ಗಣಿಬಾಧಿತ ವಲಯ ಪ್ರದೇಶದ ರೈತರಿಗೆ ತಮ್ಮ ಜಮೀನುಗಳಲ್ಲಿ ಯಾವ ರೀತಿಯಾಗಿ ಮಣ್ಣು ಹಾಗೂ ನೀರಿನ ಸಂರಕ್ಷಣೆ ಮಾಡಬೇಕು. ಅದಕ್ಕಾಗಿ ಯಾವ ರೀತಿಯಾಗಿ ಉಪಚಾರ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ತಿಳಿಸಿಕೊಡುವುದು ಗಣಿಗಾರಿಕೆ ಪ್ರಭಾವಿತ ವಲಯಗಳ ಸಮಗ್ರ ಪರಿಸರ ಯೋಜನೆಯ ಉದ್ದೇಶವಾಗಿದೆ ಎಂದು ಉಪ ಕೃಷಿನಿರ್ದೇಶಕ ಮಂಜುನಾಥ್ ಹೇಳಿದರು.
ಬಳ್ಳಾರಿಯ ಜಲಾನಯನ ಅಭಿವೃದ್ಧಿ ಇಲಾಖೆ, ಕೃಷಿ ಇಲಾಖೆ ಹಾಗೂ ಗ್ರಾಮ್ಸ್ ಲಿಂಗಸೂಗೂರು ಅನುಷ್ಠಾನ ಸಂಸ್ಥೆಯಿಂದ ಗಣಿಗಾರಿಕೆ ಪ್ರಭಾವಕ್ಕೆ ಒಳಗಾದ ವಲಯಗಳಿಗೆ ಸಮಗ್ರ ಪರಿಸರ ಯೋಜನೆಯಡಿ ಬಳ್ಳಾರಿ ತಾಲೂಕಿನ ಹಲಕುಂದಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಹೊನ್ನಾಳಿ ತಾಂಡದಲ್ಲಿ ಏರ್ಪಡಿಸಿದ್ದ ಸಮುದಾಯ ಸಹಭಾಗಿತ್ವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೃಷಿ ಅಧಿಕಾರಿ ಮಂಜುನಾಥ ಮಾತನಾಡಿ, “ಈ ಯೋಜನೆಯು ಗಣಿಗಾರಿಕೆ ಪರಿಣಾಮ ವಲಯಕ್ಕೆ ರಾಜ್ಯದ ನಾಲ್ಕು ಜಿಲ್ಲೆಗಳು ಮೊದಲನೇ ಹಂತದಲ್ಲಿ ಆಯ್ಕೆಯಾಗಿದ್ದು, ಅದರಲ್ಲಿ ಬಳ್ಳಾರಿ ಜಿಲ್ಲೆಯೂ ಕೂಡ ಒಂದಾಗಿದೆ. ಈ ಯೋಜನೆಯು ಐದು ವರ್ಷದ ಅವಧಿಗೆ ಅನುಷ್ಠಾನ ಮಾಡಲಾಗುವುದು” ಎಂದು ತಿಳಿಸಿದರು.
“ಈ ಯೋಜನೆಯಡಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳು ರೈತರ ಮನೆಗಳಿಗೆ ಖುದ್ದಾಗಿ ಭೇಟಿ ನೀಡಿ ಅವರೊಂದಿಗೆ ಚರ್ಚಿಸಿ ಅಗತ್ಯವಿರುವ ಮಾಹಿತಿಯ ದಾಖಲೆಗಳನ್ನು ಪಡೆದುಕೊಳ್ಳಲು ಸಮೀಕ್ಷೆ ಮಾಡಲಾಗುತ್ತದೆ. ಹಾಗಾಗಿ ಗ್ರಾಮದ ಎಲ್ಲ ರೈತರು ಸರಿಯಾಗಿ ಮಾಹಿತಿ ಕೊಡಬೇಕು” ಎಂದು ಹೇಳಿದರು.
ಸಹಾಯಕ ಕೃಷಿನಿರ್ದೇಶಕ ದಯಾನಂದ್ ಪ್ರಾಸ್ತಾವಿಕ ಮಾತನಾಡಿ, “ಗಣಿಬಾಧಿತ ಪ್ರದೇಶದಲ್ಲಿ ನಾಶವಾಗಿರುವ ಮೇಲ್ಮಣ್ಣನ್ನು ಪುನರ್ ಸ್ಥಾಪಿಸಿ ಮಣ್ಣು ಮತ್ತು ನೀರಿನ ಸಂರಕ್ಷಣೆ ಮೂಲಕ ಮಣ್ಣಿನ ಫಲವತ್ತತೆಯನ್ನು ಪುನರುಜ್ಜೀವನಗೊಳಿಸಿ ವ್ಯವಸಾಯಕ್ಕೆ ಯೋಗ್ಯವಾಗಿಸುವ ಮೂಲಕ ರೈತರಲ್ಲಿ ಸಾಮಾಜಿಕ ಹಾಗೂ ಆರ್ಥಿಕ ಸುಸ್ಥಿರತೆಯನ್ನು ಪಡೆಯಲು ಈ ಯೋಜನೆ ಅನುಷ್ಠಾನವಾಗುತ್ತಿದೆ” ಎಂದು ತಿಳಿಸಿದರು.
