ಮೈಸೂರು ರೈಲ್ವೆ ನಿಲ್ದಾಣದ ಬಳಿ ಆಯೋಜಿಸಿದ್ದ ಸಹಿ ಸಂಗ್ರಹಣೆ ಅಭಿಯಾನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಎಐಡಿಎಸ್ಓ ರಾಜ್ಯ ಖಜಾಂಜಿ ಸುಭಾಷ್ ಬೆಟ್ಟದ ಕೊಪ್ಪ ‘ ರಾಜ್ಯ ಸರ್ಕಾರ ಖಾಸಗಿ ಶಾಲೆಗಳಿಗೆ ಅನುಮತಿ ನೀಡಿ, ಸರ್ಕಾರಿ ಶಾಲೆಗಳನ್ನು ಮುಚ್ಚುವ ಹುನ್ನಾರ ನಡೆಸಿದ್ದಾರೆ ‘ ಎಂದು ಗಂಭೀರ ಆರೋಪ ಮಾಡಿದರು.
” ರಾಜ್ಯ ಸರ್ಕಾರ ಕಡಿಮೆ ದಾಖಲಾತಿಯ ನೆಪವೊಡ್ಡಿ 6200 ಕ್ಕಿಂತ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚಲು ಮುಂದಾಗಿದೆ, ಈ ನಡುವೆಯೇ ಸರ್ಕಾರ ಸದ್ದು ಗದ್ದಲ ವಿಲ್ಲದೆ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ 473 ಖಾಸಗಿ ಶಾಲೆಗಳಿಗೆ ಅನುಮತಿ ನೀಡಿ, ಸರ್ಕಾರಿ ಶಾಲೆಗಳನ್ನು ಮುಚ್ಚಲು ರಾಜ್ಯ ಸರ್ಕಾರ ಹುನ್ನಾರ ನಡೆಸಿದೆ ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಐಡಿಎಸ್ಓ ವಿದ್ಯಾರ್ಥಿ ಸಂಘಟನೆಯಿಂದ ಮೈಸೂರು ಜಿಲ್ಲೆಯಲ್ಲಿ ಕಡಿಮೆ ದಾಖಲಾತಿರುವ 30 ಶಾಲೆಗಳಿಗೆ ಭೇಟಿ ಕೊಟ್ಟಾಗ ಶಾಲೆಯ ಪರಿಸ್ಥಿತಿ ಬಹಳ ಕೆಟ್ಟದಾಗಿದೆ. ಬಹುಪಾಲು ಶಾಲೆಗಳಲ್ಲಿ ಅತಿ ಹೆಚ್ಚು ಅಂದರೆ ಹೆಡ್ ಮಾಸ್ಟರ್ ಅನ್ನು ಒಳಗೊಂಡಂತೆ ಇಬ್ಬರು ಶಿಕ್ಷಕರು ಇದ್ದಾರೆ. 50 ಸಾವಿರಕ್ಕೂ ಹೆಚ್ಚು ಶಿಕ್ಷಕರ ನೇಮಕಾತಿ ನಡೆದಿಲ್ಲ. ಇದರಿಂದಾಗಿ, ಶಾಲೆಗಳಲ್ಲಿ ಪಾಠ ಮಾಡಲು ಶಿಕ್ಷಕರೇ ಇಲ್ಲದಂತಾಗಿದೆ.

