ʼಬಾಯಲ್ಲಿ ಮಂತ್ರ, ಕೈಯಲ್ಲಿ ದೊಣ್ಣೆʼ ಇದು ಕಸಾಪ ಅಧ್ಯಕ್ಷ ಜೋಶಿ ಕಾರ್ಯವೈಖರಿ- ಜಿಲ್ಲಾಧ್ಯಕ್ಷರ ಆರೋಪ

Date:

Advertisements

ಅಧ್ಯಕ್ಷರಿಗೆ ಬೈಲಾ ತಿದ್ದುಪಡಿ ಬಗ್ಗೆ ಮಾತ್ರ ಗಮನ, ಪರಿಷತ್ತಿನ ಚಟುವಟಿಕೆ ನಡೆಸುವ ಬಗ್ಗೆ ಗಮನವೇ ಇಲ್ಲ. ರಾಜ್ಯೋತ್ಸವ, ಸಂಸ್ಥಾಪನಾ ದಿನಾಚರಣೆಗೆ ಅನುದಾನ ಕೊಡ್ತಿಲ್ಲ. ಸರ್ಕಾರ ಪ್ರತಿ ತಾಲ್ಲೂಕು ಸಮ್ಮೇಳನಕ್ಕೆ ರೂ. 1ಲಕ್ಷ ಅನುದಾನ ಕೊಡುತ್ತದೆ. ಸರ್ಕಾರ ಕೊಟ್ಟ ಹಣ ನಮಗೆ ಯಾಕೆ ಕೊಡ್ತಿಲ್ಲ ಅಂತ ಕೇಳಿದ್ರೆ ನೋಟಿಸ್‌ ಕೊಡ್ತಾರೆ, ಪ್ರಾಥಮಿಕ ಸದಸ್ಯತ್ವದಿಂದ ವಜಾ ಮಾಡುವ ಬೆದರಿಕೆ ಹಾಕ್ತಾರೆ ಎಂಬುದು ಜಿಲ್ಲಾಧ್ಯಕ್ಷರ ಆರೋಪ…

ಕಸಾಪ ಅಧ್ಯಕ್ಷ ಡಾ ಮಹೇಶ್‌ ಜೋಶಿ ವಿರುದ್ಧ ಬಂಡಾಯ ಜೋರಾಗಿದ್ದು ಅದು ಶಮನವಾಗುವ ಲಕ್ಷಣ ಕಾಣುತ್ತಿಲ್ಲ. ಜೋಶಿ ಅವರು ಅಧ್ಯಕ್ಷರಾದ ನಂತರ ಕಸಾಪ ಸದಾ ವಿವಾದದ ಕೇಂದ್ರವಾಗಿದೆ. ಅದನ್ನು ಶಮನ ಮಾಡುವ ನಿಟ್ಟಿನಲ್ಲಿ ಸಂಘಟಿತರಾಗಿ ಕೆಲಸ ಮಾಡುವ ಕಡೆಗೆ ಹೋಗುವ ಬದಲು ಜೋಶಿ ಅವರು ಇನ್ನಷ್ಟು ವಿವಾದಗಳನ್ನು ಮೈ ಮೇಲೆ ಎಳೆದುಕೊಳ್ಳುತ್ತಿದ್ದಾರೆ. ತಾವು ಅಧ್ಯಕ್ಷರಾದ ನಂತರ ಮೂರು ವರ್ಷಗಳಲ್ಲಿ ಈಗಾಗಲೇ ಎರಡು ಬಾರಿ ಕಸಾಪ ಬೈಲಾ ತಿದ್ದುಪಡಿ ಮಾಡಲಾಗಿದೆ. ಈಗ ಮೂರನೇ ಬಾರಿಗೆ ತಿದ್ದುಪಡಿಗೆ ಹೊರಟಿದ್ದಾರೆ. ಇದು ಭಾರೀ ವಿರೋಧಕ್ಕೆ ಕಾರಣವಾಗಿದೆ.

