ಹಿಂದು ಹೆಣ ಉರುಳಿದರೆ ಸಂಘ-ಬಿಜೆಪಿಗೆ ಎಲ್ಲಿಲ್ಲದ ಸಂಭ್ರಮ-ಸಡಗರ. ಸಂಘ ಪರಿವಾರಕ್ಕೆ ಹಿಂದೂ ಮರಣವೇ ಮಹಾನವಮಿ ಎಂಬ ಮಾತೊಂದಿದೆ. ಕರಾವಳಿಯ ಸಂಘ ಪರಿವಾರ, ಬಿಜೆಪಿ ಬಳಗದ ಹಿಂದುತ್ವದ ಹರಾಕಿರಿಯ ಚರಿತ್ರೆ ತೆರೆದರೆ ಇದು ನಿಸ್ಸಂಶಯವಾಗಿ ಕಣ್ಣಿಗೆ ರಾಚುತ್ತದೆ.
ಮಂಗಳೂರಿನ ಬಜಪೆಯಲ್ಲಿ ಎರಡು ವಾರದ ಹಿಂದೆ ಎದುರಾಳಿ ಗ್ಯಾಂಗ್‌ನಿಂದ ಹತನಾದ ರೌಡಿಶೀಟರ್-ಗ್ಯಾಂಗ್‌ಸ್ಟರ್ ಸುಹಾಸ್ ಶೆಟ್ಟಿ ಕೊಲೆ, ಒಳಜಗಳದಿಂದ ಹೈರಾಣಾಗಿರುವ ಬಿಜೆಪಿಗೆ ಅಸ್ತಿತ್ವ ಸಿಕ್ಕಂತಾಗಿದೆ. ಬಿಜೆಪಿ-ಸಂಘಿ ಬಳಗ ಸುಹಾಸ್ ಹಿಂದುತ್ವಕ್ಕಾಗಿ ಗುದ್ದಾಡುತ್ತಿದ್ದ ಸುಭಗ ಎನ್ನುತ್ತಿದೆ; ಹಿಂದುತ್ವದ ಹುತಾತ್ಮನೆಂದು ಕೊಂಡಾಡುತ್ತಿದೆ. ವಾಸ್ತವವೆಂದರೆ ಈ ಸುಹಾಸ್ ಶೆಟ್ಟಿಗೆ ರೌಡಿ ಪಟ್ಟ ಕಟ್ಟಿದ್ದೇ ಬಿಜೆಪಿಗರು ಅಧಿಕಾರದಲ್ಲಿದ್ದಾಗ. ಸುಹಾಸ್ ಶೆಟ್ಟಿ ಮೇಲೆ ಪೋಲಿಸರು ರೌಡಿಶೀಟ್ ತೆಗೆದಿದ್ದು 2020ರ ಜೂನ್ 18ರಂದು. ಆಗ ಬಿಜೆಪಿಯ ಸರಕಾರವಿತ್ತು. ಈಗ ಸುಹಾಸ್ ಶೆಟ್ಟಿ ಹಿಂದುತ್ವಕ್ಕಾಗಿ ಗುದ್ದಾಡುತ್ತಿದ್ದ ‘ಧರ್ಮಾತ್ಮ’ನೆನ್ನುತ್ತಿರುವ ವಿಪಕ್ಷ ನಾಯಕ ಆರ್.ಅಶೋಕ್ ಮತ್ತು ಕಾರ್ಕಳದ ಶಾಸಕ ಸುನಿಲ್ ಕುಮಾರ್ ಆಗ ಆಯಕಟ್ಟಿನ ಮಂತ್ರಿಗಳಾಗಿದ್ದರು. ರಾಜ್ಯಾಧ್ಯಕ್ಷ ವಿಜಯೇಂದ್ರರ ತಂದೆ ಯಡಿಯೂರಪ್ಪ ಮುಖ್ಯಮಂತ್ರಿ ಪೀಠದಲ್ಲಿದ್ದರು. ಇವರಾರಿಗೂ ಅಂದು ಹಿಂದುತ್ವದ ‘ವೀರಾಗ್ರಣಿ’ಗೆ ರೌಡಿ ಕಿರೀಟ ಕಟ್ಟುತ್ತಿದ್ದದ್ದು-ಕಟ್ಟಿದ್ದು ಕಾಣಿಸಲಿಲ್ಲ.
