- ರಾಜ್ಯದಲ್ಲಿ ಸುರಿದ ಭಾರಿ ಮಳೆಗೆ ಐದು ಜನ ಸಾವು
- ಕರಾವಳಿಯಲ್ಲಿ ಬಿರುಗಾಳಿ ಗಂಟೆಗೆ 55 ಕಿಮೀ ವೇಗದಲ್ಲಿ ಬೀಸುವ ಸಾಧ್ಯತೆ
ಜುಲೈನಲ್ಲಿ ಮುಂಗಾರು ಚುರುಕಾಗಿದ್ದು, ರಾಜ್ಯದ ಹಲವೆಡೆ ಭಾರೀ ಮಳೆಯಾಗುತ್ತಿದೆ. ಶನಿವಾರ ಮತ್ತು ಭಾನುವಾರ ಕರಾವಳಿ ಭಾಗ ಸೇರಿದಂತೆ ರಾಜ್ಯದ ಬಹುತೇಕ ಕಡೆ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮುಂದಿನ 24 ಗಂಟೆಗಳಲ್ಲಿ ಕರ್ನಾಟಕ ಕರಾವಳಿಯಲ್ಲಿ ಬಿರುಗಾಳಿಯು ಗಂಟೆಗೆ 40-45 ಕಿ.ಮೀ ಇಂದ 55 ಕಿಮೀ ವೇಗದಲ್ಲಿ ಬೀಸುವ ಸಾಧ್ಯತೆಯಿದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.
ರಾಜ್ಯದ ಮಲೆನಾಡು, ಕರಾವಳಿ ಭಾಗದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳ ಹಲವು ಭಾಗಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ತಂಪಾದ ಬೆಂಗಳೂರು
ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮುಂದಿನ ಐದು ದಿನ ಮೋಡ ಕವಿದ ವಾತಾವರಣವಿರಲಿದೆ. ಜುಲೈ 11 ಮತ್ತು 12 ರಂದು ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಕೆಲವೊಮ್ಮೆ ಬಲವಾದ ಮೇಲ್ಮೈ ಗಾಳಿ ಬೀಸುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 29 ಮತ್ತು ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆಯಿದೆ.
ಶನಿವಾರ ಬೆಳಗ್ಗೆಯಿಂದ ನಗರದಲ್ಲಿ ಮೋಡ ಕವಿದ ವಾತಾವರಣ ಇದ್ದು, ನಗರದ ಹಲವೆಡೆ ಬೆಳಗಿನ ಜಾವ ತುಂತುರು ಮಳೆಯಾಗಿ, ಮಧ್ಯಾಹ್ನದ ವೇಳೆಗೆ ಜೋರು ಮಳೆಯಾಗಿದೆ.
ಬೆಂಗಳೂರಿನ ಕಾರ್ಪೊರೇಷನ್ ಸರ್ಕಲ್, ಶಾಂತಿನಗರ, ಅಶೋಕನಗರ, ಮೈಸೂರು ಬ್ಯಾಂಕ್ ಸರ್ಕಲ್, ರಾಜಾಜಿನಗರ, ಜಯನಗರ, ಶಿವಾಜಿನಗರ, ಕೆ.ಆರ್.ಮಾರುಕಟ್ಟೆ, ಮೆಜೆಸ್ಟಿಕ್, ಬನಶಂಕರಿ, ಯಶವಂತಪುರ, ಹೆಬ್ಬಾಳ ಸೇರಿದಂತೆ ಹಲವೆಡೆ ಭಾರೀ ಮಳೆಯಾಗುತ್ತಿದೆ. ಮಳೆಯಿಂದ ಬೈಕ್ ಸವಾರರು, ರಸ್ತೆ ಬದಿ ವ್ಯಾಪಾರಿಗಳು ಪರದಾಡುವಂತಾಗಿದೆ.
ಎಲ್ಲೆಲ್ಲಿ ಎಷ್ಟು ಪ್ರಮಾಣದ ಮಳೆಯಾಗಿದೆ?