ಬೈಲಾ ತಿದ್ದುಪಡಿಗೆ ಸಂಬಂಧಿಸಿದಂತೆ ಸಮಿತಿ ನೀಡಿದ್ದ ವರದಿ ಅನುಷ್ಠಾನ ಮಾಡುವ ನಿಟ್ಟಿನಲ್ಲಿ ಚರ್ಚಿಸಲು ಬಳ್ಳಾರಿ ಜಿಲ್ಲೆ ನಂದಿಹಳ್ಳಿಯ ಶ್ರೀ ಕೃಷ್ಣದೇವರಾಯ ವಿವಿ ಆವರಣದ ಸಭಾಂಗಣದಲ್ಲಿ ಸರ್ವಸದಸ್ಯರ ಸಭೆ ಕರೆಯಲಾಗಿತ್ತು. ಆ ಸಭೆಗೆ ಭಾರೀ ವಿರೋಧ ವ್ಯಕ್ತವಾದ ನಂತರ ಸಭೆಯನ್ನು ರದ್ದುಗೊಳಿಸಲಾಗಿತ್ತು.

Advertisements

ಬೈಲಾ ತಿದ್ದುಪಡಿ ವಿರುದ್ಧ ಸಮಾನಮನಸ್ಕರು ಬೆಂಗಳೂರಿನಲ್ಲಿ ಸಭೆ ಸೇರಿ ನಂತರ ಹಿರಿಯ ಸಾಹಿತಿ ಹಂಪನಾ, ಮಂಡ್ಯ ಕಸಾಪ ಮಾಜಿ ಅಧ್ಯಕ್ಷ ಪ್ರೊ ಜಯಪ್ರಕಾಶ್‌ ಗೌಡ, ಬಂಜಗೆರೆ ಜಯಪ್ರಕಾಶ್‌, ಜಾಣಗೆರೆ ವೆಂಕಟರಾಮಯ್ಯ, ಎಸ್‌ ಜಿ ಸಿದ್ಧರಾಮಯ್ಯ, ಕೆ ಎಸ್‌ ವಿಮಲಾಕೆ ಟಿ ಶ್ರೀಕಂಠೇಗೌಡ, ಆರ್‌ ಜಿ ಹಳ್ಳಿ ನಾಗರಾಜ್ ಅವರಿದ್ದ ನಿಯೋಗ ಮೇ 8ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ “ಕಸಾಪ ಅಧ್ಯಕ್ಷರು ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೇ ತಮಗೆ ಬೇಕಾದಂತೆ ಅಧಿಕಾರ ಕೇಂದ್ರೀಕರಣ ಮಾಡಲು ಬೈಲಾಗೆ ಮೂರನೇ ಬಾರಿ ತಿದ್ದುಪಡಿ ಮಾಡಲು ಹೊರಟಿದ್ದಾರೆ. ಹಾಗಾಗಿ ಕಸಾಪ ಹಾದಿ ತಪ್ಪುತ್ತಿದೆ. ತಕ್ಷಣವೇ ಕಸಾಪಗೆ ಆಡಳಿತಾಧಿಕಾರಿ ನೇಮಕ ಮಾಡಬೇಕು” ಎಂದು ಮನವಿ ಸಲ್ಲಿಸಿದ್ದರು. ಈ ಎಲ್ಲ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಲು ಮೇ 14 (ನಾಳೆ) ರಾಜ್ಯ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದೆ. ಈ ಮಧ್ಯೆ ಶಿವಮೊಗ್ಗ ಜಿಲ್ಲಾ ಕಸಾಪ ಅಧ್ಯಕ್ಷ ಡಿ ಮಂಜುನಾಥ್‌ ಅವರು ತಮಗೆ ಈ ಸಭೆಗೆ ಹಾಜರಾಗಲು ಪೊಲೀಸ್‌ ಭದ್ರತೆ ಕೊಡಬೇಕು. ಪ್ರಶ್ನೆ ಮಾಡಿದ ಕಾರಣಕ್ಕೆ ಅಧ್ಯಕ್ಷ ಜೋಶಿ ಅವರು ನನ್ನ ಪ್ರಾಥಮಿಕ ಸದಸ್ಯತ್ವ ಅಮಾನತು ಮಾಡುವ ಶೋಕಾಸ್‌ ನೋಟಿಸ್‌ ನೀಡಿದ್ದಾರೆ. ನಾಳಿನ ಸಭೆಯಲ್ಲಿ ಸುಳ್ಳು ಆರೋಪ ಹೊರಿಸುವ ಸಾಧ್ಯತೆಯಿದೆ. ಅಧ್ಯಕ್ಷರ ಬೆಂಬಲಿಗರಿಂದ ಅಪಾಯವಾಗುವ ಸಾಧ್ಯತೆ ಇರುವ ಕಾರಣ ಪೊಲೀಸ್‌ ಭದ್ರತೆ ಕೊಡಬೇಕು ಶಿವಮೊಗ್ಗ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಕೋರಿಕೊಂಡಿರುವುದು ವರದಿಯಾಗಿದೆ. ತಮಗೆ ಭದ್ರತೆ ಕೊಡುವಂತೆ ಚಾಮರಾಜಪೇಟೆಯ ವಿಶ್ವೇಶ್ವರಪುರ ಪೊಲೀಸ್‌ ಠಾಣಾಧಿಕಾರಿಗೂ ಅವರು ವಿನಂತಿಸಿದ್ದಾರೆ.

