ಭಾರತೀಯ ಸಾಮಾಜಿಕ ಜಾಲತಾಣಗಳಲ್ಲಿ ʼಟ್ರೋಲ್ ಸಂಸ್ಕೃತಿʼ ದಿನದಿಂದ ದಿನಕ್ಕೆ ಉಗ್ರವಾಗಿ ಬೆಳೆಯುತ್ತಿದೆ. ಒಬ್ಬರ ನೋವಿಗೆ ಕನಿಷ್ಟ ಸಹಾನುಭೂತಿ ತೋರಿಸುವ ಬದಲು, ಅವರ ದುರಂತವನ್ನೇ ಪ್ರಶ್ನೆ ಮಾಡುವ ಮನೋವೃತ್ತಿ ಹುಟ್ಟಿಕೊಂಡಿದೆ. ಕರ್ತವ್ಯ ನಿಷ್ಠೆಗೆ ಶ್ಲಾಘನೆ ನೀಡಬೇಕಾದ ಜಾಗದಲ್ಲಿ, ಆರೋಪಗಳ ಸುರಿಮಳೆಗೈಯಲಾಗುತ್ತಿದೆ. ಟ್ರೋಲ್ ಸಂಸ್ಕೃತಿ ಮೇಲೆ ನಿಯಂತ್ರಣ ಇಲ್ಲದಿದ್ದರೆ, ಅದು ನೈತಿಕ ಹಿಂಸೆಗೆ ಪರ್ಯಾಯವಾಗಿ ಮುಂದುವರೆಯುವ ಆಘಾತಕಾರಿ ಬೆಳವಣಿಗೆಗೆ ನಾಂದಿಯಾಗುವ ಸಂಭವವಿದೆ.
ದೇಶದ ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿಯವರ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಹರಡುತ್ತಿರುವ ಟ್ರೋಲ್ ಗಾಳಿಯು ತಾಂತ್ರಿಕ ನಿಲುವಿಗಿಂತ ಹೆಚ್ಚಾಗಿ ವೈಯಕ್ತಿಕ ಜೀವನದ ಮೇಲೆ ದಾಳಿ ಮಾಡುತ್ತಿರುವುದು ಆತಂಕಕಾರಿಯಾಗಿದೆ. ರಾಜತಾಂತ್ರಿಕ ಅಧಿಕಾರಿಯೊಬ್ಬರು, ತನ್ನ ಪದನಿಷ್ಠೆ ಮತ್ತು ಶಿಸ್ತಿನ ಹೊರತಾಗಿ, ಅಪಪ್ರಚಾರದ ಬಲೆಗೆ ಸಿಲುಕಿರುವ ಈ ಸಂದರ್ಭವು ಸಾಮಾಜಿಕ ಮಾಧ್ಯಮದ ಜವಾಬ್ದಾರಿ ಮತ್ತು ನೈತಿಕತೆ ಕುರಿತು ಗಂಭೀರವಾದ ಚರ್ಚೆಗೀಡುಮಾಡಿದೆ.