ಕೊಲ್ಲೂರು 15 ಸೆಂ.ಮೀ, ಕುಮಟಾ 13 ಸೆಂ.ಮೀ, ಗೇರುಸೊಪ್ಪ 12 ಸೆಂ.ಮೀ, ಕ್ಯಾಸಲ್ ರಾಕ್, ಕೊಟ್ಟಿಗೆಹಾರ ತಲಾ 11 ಸೆಂ.ಮೀ ಮಳೆಯಾಗಿದೆ. ಹೊನ್ನಾವರ, ಶಿರಾಲಿ, ಗೋಕರ್ಣ, ಮಂಕಿ ತಲಾ 9 ಸೆಂ.ಮೀ ಮಳೆಯಾಗಿದೆ. ಬೆಳ್ತಂಗಡಿ, ಸುಬ್ರಹ್ಮಣ್ಯ ತಲಾ 8 ಸೆಂ.ಮೀ. ಮಂಗಳೂರು, ಅಂಕೋಲಾ, ಭಾಗಮಂಡಲ, ಹುಂಚದಕಟ್ಟೆ ತಲಾ 7 ಸೆಂ.ಮೀ ಮಳೆಯಾಗಲಿದೆ.
ಉಪ್ಪಿನಂಗಡಿ, ಮಂಗಳೂರು ವಿಮಾನ ನಿಲ್ದಾಣ, ಮೂಲ್ಕಿ, ಪುತ್ತೂರು ಎಚ್ಎಂಎಸ್, ಧರ್ಮಸ್ಥಳ, ಸುಳ್ಯ, ಕದ್ರಾ, ಕಮ್ಮರಡಿ, ಲಿಂಗನಮಕ್ಕಿ ಎಚ್ಎಂಎಸ್ ತಲಾ 6 ಸೆಂ.ಮೀ. ಲೋಂಡಾ, ಮಂಚಿಕೆರೆ, ಪಣಂಬೂರು, ಉಡುಪಿ, ಸಿದ್ದಾಪುರ, ಕಾರ್ಕಳ, ಕಿರವತ್ತಿ, ಸಕಲೇಶಪುರ, ತಾಳಗುಪ್ಪದಲ್ಲಿ ತಲಾ 5 ಸೆಂ.ಮೀ ಮಳೆಯಾಗಿದೆ.
ಕೋಟ, ಜೋಯಿಡಾ, ಕಳಸ, ನಾಪೋಕ್ಲು, ಪೊನ್ನಂಪೇಟೆ ಪಿಡಬ್ಲ್ಯೂಡಿ ತಲಾ 4 ಸೆಂ.ಮೀ. ಹಳಿಯಾಳ, ಯಲ್ಲಾಪುರ, ಬನವಾಸಿ, ಕಾರವಾರ, ಮಾಣಿ, ಕುಂದಾಪುರ ತಲಾ 3 ಸೆಂ.ಮೀ. ಬೆಳಗಾವಿ, ಕೊಪ್ಪ, ಜಯಪುರ, ಶೃಂಗೇರಿ ಎಚ್ಎಂಎಸ್, ಬಾಳೆಹೊನ್ನೂರು, ಎನ್ಆರ್ ಪುರ, ಸೋಮವಾರಪೇಟೆ, ಹಾರಂಗಿ, ತ್ಯಾಗರ್ತಿ, ಆನವಟ್ಟಿ, ಶಿವಮೊಗ್ಗ, ಹಾಸನ ತಲಾ 2 ಸೆಂ.ಮೀ. ನಿಪ್ಪಾಣಿ, ಕಣಬರ್ಗಿ ಆವ್ಸ್, ಸಂಕೇಶ್ವರ, ಬೆಳಗಾವಿ ವಿಮಾನ ನಿಲ್ದಾಣ, ಅಣ್ಣಿಗೆರೆ ಅರ್ಸ್, ಹುಬ್ಬಳ್ಳಿ, ನಲತ್ವಾಡ, ಲಿಂಗಸೂಗೂರು, ಗುತ್ತಲ್, ರೋಣ , ಹೊಸಕೋಟೆ, ಹರಪನಹಳ್ಳಿ, ಬೇಲೂರು, ಬಂಡೀಪುರ, ಸರಗೂರು, ಚಿಂತಾಮಣಿ ತಲಾ 1 ಸೆಂ.ಮೀ ಮಳೆಯಾಗಿದೆ.