ಈ ಕೇಸರಿ ಕಲಿಗಳೆಲ್ಲ ಈಗ ಸುಹಾಸ್ ಸಾವಿನ ಪ್ರಕರಣ ಎನ್ಐಎಗೆ ವಹಿಸಬೇಕೆಂದು ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾರೆ. ಇದೊಂದು ಅಂತಾರಾಷ್ಟ್ರೀಯ ಸಂಚಿನ ಸುಪಾರಿ ಕೊಲೆ. ಮಂಗಳೂರಲ್ಲಿ ಪಾಕಿಸ್ತಾನ್ ನಂಟಿರುವ ಮಂದಿ ಇದ್ದಾರೆಂದೆಲ್ಲ ಬಾಯಿಗೆ ಬಂದಂತೆ ಹಲಬುತ್ತಿದ್ದಾರೆ. ಹಿಂದುವೊಬ್ಬ ತನ್ನ ಪಾಪಕೃತ್ಯದಿಂದ ಸಾವಿಗೀಡಾದರೂ ಆ ಬಾನಗಡಿಗೆ ಮುಸಲ್ಮಾನರ ತಳಕು ಹಾಕುವುದು ಸಂಘಿಗಳ ಲಾಗಾಯ್ತಿನ ಚಾಳಿ. ಯಾರೋ ಕೊಟ್ಟ ಕೇಸರಿ ಶಾಲು ಕುತ್ತಿಗೆಗೆ ಸುತ್ತಿಕೊಂಡು ಬಿಜೆಪಿ ಸಭೆಯಲ್ಲಿ ನಿಂತುಕೊಂಡವನೊಬ್ಬ ವೈಯಕ್ತಿಕ ಹಗೆತನದಿಂದ ಅಥವಾ ಆಕಸ್ಮಿಕವಾಗಿ, ಅಸಹಜವಾಗಿ ಸತ್ತರೂ ಸಾಕು, ತಕ್ಷಣ ಸಿಬಿಐ, ಎನ್ಐಎ ತನಿಖೆ ಆಗಬೇಕೆಂದು ಸಂಘಿಗಳು ಹಾರಾಡುತ್ತಾರೆ. ಹಾಗಂತ ಕೇಂದ್ರದ ಬಿಜೆಪಿ ಸರಕಾರದ ಅಧೀನದಲ್ಲಿರುವ ಸಿಬಿಐ, ಎನ್ಐಎಗಳೇ ತನಿಖೆ ಮಾಡಿರುವ ‘ಹಿಂದು ಧರ್ಮ ರಕ್ಷಕನ ಆತ್ಮಾರ್ಪಣೆ’ ಕೇಸುಗಳಲ್ಲಿ ಸಂಘಿಗಳು ಹುಯಿಲೆಬ್ಬಿಸಿದ್ದ ಇಸ್ಲಾಮಿಕ್ ಪಾತಕ ಸಾಬೀತಾಗಿದ್ದೇನಿಲ್ಲ. ಸಂಘಿಗಳು ಸಿಬಿಐ, ಎನ್ಐಎ ತನಿಖೆಗೆ ಒತ್ತಾಯಿಸಿ ಜನರನ್ನು ಗೊಂದಲಗೊಳಿಸಿ ರಾಜಕೀಯ ಮೈಲೇಜಿಗೆ ಷಡ್ಯಂತ್ರ ಮಾಡುತ್ತಾರೆಂಬುದು ಕಳೆದ ಮೂರು ದಶಕದಲ್ಲಿ ಕರಾವಳಿಯಲ್ಲಿ ನಡೆದಿರುವ ಹಿಂದೂ ಹತ್ಯೆ-ತನಿಖೆಯಿಂದ ಸಾಬೀತಾಗಿಹೋಗಿದೆ.