ಕಟ್ಟಡಗಳು ದುರಸ್ತಿಗೆ ಬಂದಿವೆ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ಸರಿಯಾದ ಶೌಚಾಲಯಗಳು ಇಲ್ಲ. ಈ ಎಲ್ಲಾ ಸಮಸ್ಯೆಗಳ ಬಗ್ಗೆ ಕಿಂಚಿತ್ತೂ ಯೋಚನೆ ಮಾಡದೆ, ಶಿಕ್ಷಣ ಸಚಿವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಸರ್ಕಾರದ ಶಾಲೆಗಳ ಪ್ರವೇಶ ಸಂಖ್ಯೆ ಕಡಿಮೆಯಾಗುತ್ತಿರುವುದಕ್ಕೆ,ಪೋಷಕರು ತಮ್ಮ ಮಕ್ಕಳನ್ನು ಕಳುಹಿಸಲು ಮುಂದೆ ಬರುವುದಿಲ್ಲ ಎಂಬ ಕಾರಣವನ್ನು ಕೊಟ್ಟಿದ್ದಾರೆ.
ಪೋಷಕರು ಇಂಗ್ಲೀಷ್ ಮಾಧ್ಯಮದ ಹಿಂದೆ ಓಡುತ್ತಿದ್ದಾರೆ ಮತ್ತು ಖಾಸಗಿ ಶಾಲೆಗಳ ಮೇಲೆ ಅವರಿಗೆ ಅತಿಯಾದ ಪ್ರೀತಿಯಿದೆ ಎಂದು ಹೇಳಿದ್ದಾರೆ. ಸಚಿವರು ದಾಖಲಾತಿ ಪ್ರಮಾಣದ ಕುಸಿತಕ್ಕೆ ಪೋಷಕರನ್ನೇ ಹೊಣೆಗಾರರನ್ನಾಗಿ ಮಾಡಿದ್ದಾರೆ. ಮೂಲಸೌಕರ್ಯ ಉತ್ತಮವಾಗಬೇಕು ಎಂದು ಹೇಳಿದರೂ, ಚಿಂತನೆ ಮಾಡದೆ ಮಕ್ಕಳನ್ನು ಕಳುಹಿಸಬೇಕು ಎನ್ನುವ ಮೂಲಕ, ಸರ್ಕಾರ ತನ್ನ ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿದೆ ಎಂದು ಕಿಡಿ ಕಾರಿದರು.

ಕಳೆದ ಆರು ವರ್ಷಗಳಲ್ಲಿ 3378 ಖಾಸಗಿ ಶಾಲೆಗಳಿಗೆ ಸರ್ಕಾರಗಳು ಪರವಾನಗಿ ನೀಡಿದೆ. ಈ ಮೂಲಕ ಸರ್ಕಾರಿ ಶಾಲೆಗಳನ್ನು ಮುಚ್ಚುವ ಹುನ್ನಾರ ನಡೆದಿದೆ. ದಿನಗೂಲಿ ಕಾರ್ಮಿಕ, ಕಟ್ಟಡ ಕಾರ್ಮಿಕ ಮತ್ತು ಬಡ ರೈತರ ಮಕ್ಕಳು ಓದಲು ಸರ್ಕಾರಿ ಶಾಲೆಗಳನ್ನು ಮುಚ್ಚಬಾರದು ಎಂದು ಆಗ್ರಹಿಸಿದರು.
ರೈಲ್ವೆ ನಿಲ್ದಾಣದಲ್ಲಿ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ನೂರಾರು ಜನ ಸರ್ಕಾರಿ ಶಾಲೆ ಉಳಿಸುವುದಕ್ಕೆ ನಮ್ಮ ಬೆಂಬಲವಿದೆ ಎಂದು ಹೇಳಿ ಸಹಿ ಹಾಕಿದರು.
ಈ ವಿಶೇಷ ಸುದ್ದಿ ಓದಿದ್ದೀರಾ? ಮೈಸೂರು | ಕುಸಿಯುವ ಹಂತದಲ್ಲಿ ನೀರಿನ ಟ್ಯಾಂಕ್; ತೆರವುಗೊಳಿಸುವುದೇ ಪುರಸಭೆ

ಜಿಲ್ಲಾ ಅಧ್ಯಕ್ಷೆ ಚಂದ್ರಕಲಾ, ಕಾರ್ಯದರ್ಶಿ ನಿತಿನ್, ಉಪಾಧ್ಯಕ್ಷೆ ಸ್ವಾತಿ, ಪದಾಧಿಕಾರಿಗಳಾದ ಚಂದನ, ಚಂದ್ರಿಕಾ, ಹೇಮಾ, ದಿಶಾ , ಅಂಜಲಿ, ಕಾರ್ಯಕರ್ತರುಗಳಾದ ದೀಕ್ಷಾ ,ಆರ್ತಿ, ಪ್ರಿಯಾಂಕ, ಚೈತ್ರ, ಆರತಿ, ಮುಂತಾದವರು ಇದ್ದರು.