ಬೆಂಗಳೂರಿನ ತುಮಕೂರು ರಸ್ತೆಯಲ್ಲಿರುವ ದಾಸರಹಳ್ಳಿ ಇಂದಿರಾ ಕ್ಯಾಂಟೀನ್‌ಗೆ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಭಾನುವಾರ ಬೆಳಗ್ಗೆ ಭೇಟಿ ನೀಡಿ ಉಪಹಾರ ಸವಿದರು.
ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ ಕೆ ಶಿವಕುಮಾರ್ ಭಾನುವಾರ ಬೆಳಗ್ಗೆ ದಿಢೀರ್ ಬೆಂಗಳೂರು ಪ್ರದಕ್ಷಣೆ ಹಮ್ಮಿಕೊಂಡು ಪಾಲಿಕೆಯ ಯಾವುದೇ ಅಧಿಕಾರಿಗಳಿಗೆ, ಸಿಬ್ಬಂದಿಗೆ ಮುನ್ಸೂಚನೆ ನೀಡದೆ ಮೊದಲಿಗೆ ದಾಸರಹಳ್ಳಿ ವಲಯದ ವಾರ್ಡ್ ಸಂಖ್ಯೆ 39 ಚೊಕ್ಕಸಂದ್ರದ ಇಂದಿರಾ ಗಾಂಧಿ ಕ್ಯಾಂಟೀನ್ ಪರಿಸ್ಥಿತಿ ಪರಿಶೀಲಿಸಿದರು.
ಇಂದಿರಾ ಕ್ಯಾಂಟೀನ್ ಗೆ ಭೇಟಿ ನೀಡಿ ತಿಂಡಿ ಕೇಳಿದರು. ಅದಾಗಲೇ ತಿಂಡಿ ಖಾಲಿ ಆಗಿತ್ತು. ಈ ವೇಳೆ ಎಷ್ಟು ಪ್ಲೇಟ್ ಬರುತ್ತದೆ ಎಂದು ಕ್ಯಾಂಟೀನ್ ಮ್ಯಾನೇಜರ್ ಗೆ ಕೇಳಿದಾಗ 208 ಪ್ಲೇಟ್ ಬಂದು ಖಾಲಿ ಆಗಿದೆ ಎಂದಾದ ತಿಂಡಿ ಪೂರೈಕೆಯನ್ನು ಖಾತರಿಪಡಿಸಿಕೊಳ್ಳಲು ಸೂಚನೆ ನೀಡಿದರು.
ನಂತರ ದಾಸರಹಳ್ಳಿಯ 15ನೇ ವಾರ್ಡ್ ಕ್ಯಾಂಟೀನ್ ಗೆ ಭೇಟಿ ನೀಡಿ ಉಪ್ಪಿಟ್ಟು, ಕೇಸರಿಬಾತ್ ಸವಿದರು. ಈ ಸಂದರ್ಭದಲ್ಲಿ ಪಕ್ಕದಲ್ಲಿ ತಿಂಡಿ ತಿನ್ನುತ್ತಿದ್ದವರನ್ನು ಮಾತನಾಡಿಸಿ ಮಾಹಿತಿ ಪಡೆದರು. ಬಳಿಕ ಪ್ರತಿ ವಾರ, ತಿಂಗಳಿಗೆ ಇಂದಿರಾ ಕ್ಯಾಂಟೀನ್ ಗೆ ಭೇಟಿ ನೀಡಿ ಗುಣಮಟ್ಟ ಪರಿಶೀಲಿಸುವಂತೆ ಪಾಲಿಕೆ ಆರೋಗ್ಯಾಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಕಾಂಗ್ರೆಸ್ ಕೊಡುಗೆ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ
ಇಂದಿರಾ ಕ್ಯಾಂಟೀನ್‌ಗೆ ಭೇಟಿ ನೀಡಿರುವ ಕುರಿತು ಟ್ವೀಟ್ ಮಾಡಿರುವ ಡಿ ಕೆ ಶಿವಕುಮಾರ್, “ಇಂದು ನಗರ ಪ್ರದಕ್ಷಿಣೆ ನಿಮಿತ್ತ ಮಾಗಡಿ ರಸ್ತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪರಿಶೀಲನೆ ನಡೆಸುತ್ತಿದ್ದು, ಇದಕ್ಕೂ ಮುನ್ನ ಚೊಕ್ಕಸಂದ್ರದ ಇಂದಿರಾ ಕ್ಯಾಂಟೀನ್ ನಲ್ಲಿ ಉಪಾಹಾರ ಸೇವಿಸಿದೆ. ಲಕ್ಷಾಂತರ ಬಡವರ ಹಸಿವು ನೀಗಿಸುತ್ತಿರುವ ಇಂದಿರಾ ಕ್ಯಾಂಟೀನ್ ಕಾಂಗ್ರೆಸ್ ಪಕ್ಷದ ಮಹತ್ತರ ಕೊಡುಗೆ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ” ಎಂದಿದ್ದಾರೆ.