ಕಮಿಷನರ್ ಗೆ ಮನವಿ 1

ಈ ಬಗ್ಗೆ ಈ ದಿನ.ಕಾಮ್‌ ಜೊತೆ ಮಾತನಾಡಿದ ಡಿ ಮಂಜುನಾಥ್‌ ಕಸಾಪ ಅಧ್ಯಕ್ಷರ ಕಾರ್ಯವೈಖರಿ, ನಡವಳಿಗೆ, ಜಿಲ್ಲಾ ಕಸಾಪಗಳ ಕಾರ್ಯಕ್ರಮಗಳಿಗೆ ಅಸಹಾಕಾರ, ಸದಸ್ಯತ್ವ ಅಮಾನತುಗೊಳಿಸುವ ಬೆದರಿಕೆ, ಅನುದಾನ ಕೊಡದಿರುವ ಬಗ್ಗೆ ವಿವರವಾಗಿ ಮಾತನಾಡಿದರು.

“ನಮ್ಮ ಸಮಸ್ಯೆ ಕೇಳಲ್ಲ, ನಮಗೆ ಯಾವುದೇ ಸಹಾಯ ಮಾಡುವ ಮನಸ್ಥಿತಿ ಇಲ್ಲ. ಮೂರೂವರೆ ವರ್ಷದಲ್ಲಿ ನಾಲ್ಕು ಜಿಲ್ಲಾ ಸಮ್ಮೇಳನ ಅದ್ದೂರಿಯಲ್ಲಿ ಮಾಡಿದ್ದೇವೆ. ಮೂರು ನಾಲ್ಕು ಜಿಲ್ಲೆಗಳಲ್ಲಿ ಮಾತ್ರ ಸಮ್ಮೇಳನಗಳು ಆಗಿವೆ. ಬೇರೆಲ್ಲೂ ಆಗಿಲ್ಲ. ನಾವು ಮಾತಿಗೆ ನಿಂತರೆ ಸಾಕು ಸಭೆಗೆ ಅಡ್ಡಿಪಡಿಸುತ್ತೇವೆ ಅಂತಾರೆ. ನಾವು ಎಲ್ಲಿ ಮಾತಾಡಬೇಕು? ಪರಿಷತ್ತಿನ ವಿಷಯ ಪರಿಷತ್ತಿನ ಸಭೆಯಲ್ಲಿಯೇ ಮಾತಾಡಬೇಕು. ಏಯ್‌ ಕೂತ್ಕೊಳ್ರಿ ಅಂತ ಅವಮಾನಿಸ್ತಾರೆ. ಮೊದಲ ಬಾರಿಗೆ ಬೈಲಾ ತಿದ್ದುಪಡಿ ಮಾಡಿದಾಗಲೇ ನಾವು ಮುವ್ವತ್ತೊಂದು ಮಂದಿ ಜಿಲ್ಲಾ ಅಧ್ಯಕ್ಷರು ಸಹಿ ಮಾಡಿ ಕೊಟ್ಟಿದ್ದೆವು. ಅದು ಚರ್ಚೆಗೆ ಬರಲೇ ಇಲ್ಲ, ಅವರಿಗೆ ಅದು ಮುಖ್ಯವಾಗಲೇ ಇಲ್ಲ. ಆ ನಂತರ ಮೀಟಿಂಗ್‌ನಲ್ಲಿ ನಾನು ಮತ್ತು ಬೆಂಗಳೂರು ನಗರ ಜಿಲ್ಲಾ ಅಧ್ಯಕ್ಷ ಪ್ರಕಾಶ್‌ ಮೂರ್ತಿ ಇಬ್ಬರು ಮಾತಾಡುವಂಗಿಲ್ಲ ಅಂತಾರೆ. ಮಾರ್ಚ್‌ ಇಪ್ಪತ್ತೊಂದು ಆಯ್ತು, ಸರ್ಕಾರ ಹಣ ಕೊಟ್ಟರೂ ನೀವು ನಮಗೆ ಯಾಕೆ ಹಣ ಬಿಡುಗಡೆ ಮಾಡಿಲ್ಲ? ಜಿಲ್ಲಾ ತಾಲ್ಲೂಕು ಸಮ್ಮೇಳನ ಮಾಡಿದ್ದೇವೆ. ಅವರೆಲ್ಲ ಕೇಳ್ತಾರೆ. ನಾವೇನು ಹೇಳಬೇಕು ಎಂದು ಮೀಟಿಂಗ್‌ನಲ್ಲಿ ಕೇಳಿದ್ರೆ “ಸುಮ್ನೆ ಕೂತ್ಕೊಳ್ರಿ” ಅಂತ ಅವಮಾನಿಸ್ತಾರೆ.

