- ಬೆಳಗ್ಗೆ 7 ಗಂಟೆಯ ನಂತರ ಎಂದಿನಂತೆ ರೈಲು ಸಂಚಾರ ಆರಂಭ
- ನಮ್ಮ ಮೆಟ್ರೋ ಪ್ರಯಾಣಿಕರು ಆಗಿರುವ ಬದಲಾವಣೆ ಗಮನಿಸಿ
ನೇರಳೆ ಮಾರ್ಗದಲ್ಲಿನ ಬೈಯಪ್ಪನಹಳ್ಳಿ ಮತ್ತು ಕೃಷ್ಣರಾಜಪುರ ಮೆಟ್ರೋ ನಿಲ್ದಾಣ ಸಂಪರ್ಕವನ್ನು ಕಲ್ಪಿಸಲು ಸಿಗ್ನಲಿಂಗ್ ಹಾಗೂ ಇತರ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಈ ಹಿನ್ನೆಲೆ, ಜುಲೈ 10 ರಿಂದ ಆಗಸ್ಟ್ 9ರವರೆಗೆ ಬೆಳಗ್ಗೆ 5 ಗಂಟೆಯಿಂದ 7 ಗಂಟೆವರೆಗೆ ಮೆಟ್ರೋ ರೈಲು ಸೇವೆ ಸ್ಥಗಿತವಾಗಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್ಸಿಎಲ್) ತಿಳಿಸಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಬಿಎಂಆರ್ಸಿಎಲ್, “ಬೈಯಪ್ಪನಹಳ್ಳಿ ಮತ್ತು ಎಸ್.ವಿ ರಸ್ತೆ ಹಾಗೂ ಕೃಷ್ಣರಾಜಪುರ ಮತ್ತು ವೈಟ್ಫೀಲ್ಡ್ (ಕಾಡುಗೋಡಿ) ನಿಲ್ದಾಣಗಳ ನಡುವೆಯ ರೈಲು ಸಂಚಾರ ಸ್ಥಗಿತವಾಗಲಿದೆ” ಎಂದು ಹೇಳಿದೆ.
“ಸ್ವಾಮಿ ವಿವೇಕಾನಂದ ರಸ್ತೆ (ಬೈಯಪ್ಪನಹಳ್ಳಿ ನಿಲ್ದಾಣದ ಮೊದಲು ಒಂದು ನಿಲ್ದಾಣ) ಮತ್ತು ಕೆಂಗೇರಿ ನಿಲ್ದಾಣಗಳ ನಡುವಿನ ರೈಲು ಸೇವೆ ಬೆಳಗ್ಗೆ 5 ಗಂಟೆಯಿಂದ 7 ಗಂಟೆಯವರೆಗೆ ಸ್ಥಗಿತವಾಗಲಿದೆ. ಬೆಳಗ್ಗೆ 7 ಗಂಟೆಯ ನಂತರ, ಬೈಯಪ್ಪನಹಳ್ಳಿ ಮತ್ತು ಕೆಂಗೇರಿ ಹಾಗೂ ಕೃಷ್ಣರಾಜಪುರ ಮತ್ತು ವೈಟ್ಫೀಲ್ಡ್ (ಕಾಡುಗೋಡಿ) ಮೆಟ್ರೋ ನಿಲ್ದಾಣಗಳ ನಡುವೆ ರೈಲು ಸೇವೆಗಳು ಎಂದಿನಂತೆ ರಾತ್ರಿ 11 ಗಂಟೆಯವರೆಗೆ ಇರಲಿದೆ” ಎಂದು ತಿಳಿಸಿದೆ.
“ಹಸಿರು ಮಾರ್ಗದ ರೈಲು ಸೇವೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ನಮ್ಮ ಮೆಟ್ರೋ ಪ್ರಯಾಣಿಕರು ಈಗ ಆಗಿರುವ ಬದಲಾವಣೆಯನ್ನು ಗಮನಿಸಬೇಕು” ಎಂದು ಹೇಳಿದೆ.