ಇಂದಿರಾ ಕ್ಯಾಂಟೀನ್‌ಗೆ 100 ಕೋಟಿ ರೂ. ಅನುದಾನ
ನಗರ ಪ್ರದೇಶದ ಬಡವರು ಮತ್ತು ಶ್ರಮಿಕರಿಗೆ ಕಡಿಮೆ ದರದಲ್ಲಿ ಊಟ, ಉಪಾಹಾರ ಒದಗಿಸುವ ಉದ್ದೇಶದಿಂದ ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಆರಂಭವಾಗಿದ್ದ ಇಂದಿರಾ ಕ್ಯಾಂಟೀನ್ ಯೋಜನೆಗೆ ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ 100 ಕೋಟಿ ರೂ. ಮೀಸಲಿಡಲಾಗಿದೆ.
ಈ ಸುದ್ದಿ ಓದಿದ್ದೀರಾ? ಬಜೆಟ್ 23-24 | ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನ್ ಪುನಾರಂಭಕ್ಕೆ 100 ಕೋಟಿ ರೂ. ಅನುದಾನ
ಘನತ್ಯಾಜ್ಯ ಸಂಸ್ಕರಣಾ ಘಟಕಗಳ ಪರಿಶೀಲನೆ
ಸೀಗೇಹಳ್ಳಿ ಘನತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ 120 ಮೆಟ್ರಿಕ್ ಟನ್ ಹಸಿ ತ್ಯಾಜ್ಯ ಸಮಾರ್ಥ್ಯವಿದ್ದು, ಸದ್ಯ ಸಂಸ್ಕರಣಾ ಘಕಟವು ಚಾಲ್ತಿಯಲ್ಲಿ ಇರುವುದಿಲ್ಲ. ಅದನ್ನು ಕೂಡಲೆ ಪ್ರಾರಂಭಿಸಲು ಸೂಚನೆ ನೀಡಿದರು.
ಕನ್ನಹಳ್ಳಿ ಘನತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ 350 ಮೆಟ್ರಿಕ್ ಟನ್ ಹಸಿ ತ್ಯಾಜ್ಯ ಸಂಸ್ಕರಿಸುವ ಸಾಮರ್ಥ್ಯವಿದ್ದು, ಪ್ರತಿನಿತ್ಯ 350 ಮೆಟ್ರಿಕ್ ಟನ್ ಸಂಸ್ಕರಣೆ ಮಾಡಲಾಗುತ್ತಿದೆ. ಪ್ರತಿನಿತ್ಯ ನಿತ್ಯ ಎಷ್ಟು ಕಾಂಪ್ಯಾಕ್ಟರ್ ಬರುತ್ತದೆ, ಅದಕ್ಕೆ ಅಳವಡಿಸಿರುವ ಜಿ.ಪಿ.ಎಸ್ ಅನ್ನು ಪರಿಶೀಲಿಸಿದರು.
ದೊಡ್ಡಬಿದರಕಲ್ಲು ಘನತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ 150 ಮೆಟ್ರಿಕ್ ಟನ್ ಹಸಿ ತ್ಯಾಜ್ಯ ಸಂಸ್ಕರಿಸುವ ಸಾಮರ್ಥ್ಯವಿದ್ದು, ಪ್ರತಿನಿತ್ಯ 110 ಮೆಟ್ರಿಕ್ ಟನ್ ಸಂಸ್ಕರಣೆ ಮಾಡಲಾಗುತ್ತಿದ್ದು, ಅದನ್ನು ಪರಿಶೀಲನೆ ನಡೆಸಿದರು.
ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಬೆಂಗಳೂರಿನಲ್ಲಿ ಘನತ್ಯಾಜ್ಯ ಸಂಗ್ರಹ ಹೆಚ್ಚಳವಾಗುತ್ತಿದ್ದು, ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡುವ ಕುರಿತು ಗಂಭೀರ ಚಿಂತನೆಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಈ ವೇಳೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿ ನಾಥ್, ಘನತ್ಯಾಜ್ಯ ವಿಭಾಗದ ವಿಶೇಷ ಆಯುಕ್ತ ಡಾ. ಹರಿಶ್ ಕುಮಾರ್, ವಲಯ ಜಂಟಿ ಆಯುಕ್ತ ಜಗದೀಶ್ ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.