'KEA ಮೊಬೈಲ್ ಆ್ಯಪ್' ಅಪ್ಲಿಕೇಷನ್ ಡೌನ್‌ಲೋಡ್ ಮಾಡಿಕೊಂಡರೆ, ಸಿಇಟಿ ಅರ್ಜಿ ಸಲ್ಲಿಕೆಯಿಂದ ಕಾಲೇಜುಗಳ ಆಯ್ಕೆಯಿಂದ ಹಿಡಿದು ಪ್ರವೇಶದವರೆಗೂ ಅಂಗೈನಲ್ಲಿರುವ ಮೊಬೈಲ್‌ನಲ್ಲೇ ನಿರ್ವಹಣೆ ಮಾಡಬಹುದು.
ಕರ್ನಾಟಕ ಪರೀಕ್ಷೆಗಳ ಪ್ರಾಧಿಕಾರ(KEA) ಸಾಮಾನ್ಯ ಪ್ರವೇಶ ಪರೀಕ್ಷೆ(CET) ಅಡಿ ಸೀಟುಗಳನ್ನು ಹಂಚಿಕೆ ಮಾಡುವ ಕಾಲೇಜುಗಳ ಕುರಿತಂತೆ ವಿದ್ಯಾರ್ಥಿಗಳಿಗೆ ಸಂಪೂರ್ಣ ಮಾಹಿತಿ ನೀಡಲು ಕೆಇಎ ಮೊಬೈಲ್ ಅಪ್ಲಿಕೇಶನ್ ಪ್ರಾರಂಭಿಸಿರುವುದಾಗಿ ಉನ್ನತ ಶಿಕ್ಷಣ ಸಚಿವ ಎಂ.ಸಿ ಸುಧಾಕರ್ ತಿಳಿಸಿದ್ದಾರೆ. ಈ ಕಾರ್ಯಕ್ರಮವು ಕಾಲೇಜುಗಳ ಸಂಖ್ಯೆಯ ಹೆಚ್ಚಳ ಮತ್ತು ನಿರ್ದಿಷ್ಟ ವಿಶ್ವಾಸಾರ್ಹ ಮೂಲಗಳ ಕೊರತೆಯ ಕಾರಣದಿಂದ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಂಕಷ್ಟಗಳನ್ನು ಪರಿಹರಿಸುವ ಉದ್ದೇಶವಾಗಿದೆ ಎಂದಿದ್ದಾರೆ.
ಪರೀಕ್ಷಾ ಪ್ರಕ್ರಿಯೆಯನ್ನು ಸುಗಮಗೊಳಿಸಲು ಹಾಗೂ ಅಭ್ಯರ್ಥಿಸ್ನೇಹಿಯಾಗಿಸಲು ಕಾಲಕಾಲಕ್ಕೆ ಆಧುನಿಕ ತಂತ್ರಜ್ಞಾನ ಅಳವಡಿಕೆಯಲ್ಲಿ ಪರೀಕ್ಷಾ ಪ್ರಾಧಿಕಾರ ಸದಾ ಮುಂದಿರುತ್ತದೆ. ಇದರ ಪರಿಣಾಮವಾಗಿ ನಿಖರವಾದ ಸಮಯದಲ್ಲಿ ಖಚಿತವಾದ ಮಾಹಿತಿ ಲಭ್ಯವಾಗುತ್ತದೆ. ಅನಗತ್ಯ ಗೊಂದಲಕ್ಕೆ ತೆರೆ ಬೀಳುತ್ತದೆ. ಮಧ್ಯವರ್ತಿಗಳ ಹಾವಳಿ ಕೂಡ ತಪ್ಪುತ್ತದೆ ಎಂದು ಸಚಿವರು ವಿವರಿಸಿದ್ದಾರೆ.