ಈ ಸುದ್ದಿ ಓದಿದ್ದೀರಾ? ಸಂಚಾರ ನಿಯಮ ಉಲ್ಲಂಘಣೆ | ಶೇ.50ರಷ್ಟು ರಿಯಾಯಿತಿ; ₹50.71 ಲಕ್ಷ ದಂಡ ಸಂಗ್ರಹ
ಭಾರೀ ಮಳೆಯಿಂದ ಜನಜೀವನ ಅಸ್ತವ್ಯಸ್ತ
ಕರಾವಳಿ ಜಿಲ್ಲೆಗಳಲ್ಲಿ ಗುಡುಗು-ಮಿಂಚು, ಬಿರುಗಾಳಿ ಸಹಿತ ಭಾರಿ ಮಳೆಯಾಗಲಿದ್ದು, ಸ್ಥಳೀಯರು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ. ಭಾರೀ ಮಳೆಯಾಗುತ್ತಿರುವ ಕಾರಣ ನದಿಗಳು ತುಂಬಿ ಹರಿಯುತ್ತಿವೆ. ಹಲವು ಕಡೆಗಳಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವೆಡೆ ಗುಡ್ಡ ಕುಸಿತಗೊಂಡಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಮತ್ತು ಭಟ್ಕಳದಲ್ಲಿ ಭಾರೀ ಮಳೆಯಾಗುತ್ತಿದೆ.
ಕರಾವಳಿ ಭಾಗದಲ್ಲಿ ಹಲವು ದೇವಸ್ಥಾನಗಳು ಜಲಾವೃತಗೊಂಡಿವೆ. ಮಧುವಾಹಿನಿ ನದಿ ಉಕ್ಕಿ ಹರಿಯುತ್ತಿರುವ ಕಾರಣ ಕಾಸರಗೋಡು ಸಮೀಪದ ಮಧೂರು ಕ್ಷೇತ್ರಕ್ಕೆ ಜಲದಿಗ್ಭಂಧನವಾಗಿದೆ. ದೇವಸ್ಥಾನಕ್ಕೆ ನೀರು ನುಗ್ಗಿದ್ದು ಜಲಾವೃತವಾಗಿದೆ. ಇತಿಹಾಸ ಪ್ರಸಿದ್ದ ಬಪ್ಪನಾಡು ದೇವಸ್ಥಾನಕ್ಕೆ ಶಾಂಭವಿ ನದಿ ನೀರು ನುಗ್ಗಿದ್ದು, ದೇವಿಗೆ ಜಲ ದಿಗ್ಬಂಧನವಾಗಿದೆ.
ಮಲೆನಾಡು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ನದಿಗಳಲ್ಲಿ ಒಳಹರಿವು ಹೆಚ್ಚಾಗುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಹಲವು ಕಡೆ ತೋಟ, ಹೊಲ, ಗದ್ದೆಗಳಿಗೆ ನೀರು ನುಗ್ಗಿದ್ದು ಜಲಾವೃತಗೊಂಡಿದೆ.
ಬೆಂಗಳೂರು, ಬೆಂಗಳೂರು ಗ್ರಾಮಾಂತರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಕೋಲಾರ, ಚಾಮರಾಜನಗರ, ಹಾಸನ, ರಾಮನಗರ, ಮಂಡ್ಯ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಅಲ್ಲಲ್ಲಿ ಚದುರಿದಂತೆ ಉತ್ತಮ ಮಳೆಯಾಗಲಿದೆ. ಬೆಳಗಾವಿ, ಬಳ್ಳಾರಿ, ವಿಜಯನಗರ, ಬಿಜಾಪುರ, ಕಲಬುರಗಿ, ಗದಗ ಜಿಲ್ಲೆಗಳ ಹಲವು ಕಡೆಗಳಲ್ಲಿ ಸಾಧಾರಣ ಮಳೆಯಾಗಲಿದೆ. ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮಳೆಗೆ ಸಾವು-ನೋವು
ರಾಜ್ಯದಲ್ಲಿ ಮಳೆ ಸಂಬಂಧಿಸಿದ ಅವಘಡಗಳಲ್ಲಿ ಐದು ಮಂದಿ ಮೃತಪಟ್ಟಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಸಜಿಪದಲ್ಲಿ ಗುಡ್ಡ ಕುಸಿದ ಪರಿಣಾಮ ಝರೀನ ಮುಹಮ್ಮದ್ ಮತ್ತು ಪುತ್ರಿ ಶಫಾ ಮೃತಪಟ್ಟಿದ್ದಾರೆ. ಕಾರ್ಕಳದಲ್ಲಿ ಮರ ಬಿದ್ದು ಪ್ರವೀಣ್ ಆಚಾರ್ಯ ಮೃತಪಟ್ಟಿದ್ದಾರೆ.