ಹಿಂದುತ್ವದ ಹರಾಕಿರಿಯ ಚರಿತ್ರೆ
ಹಿಂದು ಹೆಣ ಉರುಳಿದರೆ ಸಂಘ-ಬಿಜೆಪಿಗೆ ಎಲ್ಲಿಲ್ಲದ ಸಂಭ್ರಮ-ಸಡಗರ. ಸಂಘ ಪರಿವಾರಕ್ಕೆ ಹಿಂದೂ ಮರಣವೇ ಮಹಾನವಮಿ ಎಂಬ ಮಾತೊಂದಿದೆ. ಕರಾವಳಿಯ ಸಂಘ ಪರಿವಾರ, ಬಿಜೆಪಿ ಬಳಗದ ಹಿಂದುತ್ವದ ಹರಾಕಿರಿಯ ಚರಿತ್ರೆ ತೆರೆದರೆ ಇದು ನಿಸ್ಸಂಶಯವಾಗಿ ಕಣ್ಣಿಗೆ ರಾಚುತ್ತದೆ. 1990ರ ದಶಕದಲ್ಲಿ ಕಡಲ ನಗರಿ ಭಟ್ಕಳ ಒಂದಿಡೀ ವರ್ಷ ಕೋಮು ಜ್ವಾಲೆಯಲ್ಲಿ ಉರಿದಿತ್ತು. ತತ್ಪರಿಣಾಮವಾಗಿ ಸ್ಥಳೀಯ ಸಂಘ ಪರಿವಾರದ ಪಿತಾಮಹ-ಜನಸಂಘದ ಕಾಲದಿಂದ ಚುನಾವಣೆಗಳಿಗೆ ಸ್ಪರ್ಧಿಸಿ ಸೋಲುತ್ತಿದ್ದ ಡಾ.ಚಿತ್ತರಂಜನ್ ಎಂಬ ವಿಪ್ರೋತ್ತಮ 1994ರಲ್ಲಿ ಎಮ್ಮೆಲ್ಲೆ ಭಾಗ್ಯ ಕಂಡರು! ಶಾಸಕನಾಗಿ ಹದಿನಾರು ತಿಂಗಳು ಕಳೆಯುವುದರಲ್ಲೇ ಎದುರಾದ ಲೋಕಸಭಾ ಚುನಾವಣೆ(1996) ಸಂದರ್ಭದಲ್ಲಿ ಚಿತ್ತರಂಜನ್ ನಿಗೂಢವಾಗಿ ಹತ್ಯೆಗೀಡಾದರು. ಆ ರಾತ್ರಿ 11 ಗಂಟೆ ಹೊತ್ತಲ್ಲಿ ಮನೆಯ ಹಜಾರದಲ್ಲಿ ಟಿವಿ ನೋಡುತ್ತಿದ್ದ ಚಿತ್ತರಂಜನ್‌ರನ್ನು ಕಿಟಕಿಯಿಂದ ತೂರಿ ಬಂದ ಗುಂಡು ಹಣೆ ಹೊಕ್ಕು ತಲೆಯಿಂದ ಹೊರಬಂದಿತ್ತು.