ಭಾರತ ಮತ್ತು ಪಾಕಿಸ್ತಾನದ ಕದನ ವಿರಾಮ ಘೋಷಣೆಯ ನಂತರ ಇಂತಹದ್ದೊಂದು ಟ್ರೋಲ್ ಬಲೆಗೆ ಮಿಸ್ರಿ ಸಿಲುಕಿದ್ದಾರೆ. ಪಾಕಿಸ್ತಾನದ ವಿರುದ್ಧ ಅಘೋಷಿತ ಯುದ್ಧಕ್ಕೆ ವಿರಾಮ ಘೋಷಿಸಿದ್ದೇ ಅವರ ಪರಮ ತಪ್ಪಾಗಿದೆ. ಪಾಕಿಸ್ತಾನ ಪರ ನಿಲ್ಲುವ ರಾಜತಾಂತ್ರಿಕ, ದೇಶದ್ರೋಹಿ ಎಂಬಿತ್ಯಾದಿ ಪದಬಳಕೆ ಮಾಡಿ ಅವರನ್ನು ನಿಂದಿಸಲಾಗುತ್ತಿದೆ. ಕದನ ವಿರಾಮ ಸದ್ಯದ ಪರಿಸ್ಥಿತಿಗೆ ಅತ್ಯಗತ್ಯವಾಗಿತ್ತು, ಅಂತಹ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರ ಸರ್ಕಾರದ್ದಾಗಿರುತ್ತದೆ ಹೊರತು ಒಬ್ಬ ಅಧಿಕಾರಿಯದ್ದಲ್ಲ ಎನ್ನುವ ಕನಿಷ್ಟ ಪರಿಜ್ಞಾನ ಇಲ್ಲದೆ ಟ್ರೋಲ್ ಹೆಸರಿನಲ್ಲಿ ಅವರ ಘನತೆಯ ಬದುಕನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ ಟ್ರೋಲ್ ಮಹಾಶಯರು.
ರಾಜತಾಂತ್ರಿಕ ನಡೆಯ ಬಗ್ಗೆ ಅಸಮಾಧಾನದಿಂದ ಆರಂಭವಾದ ಟ್ರೋಲ್, ಕ್ರಮೇಣ ಚಾರಿತ್ರ್ಯ ಹತ್ಯೆಯ ಆಯುಧವಾಗಿ ಉಲ್ಬಣಗೊಂಡಿದೆ. ಸಾಲದೆಂಬಂತೆ ಈ ವಿವಾದದಲ್ಲಿ ಮಿಸ್ರಿಯವರ ಪುತ್ರಿಯವರನ್ನೂ ಎಳೆದು ತರಲಾಗಿದೆ. ಮಿಸ್ರಿ ಅವರ ಪುತ್ರಿಯ ಮೊಬೈಲ್ ಸಂಖ್ಯೆಯನ್ನು ಹಂಚಿಕೊಂಡು ವಿಕೃತಿ ಮೆರೆಯಲಾಗುತ್ತಿದೆ.
ಲಂಡನ್‌ನಲ್ಲಿ ವಾಸಿಸುತ್ತಿರುವ ಮತ್ತು ಜಾಗತಿಕ ಕಾನೂನು ಸಂಸ್ಥೆ ಹರ್ಬರ್ಟ್ ಸ್ಮಿತ್ ಫ್ರೀಹಿಲ್ಸ್‌ನಲ್ಲಿ ಕೆಲಸ ಮಾಡುತ್ತಿರುವ ವಿಕ್ರಮ್ ಮಿಸ್ರಿ ಅವರ ಮಗಳು ಡಿಡನ್ ಮಿಸ್ರಿ ಅವರನ್ನು ಸೋ ಕಾಲ್ಡ್ ಸೋಷಿಯಲ್ ಮೀಡಿಯಾ ಬಳಕೆದಾರರು ಕೆಟ್ಟದಾಗಿ ಬಿಂಬಿಸಿ ಟ್ರೋಲ್ ಮಾಡಿದ್ದಾರೆ. ರೋಹಿಂಗ್ಯಾ ನಿರಾಶ್ರಿತರಿಗೆ ಕಾನೂನು ಸಹಾಯವನ್ನು ನೀಡಿದ್ದಾರೆ ಎಂಬ ಆರೋಪದ ಮೇಲೆ ಅವರ ಮೇಲೆ ದಾಳಿ ನಡೆಸಲಾಗಿದೆ. ಅವರ ಹಳೆಯ ಪೋಸ್ಟ್‌ಗಳನ್ನು ಮತ್ತೆ ಹಂಚಿಕೊಳ್ಳುವ ಹಾಗೂ ಆಕ್ಷೇಪಾರ್ಹ ಕಮೆಂಟ್‌ಗಳನ್ನು ಹಾಕುವ ಮೂಲಕ ದಾಳಿ ನಡೆಸಲಾಗಿದೆ. ಈ ಎಲ್ಲದರಿಂದ ವಿಚಲಿತರಾದ ಮಿಸ್ರಿ ತಮ್ಮ ಟ್ವಿಟರ್ ಖಾತೆಯನ್ನು ಪ್ರೈವೇಟ್ ಮಾಡಿಬಿಟ್ಟರು.
