2024ರ ಲೋಕಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಇರುವಾಗ ಇತ್ತೀಚೆಗೆ ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಹಾಗೂ ಪುತ್ತೂರಿನಲ್ಲಿ ಬಿಜೆಪಿಯ ವಿರುದ್ಧವೇ ಬಂಡಾಯ ಸಾರಿದ್ದ ಅರುಣ್ ಕುಮಾರ್ ಪುತ್ತಿಲ ಭೇಟಿಯಾಗಿದ್ದಾರೆ. ಈ ಭೇಟಿಯು ಬಿಜೆಪಿ ಮತ್ತು ಪುತ್ತಿಲ ಪರಿವಾರ ನಡುವೆ ಕುತೂಹಲ ಕೆರಳಿಸಿದೆ.
ಕಳೆದ ವಿಧಾನಸಭಾ ಚುನಾವಣೆಯ ವೇಳೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ವಿಧಾನಸಭಾ ಕ್ಷೇತ್ರವು ರಾಜ್ಯದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಈ ಕ್ಷೇತ್ರದಲ್ಲಿ ಬಿಜೆಪಿ ವಿರುದ್ಧ ಬಂಡಾಯ ಸಾರಿ ಸೋಲಿಗೆ ಕಾರಣವಾಗಿದ್ದ ಪಕ್ಷೇತರ ಅಭ್ಯರ್ಥಿ, ಆರ್‍ಎಸ್‌ಎಸ್ ಹಿನ್ನೆಲೆಯ ಅರುಣ್ ಕುಮಾರ್ ಪುತ್ತಿಲ ಈಗ ಮತ್ತೆ ಸುದ್ದಿಯಲ್ಲಿದ್ದಾರೆ.
ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರನ್ನು ಇತ್ತೀಚೆಗೆ ದೆಹಲಿಯಲ್ಲಿ ಭೇಟಿಯಾಗಿರುವುದು; ಲೋಕಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಇರುವುದು ಬಿಜೆಪಿ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.
ಅರುಣ್ ಕುಮಾರ್ ಮತ್ತು ಸಂತೋಷ್ ಭೇಟಿ ನಡೆದಿರುವುದು ದಕ್ಷಿಣ ಕನ್ನಡ ರಾಜಕೀಯದಲ್ಲಿ ಅದರಲ್ಲೂ ಬಿಜೆಪಿಯೊಳಗಡೆ ಚರ್ಚೆಯ ವಿಷಯವಾಗಿದ್ದು, ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ಅಭ್ಯರ್ಥಿಯಾಗ್ತಾರ ಅನ್ನುವ ಪುಕಾರು ಹಬ್ಬಿದೆ.
ದಿಲ್ಲಿಯಲ್ಲಿ ಸುಮಾರು ಎರಡು ಗಂಟೆಗಳಿಗೂ ಹೆಚ್ಚು ಕಾಲ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಈಗಾಗಲೇ ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಬದಲಾವಣೆಯ ಮಾತುಗಳು ದಕ್ಷಿಣ ಕನ್ನಡದಲ್ಲಿ ಕೇಳಿಬರುತ್ತಿದೆ. ಸದ್ಯ ಸಂಸದರಾಗಿರುವ ನಳಿನ್ ಕುಮಾರ್ ಕಟೀಲ್ ಅವರಿಗೆ ಮುಂದೆ ಬಿಜೆಪಿಯಿಂದ ಟಿಕೆಟ್ ನೀಡದಂತೆ ಕೆಲವರು ಈಗಾಗಲೇ ಬಹಿರಂಗ ಹೇಳಿಕೆ ಕೂಡ ನೀಡಿದ್ದರು. ಈ ಎಲ್ಲ ಹಿನ್ನೆಲೆಯಲ್ಲಿ ಪುತ್ತಿಲ ಮತ್ತು ಸಂತೋಷ್ ಭೇಟಿ ಕುತೂಹಲಕ್ಕೆ ಕಾರಣವಾಗಿದೆ.

ಭೇಟಿಯ ವೇಳೆ ದಕ್ಷಿಣ ಕನ್ನಡ ಬಿಜೆಪಿಯೊಳಗಿನ ಪರಿಸ್ಥಿತಿಯ ಬಗ್ಗೆ ವಿಸ್ತೃತ ಮಾಹಿತಿ ಪಡೆದಿರುವ ಬಿ ಎಲ್ ಸಂತೋಷ್, ಮುಂದಿನ ಲೋಕಸಭಾ ಚುನಾವಣೆಗೆ ಪಕ್ಷದಿಂದ ಈಗಿನಿಂದಲೇ ತಯಾರಿ ನಡೆಸುವ ಬಗ್ಗೆಯೂ ಚರ್ಚೆ ನಡೆಸಿರುವುದಾಗಿ ತಿಳಿದುಬಂದಿದೆ.