ಇದನ್ನು ಓದಿದ್ದೀರಾ?: ಹಿಮಾನ್ಶಿಯಿಂದ ಮಿಸ್ರಿಯವರೆಗೆ- ಅಭಿಪ್ರಾಯದ ಹೆಸರಿನಲ್ಲಿ ಅಮಾನವೀಯತೆ
ಮುಸಲ್ಮಾನರೇ ಕೊಲೆ ಮಾಡಿದ್ದಾರೆಂದು ಪ್ರಚಾರ ಮಾಡಲಾಯಿತು. ಹಲವು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಮತೀಯ ಮಸಲತ್ತಿನ ಪ್ರಚಾರದಿಂದ ಭರ್ಜರಿ ಲಾಭವಾಯಿತು. ಚಿತ್ತರಂಜನ್‌ರ ಸ್ವಜಾತಿಯ ಅನಾಮಧೇಯ ಶಿಷ್ಯ ರಾತ್ರಿ ಬೆಳಗಾಗುವುದರಲ್ಲಿ ಕೆನರಾ ಕ್ಷೇತ್ರದ ಸಂಸದನಾದ. ದ್ಷೇಷ ಭಾಷಣ ಬಂಡವಾಳ ಮಾಡಿಕೊಂಡಿದ್ದ ಬಡ ಕುಟುಂಬದ ಹೆಗಡೆ ಆರು ಬಾರಿ ಎಂಪಿಯಾಗಿ ಕೋಟ್ಯಾಧೀಶರಾದರು. ಉದ್ಯಮಿಯಾದರು. ಚಿತ್ತರಂಜನ್, ಹೆಗಡೆಯಂಥವರ ಇಸ್ಲಾಮೋಫೋಬಿಕ್ ಮಾತುಗಾರಿಕೆಯಿಂದ ಹಿಂದುತ್ವದ ಹುಚ್ಚು ಏರಿಸಿಕೊಂಡು ಬೀದಿ ಕಾಳಗಕ್ಕೆ ಬಿದ್ದಿದ್ದ ಹಿಂದುಳಿದ ವರ್ಗದ ಹುಡುಗರು ಕಷ್ಟ-ನಷ್ಟ, ಸಾವು-ನೋವು ಅನುಭವಿಸಿದರು; ಕೋರ್ಟು-ಕಚೇರಿ ಅಲೆದು ಬದುಕು ಬರ್ಬಾದ್ ಮಾಡಿಕೊಂಡರು!
ಹೆಸರುವಾಸಿ ವೈದ್ಯರಾಗಿದ್ದ ಚಿತ್ತರಂಜನ್‌ರ ‘ಬಲಿದಾನ’ ಮಾತ್ರ ದುರ್ಬಲ ಬಿಜೆಪಿಯ ಬುಡ ಭದ್ರ ಮಾಡಿತು. ಆದರೆ ಕೊಲೆಯ ತನಿಖೆ ನಡೆಸುತ್ತಿದ್ದ ಸಿಬಿಐನಿಂದ ಮಾತ್ರ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಾಗಲಿಲ್ಲ. ಕೇಂದ್ರದಲ್ಲಿ ವಾಜಪೇಯಿ ನೇತೃತ್ವದ ಬಿಜೆಪಿ ಸರಕಾರವೇ ಸ್ಥಾಪನೆಯಾಯಿತು. ಚಿತ್ತರಂಜನ್ ಚಿತೆ ಮುಂದೆ ನಿಂತು ಕಂಬನಿಗರೆದಿದ್ದ ಅಡ್ವಾಣಿ ಗೃಹ ಮಂತ್ರಿಯಾದರು. ಚಿತ್ತರಂಜನ್‌ರ ಮನೆ ಮಗನಂತಿದ್ದ ಅನಂತ್ ಹಗಡೆ ಹಲವು ಬಾರಿ ಸಂಸದನಾದರು. ಆದರೆ ಗುರುವಿನ ಆತ್ಮಕ್ಕೆ ಶಾಂತಿ ನೀಡಲು ಶಿಷ್ಯ ಪ್ರಾಮಾಣಿಕವಾಗಿ ಪ್ರಯತ್ನಿಸಲಿಲ್ಲವೆಂದು ಬಿಜೆಪಿಗರು ಈಗಲೂ ಹೇಳುತ್ತಾರೆ. ಚಿತ್ತರಂಜನ್‌ರ ಪುಣ್ಯ ತಿಥಿಯಂದು ರಾತ್ರಿ ಬೆಳಗಾಗುವುದರಲ್ಲಿ ಭಟ್ಕಳದ ಆಯಕಟ್ಟಿನ ಬೀದಿಯಲ್ಲಿ ‘ಡಾ.ಚಿತ್ತರಂಜನ್ ಕೊಲೆಗಡುಕ ಅನಂತಕುಮಾರ್ ಹೆಗಡೆ’ ಎಂಬ ಭಿತ್ತಿಪತ್ರಗಳು ಕಂಡುಬರುತ್ತಿತ್ತು. ಇದು ಚಿತ್ತರಂಜನ್ ಡಾಕ್ಟರ್ ಸಾವಿನ ಮೂರ್ನಾಲ್ಕು ವರ್ಷದ ನಂತರ ನಾಲ್ಕೈದು ವರ್ಷ ನಡೆದಿತ್ತು. ಈ ಗೋಡೆ ಬರಹವನ್ನು ಸಿಬಿಐ ಗಂಭೀರವಾಗಿ ಓದಲಿಲ್ಲ ಎನ್ನಲಾಗುತ್ತಿದೆ.