ಟ್ರೋಲಿಗರ ಈ ಹೀನ ಕೃತ್ಯವನ್ನು ರಾಷ್ಟ್ರೀಯ ಮಹಿಳಾ ಆಯೋಗ ತೀವ್ರವಾಗಿ ಖಂಡಿಸಿದೆ. “ವಿದೇಶಾಂಗ ಕಾರ್ಯದರ್ಶಿ ಮಿಶ್ರಿ ಅವರ ಮಗಳ ವೈಯಕ್ತಿಕ ಮಾಹಿತಿಯನ್ನು ಬಹಿರಂಗಪಡಿಸುವುದು ಗಂಭೀರ ಮತ್ತು ಬೇಜವಾಬ್ದಾರಿಯುತ ಕೃತ್ಯವಾಗಿದೆ. ಇದು ಗೌಪ್ಯತೆ ಕಾನೂನುಗಳ ಉಲ್ಲಂಘನೆಯಾಗಿದ್ದು, ಅವರ ಸುರಕ್ಷತೆಗೆ ಧಕ್ಕೆ ತರುತ್ತದೆ. ಹಿರಿಯ ನಾಗರಿಕ ಸೇವಕರ ಕುಟುಂಬಗಳ ವೈಯಕ್ತಿಕ ಟೀಕೆಗಳನ್ನು ಎಂದಿಗೂ ಸಹಿಸಲಾಗುವುದಿಲ್ಲ. ಅವರ ಕುಟುಂಬ ಸದಸ್ಯರ ಮೇಲೆ ವೈಯಕ್ತಿಕ ಟೀಕೆ ಮಾಡುವುದು ನೈತಿಕವಾಗಿಯೂ ತಪ್ಪು. ನಾವೆಲ್ಲರೂ ಸಭ್ಯತೆ ಮತ್ತು ಸಂಯಮದ ನಡವಳಿಕೆಯನ್ನು ತೋರಿಸಬೇಕು” ಎಂದು ಆಯೋಗದ ಅಧ್ಯಕ್ಷೆ ವಿಜಯಾ ರಹತ್ಕರ್ ಹೇಳಿದ್ದಾರೆ.
ಕೆಲವು ಬಳಕೆದಾರರು ಮಿಸ್ರಿಯವರ ಹಳೆಯ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ಹಂಚಿಕೊಂಡರು, ಮಿಶ್ರಿಯವರ ಕುಟುಂಬದ ವೈಯಕ್ತಿಕ ಸಂಪರ್ಕ ವಿವರಗಳನ್ನು ಬಹಿರಂಗಪಡಿಸಿದರು ಮತ್ತು ಅವರ ಮಗಳ ಬಗ್ಗೆ ಆಕ್ಷೇಪಾರ್ಹ ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿದರು.
ಟ್ರೋಲ್ ಮಾಡಲು ರಾಜಕೀಯ ಭಿನ್ನಾಭಿಪ್ರಾಯಗಳು ಕಾರಣವಾಗಿದ್ದರೂ, ಅವರ ಮಕ್ಕಳನ್ನು ಅಥವಾ ಕುಟುಂಬದವರನ್ನು ಎಳೆದು ತರುವುದು ಎಷ್ಟು ಸರಿ? ಇಂಥದ್ದರಿಂದ ಸಮಾಜದ ಮಾನವೀಯ ಮೌಲ್ಯ ಕುಸಿಯುವಲ್ಲಿ ಸಂದೇಹವಿಲ್ಲ. ವೈಯಕ್ತಿಕವಾಗಿ ವ್ಯತ್ಯಾಸಗಳಿದ್ದರೂ ಪ್ರತಿಯೊಬ್ಬರೂ ಮಿತಿಯಲ್ಲಿಯೇ ನಡೆದುಕೊಳ್ಳಬೇಕಿದೆ. ವ್ಯಕ್ತಿಯ ಗೌರವಕ್ಕೆ ಧಕ್ಕೆ ಬರುವ ರೀತಿಯ ಟ್ರೋಲ್‌ಗಳಿಗೆ ತಡೆಯೊಡ್ಡುವ ಜವಾಬ್ದಾರಿ ಎಲ್ಲರದ್ದು. ಆದರೆ ನಿಜಕ್ಕೂ ಜವಾಬ್ದಾರಿ ಮೆರೆಯುತ್ತಿರುವವರಾರು?
