ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಯಾವುದೇ ಕೀಳರಿಮೆಯಿಲ್ಲದೆ ಸ್ಪರ್ಧಿಸಲು ತಯಾರಾಗಿ ಮುನ್ನುಗ್ಗಿ ಆಗಮಾತ್ರ ಯಶಸ್ಸುಗಳಿಸಲು ಸಾಧ್ಯ ಎಂದು ಸಾಹೇ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಕೆ.ಬಿ. ಲಿಂಗೇಗೌಡ ತಿಳಿಸಿದರು.
ತುಮಕೂರು ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದಲ್ಲಿನ ಡಾ. ಜಿ.ಪಿ ನೆಕ್ಸಾಸ್ ಸಭಾಂಗಣದಲ್ಲಿ ಸಾಹೇ ವಿಶ್ವವಿದ್ಯಾನಿಲಯದ ಎಂಬಿಎ ವಿಭಾಗದಿಂದ ಆಯೋಜಿಸಿದ್ದ ಉದ್ಯಮಶೀಲತಾ ಮೇಳದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಇಂದು ವಿದ್ಯಾರ್ಥಿಗಳು ಸಾಧಿಸಲು ಸಾಕಷ್ಟು ಅವಕಾಶಗಳಿವೆ. ಆ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡಾಗ ಮಾತ್ರ ತಮ್ಮ ಗುರಿಯನ್ನು ತಲುಪಲು ಸಾಧ್ಯ. ಹಾಗಾಗಿ ನಿಮ್ಮ ಗುರಿಯನ್ನು ನಿರ್ಧರಿಸಿ ಅದನ್ನು ತಲುಪಲು ಶ್ರಮವಹಿಸಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಸಾಹೇ ವಿಶ್ವವಿದ್ಯಾಲಯದ ಕುಲಪತಿಗಳ ಆಪ್ತ ಸಲಹೆಗಾರ ವಿವೇಕ್ ವೀರಯ್ಯ ಮಾತನಾಡಿ ಪ್ರತಿಯೊಬ್ಬ ವಿದ್ಯಾರ್ಥಿಗಳೂ ಉದ್ಯಮಿಗಳಾಗಲು ಪ್ರಯತ್ನಿಸಿ ಹಾಗೂ ಇದಕ್ಕೆ ಬೇಕಾದ ಮಾರ್ಕೆಟಿಂಗ್ ಸ್ಕಿಲ್ಸ್, ಸಂವಹನ ಕೌಶಲ್ಯವನ್ನು ಬೆಳೆಸಿಕೊಂಡು ನಿಮ್ಮ ಗುರಿಗಳತ್ತ ಮುನ್ನಡೆಯಿರಿ. ಪ್ರತಿಯೊಂದು ಆವಿಷ್ಕಾರಗಳಾಗಿರುವುದು ಅವಶ್ಯಕತೆಗಳು ಬಂದಾಗ ಮಾತ್ರ. ಹಾಗಾಗಿ ವಿದ್ಯಾರ್ಥಿಗಳು ಕ್ರಿಯಾಶೀಲವಾಗಿ ಯೋಚಿಸಿ ಎಂದು ಹೇಳಿದರು.
