ಸತತ ಮೂರು ವರ್ಷಗಳ ಕಾಲ ನಿರಂತರವಾಗಿ ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ ಮಾಡಬೇಕೆಂದು ಒತ್ತಾಯಿಸಿ ಹೋರಾಟ ನಡೆಯುತ್ತಿದ್ದು,ಇದೆ ಮೇ.13 ರಂದು ಏಮ್ಸ್ ಹೋರಾಟ ನಾಲ್ಕನೇ ವರ್ಷಕ್ಕೆ ಕಾಲಿಡಲಿದೆ. ರಾಜ್ಯ ಸರ್ಕಾರ ಕೂಡಲೇ ಸರ್ವ ಪಕ್ಷಗಳ ನಿಯೋಗದೊಂದಿಗೆ ದೆಹಲಿಗೆ ತೆರಳಿ ಏಮ್ಸ್ ಮಂಜೂರು ಮಾಡಿಸಲು ಮುಂದಾಗಬೇಕು ಎಂದು ಏಮ್ಸ್ ಹೋರಟ ಸಮಿತಿಯ ಪ್ರದಾನ ಸಂಚಾಲಕ ಬಸವರಾಜ ಕಳಸ ಹೇಳಿದರು.
ಅವರಿಂದು ಮಾಧ್ಯಮಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, 2022 ರ ಮೇ.13 ರಂದು ಏಮ್ಸ್ ಹೋರಾಟ ಸಮಿತಿಯಿಂದ ಹೋರಾಟ ಪ್ರಾರಂಭವಾಗಿದ್ದು, ಮುಂಬರು ಮೇ.13 ರಂದು ನಾಲ್ಕನೇ ವರ್ಷಕ್ಕೆ ಮುಂದುವರೆಯುತ್ತಿದೆ. ಆದರೆ ಕೇಂದ್ರ ಮಟ್ಟದಲ್ಲಿ ಯಾವುದೇ ಬೆಳವಣಿಗೆ ಕಾಣುತ್ತಿಲ್ಲ ಎಂದರು.
ಏಮ್ಸ್ ಹೋರಾಟ ಸಮಿತಿಯಿಂದ ನಿರಂತರವಾಗಿ ಕಲ್ಯಾಣ ಕರ್ನಾಟಕ ಭಾಗ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ರಾಯಚೂರಿನಲ್ಲಿಯೇ ಏಮ್ಸ್ ಸ್ಥಾಪನೆ ಮಾಡಬೇಕೆಂಬ ಒತ್ತಾಯದೊಂದಿಗೆ ಶಿಸ್ತುಬದ್ದವಾಗಿ ಹಾಗೂ ಕಾನೂನು ನಿಯಮಗಳನ್ನು ಪಾಲಿಸುತ್ತಾ ಸಾಕಷ್ಟು ಪ್ರತಿಭಟನೆಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏಮ್ಸ್ ಗಾಗಿ ಕೇಂದ್ರಕ್ಕೆ ಪತ್ರ ಬರೆದಿದ್ದು, ಬಿಟ್ಟರೇ ಸರ್ಕಾರದ ಮಟ್ಟದಲ್ಲಿ ಯಾವುದೇ ಕೆಲಸಗಳು ಆಗಿಲ್ಲ. ಕೂಡಲೇ ರಾಜ್ಯಸರ್ಕಾರ ಸಂಪುಟ ಜಾಸಭೆಯಲ್ಲಿ ರಾಯಚೂರಿನಲ್ಲಿಯೇ ಏಮ್ಸ್ ಸ್ಥಾಪನೆಯಾಗಬೇಕೆಂಬ ನಿರ್ಧಾರವನ್ನು ಕೈಗೊಂಡು ದೆಹಲಿಗೆ ಸರ್ವಪಕ್ಷಗಳ ನಿಯೋಗ ತೆರಳಬೇಕು ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಮೇ 17,18 ರಂದು ಸಿಂಧನೂರಿನಲ್ಲಿ ಮೇ ಸಾಹಿತ್ಯ ಮೇಳ
ರಾಯಚೂರಿಗೆ ಏಮ್ಸ್ ಮಂಜೂರು ಮಾಡುವುದು ಬಿಜೆಪಿ ಪಕ್ಷದ ಜವಾಬ್ದಾರಿಯೂ ಆಗಿದೆ. ಆದರೆ ಕಾಂಗ್ರೆಸ್ ಹಾಗೂ ಬಿಜೆಪಿ ಶಾಸಕರುಗಳು ಶಕ್ತಿ, ಬುದ್ದಿ ಎಂಬ ಮಾತುಗಳನ್ನಡುತ್ತಾ ವೈಯಕ್ತಿಕವಾಗಿ ಆರೋಪ, ಪ್ರತ್ಯಾರೋಪಗಳನ್ನು ಮಾಡುತ್ತಿದ್ದಾರೆ ಅವರ ಸವಾಲು, ಜವಾಬು ನಮಗೆ ಬೇಡ ರಾಯಚೂರಿನಲ್ಲಿ ಏಮ್ಸ್ ಮಂಜೂರು ಮಾಡಿಸಬೇಕು ಎಂದು ತಿಳಿಸಿದರು.
ಮೂರು ವರ್ಷಗಳಾದರೂ ಏಮ್ಸ್ ಹೋರಾಟಕ್ಕೆ ಅಂತ್ಯವಿಲ್ಲದಂತಾಗಿದೆ. ಏಮ್ಸ್ ವಿಚಾರದಲ್ಲಿ ಕಾಲಹರಣ ಮಾಡುತ್ತಿರುವುದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಅಪಮಾನವಾದಂತಾಗಿದೆ. ಮಾನವೀಯತೆ ದೃಷ್ಠಿಯಿಂದಾದರೂ, ರಾಜಕೀಯ ವ್ಯಕ್ತಿಗಳು ರಾಯಚೂರಿಗೆ ಏಮ್ಸ್ ಕೊಡಿಸುವ ಇಚ್ಛಾಶಕ್ತಿಯನ್ನು ತೋರಿಸಬೇಕಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹೋರಾಟ ಸಮಿತಿಯ ಪ್ರಮುಖರಾದ ಅಶೋಕಕುಮಾರ ಜೈನ್, ಜಾನ್ ವೆಸ್ಲಿ, ವೀರಭದ್ರಯ್ಯ ಸ್ವಾಮಿ, ಗುರುರಾಜ ಕುಲಕರ್ಣಿ, ಜಗದೀಶ ಸೇರಿದಂತೆ ಅನೇಕರಿದ್ದರು.