ಆದಾಗ್ಯೂ ರಾಷ್ಟ್ರೀಯ ನಾಯಕರು ಮಿಸ್ರಿಯವರ ಬೆನ್ನಿಗೆ ನಿಂತಿದ್ದಾರೆ. ಈ ಬೆಳವಣಿಗೆಯು ಸಮಾಜದಲ್ಲಿ ನೈತಿಕ ಮಾದರಿಯನ್ನು ಸೃಷ್ಟಿಸುವಲ್ಲಿ ಒಂದು ಸಕಾರಾತ್ಮಕ ಹೆಜ್ಜೆ.
“ಸಮಗ್ರತೆಯಿಂದ ತಮ್ಮ ಕರ್ತವ್ಯಗಳನ್ನು ನಿರ್ವಹಿಸುವ ನಾಗರಿಕ ಸೇವಕರ ಮೇಲೆ ಅನಗತ್ಯ ವೈಯಕ್ತಿಕ ದಾಳಿಗಳು ತೀವ್ರ ವಿಷಾದನೀಯ. ಸಾರ್ವಜನಿಕ ಸೇವೆಯ ಘನತೆಯನ್ನು ಎತ್ತಿಹಿಡಿಯುವ ನಮ್ಮ ಬದ್ಧತೆಯನ್ನು ನಾವು ಪುನರುಚ್ಚರಿಸುತ್ತೇವೆ. ಮಿಸ್ರಿ ಮತ್ತು ಅವರ ಕುಟುಂಬದೊಂದಿಗೆ ಒಗ್ಗಟ್ಟಿನಿಂದ ನಿಲ್ಲುತ್ತೇವೆ. ” ಎಂದು ಐಎಎಸ್ ಅಸೋಸಿಯೇಷನ್ ತನ್ನ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದೆ.
ಐಆರ್‌ಟಿಎಸ್ ಅಸೋಸಿಯೇಷನ್ ಮತ್ತು ಐಆರ್‌ಎಸ್ (ಸಿ & ಐಟಿ) ಅಸೋಸಿಯೇಷನ್ ಕೂಡ ಮಿಸ್ರಿ ಮತ್ತು ಅವರ ಕುಟುಂಬದ ಮೇಲೆ ನಡೆಸಲಾದ ನಿಂದನೆಯನ್ನು ಖಂಡಿಸಿದೆ.
ಇದನ್ನೂ ಓದಿ: ಪ್ರಬುದ್ಧತೆ ತೋರುತ್ತಿರುವ ಸರ್ಕಾರ – ಯುದ್ಧ ಬಯಸುತ್ತಿರುವ ಭಕ್ತರು ಮತ್ತು ಮಾಧ್ಯಮಗಳು
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ತಮ್ಮ ಪೋಸ್ಟ್‌ನಲ್ಲಿ ಮಿಸ್ರಿಯವರನ್ನು ಸಮರ್ಥಿಸಿಕೊಂಡಿದ್ದು, ʼಇಂತಹ ದಾಳಿಗಳು ಸಮರ್ಪಿತ ಅಧಿಕಾರಿಗಳ ನೈತಿಕತೆಯನ್ನು ಹಾಳು ಮಾಡುತ್ತವೆ. ಈ ವಿಷಯದ ಬಗ್ಗೆ ಬಿಜೆಪಿ ಸರ್ಕಾರದ ಮೌನ ಎದ್ದು ಕಾಣುತ್ತದೆ. ಅಧಿಕಾರಿಯ ಘನತೆಯನ್ನು ರಕ್ಷಿಸುವಲ್ಲಿ ಬಿಜೆಪಿ ವಿಫಲರಾಗಿದೆʼ ಎಂದು ಟೀಕಿಸಿದ್ದಾರೆ.
ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಕೂಡ ಮಿಸ್ರಿಯವರ ಪರ ನಿಂತಿದ್ದಾರೆ. ʼನಾಗರಿಕ ಸೇವಕರು ಕಾರ್ಯಾಂಗದ ನಿರ್ದೇಶನದಡಿಯಲ್ಲಿ ಕೆಲಸ ಮಾಡುತ್ತಾರೆ ಮತ್ತು ರಾಜಕೀಯ ನಿರ್ಧಾರಗಳಿಗೆ ಅವರನ್ನು ದೂಷಿಸಬಾರದುʼ ಎಂದು ತಿಳಿಸಿದ್ದಾರೆ.
ಮಾಜಿ ವಿದೇಶಾಂಗ ಕಾರ್ಯದರ್ಶಿ ನಿರುಪಮಾ ಮೆನನ್, ʼಹಿರಿಯ ರಾಜತಾಂತ್ರಿಕರ ಟ್ರೋಲಿಂಗ್ ಸಂಪೂರ್ಣವಾಗಿ ನಾಚಿಕೆಗೇಡಿನ ಸಂಗತಿ ಮತ್ತು ಇದು ಸಭ್ಯತೆಯ ಎಲ್ಲಾ ಗೆರೆಗಳನ್ನು ಮೀರುತ್ತದೆ. ಅವರ ದೂಷಣೆಗೆ ಯಾವುದೇ ಕಾರಣವಿಲ್ಲʼ ಎಂದು ಹೇಳಿದ್ದಾರೆ.
ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಕೂಡ ಮಿಸ್ರಿ ಅವರಿಗೆ ನೈತಿಕ ಬೆಂಬಲ ಸೂಚಿಸಿದ್ದಾರೆ. ʼಮಿಸ್ರಿ ಮತ್ತು ಅವರ ಕುಟುಂಬದವರನ್ನು ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್ ಮಾಡುವುದನ್ನು ನೋಡುವುದು ಅಸಹ್ಯಕರವಾಗಿದೆ. ಯಾವುದೇ ವೃತ್ತಿಪರ ರಾಜತಾಂತ್ರಿಕರು ತಮ್ಮ ಕೆಲಸವನ್ನು ಮಾಡಬಾರದಾ?. ಬಲವಾಗಿ ನಿಲ್ಲಿ ಸರ್, ಈ ದೇಶದಲ್ಲಿ ಎಲ್ಲರೂ ಅಂಧ ಭಕ್ತರಂತೆ ಕೆಟ್ಟವರಲ್ಲʼ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಪತಿಯನ್ನು ಕಳೆದುಕೊಂಡ ನಂತರ ಹಿಮಾನ್ಶಿ ನರ್ವಾಲ್ ಟ್ರೋಲ್ ಶಿಕಾರಿಗೆ ಗುರಿಯಾದರು. ನೌಕಾಪಡೆಯ ಕ್ಯಾಪ್ಟನ್ ವಿನಯ್ ನರ್ವಾಲ್ ಅವರ ಪತ್ನಿಯಾಗಿದ್ದರೂ ಕೆಲ ಅಪ್ರಬುದ್ಧ ತೆರೆಮರೆಯ ಖಳನಾಯಕರ ಟೀಕೆಗೆ ಗುರಿಯಾಗಬೇಕಾಯಿತು. ಆ ದುಃಖದಲ್ಲೂ ಆಕೆ ʼಭಯೋತ್ಪಾದಕ ದಾಳಿಯಲ್ಲಿ ಮುಸ್ಲಿಮರು ಮತ್ತು ಕಾಶ್ಮೀರಿಗಳನ್ನು ಗುರಿಯಾಗಿಸಬಾರದುʼ ಎಂದು ಶಾಂತಿಗಾಗಿ ಮಾಡಿದ ಮನವಿಯು ಅವರನ್ನು ಕೆಟ್ಟದಾಗಿ ಬಿಂಬಿಸಲು ಕಾರಣವಾಯಿತು.
