ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಎಲ್ಲ ಗ್ರಾಮಗಳಿಗೆ ಸಮರ್ಪಕ ಬಸ್ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ ಯಾಳವಾರ ಆದರ್ಶ ಗ್ರಾಮ ಸಮಿತಿಯ ಮುಖಂಡರು ಸಾರಿಗೆ ನಿಗಮದ ಜೇವರ್ಗಿ ಘಟಕದ ವ್ಯವಸ್ಥಾಪಕರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ.
ಹಕ್ಕೊತ್ತಾಯ ಪತ್ರ ಸಲ್ಲಿಸಿ ಮಾತನಾಡಿದ ಇಬ್ರಾಹಿಂ ಪಟೀಲ ಯಾಳವಾರ, “ಜೀವರ್ಗಿ ತಾಲೂಕಿನಲ್ಲಿ ಪ್ರಸ್ತುತ ಶೈಕ್ಷಣಿಕ ಸಾಲಿನ ಶಾಲಾ ಕಾಲೇಜುಗಳು ಪ್ರಾರಂಭಗೊಂಡಿವೆ. ಆದರೆ, ಗ್ರಾಮಗಳಿಗೆ ಬಸ್ ಸೌಕರ್ಯ ಕಡಿಮೆಯಾಗಿದ್ದು, ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಶಾಲಾ-ಕಾಲೇಜು ತಲುಪತು ಸಾಧ್ಯವಾಗುತ್ತಿಲ್ಲ. ಅವರ ವಿದ್ಯಾಭ್ಯಾಸ ಕುಂಠಿತಗೊಳ್ಳುತ್ತಿದೆ. ಅಲ್ಲದೆ, ಕೆಲವೊಂದು ಮಾರ್ಗಗಳಲ್ಲಿ ಬಸ್ಸುಗಳು ತುಂಬಿರುತ್ತವೆ. ಹೀಗಾಗಿ, ಕೆಲವೆಡೆ ಬಸ್ ಚಾಲಕರು-ನಿರ್ವಾಹಕರು ಬಸ್ ನಿಲ್ಲಿಸದೇ ವಿದ್ಯಾರ್ಥಿಗಳನ್ನು ಬಿಟ್ಟುಹೋಗುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.
“ಬಸ್‌ನಲ್ಲಿ ಪ್ರಯಾಣಿಕರ ಸಂಖ್ಯೆ ಜಾಸ್ತಿಯಾಗಿ, ಬಸ್‌ನ ಟಾಪ್‌ನಲ್ಲಿ ಕುಳಿತು ಪ್ರಯಾಣ ಮಾಡುವಂತಾಗಿದೆ. ಇಂತಹ ಸಮಯದಲ್ಲಿ ಅಪಘಾತ ಸಂಭವಿಸಿದರೆ, ಅದಕ್ಕೆ ಸಾರಿಗೆ ಇಲಾಖೆಯೇ ಹೊಣೆಯಾಗುತ್ತದೆ” ಎಂದು ಅವರು ಹೇಳಿದ್ದಾರೆ.
“ವಿದ್ಯಾರ್ಥಿಗಳಿಗೆ ಯಾವುದೆ ತೊಂದರೆಯಾಗದ ರೀತಿಯಲ್ಲಿ ಎಲ್ಲ ಹಳ್ಳಿಗಳಿಗೂ ಸಮರ್ಪಕ ಬಸ್ ಸೌಲಭ್ಯ ಒದಗಿಸಬೇಕು. ಸಮಯಕ್ಕೆ ಸರಿಯಾಗಿ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ತಮ್ಮ ಸ್ಥಳಗಳಿಗೆ ತಲುಪಲು ಅನುಕೂಲ ಮಾಡಿಕೊಡಬೇಕು. ಅದರಂತೆ, ಜೇವರ್ಗಿಯಿಂದ ಯಡ್ರಾಮಿಗೆ ಚಿಗರಳ್ಳಿ ಮಾರ್ಗವಾಗಿ ಹೋಗುವ ಎಲ್ಲ ಬಸ್‌ಗಳು ಯಾಳವಾರ ಕ್ರಾಸ್‌ನಲ್ಲಿ ನಿಲುಗಡೆ ನೀಡಬೇಕು” ಎಂದು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ರಾಜ ಪಟೇಲ್, ಪೊಲೀಸ್ ಪಾಟೀಲ್, ಬಿ.ಎಚ್ ಮಾದಿ ಪಾಟೀಲ್, ನಾಗರಾಜ್ ಸಜ್ಜನ್, ಅಜೀಸ್ ಪಟೇಲ್, ದೇವು, ದೊರೆ, ವಜೀರ್ ಪಟೇಲ್, ಫತ್ರು ಪಟೇಲ್ ಇದ್ದರು.