ಅವರಿಗೆ ಬೈಲಾ ತಿದ್ದುಪಡಿ ಬಗ್ಗೆ ಮಾತ್ರ ಗಮನ, ಪರಿಷತ್ತಿನ ಚಟುವಟಿಕೆಗೆ ನಡೆಸುವ ಬಗ್ಗೆ ಗಮನವೇ ಇಲ್ಲ, ಮೊದಲ ವರ್ಷ ರಾಜ್ಯೋತ್ಸವ, ಸಂಸ್ಥಾಪನಾ ದಿನಾಚರಣೆಗೆ ಅನುದಾನ ಕೊಟ್ಟು ನಂತರ ಕೊಟ್ಟಿಲ್ಲ. ಸರ್ಕಾರ ಪ್ರತಿ ತಾಲ್ಲೂಕು ಸಮ್ಮೇಳನಕ್ಕೆ ಒಂದು ಲಕ್ಷ ರೂ. ಅನುದಾನ ಕೊಡುತ್ತದೆ. ಅದನ್ನು ಇವರು ಕೊಡುತ್ತಿಲ್ಲ. ಸರ್ಕಾರ ಕೊಟ್ಟ ಹಣ ಯಾಕೆ ಕೊಡ್ತಿಲ್ಲ ಎಂದು ಕೇಳಿದ್ರೆ ನೋಟಿಸ್‌ ಕೊಡೋದು, ಪ್ರಾಥಮಿಕ ಸದಸ್ಯತ್ವದಿಂದ ವಜಾ ಮಾಡುತ್ತೇವೆ ಅಂತ ಬೆದರಿಕೆ ಹಾಕ್ತಾರೆ. ನಾವು ಮಾತಾಡಿದ ವಿಚಾರ ರೆಕಾರ್ಡ್‌ ಮಾಡಲ್ಲ. ಸಭೆಗೆ ಅಡ್ಡಿಪಡಿಸಿದರು ಎಂದು ಸಭೆಯ ನಡಾವಳಿಯಲ್ಲಿ ಬರೆಸುತ್ತಾರೆ.