ಕೆಲವರು “ಅವಳು ನಾಟಕ ಮಾಡ್ತಾ ಇದಾಳೆ”, “ಮೀಡಿಯಾ ಆಕೆಯನ್ನೇ ಜಾಸ್ತಿ ತೋರಿಸ್ತಿದೆ”, “ಪ್ರಚಾರಕ್ಕಾಗಿ ಅಷ್ಟು ನಾಟಕನಾ?” ಎನ್ನುವ ಮೂಲಕ ಆಕೆಯ ನೋವನ್ನೇ ಪ್ರಶ್ನೆ ಮಾಡಿದರು.
ಆಕೆಯ ಭೂತವನ್ನು ಕೆದಕುವುದರಿಂದ ಹಿಡಿದು ಶೈಕ್ಷಣಿಕ ಹಿನ್ನೆಲೆಯವರೆಗೆ, ಭವಿಷ್ಯದಲ್ಲಿ ಆಕೆ ಏನು ಮಾಡಬಹುದು ಎಂಬ ಊಹಾಪೋಹಗಳಿಂದ ಹಿಡಿದು ಆಕೆಯ ವೈಯಕ್ತಿಕ ಜೀವನದ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡುವವರೆಗೆ… ಎಲ್ಲದಕ್ಕೂ ಟ್ರೋಲಿಗರೇ ತೀರ್ಪು ಕೊಟ್ಟದ್ದು ದುರಂತ.
ಹಿಮಾನ್ಶಿ ಅವರ ಕುರಿತು ಒಂದೆಡೆ ಸಹಾನುಭೂತಿಯೇನೋ ಹರಿಯಿತು. ಆದರೆ, ಕಳೆದುಕೊಂಡ ಘನತೆಗೆ ಬೆಲೆಯಿಲ್ಲವೇ?
ಪಹಲ್ಗಾಮ್‌ನಲ್ಲಿ ನಡೆದ ಅದೇ ಭಯೋತ್ಪಾದಕ ದಾಳಿಯಲ್ಲಿ ತಂದೆಯನ್ನು ಕಳೆದುಕೊಂಡ ಆರತಿ ಮೆನನ್ ಕೂಡ ದರಿದ್ರ ಆನ್‌ಲೈನ್ ಟ್ರೋಲಿಂಗ್‌ಗೆ ಒಳಗಾದರು. “ನನ್ನ ಚಾಲಕ ಮುಸಾಫಿರ್ ಮತ್ತು ಇನ್ನೊಬ್ಬ ವ್ಯಕ್ತಿ ಸಮೀರ್ – ಅವರು ನನ್ನ ಸಹೋದರರಾದರು. ಅವರು ನನ್ನನ್ನು ಶವಾಗಾರಕ್ಕೆ ಕರೆದೊಯ್ದರು, ಔಪಚಾರಿಕ ಕೆಲಸಗಳಿಗೆ ಸಹಾಯ ಮಾಡಿದರು. ಅವರು ನನ್ನನ್ನು ಸಹೋದರಿಯಂತೆ ನೋಡಿಕೊಂಡರು” ಎಂದು ಮಾಧ್ಯಮಗಳ ಮುಂದೆ ಹೇಳಿದ್ದೇ ತಡ, ಆನ್‌ಲೈನ್ ಭಯೋತ್ಪಾದಕರು ಅವರ ಮೇಲೆ ಮುಗಿಬಿದ್ದರು.
