ಹರಿಯಾಣದ ಕಲೆಸರ್ ವನ್ಯಜೀವಿ ಅಭಯಾರಣ್ಯದ ಬಳಿ ಗಣಿಗಾರಿಕೆಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಯಮುನಾ ನದಿಗೆ ಒಡ್ಡು ನಿರ್ಮಿಸಲಾಗಿದೆ. ಅಭಯಾರಣ್ಯದಲ್ಲಿ ಅಕ್ರಮ ಗಣಿಗಾರಿಕೆ ಚಟುವಟಿಕೆಗಳು ಹೇರಳವಾಗಿವೆ ಎಂದು ಆರೋಪಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡಿರುವ ಸುಪ್ರೀಂ ಕೋರ್ಟ್, ಒಡ್ಡು ನಿರ್ಮಾಣದ ಕುರಿತಾಗಿ ಸಂಪೂರ್ಣ ವರದಿ ನೀಡುವಂತೆ ಕೇಂದ್ರೀಯ ಅಧಿಕಾರ ಸಮಿತಿಗೆ (ಸಿಇಸಿ) ನಿರ್ದೇಶನ ನೀಡಿದೆ.
ಯಮುನಾ ನದಿ ತೀರದಲ್ಲಿರುವ ಯಮುನಾ ನಗರದ ಪೂರ್ವ ಭಾಗದಲ್ಲಿ ಕಲೆಸರ್ ವನ್ಯಜೀವಿ ಅಭಯಾರಣ್ಯವಿದೆ. ಇದೇ ಭಾಗದಲ್ಲಿ ಅಕ್ರಮ ಗಣಿಗಾರಿಕೆಗಳು ನಡೆಯುತ್ತಿವೆ. ಈ ಗಣಿಗಾರಿಕೆಗೆ ಅನುಕೂಲ ಮಾಡಿಕೊಡಲು ಅಭಯಾರಣ್ಯದ ಬಳಿ ನದಿಗೆ ಒಡ್ಡು ನಿರ್ಮಿಸಲಾಗಿದೆ ಎಂದು ಅರ್ಜಿದಾರರು ಒತ್ತಿ ಹೇಳಿದ್ದಾರೆ.
ಅರ್ಜಿದಾರರ ಪರವಾಗಿ ವಾದ ಮಂಡಿಸಿದ ವಕೀಲ ಗೌರವ್ ಕುಮಾರ್ ಬನ್ಸಾಲ್, “ಅಕ್ರಮ ಮತ್ತು ಅತಿರೇಕದ ಗಣಿಗಾರಿಕೆಗೆ ಅನುಕೂಲವಾಗುವಂತೆ ಒಡ್ಡು ನಿರ್ಮಾಣ ಮಾಡಲಾಗಿದೆ. ಪರಿಣಾಮ, ಅಭಯಾರಣ್ಯಕ್ಕೆ ಭಾರೀ ಹಾನಿಯಾಗಲಿದ್ದು, ವನ್ಯಜೀವಿಗಳಿಗೂ ಅಪಾಯ ತೊಂದರೆಯಾಗಲಿದೆ” ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಅಗಸ್ಟೀನ್ ಜಾರ್ಜ್ ಅವರನ್ನೊಳಗೊಂಡ ಪೀಠವು, ಅರ್ಜಿದಾರರು ಎತ್ತಿರುವ ಸಮಸ್ಯೆಗಳನ್ನು ಪರಿಶೀಲಿಸಿ ವರದಿ ಸಲ್ಲಿಸಬೇಕು ಎಂದು ಸಿಇಸಿಗೆ ಸೂಚಿಸಿದೆ.