ಪಾಕಿಸ್ತಾನಕ್ಕೆ ಒಂದು ಗತಿ ಕಾಣಿಸಲು ಇದೊಂದು ಒಳ್ಳೆಯ ಅವಕಾಶವಾಗಿತ್ತು. ಟ್ರಂಪ್ ಮಾತು ಕೇಳಿ ಪ್ರಧಾನಿ ನರೇಂದ್ರ ಮೋದಿ ಅವರು ಕದನ ವಿರಾಮಕ್ಕೆ ಒಪ್ಪಿದ್ದು ಸರಿಯಲ್ಲ ಎಂದು ಬಿಜೆಪಿ ನಾಯಕ, ವಿಧಾನ ಪರಿಷತ್ ಸಭಾಧ್ಯಕ್ಷ ಬಸವರಾಜ ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಭಾರತ ಮತ್ತು ಪಾಕಿಸ್ತಾನದ ನಡುವೆ ಮಧ್ಯಸ್ಥಿಕೆ ವಹಿಸಲು ಟ್ರಂಪ್ ಯಾರು? ಅಮೆರಿಕದ ವ್ಯವಹಾರಗಳಲ್ಲಿ ನಾವು ಮಧ್ಯಪ್ರವೇಶಿಸಿದರೆ ಅವರು ನಮ್ಮ ಮಾತು ಕೇಳುತ್ತಾರೆಯೇ. ನಾವೇಗೆ ಟ್ರಂಪ್ ಮಾಡಿಗೆ ಮಣೆ ಹಾಕಬೇಕು” ಎಂದು ಪ್ರಶ್ನಿಸಿದ್ದಾರೆ.
“ಕದನ ವಿರಾಮ ಘೋಷಣೆಯಾದ ಬಳಿಕವೂ ಪಾಕಿಸ್ತಾನ ತನ್ನ ದುರ್ವರ್ತನೆ ತೋರಿಸಿದೆ. ಕದನ ವಿರಾಮ ಘೊಷಿಸಿದ ಕೆಲವೆ ನಿಮಿಷಗಳಲ್ಲಿ ಮತ್ತೆ ಗಡಿ ಭಾಗದಲ್ಲಿ ದಾಳಿ ನಡೆಸಿದೆ. ಪಾಕಿಸ್ತಾನದ ವಿರುದ್ಧ ಯುದ್ದ ಮಾಡದೆ ನಿಲ್ಲಿಸಿ ತುಪ್ಪು ಮಾಡಿದ್ದೇವೆ ಎಂಬುದನ್ನು ಪಾಕ್‌ನ ದುರ್ವರ್ತನೆ ತೋರಿಸಿದೆ” ಎಂದಿದ್ದಾರೆ.
“ಪಾಕಿಸ್ತಾನವನ್ನು ಭಾರತದ ಹಿತ ಬಯಸುವ ರಾಷ್ಟ್ರವೆಂದು ಎಂದಿಗೂ ಭಾವಿಸಲು ಸಾಧ್ಯವಿಲ್ಲ. ಅದು ಎದುರಾಳಿ ರಾಷ್ಟ್ರವೆಂದೇ ಪರಿಗಣಿಸಬೇಕು. ಮೋದಿ ಅವರು ವಿದೇಶಿ ಪ್ರಭಾವಕ್ಕೆ ಮಣಿಯಬಾರದಿತ್ತು. ಬದಲಾಗಿ, ದೃಢ ನಿರ್ಧಾರ ತೆಗೆದುಕೊಳ್ಳಬೇಕಾಗಿತ್ತು. ಭಾರತವು ರಾಜಿಗೆ ಬಗ್ಗದೇ ಇರುವ ರೀತಿಯಲ್ಲಿ ನಿಲುವನ್ನು ತೆಗೆದುಕೊಳ್ಳಬೇಕು” ಎಂದು ಹೊರಟ್ಟಿ ಹೇಳಿದ್ದಾರೆ.