ಎಸ್‌ಎಸ್‌ಐಟಿ ಕಾಲೇಜಿನ ಪ್ರಾಂಶುಪಾಲ ಡಾ. ಎಂ.ಎಸ್ ರವಿಪ್ರಕಾಶ ಮಾತನಾಡಿ ಪ್ರತಿಯೊಬ್ಬ ವಿದ್ಯಾರ್ಥಿಗಳೂ ಕೂಡ ಉದ್ಯಮಿಗಳಾಗಲು ಬೇಕಾದ ಕೌಶಲ್ಯವನ್ನು ಬೆಳೆಸಿಕೊಳ್ಳಿ, ಸಿಕ್ಕ ಅವಕಾಶಗಳನ್ನು ಸರಿಯಾದ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳಿ, ಹೊಸ ಹೊಸ ಅವಿಷ್ಕಾರಗಳನ್ನು ವಿದ್ಯಾರ್ಥಿ ದೆಸೆಯಿಂದಲೇ ಆರಂಭಿಸಿ, ವಿದ್ಯಾರ್ಥಿಗಳಲ್ಲಿರುವ ಕೌಶಲ್ಯವನ್ನು ಅನಾವರಣ ಮಾಡುವ ಇಂತಹ ಕಾರ್ಯಕ್ರಮಗಳು ಸಾಕಷ್ಟು ನೆಡೆಯಬೇಕು ಎಂದು ತಿಳಿಸಿದರು.
ಉದ್ಯಮಶೀಲ ಮೇಳದ ಉದ್ಘಾಟನಾ ಕಾಯಕ್ರಮವನ್ನು ಬೆಳಗ್ಗೆ ಸಾಹೇ ವಿವಿಯ ಕುಲಸಚಿವರಾದ ಡಾ.ಅಶೋಕ್ ಮೆಹ್ತಾ ಉದ್ಘಾಟಿಸಿ ಉದ್ಯಮವನ್ನು ಆರಂಭಿಸಲು ಯಾವುದೇ ಕೀಳರಿಮೆಯನ್ನು ಇಟ್ಟುಕೊಳ್ಳಬೇಡಿ ಸಮಾಜದ ಅಗತ್ಯತೆಗಳನ್ನು ಗಮನಿಸಿ ಉತ್ಪನ್ನಗಳನ್ನು ಉದ್ಪಾದಿಸಬೇಕು. ಜೊತಗೆ ಗ್ರಾಹಕರ ನಾಡಿಮಿಡಿತವನ್ನು ಅರಿತುಕೊಂಡು ಉತ್ಪನ್ನವನ್ನು ತಯಾರಿಸುವುದು ಒಬ್ಬ ಉತ್ತಮ ಉದ್ಯಮಿಯ ಲಕ್ಷಣ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಬೇರೆ ಬೇರೆ ಕಾಲೇಜಿನ ಹಲವು ವಿದ್ಯಾರ್ಥಿಗಳು ಆಗಮಿಸಿ ವಿವಿಧ ನವೋದ್ಯಮಕ್ಕೆ ಸಂಬಂಧ ಪಟ್ಟ ಮಳಿಗೆಗಳನ್ನು ಹಾಕಿ ತಮ್ಮ ಕೌಶಲ್ಯವನ್ನು ಮೆರೆದರು. ಇನ್ನು ಈ ಮಳಿಗೆಗಳಲ್ಲಿ 3ಡಿ ತಂತ್ರಜ್ಞಾನದಿಂದ ಮುದ್ರಿಸುತ್ತಿದ್ದ ವಿದ್ಯಾರ್ಥಿಗಳ ಮಳಿಗೆ ಎಲ್ಲರ ಗಮನ ಸೆಳೆಯಿತು. ಕಾರ್ಯಕ್ರಮದಲ್ಲಿ ಈ ಮೇಳದಲ್ಲಿನ ಉತ್ತಮ ಮಳಿಗೆಗೆ ಬಹುಮಾನವನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ಅಕಾಡೆಮಿಕ್ ಡೀನ್ ಎಸ್.ರೇಣಿಕಾಲತಾ, ಟಿಪಿಒ ಡಾ.ಕೆ.ಎನ್ ಹರೀಶ್, ಎಂಬಿಎ ವಿಭಾಗದ ಮುಖ್ಯಸ್ಥರಾದ ಡಾ.ಎಂ.ಸಿ ರೂಪ, ಹಾಗೂ ಎಲ್ಲಾ ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರು ವಿದ್ಯಾರ್ಥಿಗಳು ಹಾಜರಿದ್ದರು.