21 ನಾಮನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕು ಕೊಟ್ಟಿದ್ದಾರೆ. ಇಂದು ಅಂತಹ ನಾಮನಿರ್ದೇಶಿತ ಸದಸ್ಯರ ಜೊತೆ ಮತ್ತು ಆಯ್ದ ಕೆಲವು ಜಿಲ್ಲಾಧ್ಯಕ್ಷರನ್ನು ಕರೆದು ಸಭೆ ಮಾಡಿದ್ದಾರೆ. ನಾಳೆ ಕಾರ್ಯಕಾರಿ ಸಮಿತಿ ಸಭೆಯ ಅಜೆಂಡಾ “ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಚರ್ಚಿಸಲು” ಎಂದು ಇದೆ. ಆದರೆ, ನಮಗೆ ಸಭೆಯಲ್ಲಿ ಮಾತನಾಡಲು ಅವಕಾಶ ನೀಡುತ್ತಿಲ್ಲ. ಹಾಗಾಗಿ ನಾಳಿನ ಸಭೆಯಲ್ಲಿ ಮಾತನಾಡಬೇಕಿರುವ ವಿಚಾರದ ಬಗ್ಗೆ ಟಿಪ್ಪಣಿ ಬರೆದು ಸಹಕಾರಿ ಸಂಘಗಳ ನಿಬಂಧಕರಿಗೆ ಕಳಿಸಿದ್ದೇವೆ. ಕಮಿಷನರ್‌ ಭೇಟಿ ಮಾಡಿ ನಮಗೆ ಸೂಕ್ತ ಭದ್ರತೆ ಕೊಡುವಂತೆ ಮನವಿ ಮಾಡಿದ್ದೇವೆ” ಎಂದು ಮಂಜುನಾಥ್‌ ತಿಳಿಸಿದರು.

ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಪ್ರಕಾಶ್‌ ಮೂರ್ತಿ ಮಾತನಾಡಿ, “ನಾಳೆ ನಡೆಯುವ ಸಭೆಯಲ್ಲಿ ಒಂದಷ್ಟು ಒಳ್ಳೆಯ ಬೆಳವಣಿಗೆ, ಅವರ ಧೋರಣೆ ಬದಲಿಸಿಕೊಳ್ಳುವ ಸಾಧ್ಯತೆ ಇದ್ದರೆ ನಾವು ಸ್ವಲ್ಪ ತಾಳ್ಮೆ ವಹಿಸುತ್ತೇವೆ. ನಾಳೆ ಪೂರ್ಣ ಪ್ರಮಾಣದ ಕಾರ್ಯಕಾರಿ ಸಮಿತಿ ಸಭೆ ಇದೆ, ಆದರೆ ಇಂದು ನಾಮನಿರ್ದೇಶಿತರ ಸಭೆ, ಕೆಲವು ಚುನಾಯಿತ ಜಿಲ್ಲಾಧ್ಯಕ್ಷರ ಸಭೆ ನಡೆಸಲಾಗುತ್ತಿದೆ. ನಾಳೆಯ ಸಭೆಯಲ್ಲಿ ಮಾತನಾಡಲು ಬಿಡುತ್ತಾರೆ ಎಂಬ ಯಾವ ಭರವಸೆಯೂ ನಮಗಿಲ್ಲ. ನಮ್ಮ ಮೇಲೆ ಉಳಿದ ಕಾರ್ಯಕಾರಿ ಸಮಿತಿಯವರನ್ನು ಎತ್ತಿಕಟ್ಟುವ ಅಪಾಯವಿದೆ. ಅದಕ್ಕಾಗಿ ನಾವು ಮುಂಚಿತವಾಗಿ ನಾಳಿನ ಸಭೆಯ ಪ್ರಶ್ನೆಗಳನ್ನು ಲಿಖಿತ ಮೂಲಕ ಅಧ್ಯಕ್ಷರು ಮತ್ತು ನಿಬಂಧಕರಿಗೆ ಕಳಿಸಿದ್ದೇವೆ. ಉತ್ತರ ಕೊಡಲು ನಿಬಂಧಕರು ಅಧ್ಯಕ್ಷರಿಗೆ ಆದೇಶಿಸಿದ್ದಾರೆ. ಅವರಿಂದ ಉತ್ತರ ಬಂದಿಲ್ಲ. ಈಗಾಗಲೇ ಹಲವು ಪತ್ರಗಳಿಗೆ ಉತ್ತರಿಸಿಲ್ಲ. ಈಗ ಉತ್ತರ ಕೊಡಲೇ ಬೇಕು.

