‘ಆಪರೇಷನ್ ಸಿಂಧೂರ’ದ ಬಳಿಕ ಮೊದಲ ಬಾರಿಗೆ ದೇಶವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡುವುದಕ್ಕೂ ಮುನ್ನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತನಾಡಿದ್ದು, “ನೀವಿಬ್ಬರು ಸಂಘರ್ಷ ನಿಲ್ಲಿಸದಿದ್ದರೆ ನಾವು ನಿಮ್ಮೊಂದಿಗೆ ಯಾವುದೇ ವ್ಯಾಪಾರ ಮಾಡುವುದಿಲ್ಲ ಎಂದಿದ್ದೆವು” ಎಂದು ಹೇಳಿಕೆ ನೀಡಿದ್ದಾರೆ.
ಶ್ವೇತಭವನದಲ್ಲಿ ಸೋಮವಾರ ಮಾತನಾಡಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, “ಕಳೆದ ವಾರ ಭಾರತ ಮತ್ತು ಪಾಕಿಸ್ತಾನ ನಡುವೆ ಸಂಘರ್ಷ ಉದ್ಭವಿಸಿತ್ತು. ಈ ಎರಡೂ ದೇಶಗಳು ಪರಮಾಣು ಅಣ್ವಸ್ತ್ರವನ್ನು ಹೊಂದಿರುವ ದೇಶಗಳು. ಅವರು ನಿಜವಾಗಿಯೂ ಪರಿಸ್ಥಿತಿಯ ಗಂಭೀರತೆಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಲು ನಾವು ಬಹಳಷ್ಟು ಸಹಾಯ ಮಾಡಿದ್ದೇವೆ” ಎಂದು ತಿಳಿಸಿದರು.
“ನಾವು ಪರಮಾಣು ಸಂಘರ್ಷವನ್ನು ನಿಲ್ಲಿಸಿದ್ದೇವೆ. ಅದು ಕೆಟ್ಟ ಪರಮಾಣು ಯುದ್ಧವಾಗಿರುತ್ತಿತ್ತು ಎಂದು ನಾನು ಭಾವಿಸುತ್ತೇನೆ. ಪರಮಾಣು ಯುದ್ದ ನಡೆದಿದ್ದರೆ ಲಕ್ಷಾಂತರ ಜನರು ಕೊಲ್ಲಲ್ಪಡುತ್ತಿದ್ದರು. ಇಂತಹ ಪರಮಾಣು ಯುದ್ಧವನ್ನು ನಾವು ನಿಲ್ಲಿಸಿದ್ದೇವೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ಬಿಕ್ಕಟ್ಟು ಶಮನ ಮಾಡುವಲ್ಲಿ ನಿರತರಾದ ಅಮೆರಿಕದ ಉಪರಾಷ್ಟ್ರಪತಿ ಜೆಡಿ ವ್ಯಾನ್ಸ್ ಮತ್ತು ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ನಾನು ಅವರಿಗೆ ಧನ್ಯವಾದ ಹೇಳುತ್ತೇನೆ” ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
“ನಾವು ಇಬ್ಬರ ವ್ಯಾಪಾರಕ್ಕೂ ಸಹಾಯ ಮಾಡಿದ್ದೇವೆ. ನಮಗೆ ನಿಮ್ಮೊಂದಿಗೆ ಬಹಳಷ್ಟು ವ್ಯಾಪಾರ ಮಾಡಲಿಕ್ಕಿದೆ. ಹಾಗಾಗಿ, ಸಂಘರ್ಷ ನಿಲ್ಲಿಸೋಣ ಎಂದಿದ್ದೆವು. ನೀವು ನಿಲ್ಲಿಸಿದರೆ, ನಾವು ವ್ಯಾಪಾರ ಮಾಡುತ್ತೇವೆ. ಒಂದು ವೇಳೆ ನೀವಿಬ್ಬರು ಸಂಘರ್ಷ ನಿಲ್ಲಿಸದಿದ್ದರೆ, ನಾವು ಯಾವುದೇ ವ್ಯಾಪಾರವನ್ನು ಮಾಡುವುದಿಲ್ಲ ಎಂದಿದ್ದೆವು. ಹಾಗಾಗಿ, ನಮ್ಮ ನೆರವಿನಿಂದ ಕದನ ವಿರಾಮ ಘೋಷಿಸಿದ್ದಾರೆ. ನಾನು ಮಾಡಿದಷ್ಟು ವ್ಯಾಪಾರ ಬೇರೆಯವರು ಯಾರೂ ಮಾಡಿರಲಿಕ್ಕಿಲ್ಲ” ಎನ್ನುವ ಮೂಲಕ ಭಾರತ-ಪಾಕ್ ಸಂಘರ್ಷ ನಿಲ್ಲಿಸಿದ ಕ್ರೆಡಿಟ್ ಅನ್ನು ಡೊನಾಲ್ಡ್ ಟ್ರಂಪ್ ತೆಗೆದುಕೊಂಡಿದ್ದಾರೆ.