ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಗಾಗಿ ರಾಜ್ಯದಲ್ಲಿ ನಡೆಯುತ್ತಿರುವ ಸಮೀಕ್ಷೆಯಲ್ಲಿ ಕೊರಮ ಮತ್ತು ಕೊರಚ ಜನಾಂಗದವರು ಜಾತಿ ಕಾಲಂನಲ್ಲಿ ಕಡ್ಡಾಯವಾಗಿ ‘ಕೊರಮ’ ಅಥವಾ ‘ಕೊರಚ’ ಎಂದಷ್ಟೇ ನಮೂದಿಸಬೇಕು ಎಂದು ನುಲಿಯ ಚಂದಯ್ಯ ಕೊರಮ ಕೊರಚ ಜನಾಂಗದ ಸೇವಾ ಸಂಘದ ರಾಜ್ಯಾಧ್ಯಕ್ಷ ಎಚ್.ಟಿ.ಜಯಣ್ಣ ಹೇಳಿದರು.
ಬೆಂಗಳೂರು ಪ್ರೆಸ್ ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮುದಾಯದ ಪ್ರತಿಯೊಬ್ಬರೂ ಈ ಸಮೀಕ್ಷೆಯಲ್ಲಿ ತಮ್ಮ ವಿವರವನ್ನು ನೀಡಬೇಕು. ಜಾತಿ ಕಾಲಂನಲ್ಲಿ ಕಡ್ಡಾಯವಾಗಿ ‘ಕೊರಮ’ ಅಥವಾ ‘ಕೊರಚ’ ಎಂದಷ್ಟೇ ನಮೂದಿಸಬೇಕು. ಜಾತಿಯ ಮುಂದೆ ಬೇರೆ ಯಾವುದೇ ಉಪ ಕಸಬನ್ನು ಸೇರಿಸಬಾರದು ಎಂದರು.
ರಾಜ್ಯದಲ್ಲಿ ಕೊರಮ ಮತ್ತು ಕೊರಚ ಸಮುದಾಯ ಸುಮಾರು 15 ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆ ಹೊಂದಿದೆ. ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಹೋಗುವ ಮತ್ತು ಅನಕ್ಷರಸ್ಥರಾಗಿರುವ ಕೊರಮ ಮತ್ತು ಕೊರಚ ಸಮುದಾಯದ ಸಮೀಕ್ಷೆ ನಡೆಸಿ ನಿಖರ ಮಾಹಿತಿ ಪಡೆಯಲು ಸರ್ಕಾರ ನಿಗದಿ ಪಡಿಸಿದ ಅವಧಿ ಸಾಕಾಗದು. ಮೇ 17ರ ವರೆಗೆ ಇರುವ ಈ ಸಮೀಕ್ಷಾ ಅವಧಿಯನ್ನು ಕನಿಷ್ಠ ಒಂದು ತಿಂಗಳು ಮುಂದೂಡಬೇಕು ಎಂದು ಅವರು ಆಗ್ರಹಿಸಿದರು.
ಸಮೀಕ್ಷೆ ನಡೆಸಲು ಮನೆ ಮನೆ ಬರುತ್ತಿರುವ ಸಿಬ್ಬಂದಿಯಲ್ಲೂ ತರಬೇತಿಯ ಕೊರತೆ ಕಾಣುತ್ತಿದೆ. ಮೊಬೈಲ್ ಆಪ್ ಮೂಲಕ ಮಾಹಿತಿ ತುಂಬಿಸಬೇಕಾಗಿದೆ. ಸರ್ವರ್ ಸಮಸ್ಯೆ ಹಿನ್ನೆಲೆಯಲ್ಲಿ ನಿರ್ಧಿಷ್ಟ ಗುರಿ ಸಾಧಿಸಲು ಸಿಬ್ಬಂದಿಯಿಂದ ಸಾಧ್ಯವಾಗುತ್ತಿಲ್ಲ. ಹಾಗಾಗಿ ಸಿಬ್ಬಂದಿಗೆ ಹೆಚ್ಚಿನ ತರಬೇತಿ ನೀಡುವುದರ ಜೊತೆ ಸಮೀಕ್ಷಾ ಅವಧಿಯನ್ನು ವಿಸ್ತರಿಸಬೇಕು ಎಂದು ಅವರು ಮನವಿ ಮಾಡಿದರು.
ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ಹರೀಶ್ ಕುಮಾರ್ ಮಾತನಾಡಿ, ಈ ಸಮೀಕ್ಷೆ ಕೊರಮ, ಕೊರಚ ಸಮುದಾಯದ ಭವಿಷ್ಯದ ಮೀಸಲಾತಿ ಹಕ್ಕುಗಳು ಹಾಗೂ ಅಭಿವೃದ್ಧಿಗೆ ಬುನಾದಿಯಾಗಲಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸೇವಾ ಸಂಘದ ರಾಜ್ಯ ಉಪಾಧ್ಯಕ್ಷ ಎಸ್.ವೆಂಕಟೇಶ್, ಕಾರ್ಯಕಾರಿಣಿ ಸಮಿತಿ ಸದಸ್ಯ ಚಿಕ್ಕಮಗಳೂರಿನ ಹೋರಿ ತಿಮ್ಮನಹಳ್ಳಿಯ ಶ್ರೀನಿವಾಸ್, ಚಿಕ್ಕಮಗಳೂರು ಜಿಲ್ಲಾ ಅಲೆಮಾರಿ ಅನುಷ್ಠಾನ ಸಮಿತಿ ಸದಸ್ಯ ಮಲ್ಲಿದೇವಿಹಳ್ಳಿ ಶ್ರೀನಿವಾಸ್ ಉಪಸ್ಥಿತರಿದ್ದರು.