ಕೆಲವರು “ಅವಳಂತಹ ಮಕ್ಕಳನ್ನು ಹೊಂದುವುದಕ್ಕಿಂತ ಮಕ್ಕಳಿಲ್ಲದಿರುವುದು ಉತ್ತಮ” ಎಂದು ಹೇಳುವವರೆಗೂ ಹೋದರು. ಆಕೆಯ ಹೇಳಿಕೆಗಳನ್ನು “ಅಸಹ್ಯಕರ” ಎಂದು ಕರೆಯುವವರೆಗೆ, ಆ ಟೀಕೆಗಳು ಕಠಿಣ, ಕ್ರೂರ ಮತ್ತು ಸ್ತ್ರೀ ದ್ವೇಷಪೂರಿತವಾಗಿದ್ದವು.
ಭಾರತದಲ್ಲಿ IT Act ಅಡಿಯಲ್ಲಿ ಆನ್ಲೈನ್ ಮೂಲಕ ಮಾಡುವ ಟ್ರೋಲ್, ನಿಂದನೆ, ಅವಹೇಳನ ಮತ್ತು ಕೆಟ್ಟ ಭಾಷೆ ಬಳಕೆಗೆ ಶಿಕ್ಷೆ ವಿಧಿಸಲಾಗುತ್ತದೆ. ಆದರೆ, ದೇಶದ ಒಬ್ಬ ಘನತೆವೆತ್ತ ರಾಜತಾಂತ್ರಿಕರು ಹಾಗೂ ಹಿಮಾನ್ಶಿಯವರಂತಹ ಅಧಿಕಾರಿಯೊಬ್ಬರ ಪತ್ನಿಯನ್ನು ಅಸಹ್ಯವಾಗಿ ನಿಂದಿಸಿದ್ದಕ್ಕೆ ಯಾವುದೇ ಶಿಕ್ಷೆಯಾದ ವರದಿ ಇಲ್ಲ. ಸಾಮಾನ್ಯವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಮಾಡುವವರಿಗೆ ಶಿಕ್ಷೆ ನೀಡುವುದು ಕಾನೂನಿನ ವ್ಯಾಪ್ತಿಯಲ್ಲಿರಬಹುದು. ಆದರೆ, ಇದು ಎಲ್ಲಾ ಪ್ರಕರಣದಲ್ಲೂ ಕೂಡ ಸಂಪೂರ್ಣವಾಗಿ ಪಾಲನೆಯಾಗುವುದಿಲ್ಲ ಎನ್ನುವುದೂ ಸತ್ಯ.
ಇದನ್ನೂ ಓದಿ: ನೈಜ ಸಮಸ್ಯೆ ಮರೆಮಾಚಲು, ಜನರ ಗಮನ ಬೇರೆಡೆ ಸೆಳೆಯಲು ಮೋದಿ ಬಳಸುತ್ತಿರುವ ಐದು ಆಸನಗಳು
ಮಾನವೀಯತೆ ಎಂದರೆ ಸಹಾನುಭೂತಿ, ವಿವೇಕ, ಮತ್ತು ಇತರರ ಅನುಭವಗಳ ಕುರಿತಾದ ಗಂಭೀರ ಮನನ. ಆದರೆ ಇಂದಿನ ಟ್ರೋಲ್ ಯುಗದಲ್ಲಿ, ಇದು ಅಸಾಧ್ಯವಾಗಿ ಪರಿಣಮಿಸಿದೆ. ನಾವು ಯಾರನ್ನಾದರೂ ವಿರೋಧಿಸುತ್ತಿದ್ದರೂ ಸತ್ಯದ ನೆಲೆಗಟ್ಟಿನಲ್ಲಿ, ಸಮರ್ಥನೀಯವಾಗಿ ವಿರೋಧಿಸುವುದನ್ನು ಕಲಿಯಬೇಕು. ಇಲ್ಲದಿದ್ದರೆ ನಾವು ವಾಗ್ದಂಡನೆ ಮೂಲಕ ನಿಷ್ಠೆಯ ಮೇಲೆಯೇ ದಾಳಿ ಮಾಡುವ ಜನಾಂಗವಾಗಿ ರೂಪುಗೊಳ್ಳುತ್ತೇವೆ.
