ಪಟನಾ ಜಯಪ್ರಕಾಶ್ ನಾರಾಯಣ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಮಾಣ ಹಂತದಲ್ಲಿರುವ ಟರ್ಮಿನಲ್ ಕಟ್ಟಡದಲ್ಲಿ ನೀರು ತುಂಬಿದ ಪೈಪ್‌ನಲ್ಲಿ ಶನಿವಾರ ತಡರಾತ್ರಿ 30ರಿಂದ 40 ವರ್ಷ ವಯಸ್ಸಿನ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿದೆ.
ಹೊಸದಾಗಿ ಅಳವಡಿಸಲಾದ ಪೈಪ್‌ಗಳಲ್ಲಿ ಒಂದರಲ್ಲಿ ನೀರು ಸರಿಯಾಗಿ ಹರಿಯುತ್ತಿರಲಿಲ್ಲ. ಆದ್ದರಿಂದ ಎಂಜಿನಿಯರ್‌ಗಳು ಗಮನಿಸಿ ಪದೇ ಪದೇ ಸರಿಪಡಿಸುವ ಯತ್ನ ಮಾಡಿದರು. ಬಳಿಕ ಪೈಪ್ ಅನ್ನು ಸಂಪೂರ್ಣವಾಗಿ ಪರಿಶೀಲಿಸಿದಾಗ ಮಹಿಳೆಯ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಮಂಡ್ಯ | ನಾಪತ್ತೆಯಾಗಿದ್ದ ಮಹಿಳೆ ಶವವಾಗಿ ಪತ್ತೆ
ಶನಿವಾರ ಸಂಜೆ ಸುಮಾರು 7:10ಕ್ಕೆ ವಿಮಾನ ನಿಲ್ದಾಣ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ ಎಂದು ಸಚಿವಾಲಯದ ಎಸ್‌ಡಿಪಿಒ 1 ಅನು ಕುಮಾರಿ ತಿಳಿಸಿದ್ದಾರೆ. “ಪೊಲೀಸರ ತಂಡ ಸ್ಥಳಕ್ಕೆ ತಲುಪಿದ್ದು ಪೈಪ್ ಕತ್ತರಿಸಿದ ನಂತರ ಮಹಿಳೆಯ ಶವ ಪತ್ತೆಯಾಗಿದೆ” ಎಂದು ಅವರು ಹೇಳಿದ್ದಾರೆ.
ಮಹಿಳೆ ದಿನಗೂಲಿ ಕಾರ್ಮಿಕೆ ಎಂದು ಶಂಕಿಸಲಾಗಿದೆ. ಇನ್ನೂ ಮಹಿಳೆಯ ಗುರುತು ಪತ್ತೆಯಾಗಿಲ್ಲ. “ಆಕೆಯ ಗುರುತು ಪತ್ತೆಗಾಗಿ ಏಜೆನ್ಸಿಗಳನ್ನು ಪ್ರಶ್ನಿಸುತ್ತಿದ್ದೇವೆ” ಎಂದು ಎಸ್‌ಡಿಪಿಒ ಹೇಳಿದ್ದಾರೆ. ವರದಿ ಪ್ರಕಾರ ತನಿಖಾಧಿಕಾರಿಗಳು ಸ್ಥಳದಲ್ಲಿ ಪ್ರಸ್ತುತ ಮಹಿಳಾ ಕಾರ್ಮಿಕರನ್ನು ನೇಮಿಸಿಕೊಂಡಿರುವ ಮೂರು ಗುತ್ತಿಗೆದಾರ ಏಜೆನ್ಸಿಗಳನ್ನು ಸಂಪರ್ಕಿಸಿದ್ದಾರೆ. ಎಲ್ಲಾ ಮಹಿಳಾ ಕಾರ್ಮಿಕರನ್ನು ಸಂದರ್ಶಿಸಿದ್ದಾರೆ. ಆದರೆ ಮೃತ ಮಹಿಳೆ ಯಾರೆಂದು ಇನ್ನೂ ತಿಳಿದಿಲ್ಲ.
ಮಹಿಳೆಯ ದೇಹದಲ್ಲಿ ಗಾಯದ ಗುರುತುಗಳು ಪತ್ತೆಯಾಗಿವೆ ಎಂದು ಪೊಲೀಸರು ಹೇಳಿದ್ದಾರೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪಟನಾ ಇಂದಿರಾ ಗಾಂಧಿ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಕಳುಹಿಸಲಾಗಿದೆ. ತನಿಖೆ ಮುಂದುವರೆದಿದೆ.