ಬಿಜೆಪಿ ಆಧಿಕಾರದಲ್ಲಿದ್ದಾಗ ಸಿಬಿಐನಿಂದ ಹಂತಕರನ್ನು ಹಿಡಿಯಲಾಗಲಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ, ಕೇಂದ್ರದಲ್ಲಿ ಪ್ರಭಾವಿಯಾಗಿದ್ದ ಮಾರ್ಗರೆಟ್ ಆಳ್ವ ಸಂಸದೆ ಆದಾಗಲೂ ತನಿಖೆ ಹಳಿ ಹಿಡಿಯಲಿಲ್ಲ. ಹಂತಕನ ಗುರುತು ಪತ್ತೆಯಾದರೆ ಬಿಜೆಪಿ-ಕಾಂಗ್ರೆಸ್ ಎರಡೂ ಪಾರ್ಟಿಗೆ ಲಾಭಕ್ಕಿಂತ ನಷ್ಟವೇ ಜಾಸ್ತಿಯೆಂದು ತನಿಖೆ ಸರಿಯಾಗಿ ನಡೆಸಲಿಲ್ಲವೆಂಬ ಮಾತು ಇವತ್ತಿಗೂ ಕರಾವಳಿಯಲ್ಲಿದೆ. ಅಂತಿಮವಾಗಿ ಆಗಿದ್ದೇನು ಗೊತ್ತಾ? ಸಿಬಿಐ ಇದೊಂದು ಪತ್ತೆಯಾಗದ ಪ್ರಕರಣ(ಸಿ-ರಿಪೋರ್ಟ್) ಎಂದು ತಿಪ್ಪೆ ಸಾರಿಸಿ ಕೈ ತೊಳೆದುಕೊಂಡಿತು. ಕಟ್ಟರ್ ಹಿಂದುತ್ವವಾದಿ ಮೋದಿ ಸರಕಾರ ಅಸ್ತಿತ್ವಕ್ಕೆ ಬಂದಾಗಾದರೂ ‘ರಂಜನ್ ಡಾಕ್ಟರ್ ಕೇಸ್’ ರೀ ಒಪನ್ ಮಾಡಬಹುದಿತ್ತು. ಅಂಥ ಪ್ರಯತ್ನ ಏಕಾಗಲಿಲ್ಲ ಎಂಬುದು ಅರ್ಪಣಾ ಭಾವದ ಹಿಂದುತ್ವದವರಿಗೆ ಇವತ್ತಿಗೂ ಅರ್ಥವಾಗದ ಮಿಲಿಯನ್ ಡಾಲರ್ ಒಗಟಾಗಿದೆ. ಡಾ.ಚಿತ್ತರಂಜನ್ ಹತ್ಯೆಯ ಬೆನ್ನಿಗೇ ಬಿಜೆಪಿ-ವಿಎಚ್‌ಪಿಗಳ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಿದ್ದ ತಿಮ್ಮಪ್ಪ ನಾಯ್ಕ್ ಭಯಾನಕವಾಗಿ ಕೊಲೆಯಾಗಿದ್ದರು. ಈ ಕೊಲೆ ಯಾರು ಮಾಡಿದ್ದು, ಕಾರಣ ಏನು ಎಂಬುದು ಇವತ್ತಿಗೂ ಯಾವ ತನಿಖಾ ಸಂಸ್ಥೆಯೂ ಬಹಿರಂಗ ಮಾಡಿಲ್ಲ. ಸಂಘಿಗಳು ಈಗದನ್ನು ಸಂಪೂರ್ಣ ಮರೆತು ಹೊಸ-ಹೊಸ ಹತ್ಯೆ ಹಿಂದೆ ಬಿದ್ದಿದ್ದಾರೆ.