ನೋವಿನ ಗಳಿಗೆಯಲ್ಲೂ ಒಬ್ಬ ವ್ಯಕ್ತಿಯ ಕುರಿತು ಅಮಾನವೀಯವಾಗಿ ವರ್ತಿಸುವ ಸ್ಥಿತಿಗೆ ತಲುಪಿದ್ದೇವೆಂದರೆ, ಸಮಾಜದಲ್ಲಿ ನೈತಿಕ ಅಧಃಪತನ ಯಾವ ಹಂತದಲ್ಲಿದೆ ಎನ್ನುವುದನ್ನು ಗಮನಿಸಬೇಕು. ಹಿಮಾನ್ಶಿಯ ಭೀತಿಗೆ ಧೈರ್ಯ ತುಂಬುವಲ್ಲಿ ನಿಂದನೆ ಕೇಳಿಸಿದೆ; ಮಿಸ್ರಿಯ ಕರ್ತವ್ಯಕ್ಕೆ ಬೆಂಬಲ ಸೂಚಿಸಬೇಕಾದಲ್ಲಿ ಅಪಪ್ರಚಾರ ನಡೆದಿದೆ. ಇದು ಕೇವಲ ಸಾಮಾಜಿಕ ಮಾಧ್ಯಮದ ದೋಷವಲ್ಲ; ನಮ್ಮ ಒಟ್ಟೂ ನಿಲುವಿನ ಪ್ರತಿಫಲ. ಮಾನವೀಯತೆಯ ಮೂಲತತ್ವವನ್ನೇ ಪ್ರಶ್ನಿಸುವಂತಾದ ಈ ರೀತಿ ಘಟನೆಗಳಲ್ಲಿ ಸರ್ಕಾರ ತನ್ನ ನಿಲುವೇನೆಂಬುದನ್ನು ಸ್ಪಷ್ಟಪಡಿಸಬೇಕಾಗಿದೆ. ಇಂತಹ ಪ್ರಕರಣಗಳಲ್ಲಿ ತಟಸ್ಥ ನಿರೀಕ್ಷಕರಂತೆ ಇರದೆ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕಾಗಿದೆ. ನಾವು ಸಾಂಸ್ಕೃತಿಕವಾಗಿ ಯಾವ ಹಂತದಲ್ಲಿ ನಿಲ್ಲುತ್ತಿದ್ದೇವೆ ಎಂಬುದನ್ನು ಸರ್ಕಾರದ ನಿಲುವು ಪ್ರತಿಬಿಂಬಿಸುವಂತಿರಬೇಕಾಗಿದೆ.
ಸಹಾನುಭೂತಿ, ಗೌರವ, ಮತ್ತು ಸತ್ಯಾನುಸಂಧಾನ– ಈ ಮೌಲ್ಯಗಳು ಯಾವ ಯುಗದಲ್ಲೂ ಹಳಸಲ್ಲ. ಟ್ರೋಲ್ ಮಾಡುವ ಮುನ್ನ ಕೊಂಚ ಯೋಚಿಸುವುದು ಸರಿ. ಇಲ್ಲದಿದ್ದರೆ, ಮಾತುಗಳ ಘರ್ಷಣೆಯಲ್ಲಿ ಮನುಷ್ಯತ್ವವೇ ಮರೆಯಾಗುತ್ತದೆ. ಟ್ರೋಲ್ ಮಾಡುವವರು ಕೆಲವರೇ ಇದ್ದರೂ, ಅವರನ್ನು ಬೆಂಬಲಿಸುವ ಸಮುದಾಯದ ಮೌನವೇ ದೊಡ್ಡ ಸಮಸ್ಯೆ. ಮೌನಕ್ಕೆಲ್ಲ ಮುಕ್ತಾಯವಿರಲಿ.. ಮೌಲ್ಯಗಳಿಗೆ ಮಾತು ಬರಲಿ!