ಕೇಂದ್ರ ಸರ್ಕಾರದ ಆದೇಶದಂತೆ ಪಾಕಿಸ್ತಾನಿ ಪ್ರಜೆಗಳನ್ನು ಹುಡುಕಿ ಕಳುಹಿಸುವ ಕ್ರಮ ರಾಜ್ಯ ಸರ್ಕಾರ ಕೈಗೊಂಡಿದೆ. ಆದರೆ ಬಿಜೆಪಿ ಈ ಯುದ್ಧದ ಸಮಯದಲ್ಲಿ ಪಾಕಿಸ್ತಾನಿ ಪ್ರಜೆಗಳನ್ನು ಗುರುತಿಸಿಲ್ಲ ಸಹಿ ಅಭಿಯಾನ ಮಾಡುತ್ತೇವೆ ಎಂದು ಸಲ್ಲದ ರಾಜಕಾರಣ ಮಾಡುತ್ತಿದೆ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ಟೀಕಿಸಿದರು.
ತಾಲ್ಲೂಕಿನ ಕಕ್ಕೇನಹಳ್ಳಿ ಗ್ರಾಮದಲ್ಲಿ ಪಂಚಾಯತ್ ರಾಜ್ ಇಲಾಖೆಯ ಒಟ್ಟು ಎರಡು ಕೋಟಿ ರೂಗಳ ನಾಲ್ಕು ಗ್ರಾಮದ ಸಿಸಿ ರಸ್ತೆ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು ಪ್ರವಾಸಿಗರನ್ನು ಕೊಂದು ಕ್ರೂರತನ ತೋರಿದ ಉಗ್ರರ ಹುಟ್ಟು ಅಡಗಿಸುವ ಕೆಲಸ ನಮ್ಮ ಸೇನೆ ಮಾಡಿದೆ. ಕೇವಲ ಉಗ್ರರ ನೆಲೆಯನ್ನು ಧ್ವಂಸ ಮಾಡಿದ ನಮ್ಮ ಸೈನ್ಯ ಶಿಸ್ತು ಪಾಲನೆ ಮಾಡಿದೆ. ಆದರೆ ನಾಗರೀಕರ ಮೇಲೆ ದಾಳಿ ಮಾಡುವ ಪಾಕಿಸ್ತಾನಿ ಸೇನೆಗೆ ತಕ್ಕ ಪಾಠ ಕಲಿಸಬೇಕಿದೆ. ದೇಶದ ಅಖಂಡತೆಯ ವಿಚಾರ ರಾಜಕಾರಣ ಬಿಟ್ಟು ಒಗ್ಗಟ್ಟು ಪ್ರದರ್ಶನ ಮಾಡೋಣ ಎಂದರು.
ಭಾರತ ದೇಶದ ಸೇನೆ ಶಕ್ತಿಶಾಲಿಯಾಗಿದೆ. ನಮಗೆ ಬೆದರಿಕೆ ಹಾಕಲು ಅಣುಬಾಂಬ್ ಪ್ರಯೋಗ ಬಗ್ಗೆ ಹೇಳಿಕೆ ನೀಡಿ ತನ್ನಲ್ಲಿನ ಭಯ ಪರೋಕ್ಷವಾಗಿ ತೋರಿಸಿಕೊಂಡಿದೆ. ಪಾಕಿಸ್ತಾನಕ್ಕೆ ಇನ್ನೂ ತೀಕ್ಷ್ಣವಾಗಿ ಬುದ್ಧಿ ಕಲಿಸಬೇಕಿದೆ. ಸರ್ವನಾಶ ಆಗಬೇಕಿದೆ ಎಂದ ಅವರು ಆಯಾ ರಾಜ್ಯದ ಮುಖ್ಯಮಂತ್ರಿಗಳು ರಾಜ್ಯದ ಭದ್ರತೆಯ ಬಗ್ಗೆ ಕ್ರಮ ಕೈಗೊಳ್ಳಲು ಕೇಂದ್ರ ಸೂಚಿಸಿದೆ. ಅದರಂತೆ ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ. ಕಣ್ತಪ್ಪಿಸಿ ನಮ್ಮ ದೇಶ ಬಿಟ್ಟು ಹೋಗದ ಪಾಕಿಸ್ತಾನಿ ಪ್ರಜೆಗಳಿಗೆ ಕಠಿಣ ಕಾನೂನು ಕ್ರಮ ಕಟ್ಟಿಟ್ಟಬುತ್ತಿ ಎಂದರು.