ಈ ಸುದ್ದಿ ಓದಿದ್ದೀರಾ? ಬಿಜೆಪಿ ಅಧ್ಯಕ್ಷ ಕಟೀಲ್‌ಗೆ ಹಿಂದುತ್ವವೇ ತಲೆನೋವು
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರಿನಲ್ಲಿ ಬಿಜೆಪಿಯಿಂದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಅರುಣ್ ಕುಮಾರ್ ಪುತ್ತಿಲ ಅವರಿಗೆ ಬಿಜೆಪಿಯಿಂದ ಟಿಕೆಟ್ ನಿರಾಕರಿಸಲಾಗಿತ್ತು. ಇದರಿಂದ ಬಿಜೆಪಿ ನಾಯಕರ ವಿರುದ್ಧವೇ ಬಂಡಾಯ ಸಾರಿದ್ದ ಪುತ್ತಿಲ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಇವರ ಸ್ಪರ್ಧೆಯನ್ನು ಆರ್‍ಎಸ್‌ಎಸ್‌ನ ಪ್ರಮುಖ ನಾಯಕ ಕಲ್ಲಡ್ಕ ಪ್ರಭಾಕರ್ ಭಟ್ ಸೇರಿದಂತೆ ಹಲವರು ಹೀಯಾಳಿಸಿದ್ದರು. ಇದರಿಂದಾಗಿ ಸಂಘಪರಿವಾರಕ್ಕೆ ಪರ್ಯಾಯವಾಗಿ ಹುಟ್ಟಿಕೊಂಡಿದ್ದ ಪುತ್ತಿಲ ಪರಿವಾರ, ಇನ್ನಷ್ಟು ಗಟ್ಟಿಯಾಗಿತ್ತು. ಇದೇ ಕಾರಣದಿಂದ ಬಿಜೆಪಿ ಪ್ರಾಬಲ್ಯದ ಕ್ಷೇತ್ರವಾಗಿದ್ದ ಹೊರತಾಗಿಯೂ ಪುತ್ತಿಲ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಬಿಜೆಪಿ, ಆರ್‍ಎಸ್‌ಎಸ್ ಮತ್ತು ಪುತ್ತಿಲ ಪರಿವಾರದ ನಡುವಿನ ಭಿನ್ನಾಭಿಪ್ರಾಯದಿಂದಾಗಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅಶೋಕ್ ಕುಮಾರ್ ರೈ ಗೆಲುವು ಸಾಧಿಸಿದ್ದರು.
ವಿಧಾನಸಭೆಯಲ್ಲಿ ಸೋತ ಬಳಿಕವೂ ಕೂಡ ತನ್ನ ಪ್ರಭಾವ ಹೆಚ್ಚಿಸಿಕೊಂಡ ಅರುಣ್ ಕುಮಾರ್ ಪುತ್ತಿಲ, ಬಿಜೆಪಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದರು. ಈ ಸೋಲಿನ ಬಳಿಕ ಪುತ್ತಿಲ ಅಭಿಮಾನಿಗಳು ಕಣ್ಣಿಟ್ಟದ್ದು ಲೋಕಸಭಾ ಚುನಾವಣೆಯ ಮೇಲೆ.
ಮೂಲೆಗುಂಪಾಗುವರೇ ನಳಿನ್ ಕುಮಾರ್ ಕಟೀಲ್?
ಬಿಜೆಪಿಯ ಯುವಮೋರ್ಚಾ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಯಾಗಿದ್ದ ಸಂದರ್ಭದಲ್ಲಿ ಬಿಜೆಪಿ ಸಂಸದ ಹಾಗೂ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಕಾರನ್ನು ಕಾರ್ಯಕರ್ತರೇ ಅಲುಗಾಡಿಸಿದ್ದು, ರಾಜ್ಯ ರಾಜಕೀಯದಲ್ಲಿ ಬಹಳಷ್ಟು ಚರ್ಚೆಗೆ ಕಾರಣವಾಗಿತ್ತು. ಆ ಬಳಿಕ ಪುತ್ತೂರು ಬಿಜೆಪಿಯಲ್ಲಿ ನಡೆದ ಬೆಳವಣಿಗೆ ಅರುಣ್ ಕುಮಾರ್ ಪುತ್ತಿಲ ಬಂಡಾಯ.
ಒಂದು ವೇಳೆ ಬಿಎಲ್ ಸಂತೋಷ್ ಭೇಟಿ ಫಲಪ್ರದವಾಗಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಳಿನ್ ಕುಮಾರ್‍ಗೆ ಟಿಕೆಟ್ ಮಿಸ್ ಆಗಿ, ಅರುಣ್ ಕುಮಾರ್‍ಗೆ ಸಿಕ್ಕಿದರೆ ಬಿಜೆಪಿಯಲ್ಲಿ ನಳಿನ್ ಮೂಲೆಗುಂಪಾಗುವ ಸಾಧ್ಯತೆಯೇ ಹೆಚ್ಚು ಎಂಬುದು ಸ್ಥಳೀಯರ ಅಭಿಪ್ರಾಯ.