ಪ್ರಕಾಶ್ ಪತ್ರ ೧

ಕಸಾಪದ ಆರ್ಥಿಕ ಅಶಿಸ್ತು, ನಿಯಮಬಾಹಿರ ಸಭೆಗಳು, ಒಡೆದಾಳುವ ನೀತಿ, ಕಸಾಪದ ಸ್ಥಾಪನೆಯ ಹಿಂದಿನ ದ್ಯೇಯೋದ್ದೇಶ ಏನಿದ್ದವೋ ಅದರ ವಿರುದ್ಧವಾಗಿ ಪ್ರಶ್ನಿಸಿದವರ ತೇಜೋವಧೆ ಮಾಡುವ ಕೆಲಸ ನಡೆಯುತ್ತಿದೆ. ಬೆದರಿಕೆಯ ನೋಟಿಸ್‌ ಕಳಿಸುವುದು, ಸದಸ್ಯತ್ವ ಅಮಾನತು ಮಾಡುವ ಬೆದರಿಕೆ ಹಾಕುವುದು ಅಷ್ಟೇ ನಡೆಯುತ್ತಿದೆ. ಸಮ್ಮೇಳನ, ದತ್ತಿ ಪ್ರಶಸ್ತಿ ಅಷ್ಟೇ ಮಾಡಲಾಗುತ್ತಿದೆ. ಯಾವುದೇ ಸೃಜನಶೀಲ ಕಾರ್ಯಕ್ರಮ, ಕಮ್ಮಟಗಳು, ವಿಭಾಗೀಯ ಸಮ್ಮೇಳನ, ಪ್ರಸ್ತುತ ವಿದ್ಯಮಾನ ಕುರಿತ ಚರ್ಚೆ ಇವ್ಯಾವುದೂ ಮಾಡುತ್ತಿಲ್ಲ. ಕನ್ನಡೀಕರಣದ ಬದಲು ನವೀಕರಣ, ಕಟ್ಟಡೀಕರಣ ಮಾಡೋದು ಅಷ್ಟೇ. ಉತ್ತಮ ಕೆಲಸ ಮಾಡುವವರಿಗೆ ತೊಂದರೆ ಕೊಡುವುದು, ಸಭಾಂಗಣ ಕೊಡದಿರುವುದು ಹೀಗೆ ನಾನಾ ಕಿರುಕುಳ. ಜೋಶಿ ಅಧ್ಯಕ್ಷರಾದ ನಂತರ ಕಸಾಪದ ಸಿಬ್ಬಂದಿ ನೇಮಕದಲ್ಲಿ ಸ್ವಜನ ಪಕ್ಷಪಾತ ಮಾಡಿದ್ದಾರೆ. ಕಸಾಪದಲ್ಲಿ ಹಲವು ವರ್ಷಗಳಿಂದ ದುಡಿದ ಸಿಬ್ಬಂದಿಯನ್ನು ಕೆಲಸ ಬಿಡುವಂತೆ ಮಾಡಿ, ತಮಗೆ ಚುನಾವಣೆಯ ಸಮಯದಲ್ಲಿ ಇವರ ಪರವಾಗಿ ಟೆಲಿಕಾಲ್‌ ಮೂಲಕ ಮತಯಾಚನೆ ಮಾಡಿದವರು, ಪತ್ರ ಬರೆದವರನ್ನು ನೇಮಕ ಮಾಡಿಕೊಂಡಿದ್ದಾರೆ. ವಿರೋಧ ವ್ಯಕ್ತಪಡಿಸಿದವರಿಗೆ “ನಿಮಗೆ ಯೋಗ್ಯತೆ ಇದ್ದರೆ ಚುನಾವಣೆ ಎದುರಿಸಿ ನಿಮ್ಮ ಸಿದ್ಧಾಂತ ಸಾಬೀತುಪಡಿಸಿ” ಎಂದು ಹೇಳಿಕೆಕೊಡುತ್ತಾರೆ. ರಾಜ್ಯಾಧ್ಯಕ್ಷ, ಜಿಲ್ಲಾಧ್ಯಕ್ಷರಾದವರು ತಮ್ಮ ಸಿದ್ಧಾಂತ ಸ್ಥಾಪಿಸುವುದಲ್ಲ. ಕನ್ನಡದ ಸಿದ್ದಾಂತ ಸ್ಥಾಪಿಸಬೇಕು. ತಾನು ಬಲಪಂಥೀಯ ಅಲ್ಲ, ಎಡಪಂಥೀಯ ಅಲ್ಲ, ಕನ್ನಡ ಪಂಥೀಯ ಎಂದು ಹೇಳುತ್ತಾರೆ. ಬಾಯಲ್ಲಿ ಮಂತ್ರ ಕೈಯಲ್ಲಿ ದೊಣ್ಣೆ ಇದು ಅಧ್ಯಕ್ಷರ ನಡವಳಿಕೆ” ಎಂದರು.

