ಕಾಮಿಡಿ ಕಿಲಾಡಿಗಳು’ ಖ್ಯಾತಿಯ ನಟ ರಾಕೇಶ್ ಪೂಜಾರಿ ಅವರು ಸೋಮವಾರ ವಿಧಿವಶರಾಗಿದ್ದಾರೆ.
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಿಟ್ಟೆಯಲ್ಲಿ ರಾಕೇಶ್ ಅವರು ಮೆಹಂದಿ ಕಾರ್ಯಕ್ರಮ ಒಂದಕ್ಕೆ ತೆರಳಿದ್ದರು. ಈ ವೇಳೆ ಅವರಿಗೆ ಹೃದಯಾಘಾತವಾಗಿದ್ದು, ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ.
ಇಂದು (ಮೇ 12) ಮುಂಜಾನೆ 2 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ರಾಕೇಶ್ ಅವರ ಸಾವಿನ ವಿಚಾರವನ್ನು ನಟ ಹಾಗೂ ಅವರ ಆಪ್ತ ಶಿವರಾಜ್ ಕೆಆರ್ ಪೇಟೆ ಅವರು ಖಚಿತಪಡಿಸಿದ್ದಾರೆ.
ರಾಕೇಶ್ ಅವರ ಸಾವು ಅವರ ಅಭಿಮಾನಿಗಳು ಹಾಗೂ ಆಪ್ತ ಬಳಗಕ್ಕೆ ಶಾಕ್ ನೀಡಿದ್ದು, ಸಾವಿಗೆ ಎಲ್ಲರೂ ಕಂಬನಿ ಮಿಡಿಯುತ್ತಿದ್ದಾರೆ.
‘ಚೈತನ್ಯ ಕಲಾವಿದರು’ ನಾಟಕ ತಂಡದ ಮೂಲಕ ರಾಕೇಶ್ ಅವರು ತಮ್ಮ ನಟನಾ ಪಯಣ ಆರಂಭಿಸಿದ್ದರು. ಬಳಿಕ 2014ರಲ್ಲಿ ಖಾಸಗಿ ಚಾನೆಲ್ ನಲ್ಲಿ ‘ಕಡ್ಲೆ ಬಜಿಲ್’ ಎಂಬ ತುಳು ರಿಯಾಲಿಟಿ ಶೋ ಮೂಲಕ ಅನೇಕ ಜನರ ಮನ ಗೆದ್ದಿದ್ದರು. ನಂತರ ಹಲವು ಸಿನಿಮಾಗಳಿಗೆ ಆಡಿಷನ್ ನೀಡಿದ್ದರು. ಸುಮಾರು 150 ಆಡಿಷನ್ ನೀಡಿದ್ದ ರಾಕೇಶ್ ಪೂಜಾರಿ 2018 ರಲ್ಲಿ ಜೀ ಕನ್ನಡ ‘ಕಾಮಿಡಿ ಕಿಲಾಡಿಗಳು ಸೀಸನ್ 2’ ಶೋಗೆ ಆಯ್ಕೆಯಾಗಿ, ಇದರಲ್ಲಿ ರನ್ನರ್ ಅಪ್ ತಂಡದ ಸದಸ್ಯರಾಗಿದ್ದರು. ಬಳಿಕ 2020ರಲ್ಲಿ ‘ಕಾಮಿಡಿ ಕಿಲಾಡಿಗಳು ಸೀಸನ್ 3’ ವಿಜೇತರಾಗಿದ್ದರು.
ರಾಕೇಶ್ ಅವರು ಕನ್ನಡ ಮತ್ತು ತುಳುವಿನಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ರಾಕೇಶ್ ಕನ್ನಡದಲ್ಲಿ ‘ಪೈಲ್ವಾನ್’, ‘ಇದು ಎಂಥಾ ಲೋಕವಯ್ಯ’ ಚಿತ್ರಗಳಲ್ಲಿ ನಟಿಸಿದ್ದಾರೆ.
ತುಳು ಭಾಷೆಯ ‘ಪೆಟ್ಕಮ್ಮಿ’, ‘ಅಮ್ಮೆರ್ ಪೊಲೀಸ್, ‘ಪಮ್ಮನ್ನೆ ದಿ ಗ್ರೇಟ್’, ‘ಉಮಿಲ್, ‘ಇಲ್ಲೋಕ್ಕೆಲ್’ ಸೇರಿದಂತೆ ಹಲವು ಸಿನಿಮಾಗಳಿಗೆ ಬಣ್ಣ ಹಚ್ಚಿದ್ದರು.
ಕರಾವಳಿಯ ರಿಯಾಲಿಟಿ ಶೋಗಳಾದ ‘ಬಲೆ ತೇಲಿಪಾಲೆ’, ‘ಮೇ 22’, ‘ಸ್ಟಾರ್’, ‘ತುಯಿನಾಯೆ ಪೋಯೆ’ ಸೇರಿದಂತೆ ಕೆಲ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಇದೀಗ ಕನ್ನಡದ ಕಿರುತೆರೆಯಲ್ಲಿ ಕಾಮಿಡಿ ಸ್ಟಾರ್ ಆಗಿ ಮಿಂಚುತ್ತಿದ್ದರು.