ಹಿಂದಿನ ಸರ್ಕಾರ ಬಿಸಿಯೂಟ ನೌಕರರಿಗೆ 1,000 ರೂ. ಗೌರವಧನ ಹೆಚ್ಚಳ ಮಾಡುವುದಾಗಿ ಘೋಷಿಸಿತ್ತು. ಆದರೆ, ಆ ಬಗ್ಗೆ ಆದೇಶ ಹೊರಡಿಸಿ, ಗೌರವಧನ ಜಾರಿ ಮಾಡಲಿಲ್ಲ. ಹಿಂದಿನ ಸರ್ಕಾರದ ಘೋಷಣೆಯನ್ನು ಹೊಸ ಸರ್ಕಾರ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಜುಲೈ 11ರಂದು ಯಾದಗಿರಿ ಜಿಲ್ಲೆಯ ಸುರಪುರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಅಕ್ಷರ ದಾಸೋಹ ನೌಕರರ ಸಂಘ (ಸಿಐಟಿಯು) ಪ್ರಧಾನ ಕಾರ್ಯದರ್ಶಿ ಸುರೇಖಾ ಕುಲಕರ್ಣಿ ತಿಳಿಸಿದ್ದಾರೆ.
“ಮಧ್ಯಾಹ್ನದ ಬಿಸಿಯೂಟ ಯೋಜನೆ ಪ್ರಾರಂಭವಾದ ವರ್ಷದಿಂದಲೂ ಮಕ್ಕಳ ಶೈಕ್ಷಣಿಕ ಉನ್ನತಿ, ಮಕ್ಕಳ ಗೈರು ಹಾಜರಿ ತಡೆಗಟ್ಟಲು, ಅಪೌಷ್ಠಿಕತೆ ತಡೆಗಟ್ಟಲು ಶಿಕ್ಷಣ ಇಲಾಖೆಯ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಕಳೆದ 21 ವರ್ಷಗಳಿಂದ 1.17 ಲಕ್ಷ ಮಹಿಳೆಯರು ಕಾರ್ಯನಿರ್ವಹಿಸುತ್ತಿದ್ದಾರೆ. ಸುಮಾರು 58.30 ಲಕ್ಷ ಬಡ, ರೈತ, ಕೃಷಿಕೂಲಿಕಾರರ, ದೀನ ದಲಿತ ಮಕ್ಕಳಿಗೆ ಬಿಸಿ ಆಹಾರ ತಯಾರಿಸಿ, ಶಾಲೆಯನ್ನು ಸ್ವಚ್ಛಗೊಳಿಸಿ ಮಕ್ಕಳಲ್ಲಿ ಶೈಕ್ಷಣಿಕ ಆಸಕ್ತಿ ಮೂಡಿಸುವಲ್ಲಿ ಈ ಮಹಿಳೆಯರ ಪಾತ್ರ ದೊಡ್ಡದಿದೆ” ಎಂದು ಅವರು ಹೇಳಿದ್ದಾರೆ.
“ದಿನಕ್ಕೆ ಸುಮಾರು 6 ಗಂಟೆಗಿಂತಲೂ ಹೆಚ್ಚು ಸಮಯ ಕೆಲಸ ಮಾಡುತ್ತಿರುವ ಈ ನೌಕರರ ಶ್ರಮವನ್ನು ಗುರುತಿಸಿ, ಅವರಿಗೆ 21,000 ಕನಿಷ್ಠ ವೇತನ ಜಾರಿ ಮಾಡಬೇಕು. ಬಿಸಿಯೂಟ ನೌಕರರನ್ನು ಶಿಕ್ಷಣ ಇಲಾಖೆಯ ವ್ಯಾಪ್ತಿಗೆ ತಂದು, ನ್ಯಾಯೋಚಿತ ಬೇಡಿಕೆಗಳನ್ನು ಈಡೇರಿಸಬೇಕು” ಎಂದು ಆಗ್ರಹಿಸಿದರು.
“ಹಿಂದಿನ ಸರ್ಕಾರ ಬಿಸಿಯೂಟ ನೌಕರರಿಗೆ 1,000 ರೂಪಾಯಿ ಗೌರವಧನ ಹೆಚ್ಚಳ ಮಾಡುವದಾಗಿ ಘೋಷಿಸಿತ್ತು. ಆದರೆ, ಗೌರವಧನವನ್ನು ಬಿಡುಗಡೆ ಮಾಡಲಿಲ್ಲ. ಹೊಸ ಸರ್ಕಾರ ಆ ಹೆಚ್ಚುವರಿ ಗೌರವಧನವನ್ನು ಜಾರಿಗೊಳಿಸಬೇಕು. ಬಿಸಿಯೂಟ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಜುಲೈ 11ರಂದು ಪ್ರತಿಭಟನೆ ನಡೆಸಲಾಗುವುದು” ಎಂದು ಅವರು ತಿಳಿಸಿದ್ದಾರೆ.
ಪ್ರತಿಭಟನೆಗೆ ಸೂಕ್ತ ಪೊಲೀಸ್ ಬಂದೋಬಸ್ತ್ ನೀಡಬೇಕೆಂದು ಒತ್ತಾಯಿಸಿ, ಪೊಲೀಸ್ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಮನವಿ ಸಲ್ಲಿಸುವ ವೇಳೆ, ಸಂಘಟನೆಯ ಸೌಭಾಗ್ಯ ಮಾಲಗತ್ತಿ, ಶಹಾಜೀದಿಬೇಗಂ, ಸುರೇಖಾ ಕುಲಕರ್ಣಿ, ಪ್ರಕಾಶ ಆಲ್ದಾಳ, ಗೀತಾ ಜಕರೆಡ್ಡಿ ಇದ್ದರು.