ಪರೇಶ್ ಮೇಸ್ತನೂ ಬಿಜೆಪಿಗೆ ಬಂಡವಾಳ
2018ರ ಅಸೆಂಬ್ಲಿ ಚುನಾವಣೆ ಹೊತ್ತಲ್ಲಿ ಹೊನ್ನಾವರದ ಪರೇಶ್ ಮೇಸ್ತ್ ಎಂಬ ಮೀನುಗಾರರ ಹುಡುಗ ಕೆರೆಯಲ್ಲಿ ಕಾಲು ಜಾರಿ ಬಿದ್ದು ಅಸುನೀಗಿದ್ದ. ಹೊನ್ನಾವರದ ಪ್ರತಿಷ್ಠಿತ ಮುಸಲ್ಮಾನ್ ಕುಟುಂಬದ ಹೋಟೆಲ್ ಎದುರು ಕೋಮು ದಂಗೆ ಎದ್ದ ಸಮಯವದು. ಪೋಲಿಸರ ಲಾಠಿ ಏಟಿಗೆ ಹೆದರಿದ ಹುಡುಗ ಓಡಿಹೋಗಿ ಬಚ್ಚಿಟ್ಟುಕೊಳ್ಳುವ ಭರದಲ್ಲಿ ಕೆರೆಗೆ ಹಾರವಾಗಿದ್ದ. ಶೋಭಾ ಕರಂದ್ಲಾಜೆಯಂಥ ಸಂಘ ಪರಿವಾರದ ಸತ್ಯದ ತಲೆ ಮೇಲೆ ಹೊಡೆದಂತೆ ಹಸೀ ಹಸೀ ಸುಳ್ಳು ಹೇಳುವ ಸಂಘ ಪರಿವಾರದ ಮಾತುಗಾರರು-ಕತೆಗಾರರು ಕರಾವಳಿಗೆ ಲಗ್ಗೆ ಇಟ್ಟರು. ಮುಲ್ಮಾನರ ಮಾಂಸಹಾರಿ ಹೋಟೆಲಲ್ಲಿ ಪರೇಶ್ ಮೇಸ್ತನ ಮೈ ಮೇಲೆ ಬಿಸಿ ಎಣ್ಣೆ ಸುರಿದು ಹುರಿದು ಕೊಂದು ಕೆರೆಗೆ ಎಸೆಯಲಾಗಿದೆ ಎಂದು ಗುಲ್ಲೆಬ್ಬಿಸಲಾಯಿತು. ದೇಶದ ಗೃಹ ಮಂತ್ರಿ ಸಾಕ್ಷಾತ್ ಅಮಿತ್ ಶಾ ಸಹ ಪರೇಶನ ಮನೆಗೆ ಬಂದು ‘ಸಾಂತ್ವನ’ ಹೇಳಿಹೋದರು. ಸಂಘೀ ತಂತ್ರಗಾರರು ಪರೇಶನ ತಾಯ್ತಂದೆಯನ್ನು ಕರಾವಳಿ ಉದ್ದದ ಬಿಜೆಪಿ ಚುನಾವಣಾ ಪ್ರಚಾರದ ರ್‍ಯಾಲಿಗಳಲ್ಲಿ ಮುಂದೆ ನಿಲ್ಲಿಸಿದರು. ಹೆಣದ ರಾಜಕಾರಣ ವ್ಯವಸ್ಥಿತವಾಗಿ ನಡೆಯಿತು. ಬಿಜೆಪಿ ಕರಾವಳಿಯ ಉಲ್ಲಾಳ(ಸ್ಪೀಕರ್ ಖಾದರ್ ಕ್ಷೇತ್ರ) ಒಂದನ್ನು ಬಿಟ್ಟು ಉಳಿದೆಲ್ಲ ಕ್ಷೇತ್ರ ಬಾಚಿಕೊಂಡಿತು.
