ಪ್ರಸ್ತುತ ಕಾಲಘಟ್ಟದಲ್ಲಿ ರಂಗಭೂಮಿಯ ಜವಾಬ್ದಾರಿ ಬಹಳ ಮಹತ್ವದಾಗಿದ್ದು, ರಂಗಭೂಮಿಯಿಂದ ಜೀವಪರವಾದ ಸಾಮರಸ್ಯದ ಒಳಿತಿನ ಸಮಾಜ ಕಟ್ಟಲು ಸಾಧ್ಯ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ಎಸ್ ತಂಗಡಗಿ ಅವರು ಅಭಿಪ್ರಾಯಪಟ್ಟರು.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹೆಗ್ಗೋಡಿಯಲ್ಲಿರುವ ನೀನಾಸಂ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ನವೀಕರಿಸಿರುವ ರಂಗಸಭಾಂಗಣದ ಲೋಕಾರ್ಪಣೆ, ನೀನಾಸಂ ರಂಗ ಶಿಕ್ಷಣ ಕೇಂದ್ರದ ವರ್ಷಾಂತ್ಯದ ನಾಟಕೋತ್ಸವ ಮತ್ತು ಬೇಸಿಗೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
“ರಂಗಭೂಮಿ ಒಂದು ಮಾಧ್ಯಮ ಕ್ಷೇತ್ರ ಇದ್ದಂತೆ. ಸಮಾಜಕ್ಕೆ ಹೇಳಬೇಕಾದ್ದನ್ನು ಗಟ್ಟಿಯಾಗಿ ಹೇಳಬಹುದು. ರಂಗಭೂಮಿಯಿಂದ ಸಮಾಜಕ್ಕೆ ಒಳ್ಳೆ ಸಂದೇಶಗಳನ್ನು ನೀಡುವ ಕೆಲಸ ನಡೆಯುತ್ತಿದೆ” ಎಂದು ಹೇಳಿದರು.

ನೀನಾಸಂ, ಕಲಾವಿದರನ್ನು ತಯಾರಿಸುವ ಫ್ಯಾಕ್ಟರಿ: “ಹೆಗ್ಗೋಡಿನಲ್ಲಿರುವ ನೀನಾಸಂ ಕಲಾವಿದರನ್ನು ತಯಾರಿಸುತ್ತಿರುವ ಫ್ಯಾಕ್ಟರಿ ಇದ್ದಂತೆ. ಇಲ್ಲಿಂದ ನೀನಾಸಂ ಸತೀಶ್, ಅಚ್ಯುತ್ ಕುಮಾರ್, ಮಂಡ್ಯ ರಮೇಶ್ ಹೀಗೆ ನೂರಾರು ಮಂದಿ ಕಲಾವಿದರನ್ನು ಈ ಸಂಸ್ಥೆ ನೀಡಿದೆ. ಒಂದು ಸಂಸ್ಥೆಯನ್ನು 75 ವರ್ಷ ಕಟ್ಟಿ ಬೆಳೆಸುವ ಕೆಲಸ ಸುಲಭವಲ್ಲ. ಆದರೆ ನೀನಾಸಂ ಸಂಸ್ಥೆಯ ಕಾರ್ಯ ಶ್ಲಾಘನೀಯ” ಎಂದರು.
“ಪ್ರತಿ ವರ್ಷ ನೀನಾಸಂ ಸಂಸ್ಥೆಗೆ ಅನುದಾನ ನೀಡಲಾಗುತ್ತಿದೆ. ಕಳೆದ ವರ್ಷ 35 ಲಕ್ಷ ರೂ. ಅನುದಾನ ನೀಡಲಾಗಿದ್ದು, ಈ ವರ್ಷ ಹೆಚ್ಚಿನ ಅನುದಾನ ನೀಡಲಾಗುವುದು” ಎಂದು ಸಚಿವರು ಭರವಸೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಮಧುಗಿರಿ | ದಲಿತ ಯುವಕನಿಗೆ ದೇವಾಲಯ ಪ್ರವೇಶ ನಿರಾಕರಣೆ; ವಿಡಿಯೋ ವೈರಲ್
“ಬಿ ವಿ ಕಾರಂತರ ರಂಗಮಂದಿರ ನವೀಕರಣಕ್ಕೆ 75 ಲಕ್ಷದ ಅಗತ್ಯವಿದೆಯೆಂದು ನನ್ನ ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ಸ್ಥಳೀಯ ಶಾಸಕರೊಂದಿಗೆ ಚರ್ಚೆ ನಡೆಸಿ ಅಗತ್ಯದ ಅನುದಾನ ಒದಗಿಸಲು ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕ ಬೇಳೂರು ಗೋಪಾಲ ಕೃಷ್ಣ, ಬೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರವಿಕುಮಾರ್, ನೀನಾಸಂನ ಸಿದ್ದಾರ್ಥ್ ಭಟ್, ಅಕ್ಷರ ಹಾಗೂ ಇತರರು ಇದ್ದರು.