2019ರಲ್ಲಿ ದೇಶದ ಗಮನ ಸೆಳೆದಿದ್ದ ತಮಿಳುನಾಡು ಪೊಲ್ಲಾಚಿ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ತೀರ್ಪು ಹೊರಬಿದ್ದಿದೆ. ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಬ್ಲಾಕ್‌ಮೇಲ್ ಮಾಡಿದ್ದ 9 ಮಂದಿ ಆರೋಪಿಗಳನ್ನು ಅಪರಾಧಿಗಳೆಂದು ಕೊಯಮತ್ತೂರಿನ ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ.
ಅಪರಾಧಿ ದುಷ್ಕರ್ಮಿಗಳ ಗುಂಪು ಕಾಲೇಜು ವಿದ್ಯಾರ್ಥಿನಿ ಸೇರಿದಂತೆ ಎಂಟು ಮಂದಿ ಮಹಿಳೆಯರೊಂದಿಗೆ ಹುಸಿ ಸ್ನೇಹ ಬೆಳೆಸಿ, ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿತ್ತು. ಅಲ್ಲದೆ, ಕೃತ್ಯದ ವಿಡಿಯೋಗಳನ್ನಿಟ್ಟುಕೊಂಡು ಬ್ಲಾಕ್‌ಮೇಲ್ ಮಾಡುತ್ತಿದ್ದ ಪ್ರಕರಣ 2019ರಲ್ಲಿ ಬೆಳಕಿಗೆ ಬಂದಿತ್ತು.
ಪ್ರಕರಣದ ವಿಚಾರಣೆ ನಡೆಸಿರುವ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶೆ ನ್ಯಾಯಾಧೀಶೆ ನಂದಿನಿ ದೇವಿ, “ಈ ಪ್ರಕರಣ ಸಾಮಾಜಿಕ ಕಳಂಕ ಮತ್ತು ಪ್ರತಿಕಾರದ ಭಯವನ್ನ ಒತ್ತಿ ಹೇಳುತ್ತದೆ” ಎಂದು ಹೇಳಿದ್ದಾರೆ. ಆರೋಪಿಗಳಾದ ತಿರುನಾವುಕರಸು, ಸಬರೀಶನ್, ವಸಂತ ಕುಮಾರ್, ಸತೀಶ್, ಮಣಿವಣ್ಣನ್, ಹರನ್ಪಾಲ್, ಬಾಬು, ಅರುಳನಂತಮ್ ಹಾಗೂ ಅರುಣ್ ಕುಮಾರ್ ಅವರನ್ನು ತಪ್ಪಿತಸ್ಥರೆಂದು ತೀರ್ಪು ನೀಡಿದ್ದಾರೆ. ಶಿಕ್ಷೆ ಪ್ರಮಾಣವನ್ನು ಇನ್ನೂ ಘೋಷಿಸಲಾಗಿಲ್ಲ. ಬಹುತೇಕ ಮಂಗಳವಾರ ಸಂಜೆ ಒಳಗೆ ಶಿಕ್ಷೆ ಘೋಷಿಸುವ ಸಾಧ್ಯತೆಗಳಿವೆ.
ಈ ಪ್ರಕರಣದ ವಿಚಾರಣೆಯ ಸಮಯದಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಮತ್ತು ಪೊಲೀಸರು 200ಕ್ಕೂ ಹೆಚ್ಚು ದಾಖಲೆಗಳು ಮತ್ತು 400 ಎಲೆಕ್ಟ್ರಾನಿಕ್ ಸಾಕ್ಷ್ಯಗಳನ್ನು ನ್ಯಾಯಾಲಯಕ್ಕೆ ಒದಗಿಸಿದ್ದಾರೆ. ಅಲ್ಲದೆ, ದೌರ್ಜನ್ಯಕ್ಕೆ ಸಂಬಂಧಿಸಿವೆ ಎಂಬು ವಿಧಿವಿಜ್ಞಾನ ಪ್ರಯೋಗಾಯದಲ್ಲಿ ಸಾಬೀತಾದ ಹಲವು ವೀಡಿಯೋಗಳನ್ನೂ ಒದಗಿಸಿದ್ದಾರೆ.
ಆರೋಪಿಗಳಿಗೆ ನೀಡಿದ ಶಿಕ್ಷೆಯನ್ನು ಮಹಿಳಾ ಕಾರ್ಯಕರ್ತೆಯರು ಸ್ವಾಗತಿಸಿದ್ದಾರೆ. “ಈ ತೀರ್ಪು ಸಮಾಧಾನಕರವಾಗಿದೆ. ಆದರೆ, ಸಂತ್ರಸ್ತರಿಗೆ ತಮ್ಮ ಜೀವನವನ್ನ ಪುನರ್ನಿಮಿಸಲು ಪರಿಹಾರ, ಸಮಾಲೋಚನ ಹಾಗೂ ಸರ್ಕಾರಿ ಉದ್ಯೋಗದ ಭರವಸೆಗಳು ಬೇಕಾಗುತ್ತದೆ” ಎಂದು ಹೇಳಿದ್ದಾರೆ.
ಈ ವರದಿ ಓದಿದ್ದೀರಾ?: ಆಪರೇಷನ್ ಸಿಂಧೂರ್ | ಉಭಯ ರಾಷ್ಟ್ರಗಳ ಪರಿಸ್ಥಿತಿಯನ್ನು ಮತ್ತಷ್ಟು ಜಟಿಲಗೊಳಿಸಬಹುದೇ?
2016 ಮತ್ತು 2018ರ ನಡುವೆ ಎಂಟು ಮಂದಿ ಸಂತ್ರಸ್ತರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಕೃತ್ಯವನ್ನು ವಿಡಿಯೋ ಮಾಡಿಕೊಂಡು, ಹಣಕ್ಕಾಗಿ ಬ್ಲಾಕ್‌ಮೇಲ್ ಮಾಡಲಾಗಿತ್ತು. ಕೃತ್ಯದ ಕೆಲವು ವಿಡಿಯೋಗಳು ವೈರಲ್ ಆದ ಬಳಿಕ ಪ್ರಕರಣ ಬೆಳಕಿಗೆ ಬಂದಿತ್ತು. ಆಗಿನ ಆಡಳಿತಾರೂಢ ಎಐಎಡಿಎಂಕೆ ಸರ್ಕಾರದ ವಿರುದ್ಧ ತಮಿಳುನಾಡಿನಾದ್ಯಂತ ಪ್ರತಿಭಟನೆಗಳು ನಡೆದಿದ್ದವು. ಜೊತೆಗೆ, ಡಿಎಂಕೆ ಮತ್ತು ಇತರ ವಿರೋಧ ಪಕ್ಷಗಳು ಒಟ್ಟುಗೂಡಿ ಹೋರಾಟ ಮಾಡಿದ್ದರಿಂದ ಪ್ರಕರಣವು ರಾಜಕೀಯವಾಗಿಯೂ ಮುನ್ನೆಲೆಗೆ ಬಂದಿತ್ತು.
ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಆರಂಭದಲ್ಲಿ ಪೊಲ್ಲಾಚಿ ಪೊಲೀಸರು ಈ ಪ್ರಕರಣದ ತನಿಖೆ ನಡೆಸಿದ್ದರು. ನಂತರ, ಪ್ರಕರಣವನ್ನು ಸಿಐಡಿ ತನಿಖೆಗೆ ವರ್ಗಾವಣೆ ಮಾಡಲಾಗಿತ್ತು. ಆದಾಗ್ಯೂ, ಸಾರ್ವಜನಿಕ ಒತ್ತಡದ ನಂತರ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಲಾಗಿತ್ತು.