- ಜು. 10ರಂದು ವಿವಿಯಲ್ಲಿ ನಡೆಯಲಿದೆ ಘಟಿಕೋತ್ಸವ ಕಾರ್ಯಕ್ರಮ
- 1976ರಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಕಾಲಿಟ್ಟಿದ್ದ ಮಂಗಳೂರು ಮೂಲದ ನಿಸಾರ್ ಅಹ್ಮದ್
ಬೆಂಗಳೂರು ನಗರ ವಿವಿಯ 2ನೇ ವಾರ್ಷಿಕ ಘಟಿಕೋತ್ಸವದಲ್ಲಿ ಪ್ರೆಸಿಡೆನ್ಸಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ,ಪ್ರೆಸಿಡೆನ್ಸಿ ವಿವಿ ಕುಲಾಧಿಪತಿ ನಿಸಾರ್ ಅಹ್ಮದ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಿರುವುದಾಗಿ ಎಂದು ಕುಲಪತಿ ಲಿಂಗರಾಜ ಗಾಂಧಿ ತಿಳಿಸಿದ್ದಾರೆ.
ಜು. 10ರಂದು ವಿಶ್ವವಿದ್ಯಾನಿಲಯದಲ್ಲಿ ಘಟಿಕೋತ್ಸವ ಕಾರ್ಯಕ್ರಮ ನಡೆಯಲಿದ್ದು, ರಾಜ್ಯಪಾಲರು ಹಾಗೂ ವಿಶ್ವವಿದ್ಯಾನಿಲಯ ಕುಲಾಧಿಪತಿ ಥಾವರ್ ಚಂದ್ ಗೆಹ್ಲೋಟ್ ಘಟಿಕೋತ್ಸವದ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ನಿಸಾರ್ ಅಹ್ಮದ್ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಿರುವುದಾಗಿ ಮಾಹಿತಿ ನೀಡಿದ್ದಾರೆ.
ಉನ್ನತ ಶಿಕ್ಷಣ ಸಚಿವರು ಹಾಗೂ ವಿಶ್ವವಿದ್ಯಾನಿಲಯದ ಸಮಕುಲಾಧಿಪತಿ ಡಾ. ಎಂ.ಸಿ. ಸುಧಾಕರ್ ಸಮಾರಂಭದಲ್ಲಿ ಉಪಸ್ಥಿತರಿರಲಿದ್ದಾರೆ.
ಈ ಸುದ್ದಿ ಓದಿದ್ದೀರಾ? EXCLUSIVE | ಸೌಜನ್ಯ ಪ್ರಕರಣ ಯಾರದ್ದೋ ಷಡ್ಯಂತ್ರಕ್ಕೆ ನಮ್ಮ ಕುಟುಂಬ ಛಿದ್ರಗೊಂಡಿದೆ – ಸಂತೋಷ್ ರಾವ್ ತಂದೆ ಸುಧಾಕರ ರಾವ್
ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ ಸಿ.ಎನ್. ಮಂಜುನಾಥರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದು ಬೆಂಗಳೂರು ನಗರ ವಿವಿ ಪ್ರಕಟಣೆಯಲ್ಲಿ ತಿಳಿಸಿದೆ.
ನಿಸಾರ್ ಅಹ್ಮದ್ ಪರಿಚಯ
ಮಂಗಳೂರು ಮೂಲದ ನಿಸಾರ್ ಅಹ್ಮದ್ ಅವರು 1976ರಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಕಾಲಿಟ್ಟಿದ್ದರು. ಅವರ ಚಿಕ್ಕಪ್ಪ ಅಬ್ದುಲ್ ಹಮೀದ್ ಜೊತೆಗೆ ಅವರು ಪ್ರೆಸಿಡೆನ್ಸಿ ಶಿಕ್ಷಣ ಸಮೂಹ ಸಂಸ್ಥೆಗಳ ಸಹ-ಸ್ಥಾಪಕರಾದರು. 1980ರಲ್ಲಿ ಅಬ್ದುಲ್ ಹಮೀದ್ ಅವರ ನಿಧನದ ಬಳಿಕ ಸಂಸ್ಥೆಯನ್ನು ನಿರ್ವಹಿಸುವ ಜವಾಬ್ದಾರಿಯು ನಿಸಾರ್ ಅಹ್ಮದ್ ಹೆಗಲಿಗೆ ಬಂದಿತ್ತು.
ಸದ್ಯ ಪ್ರೆಸಿಡೆನ್ಸಿ ಯುನಿವರ್ಸಿಟಿ ಶಿಕ್ಷಣ ಸಮೂಹ ಸಂಸ್ಥೆಗಳಲ್ಲಿ ಪ್ರಾಥಮಿಕ ಶಾಲೆಯಿಂದ ಹಿಡಿದು ಸ್ನಾತಕೋತ್ತರ ಪದವಿಯವರೆಗೆ ಶಿಕ್ಷಣ ನೀಡಲಾಗುತ್ತಿದೆ. ಸುಮಾರು 16,000ಕ್ಕೂ ಅಧಿಕ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.