- ಬ್ರಹ್ಮೋಸ್, ಡ್ರೋನ್, ಯುಸಿವಿ ಮೊದಲಾದ ಮಾಹಿತಿ ಹಂಚಿಕೊಂಡಿದ್ದ ಡಿಆರ್‌ಡಿಒ ವಿಜ್ಞಾನಿ
- ಅಧಿಕೃತ ಗೋಪ್ಯ ಕಾಯ್ದೆಯಡಿ ವಿಜ್ಞಾನಿ ಪ್ರದೀಪ್ ಬಂಧಿಸಿರುವ ಮಹಾರಾಷ್ಟ್ರ ಪೊಲೀಸರು
ಪಾಕಿಸ್ತಾನದ ಮಹಿಳಾ ಏಜೆಂಟ್‌ಳ ಮೋಹದ ಪಾಶಕ್ಕೆ ಸಿಲುಕಿ ಭಾರತೀಯ ಕ್ಷಿಪಣಿಗಳ ಕುರಿತ ಗೋಪ್ಯ ಮಾಹಿತಿಯನ್ನು ಡಿಆರ್‌ಡಿಒ ವಿಜ್ಞಾನಿ ಪ್ರದೀಪ್ ಕುರುಲ್ಕರ್ ಅವರು ಆಕೆಯೊಂದಿಗೆ ನಡೆಸಿದ ಸಂದೇಶದ ಮಾತುಕತೆಯಲ್ಲಿ ಹಂಚಿಕೊಂಡಿದ್ದರು ಎಂದು ಪೊಲೀಸರು ಸಲ್ಲಿಸಿದ ದೋಷಾರೋಪ ಪಟ್ಟಿಯಲ್ಲಿ ಹೇಳಲಾಗಿದೆ ಎಂದು ಶನಿವಾರ (ಜುಲೈ 8) ವರದಿಯಾಗಿದೆ.
ಜಾರಾ ದಾಸ್‌ಗುಪ್ತಾ ಹೆಸರಿನ ಪಾಕಿಸ್ತಾನದ ಗುಪ್ತಚರ ಇಲಾಖೆಯ ಮಹಿಳಾ ಅಧಿಕಾರಿ ಜತೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ಪುಣೆ ಪ್ರಯೋಗಾಲಯದ ನಿರ್ದೇಶಕರಾಗಿದ್ದ ಪ್ರದೀಪ್ ಕುರುಲ್ಕರ್ ಅವರು ನಡೆಸಿದ ಸಂದೇಶಗಳ ಸಂವಾದದಲ್ಲಿ ಭಾರತೀಯ ಕ್ಷಿಪಣಿ ವ್ಯವಸ್ಥೆಗಳೂ ಸೇರಿದಂತೆ ಇತರ ವರ್ಗೀಕೃತ ರಕ್ಷಣಾ ಯೋಜನೆಗಳ ಕುರಿತು ಮಾಹಿತಿ ಹಂಚಿಕೊಂಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಡಿಆರ್‌ಡಿಒ ವಿಜ್ಞಾನಿ ಪ್ರದೀಪ್ ಅವರ ವಿರುದ್ದ ಮಹಾರಾಷ್ಟ್ರ ಪೊಲೀಸರ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಕಳೆದ ವಾರ ಪುಣೆಯ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಅಧಿಕೃತ ಗೋಪ್ಯ ಕಾಯ್ದೆಯಡಿ ಪ್ರದೀಪ್ ಅವರನ್ನು ಮೇ 3ರಂದು ಬಂಧಿಸಲಾಗಿದೆ. ಸದ್ಯ ಅವರು ನ್ಯಾಯಾಂಗ ವಶದಲ್ಲಿದ್ದಾರೆ.
ಡಿಆರ್‌ಡಿಒ ವಿಜ್ಞಾನಿ ಪ್ರದೀಪ್ ಅವರು ಜಾರಾ ದಾಸ್‌ಗುಪ್ತಾ ಹೆಸರಿನ ಪಾಕ್ ಮಹಿಳಾ ಗುಪ್ತಚರ ಅಧಿಕಾರಿ ಜತೆ ವಾಟ್ಸ್ ಆಪ್, ವಾಯ್ಸ್ ಮತ್ತು ವಿಡಿಯೋ ಕಾಲ್ ಗಳ ಮೂಲಕ ಸಂಪರ್ಕದಲ್ಲಿದ್ದರು. ಇಂಗ್ಲೆಂಡ್ ಮೂಲದ ಸಾಫ್ಟ್ವೇರ್ ಎಂಜಿನಿಯರ್ ಎಂದು ಗುರುತಿಸಿಕೊಂಡಿದ್ದ ದಾಸ್‌ಗುಪ್ತಾ, ಅಶ್ಲೀಲ ಸಂದೇಶ ಮತ್ತು ವಿಡಿಯೋಗಳನ್ನು ಕಳುಹಿಸುವ ಮೂಲಕ ಪ್ರದೀಪ್ ಜತೆ ಸ್ನೇಹ ಬೆಳೆಸಿದ್ದರು.
ತನಿಖೆಯ ಸಂದರ್ಭದಲ್ಲಿ ಈ ಮಹಿಳೆಯ ಐ.ಪಿ ವಿಳಾಸ ಪಾಕಿಸ್ತಾನದಲ್ಲಿದೆ ಎಂಬುದನ್ನು ಪತ್ತೆ ಹಚ್ಚಲಾಗಿದೆ ಎಂದು ಎಟಿಎಸ್ ದೋಷಾರೋಪ ಪಟ್ಟಿಯಲ್ಲಿ ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? ಲೈಂಗಿಕ ದೌರ್ಜನ್ಯ ಪ್ರಕರಣ | ಜು. 18ರಂದು ಹಾಜರಾಗಲು ಬ್ರಿಜ್ ಭೂಷಣ್ ಸಿಂಗ್‌ಗೆ ಸಮನ್ಸ್ ಜಾರಿ
ಬ್ರಹ್ಮೋಸ್ ಲಾಂಚರ್, ಡ್ರೋನ್, ಯುಸಿವಿ, ಅಗ್ನಿ ಕ್ಷಿಪಣಿ ಲಾಂಚರ್ ಮತ್ತು ಮಿಲಿಟರಿ ಬ್ರಿಡ್ಜಿಂಗ್ ಸಿಸ್ಟಮ್ ಗೆ ಸಂಬಂಧಿಸಿದ ಗೋಪ್ಯ ಮತ್ತು ಸೂಕ್ಷ್ಮ ಮಾಹಿತಿಯನ್ನು ಪಡೆಯಲು ಪಾಕಿಸ್ತಾನದ ಮಹಿಳಾ ಏಜೆಂಟ್ ಪ್ರಯತ್ನಿಸಿದ್ದಾರೆ.
ಡಿಆರ್‌ಡಿಒ ವಿಜ್ಞಾನಿ ಪ್ರದೀಪ್ ಅವರು ಈ ಮಹಿಳೆಯ ಮೋಹಕ್ಕೆ ಒಳಗಾಗಿ ಡಿಆರ್‌ಡಿಒದ ವರ್ಗೀಕೃತ ಮತ್ತು ಸೂಕ್ಷ್ಮ ಮಾಹಿತಿಯನ್ನು ತನ್ನ ವೈಯಕ್ತಿಕ ಫೋನ್ ನಲ್ಲಿ ಸಂಗ್ರಹಿಸಿ ನಂತರ ಆ ಮಹಿಳೆಯೊಂದಿಗೆ ಹಂಚಿಕೊಂಡಿದ್ದಾರೆ ಎಂದು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.