ದಿನಗಳೆದಂತೆ ಪರೇಶ್ ಪಾಲಕರನ್ನು ಕೇಳುವವರೇ ಇಲ್ಲದಾಯಿತು. ಪುತ್ರಶೋಕ ಬಿಟ್ಟರೆ ಬೇರೇನೂ ಅವರಿಗೆ ಉಳಿಯಲಿಲ್ಲ. ಗೃಹ ಮಂತ್ರಿ ಅಮಿತ್ ಶಾರ ಅಂಕಿತದಲ್ಲಿರುವ ಸಿಬಿಐ ಈ ಕೇಸಲ್ಲಿ ಮುಸಲ್ಮಾನರ ಕೈವಾಡವೇನಿಲ್ಲ ಎಂದು ಬಿ-ರಿಪೋರ್ಟ್ ಹಾಕಿತು. ಪರೇಶ್ ಕುಟುಂಬ ಈಗ ತಬ್ಬಲಿಯಾಗಿದೆ. ಅಂದಿನ ಕಾಂಗ್ರೆಸ್ ಸರಕಾರ ಪರೇಶ್ ಸಹೋದರಿಗೆ ಜಿಲ್ಲಾ ಮಧ್ಯವರ್ತಿ ಬ್ಯಾಂಕಿನಲ್ಲಿ ಉದ್ಯೋಗ ಕೊಡಲು ಮುಂದಾಗಿತ್ತು. ಕಾಂಗ್ರೆಸ್ ‘ಕೊಡುಗೆ’ ತಿರಸ್ಕರಿಸುವಂತೆ ಸಂಘಿಗಳು ಸಲಹೆ ಕೊಟ್ಟರು. ಈಗ ಕೇಸರಿ ಕಲಿಗಳೆಲ್ಲ ನಾಪತ್ತೆ. ಪರೇಶನ ಸಾವಿನ ‘ಮಹಿಮೆ’ಯಿಂದ ಎಮ್ಮೆಲ್ಲೆಯಾದವರೂ ಕೃತಘ್ನರಾಗಿದ್ದಾರೆ. ಪರೇಶ್ ಕುಟುಂಬದ ಗೋಳು ಹೇಳತೀರದು. ಸುಖಾನಂದ ಶೆಟ್ಟಿ, ಹರೀಶ್ ಪೂಜಾರಿ, ಶರತ್ ಮಡಿವಾಳ… ಹೀಗೆ ಸಾಲುಸಾಲು ಹಿಂದುಳಿದ ವರ್ಗದ ಹುಡುಗರು ಹಿಂದುತ್ವದ ಹುಚ್ಚಿಗೆ ಆಹುತಿಯಾಗಿದ್ದಾರೆ. ಬಿಜೆಪಿ-ಸಂಘ ಈ ರಕ್ತಪಾತ ಬೇಕಾದಂತೆ ಬಳಸಿ ಬೀಸಾಕಿದೆ. ಹೊಸತಿಗೆ ಹಾತೊರೆಯುತ್ತಿದೆ.
ಇದನ್ನು ಓದಿದ್ದೀರಾ?: 1971ರ ಭಾರತ-ಪಾಕ್ ಯುದ್ಧ ಮತ್ತು ಇಂದಿರಾ ಗಾಂಧಿ ಪಾತ್ರ: ಜನ ಈಗ ಏಕೆ ನೆನಪು ಮಾಡಿಕೊಳ್ಳುತ್ತಿದ್ದಾರೆ?
