ಎಲೆ ಮರೆ ಕಾಯಿಯಂತೆ ಪ್ರತಿಭೆಗಳು ಮರೆಯಾಗುವ ಗ್ರಾಮೀಣ ಪ್ರತಿಭೆಗೆ ಕೆಲ ದಿನಗಳ ಕಾಲ ನೀರೆರೆದು ಪೋಷಿಸುವ ಕೆಲಸ ರವಿಕುಮಾರ್ ಗುಬ್ಬಿ ಅವರ ಸಾರಥ್ಯದಲ್ಲಿ ಸಿಎನ್ ಜಿ ಸ್ಕಿಲ್ ಡೆವಲಪ್ಮೆಂಟ್ ಇನ್ಸ್ಟಿಟ್ಯೂಟ್ ಸಹಕಾರದಲ್ಲಿ ತಿಂಗಳ ಬೇಸಿಗೆ ಶಿಬಿರವನ್ನು ಚಿಣ್ಣರ ಚಿಗುರು ಎಂಬ ಹೆಸರಿನಲ್ಲಿ ಸಂಪೂರ್ಣ ಹಳ್ಳಿ ಮಕ್ಕಳಿಗೆ ನಡೆಸಿ ಸಾರ್ಥಕ ಶಿಬಿರ ನಡೆಸಿ ಪೋಷಕರ ಮೆಚ್ಚುಗೆಗೆ ಪಾತ್ರರಾದರು.
ಏಪ್ರಿಲ್ ಮಾಹೆಯಲ್ಲಿ ಆರಂಭಿಸಿದ ಈ ಶಿಬಿರಕ್ಕೆ ಗ್ರಾಮೀಣ ಭಾಗದಲ್ಲಿ ತಟ್ಟನೇ ಪ್ರೋತ್ಸಾಹ ಸಿಕ್ಕಿದೆ. ನೃತ್ಯ, ಹಾಡು, ಚಿತ್ರಕಲೆ, ಕರಕುಶಲ, ಯೋಗ ಮತ್ತು ಧ್ಯಾನ, ನಾಟಕ, ಸಂವಾದ ಹೀಗೆ ಅನೇಕ ಬಹುಮುಖ ಪ್ರತಿಭೆಗೆ ಅವಕಾಶ ಕೊಟ್ಟು ಸೂಕ್ತ ತರಬೇತಿ ನೀಡಿ ಮಕ್ಕಳ ಪಠ್ಯೇತರ ಚಟುವಟಿಕೆಗೆ ಮೆಟ್ಟಿಲಾಗಿ ಆಯೋಜಿಸಿದ ಶಿಬಿರ ಬಗ್ಗೆ ಮಾಹಿತಿ ತಿಳಿದ ಹಳ್ಳಿಗಾಡಿನ ಮಕ್ಕಳ ಪಾಲಕರು ನೀಡಿದ ಸಹಕಾರದಿಂದ 4 ವರ್ಷದಿಂದ 14 ವರ್ಷದ ಮಕ್ಕಳಿಗೆ ಎಲ್ಲಾ ವಿದ್ಯೆ ಧಾರೆ ಎರೆಯುವ ಅವಕಾಶ ಸಿಕ್ಕಿದ್ದೇ ಕ್ಷಣ ರವಿಕುಮಾರ್ ಅವರು ತಮ್ಮ ಸಿಬ್ಬಂದಿಯೊಂದಿಗೆ ಶಿಬಿರವನ್ನು ಆಯೋಜಿಸಿ ಸಂಬಂಧಪಟ್ಟ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ಸಹ ನೀಡಿ ಮಕ್ಕಳಲ್ಲಿ ಅಡಗಿದ್ದ ಪ್ರತಿಭೆಯನ್ನು ಹೊರತಂದರು.
ಗುಬ್ಬಿ ಸಂತೆ ಮೈದಾನದ ಬಳಿ ಡಿಗ್ರಿ ಕಾಲೇಜು ರಸ್ತೆಯ ಬಳಿಯ ಸಿಎನ್ ಜಿ ಇನ್ಸ್ಟಿಟ್ಯೂಟ್ ನಲ್ಲಿ ಶಿಬಿರ ಸದ್ದಿಲ್ಲದೆ ಆರಂಭವಾಗಿ ತಿಂಗಳಲ್ಲಿ 50 ಮಕ್ಕಳಲ್ಲಿ ಅಡಗಿದ್ದ ಒಂದೊಂದು ಪ್ರತಿಭೆಯನ್ನು ಗುರುತಿಸಿ ತರಬೇತಿ ನೀಡಿದರು. ಎಲ್ಲಾ ವಿದ್ಯೆಯನ್ನು ಹೇಳಿಕೊಡುತ್ತಲೇ ಮಕ್ಕಳ ಆಸಕ್ತಿ ಅನುಸಾರ ಪ್ರತಿಭೆ ಅನಾವರಣ ಮಾಡಲಾಯಿತು. ಸಂಕುಚಿತ ಮನೋಭಾವ ತಾಳಿರುವ ಮಕ್ಕಳೇ ಹೆಚ್ಚಿರುವ ಗ್ರಾಮೀಣ ಪ್ರತಿಭೆಗೆ ವೇದಿಕೆ ಸೃಷ್ಟಿಸಿ ವಿಶಾಲ ಮನೋಭಾವ ಬೆಳೆಸಿ ಮಕ್ಕಳಲ್ಲಿ ಭಯಮುಕ್ತ ವಾತಾವರಣ ಸೃಷ್ಟಿ ಮಾಡಿದರು.
