- 15 ವರ್ಷಗಳಿಂದ ನಂದಿ ಪರ್ವತದಲ್ಲಿ ವಾಸವಾಗಿದ್ದ ಜೈನಮುನಿ ನಂದಿ ಮಹಾರಾಜ್
- ವೈಯಕ್ತಿಕ ಕಾರಣಕ್ಕೆ ಕೊಲೆ ನಡೆಸಲಾಗಿದೆ : ಎಸ್ಪಿ ಸಂಜೀವ್ ಪಾಟೀಲ್
ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಸಮೀಪದ ಹಿರೇಕೋಡಿ ಆಶ್ರಮದ ಜೈನ ಮುನಿ ಕೊಲೆಗೀಡಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಮಾಹಿತಿ ನೀಡಿರುವ ಬೆಳಗಾವಿ ಎಸ್ಪಿ ಸಂಜೀವ್ ಪಾಟೀಲ್, ಕಳೆದ ಬುಧವಾರ ಹಿರೇಕೋಡಿ ಆಶ್ರಮದ ಆಚಾರ್ಯ ಕಾಮಕುಮಾರ ನಂದಿ ಮಹಾರಾಜರು ನಾಪತ್ತೆಯಾಗಿದ್ದರು. ರಾಯಭಾಗ ತಾಲೂಕಿನ ಕಟಕಬಾವಿ ಗ್ರಾಮದಲ್ಲಿ ಮಹಾರಾಜರು ಹತ್ಯೆಗೀಡಾಗಿರುವುದು ತಿಳಿದು ಬಂದಿದೆ. ಪ್ರಕರಣದ ಸಂಬಂಧ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ” ಎಂದು ಸ್ಥಳ ಪರಿಶೀಲನೆ ನಡೆಸಿದ ಬಳಿಕ ತಿಳಿಸಿದರು.
“ತನಿಖೆ ವೇಳೆ ಆಶ್ರಮಕ್ಕೆ ಯಾರು ಬಂದು ಹೋಗಿದ್ದರೆಂಬುದರ ಬಗ್ಗೆ ವಿಚಾರಣೆ ನಡೆಸಿದ್ದೆವು. ಸ್ವಾಮೀಜಿಗೆ ಪರಿಚಯವಿದ್ದ ವ್ಯಕ್ತಿಯೋರ್ವ ಹೋಗಿರುವುದು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ವಿಚಾರಣೆಗೊಳಪಡಿಸಿದಾಗ, ಆಶ್ರಮದಲ್ಲಿ ಮಹಾರಾಜರನ್ನು ಕೊಲೆ ಮಾಡಿ ಬೇರೆಡೆ ಶವ ಬಿಸಾಕಿದ ಬಗ್ಗೆ ಮಾಹಿತಿ ನೀಡಿದ್ದಾನೆ. ಸ್ವಾಮೀಜಿ ನೀಡಿದ್ದ ಹಣ ವಾಪಸ್ ಕೇಳಿದ್ದಕ್ಕೆ ಕೊಲೆ ಮಾಡಿರುವುದಾಗಿ ತಪ್ಪು ಒಪ್ಪಿಕೊಂಡಿದ್ದಾನೆ” ಎಂದು ಮಾಹಿತಿ ನೀಡಿದ್ದಾರೆ.
“ಪ್ರಕರಣದ ತನಿಖೆ ಮುಂದುವರಿದಿದೆ. ಬೇರೆ ವ್ಯವಹಾರ ಏನಾದರೂ ಇತ್ತಾ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ. ವೈಯಕ್ತಿಕ ಕಾರಣಕ್ಕೆ ಹತ್ಯೆ ನಡೆದಿದೆ” ಎಂದು ಸಂಜೀವ್ ಪಾಟೀಲ್ ಮಾಹಿತಿ ನೀಡಿದರು.
11 ಗಂಟೆಗಳ ಕಾರ್ಯಾಚರಣೆಯ ಬಳಿಕ ಸದ್ಯ ಆರೋಪಿಗಳು ತಿಳಿಸಿದ್ದ ಸ್ಥಳದಲ್ಲಿ ಶವ ಪತ್ತೆಯಾಗಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಎಫ್ಎಸ್‌ಎಲ್ ತಂಡ ಭೇಟಿ ನೀಡಿದೆ.
