ಸಹಕಾರ ಸಂಸ್ಥೆಗಳು ಹಾಗೂ ಸಹಕಾರ ಬ್ಯಾಂಕ್‌ಗಳಲ್ಲಿ ಯಾವುದೇ ರೀತಿಯ ಹಣ ದುರುಪಯೋಗ ಕಂಡುಬಂದರೆ, ಅಂಥಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಹಕಾರ ಸಚಿವ ಕೆ.ಎನ್ ರಾಜಣ್ಣ ತಿಳಿಸಿದ್ದಾರೆ.
ಮೈಸೂರಿನಲ್ಲಿ ಸಹಾಕಾರ ಇಲಾಖೆಯ ಮೈಸೂರು ಭಾಗದ ಎಂಟು ಜಿಲ್ಲೆಗಳ ಅಧಿಕಾರಿಗಳೊಂದಿಗೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. “ಬ್ಯಾಂಕ್ ಸಿಬ್ಬಂದಿಗಳು ಪರಿಶೀಲನೆ ಮಾಡಿ ಸಾಲ ವಿತರಣೆ ಮಾಡಬೇಕು. ಎಲ್ಲ ಸಿಬ್ಬಂದಿಗಳಿಗೆ ಬಯೋಮೆಟ್ರಿಕ್ ಹಾಜರಾತಿ ಇರಬೇಕು. ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಪಾಸ್‌ವರ್ಡ್‌ಗಳು ದುರುಪಯೋಗ ಆಗಬಾರದು. ಯಾವುದೇ ಅಧಿಕಾರಿಗಳ ಮೇಲೆ ಹಣ ದುರುಪಯೋಗದ ದೂರುಗಳು ಬಂದರೆ, ಕಠಿಣ ಕ್ರಮ ಕೈಗೊಳ್ಳಲಾಗುವುದು. ಈ ಹಿಂದಿನ ಹಣ ದುರುಪಯೋಗದ ಪ್ರಕರಣಗಳು ಇದ್ದರೆ ಪ್ರಕರಣಗಳನ್ನು ಬೇಗ ಇತ್ಯರ್ಥ ಪಡಿಸಿ ಕ್ರಮ ಕೈಗೊಳ್ಳಬೇಕು” ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸಹಕಾರ ಇಲಾಖೆಯಲ್ಲಿ ಹಣ ದುರುಪಯೋಗದ ಕುರಿತು ದಾಖಲಾಗಿರುವ ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣಗಳ ಕುರಿತು ಮಾಹಿತಿ ಪಡೆದುಕೊಂಡ ಸಚಿವರು, “ತುಂಬಾ ಪ್ರಕರಣಗಳು ಇನ್ನೂ ಇತ್ಯರ್ಥ ಆಗದೆ ಹಾಗೆ ಉಳಿದಿವೆ. ಕೆಲವು ಅಧಿಕಾರಿಗಳು ಕೋರ್ಟ್ ಪ್ರಕರಣಗಳಿಗೆ ಸರಿಯಾಗಿ ಹಾಜರಾಗುವುದಿಲ್ಲ. ಈ ರೀತಿ ಆಗಬಾರದು. ಸಂಬಂಧಿಸಿದ ಅಧಿಕಾರಿಗಳು ಕೋರ್ಟ್ ಪ್ರಕರಣಗಳಿಗೆ ಸೂಕ್ತ ದಾಖಲೆಗಳೊಂದಿಗೆ ಹಾಜರಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು. ಇದರಿಂದ ಸಹಕಾರ ಸಂಸ್ಥೆಗಳಲ್ಲಿ ಅಕ್ರಮವನ್ನು ತಡೆಗಟ್ಟಲು ಸಾಧ್ಯವಾಗುತ್ತದೆ” ಎಂದರು.
“ಸಹಕಾರ ಸಂಸ್ಥೆಗಳಿಂದ ವಿತರಿಸುವ ಸಾಲ ವಸೂಲಾತಿ ಮಾಡುವಲ್ಲಿ ಅಧಿಕಾರಿಗಳು ಕಾನೂನು ರೀತಿ ಕ್ರಮ ವಹಿಸಬೇಕು. ಅಧಿಕಾರಿಗಳು ಕೇವಲ ಕಚೇರಿಯಲ್ಲಿ ಮಾತ್ರ ಇರದೆ, ಫೀಲ್ಡ್‌ನಲ್ಲಿಯೂ ಹೋಗಿ ಕಾರ್ಯ ನಿರ್ವಹಿಸಬೇಕು. ಸಹಕಾರ ಸಂಸ್ಥೆಗಳಿಂದ ಹೆಚ್ಚಾಗಿ ರೈತರು, ಮಹಿಳೆಯರು ಸಾಲ ಸೌಲಭ್ಯ ಪಡೆಯುತ್ತಾರೆ. ಸಹಕಾರ ಸಂಸ್ಥೆಗಳಲ್ಲಿ ಕಾಲ ಕಾಲಕ್ಕೆ ಆಡಿಟ್‌ಗಳು ನಡೆಯುತ್ತಿರಬೇಕು” ಎಂದು ಸೂಚಿಸಿದರು.
“ಸಹಕಾರ ಸಂಸ್ಥೆಗಳ ವತಿಯಿಂದ ಪ್ರತಿ ಜಿಲ್ಲೆಯಲ್ಲಿ ಹೆಣ್ಣು ಮಕ್ಕಳ ಹಾಸ್ಟೆಲ್ ತೆರೆಯಬೇಕು. ಡಿಸೆಂಬರ್ ಒಳಗೆ ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ತೆರೆಯಬೇಕು. ಜನೌಷಧಿ ಕೇಂದ್ರಗಳನ್ನು ಸಹಕಾರಿ ಸಂಘಗಳ ಸಹಯೋಗದೊಂದಿಗೆ ತೆರೆಯಲು ಪ್ರಾಯೋಗಿಕ ಪರೀಕ್ಷೆ ಮಾಡಲಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಹೈನುಗಾರಿಕೆ ಪ್ರಮುಖ ಉದ್ಯೋಗವಾಗಿದೆ. ಹಾಲು ಉತ್ಪಾದನೆ ವೆಚ್ಚವನ್ನು ಕಡಿಮೆ ಮಾಡುವ ಕ್ರಮಗಳನ್ನು ಕೈಗೊಳ್ಳಬೇಕು. ಆಗ ಮಾತ್ರ ಹಾಲು ಉತ್ಪಾದಕರಿಗೆ ಹೆಚ್ಚಿನ ಲಾಭ ದೊರೆಯಲು ಸಾಧ್ಯ” ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಸಹಕಾರ ಸಂಘಗಳ ರಿಜಿಸ್ಟಾರ್ ಕ್ಯಾಪ್ಟನ್ ರಾಜೇಂದ್ರ, ಮೈಸೂರು ಪ್ರಾಂತ್ಯದ ವಿವಿಧ ಸಹಕಾರ ಸಂಸ್ಥೆಗಳು ಹಾಗೂ ಬ್ಯಾಂಕ್ ಗಳ ಅಧಿಕಾರಿಗಳು ಉಪಸ್ಥಿತರಿದ್ದರು.