ಶಿಬಿರದ ಸಮಾರೋಪದಲ್ಲಿ ಅತಿಥಿಗಳಾಗಿ ಆಗಮಿಸಿದ್ದ ರೈತಸಂಘದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಸಿ.ಜಿ.ಲೋಕೇಶ್, ಸತ್ತಿಗಪ್ಪ ಮಕ್ಕಳ ಲವಲವಿಕೆ ಕಂಡು ಶಿಬಿರದ ಸಾರ್ಥಕತೆ ಬಗ್ಗೆ ಕೊಂಡಾಡಿದರು. ಕಂಪ್ಯೂಟರ್ ಕಲಿಕೆ ಜೊತೆಗೆ ನಮ್ಮ ಸಂಸ್ಕೃತಿ ಪರಂಪರೆ ಬಿಂಬಿಸುವ ಹಲವು ವಿದ್ಯೆಗೆ ಮಾನ್ಯತೆ ನೀಡಿ ಹಳ್ಳಿ ಮಕ್ಕಳಿಗೆ ತರಬೇತಿ ನೀಡಿದ್ದು ಸಾರ್ಥಕ ಎನಿಸಿದೆ. ತಾಯಂದಿರ ದಿನದ ಪರಿಚಯ ಮಾಡುವ ಮೂಲಕ ಪೋಷಕರ ಮುಂದೆ ಸಮಾರೋಪ ನಡೆಸಿ ಶಿಬಿರಕ್ಕೆ ಒಂದು ಅರ್ಥ ನೀಡಿದ ರವಿಕುಮಾರ್ ಕೆಲಸ ನಿರಂತರ ಸಾಗಲಿ ಎಂದು ಹಾರೈಸಿದರು.
ಶಿಬಿರ ಆಯೋಜಕ ರವಿಕುಮಾರ್ ಗುಬ್ಬಿ ಮಾತನಾಡಿ ಅವಕಾಶ ವಂಚಿತ ಮಕ್ಕಳಿಗೆ ಮೊದಲ ಆದ್ಯತೆ ನೀಡಬೇಕು ಎಂದು ಆಲೋಚಿಸಿ ಗ್ರಾಮೀಣ ಮಕ್ಕಳನ್ನೇ ಆಯ್ಕೆ ಮಾಡಿ 50 ಮಕ್ಕಳ ಬೇಸಿಗೆ ಶಿಬಿರ ನಡೆಸಿದ್ದೇವೆ. ಕಂಪ್ಯೂಟರ್ ಜೊತೆಗೆ ಹತ್ತು ಪ್ರಕಾರದ ಪ್ರತಿಭೆ ಅನಾವರಣ ಮಾಡುವಲ್ಲಿ ಯಶಸ್ವಿ ಕಂಡಿದ್ದೇವೆ. ಮಕ್ಕಳ ಆಸಕ್ತಿ ತಿಳಿದು ಆಯಾ ಪ್ರತಿಭೆಗೆ ಹೆಚ್ಚಿನ ಪ್ರೇರಣೆ ನೀಡಿ ತರಬೇತಿ ಸಹ ಕೊಟ್ಟಿದ್ದೇವೆ. ಈ ಕಾರ್ಯಕ್ಕೆ ಶಿಕ್ಷಕಿ ವಿಜಯಲಕ್ಷ್ಮಿ ಅವರ ಸಹಕಾರ ಸ್ಮಡಿಸಬೇಕಿದೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಚಿಕ್ಕ ವಯಸ್ಸಿನ ಹಳ್ಳಿ ಪ್ರತಿಭೆಗೆ ಈಗ ಸಿಕ್ಕ ಚಿಕ್ಕ ಅವಕಾಶ ಮುಂದಿನ ಭವಿಷ್ಯ ರೂಪಿಸಿಕೊಡುತ್ತದೆ. ಆ ದಿನ ನಮ್ಮ ಶಿಬಿರಕ್ಕೆ ಬೆಲೆ ಸಿಗುತ್ತದೆ ಎಂದು ಮಕ್ಕಳಿಗೆ ಶುಭ ಕೋರಿದರು.