ತಾಲ್ಲೂಕಿನಲ್ಲಿ 5 ಕೋಟಿಯ ಅನುದಾನದಲ್ಲಿ ಸಿಸಿ ರಸ್ತೆ ಕಾಮಗಾರಿ ಚಾಲ್ತಿಯಲ್ಲಿದೆ. ಈಗ ಕಕ್ಕೇನಹಳ್ಳಿ, ಉಪ್ಪಾರಪಾಳ್ಯ, ಬ್ಯಾಟಪ್ಪನಪಾಳ್ಯ ಹಾಗೂ ಮಂಚಿಹಳ್ಳಿ ಗ್ರಾಮದಲ್ಲಿ ಒಟ್ಟು ಎರಡು ಕೋಟಿ ಹಣದ ಕೆಲಸಕ್ಕೆ ಪೂಜೆ ನಡೆದಿದೆ ಎಂದ ಅವರು ಒಳ ಮೀಸಲಾತಿ ಕುರಿತ ಜಾತಿ ಗಣತಿ ಸರ್ವರ್ ಸಮಸ್ಯೆಯಿಂದ ತಡವಾಗಿದೆ. ಎಲ್ಲರ ಮನೆಗೂ ತಲುಪಿ ಮಾಹಿತಿ ಕಲೆ ಹಾಕಬೇಕಿರುವ ಕಾರಣ ತಾಂತ್ರಿಕ ಸಮಸ್ಯೆ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಗಣತಿಯ ದಿನಾಂಕ ವಿಸ್ತರಣೆ ಮಾಡಲಾಗುವುದು. ನಿಗದಿತ ಕಾಲಕ್ಕೆ ತಕ್ಕಂತೆ ಗಣತಿ ಸಾಧ್ಯವಿಲ್ಲ ಎಂಬ ಅಂಶ ಸರ್ಕಾರದ ಗಮನಕ್ಕೆ ತರುತ್ತೇನೆ ಹಾಗೆಯೇ ಈ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಯಲ್ಲಿ 5 ನೇ ಸ್ಥಾನ ಗಳಿಸಿದ ಗುಬ್ಬಿ ತಾಲ್ಲೂಕು ಮತ್ತಷ್ಟು ಉತ್ತಮ ಫಲಿತಾಂಶ ತರುವ ಪ್ರಯತ್ನ ಮಾಡಬೇಕಿದೆ. ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ ಬಳಿ ಚರ್ಚಿಸಿ ಕ್ರಮಕ್ಕೆ ಸೂಚಿಸಿದ್ದೇನೆ ಎಂದರು.
ಜಿ.ಹೊಸಹಳ್ಳಿ ಗ್ರಾಪಂ ಚಿಕ್ಕಮ್ಮ, ಗಂಗಾಮಣಿ, ಮುಖಂಡರಾದ ದೊಡ್ಡಯ್ಯ, ಮಂಜಣ್ಣ, ಗಂಗಣ್ಣ, ಉಂಡೆ ರಾಮಣ್ಣ, ಬಾಲಕೃಷ್ಣ, ಪಂಚಾಯತ್ ರಾಜ್ ಎಇಇ ಚಂದ್ರಶೇಖರ್, ಎಇ ಗೋಪಿನಾಥ್ ಇತರರು ಇದ್ದರು.