ಮೊನ್ನೆ ನಡೆದ ಬಂಟ್ವಾಳದ ಕಾರಿಂಜೆ ಗ್ರಾಮದ ರೌಡಿ ಶೀಟರ್ ಸುಹಾಸ್ ಶೆಟ್ಟಿ ಮರ್ಡರ್ ನಂತರ ಸಂಘ–ಬಿಜೆಪಿ ಬಳಗ ಇಂಥದೇ ಆಟ ಆರಂಭಿಸಿದೆ. ಕೊಲೆ-ಸುಲಿಗೆ ದೊಂಬಿಗಳಲ್ಲಿ ನಿರತನಾಗಿದ್ದ ಸುಹಾಸ್ ವೈರಿ ಗ್ಯಾಂಗ್‌ನಿಂದ ಹತನಾಗಿದ್ದಾನೆಂದು ಗೊತ್ತಿದ್ದೂ ಆ ಕೊಲೆಗೆ ಮತೀಯ ಆಯಾಮ ಕೊಟ್ಟು ಸೂತಕದ ಮನೆಯಲ್ಲಿ ಸಂಭ್ರಮಿಸುತ್ತಿದೆ. ಸುಹಾಸನ ಕೊಂದ ಗ್ಯಾಂಗಿನ ಲೀಡರ್ ಸಫ್ವಾನ್ ಮುಸಲ್ಮಾನ್ ಎಂಬುದು ಬಿಜೆಪಿ ಧರ್ಮೋನ್ಮಾದದ ಆರ್ಭಟಕ್ಕೆ ನೆವವಾಗಿಸಿಕೊಂಡಿದೆ. ಈ ಗ್ಯಾಂಗಿನಲ್ಲಿ ಇಬ್ಬರು ಹಿಂದೂ ಪಾತಕಿಗಳಿದ್ದರೆಂಬುದನ್ನು ಸಂಘ ಪರಿವಾರ ಮರೆಮಾಚುತ್ತಿದೆ.
ಸುಹಾಸನ ತಂದೆ-ತಾಯಿ ದುಃಖ, ನೋವನ್ನು ಕಂತ್ರಿ ರಾಜಕಾರಣಕ್ಕೆ ದಾಳ ಮಾಡಿಕೊಳ್ಳುತ್ತಿದೆ. ಸುಹಾಸನ ಕ್ಯಾನ್ಸರ್ ಪೀಡಿತ ತಾಯಿ ಮತ್ತು ತಂದೆಯನ್ನು ರಾಜ್ಯಪಾಲರ ಎದುರು, ಟಿವಿ ವಾಹಿನಿಗಳ ಮುಂದೆ ಬಿಜೆಪಿಗರು ನಿಲ್ಲಿಸುತ್ತಿದ್ದಾರೆ. ರಾಜ್ಯ ಕಾಂಗ್ರೆಸ್ ಸರಕಾರದ ಮೇಲೆ ನಂಬಿಕೆಯಿಲ್ಲ; ಮಗನ ಹತ್ಯೆ ಪ್ರಕರಣದ ತನಿಖೆ ಎನ್ಐಎಗೆ ವಹಿಸಬೇಕು ಎಂದು ಸುಹಾಸ್ ಹೆತ್ತವರಿಂದ ಹೇಳಿಸುತ್ತಿದ್ದಾರೆ. ಸಂಘ ಪರಿವಾರದ ತುರುಸು ಕಂಡರೆ ಇದೂ ಚಿತ್ತರಂಜನ್, ಪರೇಶ್ ಮೇಸ್ತ್ ಮುಂತಾದ ಕೇಸಿನಂತೆ ಹಳ್ಳ ಹಿಡಿಯುವ ಅಂದಾಜಾಗುತ್ತದೆ. ಆದರೆ ‘ಏತನ್ಮಧ್ಯೆ’ ಒಂದಿಷ್ಟು ಅನುಕೂಲ ಮಾಡಿಕೊಳ್ಳುವ ಹುನ್ನಾರ ಸಂಘ-ಬಿಜೆಪಿ ಬಳಗದ್ದಷ್ಟೇ!
-ನಹುಷ