ಈಗಾಗಲೇ ಕೆಸಿಇಟಿ-2024 ಸೀಟು ಹಂಚಿಕೆ ವೇಳೆ, ಎಂಜಿನಿಯರಿಂಗ್ ಸೀಟು ಬ್ಲಾಕಿಂಗ್ ವೇಳೆ ಒಂದಷ್ಟು ಸಮಸ್ಯೆ ಎದುರಿಸಿದ್ದನ್ನು ನೋಡಿದ್ದೇವೆ. ಸಿಇಟಿ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದಾಗ, ಇಲ್ಲವೇ ಪರೀಕ್ಷೆ ಬಳಿಕ ನೇಮಕಾತಿ ವೇಳೆ ಸೈಬರ್ ವಂಚಕರು ಅಭ್ಯರ್ಥಿಗಳ ವಿವರ ಕದ್ದು ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ. ಮುಂದಿನ ದಿನಗಳಲ್ಲಿ ಇದೆಲ್ಲ ತೊಂದರೆಯಾಗದಂತೆ ವಿದ್ಯಾರ್ಥಿಗಳ ಮಾಹಿತಿ ಗೌಪ್ಯತೆ ಜತೆಗೆ ನೇಮಕಾತಿಯಲ್ಲಿ ಅಕ್ರಮವಾಗದಂತೆ ತಡೆಯಲು ಕೆಇಎ ಮೊಬೈಲ್ ಅಪ್ಲಿಕೇಶನ್(KEA Mobile App) ಸಹಾಯವಾಗಲಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಯಾವುದೇ ನೇಮಕಾತಿ ಅರ್ಜಿ ಹಾಕಲು ಇಚ್ಛಿಸಿದಾಗ ಅಭ್ಯರ್ಥಿಗಳು ಅದರಲ್ಲೂ ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳು ತಮ್ಮ ಆಂಡ್ರಾಯ್ಡ್ ಮೊಬೈಲ್‌ನಿಂದಲೇ ಅರ್ಜಿ ಸಲ್ಲಿಸಬಹುದು. ಕೆಇಎ ಮೊಬೈಲ್ ಅಪ್ಲಿಕೇಶನ್(KEA Mobile App)ನಿಂದ ಕೂತಲ್ಲೇ ಅರ್ಜಿ ಸಲ್ಲಿಸಬಹುದು.
ಪ್ರಾಧಿಕಾರ ನೇಮಕಾತಿಗೆ ಆಹ್ವಾನಿಸುತ್ತಿದ್ದಂತೆ ಸೈಬರ್ ಕೇಂದ್ರಗಳತ್ತ ಹೋಗಿ ಅರ್ಜಿ ಹಾಕುವಾಗ ಅಭ್ಯರ್ಥಿಗಳ ಸಾಕಷ್ಟು ವೈಯಕ್ತಿಕ ಮಾಹಿತಿ ಸೋರಿಕೆಯಾಗುವ ಸಾಧ್ಯತೆಯನ್ನು ತಪ್ಪಿಸುತ್ತದೆ.
ಕಳೆದ ಹಗರಣದಲ್ಲಿ ಪ್ರಾಧಿಕಾರದ ಓರ್ವ ವ್ಯಕ್ತಿ, ಕೆಲ ಕಾಲೇಜಿನ ಕೈವಾಡ ಇರುವುದಾಗಿ ಶಂಕೆ ವ್ಯಕ್ತವಾಗಿತ್ತು. ಆದ್ದರಿಂದ ಉನ್ನತ ಶಿಕ್ಷಣ ಸಚಿವರು ಸೂಚನೆ ನೀಡಿದ್ದು, ‘ಸಿಬ್ಬಂದಿ ಯಾವ ಕಾರಣಕ್ಕೂ ಯಾರದೇ ಆಮಿಷಗಳಿಗೂ ಒಳಗಾಗಬಾರದು. ಇದರಲ್ಲಿ ಲಕ್ಷಾಂತರ ಅಭ್ಯರ್ಥಿಗಳ ಭವಿಷ್ಯ ಇರುತ್ತದೆ. ಇದನ್ನು ಮನಗಂಡು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದ್ದಾರೆ.
