಳೆ ಆರಂಭಕ್ಕೂ ಮುನ್ನವೇ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಿ : ಜಿಲ್ಲಾಧಿಕಾರಿ ವೆಂಕಟ್ ರಾಜಾ

ಮುಂದಿನ ಅಪಾಯಕ್ಕೆ ಕಾದಿರುವ ಹಳೆಯದಾದ, ಶಿಥಿಲವಾದ ವಾಟರ್ ಟ್ಯಾಂಕ್ ಅನಾಹುತ ತಂದಿಡುವ ಮೊದಲು ಪುರಸಭೆ ಅಧಿಕಾರಿಗಳು ಎಚ್ಚತ್ತುಕೊಂಡು ತೆರವುಗೊಳಿಸುವ ಪ್ರಕ್ರಿಯೆಗೆ ಮುಂದಾಗುವರೆ ಕಾದು ನೋಡಬೇಕಿದೆ.