ಭಗವಾನ್ ಬುದ್ಧ ಜಗತ್ತಿಗೆ ಶಾಂತಿ, ಸಮಾನತೆ, ಸರಳತೆಯ ಸಂದೇಶ ನೀಡಿದರು ಎಂದು ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ.ಖಂಡ್ರೆ ಹೇಳಿದರು.
ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಭಗವಾನ್ ಬುದ್ಧ ಜಯಂತ್ಯುತ್ಸವ ಅಂಗವಾಗಿ ಭಗವಾನ್ ಬುದ್ಧ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
‘ಅಂದಿನ ಸಮಾಜದಲ್ಲಿ ಮೌಢ್ಯ, ಅಸಮಾನತೆ, ದೌರ್ಜನ್ಯ ಮುಂತಾದ ಅನಿಷ್ಟ ಪದ್ಧತಿಗಳು ಆಚರಣೆಯಲ್ಲಿದ್ದವು. ಅವುಗಳ ವಿರುದ್ಧವಾಗಿ ಗೌತಮ ಬುದ್ಧರು ಸಮಾಜದಲ್ಲಿ ಶಾಂತಿ, ಸಹಬಾಳ್ವೆ, ಸಮಾನತೆ, ಪ್ರೀತಿ, ವಿಶ್ವಾಸಗಳನ್ನು ಮೂಡಿಸಿದರು. ರಾಜಮನೆತನದಲ್ಲಿ ಹುಟ್ಟಿದರು. ಸಹ ಸರ್ವವವೂ ತ್ಯಾಗಗೈದು, ಬೋಧಿವೃಕ್ಷದ ಕೆಳಗೆ ತಪಸ್ಸು ಮಾಡಿ ಜ್ಞಾನವನ್ನು ಪಡೆದರು. ದೇಶದ ಹಲವೆಡೆ ಸಂಚಾರ ಕೈಗೊಂಡು ತಮ್ಮ ತತ್ವಗಳನ್ನು ಬೋಧಿಸಿದರು’ ಎಂದರು.

‘ಜಗತ್ತಿನಲ್ಲಿ ನಡೆಯುವ ಅನಾಹುತಗಳಿಗೆ ಆಸೆಯೇ ಕಾರಣ, ಆಸೆ ದುಃಖಕ್ಕೆ ಮೂಲ ಕಾರಣವಾಗಿದೆ, ಆಸೆ ತ್ಯಾಗದಿಂದ ದುಃಖ ಕಡಿಮೆಯಾಗುತ್ತದೆ. ಆಸೆ ಹೋಗಬೇಕೆಂದರೆ ಅಷ್ಟಾಂಗ ಮಾರ್ಗ ಪಾಲನೆ ಮಾಡಬೇಕು’ ಎಂದು ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಗೌತಮಬುದ್ಧರ ಭಾವಚಿತ್ರದ ರಥ ಮೆರವಣಿಗೆಗೆ ಸಚಿವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಸೇರಿದಂತೆ ವಿವಿಧ ಮುಖಂಡರು, ಅಧಿಕಾರಿಗಳು ಇದ್ದರು.
ಬಳಿಕ ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ನಡೆದ ವೇದಿಕೆ ಕಾರ್ಯಕ್ರಮವನ್ನು ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್ ಉದ್ಘಾಟಿಸಿದರು.

‘ಭಗವಾನ್ ಬುದ್ಧರು ಮಾನವೀಯತೆ, ಸಮಾನತೆ, ಸಹಬಾಳ್ವೆಯಿಂದ ಬದುಕಲು ಮಾರ್ಗ ಹಾಕಿಕೊಟ್ಟಿದ್ದಾರೆ. ನಾವೆಲ್ಲರೂ ಸರಳತೆ ಜೀವನವನ್ನು ಅನುಸರಿಸಿ, ಪ್ರೀತಿ ವಿಶ್ವಾಸದಿಂದ ಕೂಡಿ ಬಾಳಬೇಕು. ಬುದ್ಧ, ಬಸವ, ಅಂಬೇಡ್ಕರ್ ಅವರ ಮಾರ್ಗದಲ್ಲಿ ನಡೆದು ಉತ್ತಮವಾದ ಸಮಾಜವನ್ನು ಕಟ್ಟಬೇಕು’ ಎಂದು ತಿಳಿಸಿದರು.
ಬೀದರ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ವಿಠ್ಠಲದಾಸ ಪ್ಯಾಗೆ ಅವರು ಅತಿಥಿ ಉಪನ್ಯಾಸ ನೀಡಿ, ‘ಬುದ್ಧರ ಜೀವನ ಹಾಗೂ ಬೌದ್ಧ ಧಮ್ಮದ ಕುರಿತು ತಿಳಿಸಿದರು.
ನಗರಸಭೆ ಅಧ್ಯಕ್ಷ ಮಹಮ್ಮದ ಗೌಸ್, ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ, ಭಂತೆ ಅಶೋಕ, ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯ ವಿಜಯಕುಮಾರ ಸೊನಾರೆ ಮುಖಂಡರಾದ ಮಾರುತಿ ಬೌದ್ಧೆ, ಅನೀಲ ಬೆಲ್ದಾರ, ಬಾಬು ಪಾಸ್ವಾನ್, ಕಾಶಿನಾಥ ಚೆಲುವಾ, ರಾಜಪ್ಪ ಗೂನಳ್ಳಿ, ತಾನಾಜಿ ಸಗರ, ಶಿವಶರಣಪ್ಪ ಹುಗ್ಗೆ ಪಾಟೀಲ್, ಓಂಪ್ರಕಾಶ್ ರೊಟ್ಟೆ, ಚಕ್ರಧರ ಹೊಸಳ್ಳಿ ಸೇರಿದಂತೆ ಮತ್ತಿತರರು ಇದ್ದರು.