ಕಾಲೇಜು ಪೋರ್ಟಲ್ (College Portal): ವಿದ್ಯಾರ್ಥಿಗಳು ತಾವು ಪಡೆದ ರ್‍ಯಾಂಕಿಂಗ್‌ಗೆ ಅನುಗುಣವಾಗಿ ಕಾಲೇಜುಗಳನ್ನು ಆಯ್ಕೆ ಮಾಡಿಕೊಳ್ಳುವ ಮೊದಲು ಕೆಇಎ ಕಾಲೇಜು ಪೋರ್ಟಲ್‌ಗೆ ಭೇಟಿ ನೀಡಿದರೆ ಆಯಾ ಕಾಲೇಜುಗಳ ಚಿತ್ರಸಹಿತ ಸಂಪೂರ್ಣ ಮಾಹಿತಿ ಸಿಗಲಿದೆ. ‘ಕೆಇಎ ಮೊಬೈಲ್ ಆ್ಯಪ್’ ಅಪ್ಲಿಕೇಷನ್ ಡೌನ್‌ಲೋಡ್ ಮಾಡಿಕೊಂಡರೆ ಸಿಇಟಿ ಅರ್ಜಿ ಸಲ್ಲಿಕೆಯಿಂದ ಕಾಲೇಜುಗಳ ಆಯ್ಕೆಯಿಂದ ಹಿಡಿದು ಪ್ರವೇಶದವರೆಗೂ ಅಂಗೈನಲ್ಲಿರುವ ಮೊಬೈಲ್‌ನಲ್ಲೇ ನಿರ್ವಹಣೆ ಮಾಡಬಹುದು.
ಕಾಲೇಜುಗಳ ಮೂಲಸೌಲಭ್ಯ, ಶೈಕ್ಷಣಿಕ ವಾತಾವರಣ, ಪ್ರಯೋಗಾಲಯ, ಗ್ರಂಥಾಲಯ, ಕೊಠಡಿ, ಹಾಸ್ಟೆಲ್, ಕೋರ್ಸ್‌ವಾರು ಶುಲ್ಕದ ವಿವರ, ಅಧ್ಯಾಪಕ ವರ್ಗ ಸೇರಿದಂತೆ ಪೂರ್ಣ ವಿವರಗಳನ್ನು ವೀಕ್ಷಿಸಬಹುದು.
ಹಿಂದಿನ ಶೈಕ್ಷಣಿಕ ಸಾಲುಗಳಲ್ಲಿ ವಿದ್ಯಾರ್ಥಿಗಳು ಕಾಲೇಜುಗಳನ್ನು ಆಯ್ಕೆ ಮಾಡಿಕೊಂಡು, ಅಲ್ಲಿಗೆ ತೆರಳಿದಾಗ ಮೂಲಸೌಕರ್ಯ, ಅತಿಥಿ ಉಪನ್ಯಾಸಕರು ಸೇರಿದಂತೆ ಕಾಯಂ ಸಿಬ್ಬಂದಿಯ ಸಮರ್ಪಕ ಮಾಹಿತಿಗಳ ಸಂಪೂರ್ಣ ವಿವರಗಳು ಇಲ್ಲದೆ ತೊಂದರೆಗೆ ಸಿಲುಕಿದ್ದರು. ಹಾಗೆಯೇ ಎಷ್ಟೋ ಮಂದಿ ಕಾಲೇಜಿನ ಮಾಹಿತಿ ಇಲ್ಲದೆ, ಆಪ್ಫನ್ ದಾಖಲಿಸಿ, ನಂತರ ಸೀಟು ಸಿಕ್ಕಿದ ಮೇಲೆ, ‘ಅಯ್ಯೋ ಅದು ಸರಿ ಇಲ್ಲ, ಇದು ಸರಿ ಇಲ್ಲ. ಮತ್ತೊಂದು ಕಡೆ ಸೀಟು ಕೊಡಿ’ ಎಂದು ಕಾಲೇಜುಗಳ ಸ್ಥಳ ಬದಲಾವಣೆಗಳಿಂದ ಸಂಕಷ್ಟ ಅನುಭವಿಸುತ್ತಿದ್ದರು. ಇಂತಹ ಗೊಂದಲಗಳನ್ನು ತಪ್ಪಿಸಲು ಈ ರೀತಿಯ ಹೊಸ ಯೋಜನೆಗಳು ಸೂಕ್ತ ಕಾಲೇಜುಗಳ ಆಯ್ಕೆಗೆ ನೆರವಾಗಲಿವೆ.