ನಂದಿ ಪರ್ವತದಲ್ಲಿ ಕಳೆದ 15 ವರ್ಷಗಳಿಂದ ಜೈನಮುನಿ ನಂದಿ ಮಹಾರಾಜ್ ವಾಸವಾಗಿದ್ದರು. ಹತ್ಯೆಯ ಸುದ್ದಿ ತಿಳಿದು, ಆಶ್ರಮದಲ್ಲಿ ಭಕ್ತರು ನೆರೆದಿದ್ದು, ಕಣ್ಣೀರು ಹಾಕುತ್ತಿದ್ದಾರೆ.
ಜು. 6ರಂದು ನಂದಿ ಪರ್ವತ ಆಶ್ರಮದಿಂದ ನಾಪತ್ತೆಯಾಗಿದ್ದರು. ನಾಪತ್ತೆಯಾದ ಹಿನ್ನೆಲೆ ಭಕ್ತರು ಆಶ್ರಮದ ಸುತ್ತಮುತ್ತ ಸ್ವಾಮೀಜಿಗಾಗಿ ಹುಡುಕಾಡಿದ್ದು, ಎಲ್ಲಿಯೂ ಪತ್ತೆಯಾಗದ ಹಿನ್ನೆಲೆ ಚಿಕ್ಕೋಡಿ ಪೊಲೀಸರಿಗೆ ದೂರು ನೀಡಿದ್ದರು.
ಜೈನ ಮುನಿಗಳನ್ನು ವಿದ್ಯುತ್ ಶಾಕ್ ಕೊಟ್ಟು ಹತ್ಯೆ ಮಾಡಿದ್ದಾರೆ. ಬಳಿಕ ಮೃತದೇಹವನ್ನು ತುಂಡು ತುಂಡು ಮಾಡಿ, ಕೊಳವೆ ಬಾವಿಗೆ ಹಾಕಿರುವುದಾಗಿ ಭಕ್ತರು ಮಾಹಿತಿ ನೀಡಿದ್ದಾರೆ.
ಕೊಲೆ ಮಾಡಿದ್ದ ಆರೋಪಿ ಜು.7ರಂದು ಗ್ರಾಮಸ್ಥರ ಜೊತೆಗೇ ಇದ್ದು, ಹುಡುಕಾಟದ ನಾಟಕ ಕೂಡ ಮಾಡಿದ್ದ ಎಂದು ತಿಳಿದುಬಂದಿದೆ.
ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಹಿರೇಕೋಡಿಯ ಜೈನಮುನಿ ಹತ್ಯೆ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಿ ಆರೋಪಿಗಳಿಗೆ ನ್ಯಾಯಾಲಯದಲ್ಲಿ ಶಿಕ್ಷೆ ಆಗುವಂತೆ ಕಾನೂನು ಕ್ರಮ ಕೈಗೊಳ್ಳಲು ಹಿರಿಯ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚಿಸಿದ್ದಾರೆ.
ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಮುಖ್ಯಮಂತ್ರಿಗಳು, ಕಾನೂನುಬಾಹಿರ ಕೃತ್ಯ ಎಸಗುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ. ಕಾನೂನು ಕೈಗೆತ್ತಿಕೊಳ್ಳುವ ಹಕ್ಕು ಯಾರಿಗೂ ಇಲ್ಲ. ತಪ್ಪು ಯಾರೇ ಮಾಡಿದ್ದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಈಗಾಗಲೇ ನಮ್ಮ ಅಧಿಕಾರಿಗಳು ತನಿಖೆ ಚುರುಕುಗೊಳಿಸಿ ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಯಾವುದೇ ಆರೋಪಿ ಕಾನೂನಿನಿಂದ ತಪ್ಪಿಸಿಕೊಳ್ಳಬಾರದು ಎನ್ನುವ ಸೂಚನೆಯನ್ನು ಅಧಿಕಾರಿಗಳಿಗೆ ನೀಡಿರುವುದಾಗಿ ತಿಳಿಸಿದ್ದಾರೆ.