ಗ್ರಾಮ್ಸ್ ಸಂಸ್ಥೆಯ ಸಿಇಒ ಮಹೇಶ್ ಕುಮಾರ್ ಮಾತನಾಡಿ, “ಯೋಜನಾ ವ್ಯಾಪ್ತಿಯ ಗ್ರಾಮಗಳ ರೈತರಿಗೆ ತಮ್ಮ ತಮ್ಮ ಜಮೀನುಗಳಲ್ಲಿ ಯಾವ ರೀತಿಯಾಗಿ ಮಣ್ಣು ಮತ್ತು ನೀರಿನ ಸಂರಕ್ಷಣೆಯನ್ನು ಮಾಡಿಕೊಳ್ಳಬೇಕು, ಸಂರಕ್ಷಣೆಯನ್ನು ಮಾಡಲು ಯಾವ ರೀತಿಯಾಗಿ ಉಪಚಾರಗಳನ್ನು ಮಾಡಬೇಕೆಂದು ತಿಳಿಸಿಕೊಡಲಾಗುವುದು. ಈ ಯೋಜನೆಯಡಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳು ತಮ್ಮ ಜಮೀನುಗಳಿಗೆ ಖುದ್ದಾಗಿ ಭೇಟಿ ನೀಡಿ ರೈತರೊಂದಿಗೆ ಚರ್ಚಿಸಿ ಅಗತ್ಯವಿರುವ ಮತ್ತು ಜಮೀನಿಗೆ ಸೂಕ್ತವೆನಿಸುವ ಮಣ್ಣು ಹಾಗೂ ನೀರಿನ ಸಂರಕ್ಷಣೆ ಉಪಚಾರ, ತೋಟಗಾರಿಕೆ, ಅರಣ್ಯೀಕರಣ, ಜೀವನೋಪಾಯ ಚಟುವಟಿಕೆಗಳ ಮಾಹಿತಿ ನೀಡುವರು” ಎಂದರು.
ಈ ಸುದ್ದಿ ಓದಿದ್ದೀರಾ? ಗುಬ್ಬಿ | ಹಲವು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರೈತ ಸಂಘದಿಂದ ಗಟ್ಟಿ ಹೋರಾಟ : ರೈತ ಸಂಘದ ಜಿಲ್ಲಾಧ್ಯಕ್ಷ ಗೋವಿಂದರಾಜು
“ರೈತರಿಗೆ ತಿಳಿಸಿದಂತಹ ಉಪಚಾರಗಳನ್ನು ಯೋಜನಾ ವಿಸ್ತೃತ ವರದಿಯಲ್ಲಿ ನಿಯಮಾನಸಾರ ನಮೂದಿಸಿ, ಜಿಲ್ಲಾ ಮಟ್ಟದ ಸಭೆಯಲ್ಲಿ ಅನುಮೋದನೆ ಪಡೆದು ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗುತ್ತದೆ. ಈ ಯೋಜನೆಯನ್ನು ಉಚ್ಚ ನ್ಯಾಯಾಲಯ ನಿರ್ದೇಶನದ ಮೇರೆಗೆ ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮ ನಿರ್ದೇಶನ ಮತ್ತು ಮಾರ್ಗದರ್ಶನದಲ್ಲಿ ಅನುಷ್ಠಾನವಾಗುತ್ತದೆ” ಎಂದು ನಕ್ಷೆಯ ಮೂಲಕ ಗ್ರಾಮಸ್ಥರಿಗೆ ಮನ ಮುಟ್ಟುವಂತೆ ತಿಳಿಸಿದರು.
ತೇರಿ ಸಂಸ್ಥೆಯ ವಿಜಯ ಮೇಟಿ, ಕ್ಷೇತ್ರದ ಜಿಲ್ಲಾ ತಂಡದ ನಾಯಕಿ ಅಶ್ವಿನಿ, ಗ್ರಾಮ ಪಂಚಾಯಿತಿ ಸದಸ್ಯೆ ನಿರ್ಮಲ ಬಾಯಿ, ರಮೇಶ್ ನಾಯಕ್, ರವಿನಾಯಕ್, ಕೃಷಿ ಅಧಿಕಾರಿಗಳು ಲೋಕರಾಜ್, ಬಸವರಾಜ್ ಹಾಗೂ ಗ್ರಾಮದ ಸಾರ್ವಜನಿಕರು.