ಕೌಶಲ ಶುಲ್ಕ ಪರಿಷ್ಕರಣೆ
ಎಂಜಿನಿಯರಿಂಗ್ ಕಾಲೇಜುಗಳು ನೀಡುವ ವಿವಿಧ ರೀತಿಯ ಕೌಶಲ ಆಧಾರಿತ ತರಬೇತಿಗೆ ನಿಗದಿತ ಶುಲ್ಕಕ್ಕಿಂತ ಗರಿಷ್ಠ ₹20,000ದವರೆಗೆ ಹೆಚ್ಚುವರಿ ಶುಲ್ಕ ಪಡೆಯಲು ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಅವಕಾಶ ಕಲ್ಪಿಸಿದೆ. ಈ ವರ್ಷವೂ ಅವಕಾಶ ನೀಡಲಾಗಿದೆ. ಆದರೆ, ಪ್ರತಿ ಕಾಲೇಜಿನಲ್ಲೂ ತಪಾಸಣೆ ನಡೆಸಿದ ನಂತರ ಮುಂದಿನ ವರ್ಷ ಕೌಶಲ ತರಬೇತಿ ಶುಲ್ಕ ಪರಿಷ್ಕರಣೆ ಮಾಡಲಾಗುವುದು ಎಂದು ಸಚಿವ ಸುಧಾಕರ್ ಹೇಳಿದ್ದಾರೆ.
ಕ್ಯಾಂಪಸ್ ಆಯ್ಕೆಗೂ ಕೆಲ ಕಾಲೇಜುಗಳು ಹೆಚ್ಚುವರಿ ಶುಲ್ಕ ಪಡೆಯುತ್ತಿರುವ ದೂರುಗಳು ಬಂದಿವೆ. ಅಂತಹ ಕಾಲೇಜುಗಳಿಗೆ ನೋಟಿಸ್ ನೀಡಿ, ಕ್ರಮ ಕೈಗೊಳ್ಳಲಾಗುವುದು. ನಿಗದಿಗಿಂತ ಹೆಚ್ಚು ಶುಲ್ಕ ವಸೂಲಿ ಮಾಡುವ ಶಿಕ್ಷಣ ಸಂಸ್ಥೆಗಳ ವಿರುದ್ಧ ದೂರು ದಾಖಲಿಸುವುದಕ್ಕೂ ಇದೇ ಪೋರ್ಟಲ್‌ನಲ್ಲಿ ಲಿಂಕ್ ನೀಡುವ ಉದ್ದೇಶವೂ ಇದೆ. ನೇರವಾಗಿ ಶುಲ್ಕ ನಿಯಂತ್ರಣ ಸಮಿತಿಗೆ ದೂರು ಹೋಗುವ ಹಾಗೆ ಮಾಡಲಾಗುವುದು ಎಂದೂ ಕೂಡ ತಿಳಿಸಿದ್ದಾರೆ.
