“ಹೇಮರೆಡ್ಡಿ ಮಲ್ಲಮ್ಮ ಸಾಮಾನ್ಯ ವರ್ಗದ ಕುಟುಂಬದಲ್ಲಿ ಜನಿಸಿ ದರು. ಬಾಲ್ಯದಿಂದಲೂ ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿಯನ್ನು ಆರಾಧಿಸುತ್ತಿದ್ದರು. ಮಲ್ಲಿಕಾರ್ಜುನನ ಅನುಗ್ರಹದಿಂದ ಆದರ್ಶ ಶರಣೆಯಾಗಿ ರೂಪುಗೊಂಡರು. ಜೀವನದ ಕಡೆಯಲ್ಲಿ ದೇವರನ್ನೆ ಸಾಕ್ಷಾತ್ಕರಿಸಿಕೊಂಡರು. ಅವರು ಆಧ್ಯಾತ್ಮಿಕ ಕ್ಷೇತ್ರದ ಧ್ರುವತಾರೆ” ಎಂದು ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷರು ಮುತ್ತು ರಾಯರೆಡ್ಡಿ ಹೇಳಿದರು.
ಗದಗ ಜಿಲ್ಲೆಯ ನರಗುಂದ ತಾಲ್ಲೂಕಿನ ಚಿಕ್ಕನರಗುಂದ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಭರಮರೆಡ್ಡಿ ಅವರೊಂದಿಗೆ ಹೇಮರೆಡ್ಡಿ ಮಲ್ಲಮ್ಮ ಅವರ ವಿವಾಹವಾಗಿತ್ತು. ಭರಮರೆಡ್ಡಿಯನ್ನು ಜನರು ಹುಚ್ಚನಂತೆ ಪರಿಭಾವಿಸುತ್ತಿದ್ದರು. ಭರಮರೆಡ್ಡಿಯಲ್ಲಿನ ಮುಗ್ಧತೆ, ಸಾಧು ಸ್ವಭಾವವನ್ನು ಕಂಡು ಮಲ್ಲಮ್ಮ ಸಮಾಧಾನಗೊಂಡಿದ್ದರು. ಪತಿಯನ್ನು ದೇವರಂತೆ ಉಪಚರಿಸಿದರು” ಎಂದರು.
“ಹೇಮರೆಡ್ಡಿ ಮಲ್ಲಮ್ಮ ಸಮಾಜಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸಿದರು. ಕರುಣಾ ಮಯಿ ಹಾಗೂ ದಾಸೋಹಿಯಾಗಿದ್ದರು. ಪರಸ್ಪರ ನಂಬಿಕೆ, ವಿಶ್ವಾಸ, ಕ್ಷಮಿಸುವ ಗುಣ ಸಕಲ ಜೀವರಾಶಿಗಳಿಗೂ ಒಳಿತನ್ನು ಬಯಸಬೇಕು ಎನ್ನುವ ಮನೋಭಾವನೆ ಜೀವನ ಸಾಗಿಸಿದರು. 500 ವರ್ಷ ಕಳೆದರೂ ಮಲ್ಲಮ್ಮ ಜನರ ಮನದಲ್ಲಿ ಚಿರಸ್ಥಾಯಿಯಾಗಿದ್ದಾರೆ. ರೆಡ್ಡಿ ಕುಲದವರು ಮಲ್ಲಮ್ಮನನ್ನು ಇಂದಿಗೂ ಮಹಾತಾಯಿಯಂತೆ ಪೂಜಿಸುತ್ತಾರೆ’ ಎಂದರು.
“ಮಲ್ಲಮ್ಮನ ಮೈದುನನಾದ ವೇಮನ ದುಶ್ಚಟಗಳಿಗೆ ಬಲಿಯಾಗಿದ್ದನು. ಆತನಿಗೆ ಮಲ್ಲಮ್ಮ ಮನುಷ್ಯನ ಬದುಕಿನ ಸಾರ್ಥಕತೆಯ ಅರಿವಾಗುವಂತೆ ಮನ ಪರಿವರ್ತನೆ ಮಾಡಿದಳು. ವೇಮನ ಆಧ್ಯಾತ್ಮಿಕ ದಾರಿಯಲ್ಲಿ ಸಾಧನೆಗೈದು, ಮಹಾಯೋಗಿಯಾದನು. ಆಂಧ್ರ ಪ್ರದೇಶದಲ್ಲಿ ಪೂಜನೀಯ ಸ್ಥಾನ ಪಡೆದನು” ಎಂದರು.
“ಮಲ್ಲಮ್ಮ ಹಲವಾರು ಪವಾಡ ಗಳನ್ನು ನಡೆಸಿರುವ ಬಗ್ಗೆ ಪುರಣಾದಲ್ಲಿ ಉಲ್ಲೇಖ ಇದೆ. ಸಂತ ಶಿಶುನಾಳ ಶರೀಫರು ಹೇಮರೆಡ್ಡಿ ಮಲ್ಲಮ್ಮನ ಕುರಿತು ಹಲವಾರು ಗೀತೆಗಳನ್ನು ರಚಿಸಿದ್ದಾರೆ. ಮಲ್ಲಮ್ಮನ ಜೀವನದ ತತ್ವ, ಚಿಂತನೆಗಳು ಎಲ್ಲರಿಗೂ ಆದರ್ಶನೀಯ” ಎಂದು ಮುತ್ತು ರಾಯರೆಡ್ಡಿ ಹೇಳಿದರು.
ಈ ಸಂದರ್ಭದಲ್ಲಿ ಗ್ರಾ. ಪಂ. ಅಧ್ಯಕ್ಷರು ಮಲ್ಲಮ್ಮ ಮರಿಯಣ್ಣವರ, ಸದಸ್ಯ ಶರಣಬಸಪ್ಪ ಹಳೇಮನಿ, ಗ್ರಾ.ಪಂ ಕಾರ್ಯದರ್ಶಿ ನಾಗವೇಣಿ, ಸಿಬ್ಬಂದಿ ಶಿವು ಯಲಿಗಾರ, ಸಿದ್ದಪ್ಪ ಹಳಕಟ್ಟಿ ಇನ್ನೂ ಅನೇಕರು ಉಪಸ್ಥಿತರಿದ್ದರು.