ಈ ಸುದ್ದಿ ಓದಿದ್ದೀರಾ? ಮುಂದಿನ ಐದು ದಿನಗಳಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ: ಹವಾಮಾನ ಇಲಾಖೆ
ಬಜೆಟ್ ; ನಮ್ಮ ಮೆಟ್ರೋ ವಿಸ್ತರಣೆಗೆ ₹31,328 ಕೋಟಿ ಅನುದಾನ
2023-24ನೇ ಸಾಲಿನ ಬಜೆಟ್ ಅನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಶುಕ್ರವಾರ ಮಂಡಿಸಿದ್ದಾರೆ. ಬೆಂಗಳೂರಿನ ನಮ್ಮ ಮೆಟ್ರೋ ವಿಸ್ತರಣೆಗೆ ₹31,328 ಕೋಟಿ ಅನುದಾನ ನೀಡಿದ್ದು, ಎರಡು ಪ್ರತ್ಯೇಕ ಮೆಟ್ರೋ ರೈಲು ಯೋಜನೆಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ.
“ಮೆಟ್ರೋ ಮೂರನೇ ಹಂತದ ಯೋಜನೆಯಡಿ ಕೆಂಪಾಪುರದಿಂದ ಜೆಪಿ ನಗರ 4ನೇ ಹಂತದವರೆಗೆ ಮತ್ತು ಹೊಸಹಳ್ಳಿಯಿಂದ ಕಡಬಗೆರೆವರೆಗಿನ ಪಶ್ಚಿಮ ಒಆರ್ಆರ್ ಮಾರ್ಗ ನಿರ್ಮಾಣವಾಗಲಿದೆ. ಇದಕ್ಕೆ ಅಂದಾಜು ₹16,328 ಕೋಟಿ ವೆಚ್ಚವಾಗಲಿದೆ. ಒಟ್ಟು 45 ಕಿಮೀ ಉದ್ದದ ಮೆಟ್ರೋ ರೈಲು ಯೋಜನೆಯ ವಿಸ್ತೃತ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದೆ” ಎಂದರು.
“ಅಂದಾಜು ₹15,000 ಕೋಟಿ ವೆಚ್ಚದಲ್ಲಿ ಹೆಬ್ಬಾಳದಿಂದ ಸರ್ಜಾಪುರದವರೆಗೆ 37 ಕಿ.ಮೀ ಉದ್ದದ ಹೊಸ ಮೆಟ್ರೊ ಮಾರ್ಗ ನಿರ್ಮಾಣ ಮಾಡುವ ಪ್ರಸ್ತಾವನೆಯನ್ನು ಅನುಮೋದನೆಗಾಗಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು. ಪ್ರಸಕ್ತ ವರ್ಷ ಬೈಯ್ಯಪ್ಪನಹಳ್ಳಿ-ಕೃಷ್ಣರಾಜಪುರ, ಕೆಂಗೇರಿ-ಚಲ್ಲಘಟ್ಟ, ನಾಗಸಂದ್-ಮಾದವಾರ ಹಾಗೂ ಆರ್ವಿ ರಸ್ತೆ-ಬೊಮ್ಮಸಂದ್ರದವರೆಗೆ ಒಟ್ಟು 27 ಕಿಮೀ ಉದ್ದದ ಮೆಟ್ರೊ ಮಾರ್ಗ ವಿಸ್ತರಣೆಯಾಗಲಿದೆ” ಎಂದು ತಿಳಿಸಿದರು.
“ಮುಂದಿನ ಮೂರು ವರ್ಷಗಳಲ್ಲಿ 70 ಕಿ.ಮೀ ಉದ್ದದ ಮೆಟ್ರೋ ಸಂಪರ್ಕ ಜಾಲವನ್ನು 176 ಕಿ.ಮೀಗೆ ವಿಸ್ತರಿಸುವ ಗುರಿ ಹೊಂದಲಾಗಿದೆ. ಏರ್ಪೋರ್ಟ್ ಲೈನ್ ಕಾಮಗಾರಿ 2026ರ ವೇಳೆಗೆ ಮುಗಿಯುವ ನಿರೀಕ್ಷೆಯಿದೆ. ಈ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರ ನಡೆಸುವಂತೆ ನೋಡಿಕೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.