ಕೆಇಎ ಮೊಬೈಲ್ ಆ್ಯಪ್: ಕೆಇಎ ವೆಬ್‌ಸೈಟ್‌ನಲ್ಲಿ ಲಭ್ಯವಾಗುವ ಎಲ್ಲ ಮಾಹಿತಿಯನ್ನೂ ‘ಕೆಇಎ ಮೊಬೈಲ್ ಆ್ಯಪ್’ ಒಳಗೊಂಡಿರುತ್ತದೆ. ಆ್ಯಪ್ ಮೂಲಕವೇ ಅರ್ಜಿ ಹಾಕುವುದು, ಆಪ್ಷನ್ ದಾಖಲಿಸುವುದು, ಛಾಯ್ಸ್, ಶುಲ್ಕ ಪಾವತಿ ಸೇರಿದಂತೆ ಎಲ್ಲ ಪ್ರಕ್ರಿಯೆಗಳನ್ನು ಮಾಡಬಹುದು. ವಿದ್ಯಾರ್ಥಿಗಳ ಪ್ರವೇಶವನ್ನೂ ಆಯಾ ಕಾಲೇಜುಗಳು ಅಂದೇ ಖಚಿತಪಡಿಸುತ್ತವೆ. ಇದರಿಂದ ಮುಂದಿನ ಸುತ್ತಿನ ಸೀಟು ಹಂಚಿಕೆಗೂ ವೇಗ ದೊರೆಯಲಿದೆ. ಆ್ಯಪ್ ಡೌನ್‌ಲೋಡ್ ಮಾಡಿಕೊಂಡವರಿಗೆ ಸಂದೇಶ ಕಳುಹಿಸುವ ವ್ಯವಸ್ಥೆ ಕೂಡ ಇರುತ್ತದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸಿಇಟಿ ಅರ್ಜಿ ಭರ್ತಿ ಮಾಡಲು, ಸೀಟು ಹಂಚಿಕೆಗೆ ಸೈಬರ್ ಸೆಂಟರ್‌ಗಳ ಮೇಲಿನ ಅವಲಂಬನೆ ಇರುವುದಿಲ್ಲ.
ಕೆಇಎ ಚಾಟ್ ಬಾಟ್(KEA Chat BOT): ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ನೆರವಿನ ಚಾಟ್ ಬಾಟ್ ವ್ಯವಸ್ಥೆ ಬಳಸಿ ಅಭ್ಯರ್ಥಿಗಳು ತಮ್ಮ ಪ್ರಶ್ನೆ/ಅನುಮಾನಗಳಿಗೆ ನೇರವಾಗಿ ಉತ್ತರ ಪಡೆಯಲು ಸಾಧ್ಯವಾಗುತ್ತದೆ. ಇದರಿಂದ ನಿಖರ ಮಾಹಿತಿ ಸಿಕ್ಕು, ಅನಗತ್ಯ ಗೊಂದಲಕ್ಕೆ ತೆರೆ ಬಿದ್ದು, ಮಧ್ಯವರ್ತಿಗಳ ಹಾವಳಿ ತಡೆಗೂ ಸಹಕಾರಿಯಾಗಲಿದೆ. ಪ್ರಾಯೋಗಿಕವಾಗಿ ಆರಂಭಿಸಿದ ನಂತರ ಇದುವರೆಗೂ 1.35 ಲಕ್ಷ ಅಭ್ಯರ್ಥಿಗಳು ಇದರ ಮೂಲಕ ಪ್ರಶ್ನೆಗಳನ್ನು ಕೇಳಿ ಮಾಹಿತಿ ಪಡೆದಿದ್ದಾರೆ. ಹಾಗಾಗಿ ಇದರ ಉಪಯುಕ್ತತೆ ಎಷ್ಟು ಅಗತ್ಯವಾಗಿದೆ ಎಂಬುದು ಕಂಡುಬರುತ್ತದೆ.
