ರಾಜ್ಯದಲ್ಲಿ ನಡೆಯುತ್ತಿರುವ ಜಾತಿಗಣತಿಯಲ್ಲಿ ಸಾಕಷ್ಟು ಲೋಪದೋಷಗಳಿವೆ. ಸಮೀಕ್ಷೆಗೆಂದೇ ಅಭಿವೃದ್ಧಿ ಪಡಿಸಿದ ಆಪ್ ಕೂಡ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಸರ್ಕಾರ ಉದ್ದೇಶಿತ ನಿರ್ಲಕ್ಷ್ಯದಿಂದಲೇ ಜಾತಿಗಣತಿ ವಿಳಂಬವಾಗಿದೆ ಇದರಿಂದ ಮೀಸಲಾತಿಯೂ ವಿಳಂಬವಾಗುತ್ತದೆ ಎಂದು ರಾಜ್ಯ ಮಾದಿಗ ಸಂಘ ಆರೋಪಿಸಿದೆ. ದೋಷ ಸರಿಪಡಿಸುವಂತೆ ವಿಜಯಪುರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
“ಸುಪ್ರೀಂ ಕೋರ್ಟ್ ನೀಡಿರುವ ಆದೇಶಕ್ಕೂ ಬೆಲೆ ಕೊಡದ ಕಾಂಗ್ರೆಸ್ ಸರ್ಕಾರ ಕೆಲವು ಜಾತಿಗಳಿಗೆ ಮಾತ್ರ ಸೀಮಿತವಾಗಿರುವಂತೆ ತೋರುತ್ತಿದೆ.ಇಲ್ಲಿವರೆಗೆ ಶೇ.25ರಷ್ಟೂ ಸಮೀಕ್ಷೆ ಆಗಿಲ್ಲ. ಆಪ್ ಸರಿಯಾಗಿಲ್ಲ. ಪದೇ ಪದೇ ಸರ್ವರ್ ಬ್ಯುಸಿ ಆಗಿದೆ ಎಂದು ಕುಂಟು ನೆಪ ಹೇಳಿ ಗಣತಿಗೆ ಬಂದವರು ಸಮಯ ಕಳೆಯುತ್ತಿದ್ದಾರೆ. ಬೇಡ ಜಂಗಮ ಜಾತಿಯು ಅಧಿಕೃತವಾಗಿ ಪರಿಶಿಷ್ಟ ಪಟ್ಟಿಯಲ್ಲಿ ಇಲ್ಲದಿದ್ದರೂ ಪರಿಶಿಷ್ಟ ಪಟ್ಟಿಗೆ ಸೇರಿಸುತ್ತಿರುವುದು ಕಂಡುಬಂದಿದೆ. ಕೂಡಲೇ ಇದನ್ನು ಸರಿಪಡಿಸಬೇಕು” ಎಂದು ಮನವಿ ಮಾಡಿದೆ.
ಸಮೀಕ್ಷೆಗೆ ಇನ್ನು ಹೆಚ್ಚಿನ ಶಿಕ್ಷಕರನ್ನು ನೇಮಿಸಿ ತರಬೇತಿ ನೀಡಬೇಕು. ಸಮೀಕ್ಷೆಗೆ ನೀಡುವ ದಿನಗಳನ್ನು ಹೆಚ್ಚಿಗೆ ಮಾಡಬೇಕು. ಕಾಲಹರಣ ಮಾಡುವುದು ಬಿಟ್ಟು ಶೀಘ್ರವಾಗಿ ರಾಜ್ಯದಲ್ಲಿ ಒಳಮೀಸಲಾತಿ ಜಾರಿಗೆ ಕ್ರಮ ಕೈಗೊಳ್ಳಬೇಕೆಂದು ಸಂಘದ ಮುಖಂಡರು ಆಗ್ರಹಿಸಿದರು.
ಇದನ್ನೂ ಓದಿ: ವಿಜಯಪುರ | ಮೇ 14ರಂದು ರಾಜ್ಯಮಟ್ಟದ ಜನ ಹೋರಾಟ
ಈ ವೇಳೆ ಸುರೇಶ್ ಗಚ್ಚಿನಮನಿ, ಮಲ್ಲಿಕಾರ್ಜುನ ಹಳಿಮನಿ, ಮದನ ಕುಮಾರ ನಾಗರದಿನ್ನಿ , ನಾಗರಾಜ್ ಮಾದರ, ಮಲ್ಲು ಶೇಷಗಿರಿ, ಪ್ರಶಾಂತ್ ದೊಡ್ಡಮನಿ, ಸೋಮನಾಥ ದೊಡ್ಡಮನಿ, ವೇಕಟೇಶ ರತ್ನಾಕರ, ಆನಂದ ದೇವುರ, ವಿಜಯ್ ಮಾದರ, ಶಶಿ ಡವಳಗಿ, ದಲಿತ ಮುಖಂಡರು ಹಾಗೂ ಇತರರು ಉಪಸ್ಥಿತರಿದ್ದರು.