ಕೆಇಎ ಪ್ರಕಟಿಸುವ ಎಲ್ಲ ಮಾಹಿತಿಯನ್ನು ಚಾಟ್ ಬಾಟ್ ವ್ಯವಸ್ಥೆಗೆ ಅಪ್ ಲೋಡ್ ಮಾಡಲಾಗುತ್ತದೆ. ಅಭ್ಯರ್ಥಿಗಳು ತಾವು ಏನನ್ನು ಕೇಳಬೇಕೋ ಅದನ್ನು ಟೈಪ್ ಮಾಡಿದರೆ, ಅಪ್‌ಲೋಡ್ ಮಾಡಲಾಗಿರುವ ಮಾಹಿತಿ ಆಧರಿಸಿ ಚಾಟ್ ಬಾಟ್ ಉತ್ತರ ಒದಗಿಸುತ್ತದೆ. ಇದರಿಂದ ಮಾಹಿತಿಗಾಗಿ ಕೆಇಎ ಕಚೇರಿಗೆ ಖುದ್ದು ಬರುವುದಾಗಲಿ ಅಥವಾ ಇತರ ಕಚೇರಿಗಳಿಗೆ ಅಲೆಯುವುದಾಗಲಿ ತಪ್ಪುತ್ತದೆ. ಕುಳಿತಲ್ಲೇ ಮಾಹಿತಿ ಪಡೆಯಲು ನೆರವಾಗುತ್ತದೆ.
ಇದನ್ನೂ ಓದಿದ್ದೀರಾ? ಅಭಯಾರಣ್ಯದಲ್ಲಿ ಅಕ್ರಮ ಗಣಿಗಾರಿಕೆ – ಯಮುನಾ ನದಿಗೆ ಒಡ್ಡು ನಿರ್ಮಾಣ: ವರದಿ ಕೇಳಿದ ಸುಪ್ರೀಂ
ಸದ್ಯ ಈ ಹೊಸ ವ್ಯವಸ್ಥೆಯಲ್ಲಿ ಕೇವಲ ಇಂಗ್ಲಿಷ್‌ನಲ್ಲಿ ಉತ್ತರ ದೊರೆಯುತ್ತಿದೆ. ಮುಂದಿನ ದಿನಗಳಲ್ಲಿ ಕನ್ನಡದಲ್ಲಿಯೂ ಮಾಹಿತಿ ಸಿಗುವಂತೆ ಮಾಡುವ ನಿಟ್ಟಿನಲ್ಲಿ ಪ್ರಯತ್ನ ಸಾಗಿದೆ. ತಿಂಗಳೊಳಗೆ ಕನ್ನಡದ ಅವತರಣಿಕೆ ಕೂಡ ಆರಂಭಿಸಲಾಗುತ್ತದೆ. ಬಿಎಸ್‌ಎನ್‌ಎಲ್ ಇದರ ನಿರ್ವಹಣೆ ಮಾಡುತ್ತಿದೆ.
ಕೆಇಎ ಬಳಿಕ ಕಾಮೆಡ್-ಕೆ ಸೀಟು ಹಂಚಿಕೆ: ಕೆಇಎ ಮೊದಲ ಸುತ್ತಿನ ಸೀಟು ಹಂಚಿಕೆ ನಂತರವೇ ಕಾಮೆಡ್-ಕೆ ಸೀಟು ಹಂಚಿಕೆ ಪ್ರಕ್ರಿಯೆ ಆರಂಭಿಸಬೇಕು ಎನ್ನುವ ಸಲಹೆಗೆ ಕಾಮೆಡ್-ಕೆ ಒಪ್ಪಿಗೆ ಸೂಚಿಸಿದೆ. ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಭರ್ತಿಯಾಗದೆ ಉಳಿಯುವ ಕೆಲ ಕೋರ್ಸ್‌ಗಳ ಆಡಳಿತ ಮಂಡಳಿ ಕೋಟಾದ ಸಿಇಟಿ ಮೂಲಕ ಭರ್ತಿ ಮಾಡುವ ಚಿಂತನೆ ನಡೆದಿದೆ.