ಹಂಪನಾ ವಿರುದ್ಧ ಸಿ ಎಂಗೆ 27 ಪುಟಗಳ ಪತ್ರ ಬರೆದ ಜೋಶಿ

ಕಸಾಪಕ್ಕೆ ಆಡಳಿತಾಧಿಕಾರಿ ನೇಮಿಸಬೇಕು ಎಂದು ಮನವಿ ಕೊಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾದ ನಿಯೋಗದಲ್ಲಿ ಹಿರಿಯ ಸಾಹಿತಿ ಡಾ ಹಂ.ಪ. ನಾಗರಾಜಯ್ಯ ಇದ್ದ ಕಾರಣಕ್ಕೆ ಅವರ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಸಾಪ ಅಧ್ಯಕ್ಷ ಮಹೇಶ್‌ ಜೋಶಿ 27 ಪುಟಗಳ ಪತ್ರ ಬರೆದು ನಲುವತ್ತು ವರ್ಷಗಳ ಹಿಂದೆ ಕಸಾಪ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ನಡೆದ ಅವ್ಯವಹಾರ ಸಂಬಂಧ ಹಂಪನಾ ವಿರುದ್ಧ ಆಯೋಗ ನೀಡಿದ್ದ ವರದಿ, ವಿಚಾರಣೆಯ ವಿಚಾರವನ್ನು ಎಳೆದು ತಂದು ಅವಮಾನಿಸುವ ಕೆಲಸ ಮಾಡಿದ್ದಾರೆ. ನ್ಯಾಯಮೂರ್ತಿ ಪಿ ಕೆ ಶ್ಯಾಮಸುಂದರ ಆಯೋಗ ಹಂಪನಾ ಅವರನ್ನು ತಪ್ಪಿತಸ್ಥ ಎಂದು ಹೇಳಿದೆ ಎಂದು ಹೇಳುತ್ತಾ ಅವರ ತೇಜೋವಧೆ ಮಾಡಿದ್ದಾರೆ.

ಪತ್ರ ೧

ಜೋಶಿ ಬರೆದ ಪತ್ರದ ಈ ಸಾಲುಗಳನ್ನು ಓದಿದರೆ ಅವರ ಉದ್ದೇಶ ಏನೆಂಬುದು ಸ್ಪಷ್ಟವಾಗುತ್ತದೆ. “ನ್ಯಾ. ಪಿ ಕೆ ಶ್ಯಾಮಸುಂದರ ಅವರ ವರದಿಯ ಹಿನ್ನಲೆಯಲ್ಲಿ ಹಿಂದಿನ ಸರ್ಕಾರಗಳು ಅವರನ್ನು ವಿವಿಗಳ ಕುಲಪತಿಯನ್ನಾಗಲಿ, ವಿಧಾನಪರಿಷತ್ತಿನ ಸದಸ್ಯ ಸೇರಿದಂತೆ ಯಾವುದೇ ಸ್ಥಾನಮಾನ ದೊರಕಲಿಲ್ಲ ಎಂಬುದನ್ನು ಸ್ವತಃ ಅವರೇ ತಿಳಿಸಿದ್ದಾರೆ. ಇದಲ್ಲದೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿಯೂ ಇಲ್ಲಿಯವರೆಗೆ ಆಯ್ಕೆಯಾಗದಿರುವುದಕ್ಕೆ ಈ ವರದಿಯೇ ಕಾರಣ. ಮುಂದೆಯೂ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ವರದಿ ಅಡ್ಡಿ ಬರುತ್ತದೆ. ಹೀಗಿದ್ದೂ ಹಂಪನಾ ಅವರು ಸಾಹಿತ್ಯಕ ಮತ್ತು ಸಾಂಸ್ಕೃತಿಕ ಕ್ಷೇತ್ರದಿಂದ ಮೇಲ್ಮನೆಗೆ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಲು ಸರ್ಕಾರವನ್ನು ಒತ್ತಾಯಿಸಿರುವುದು, ರಾಷ್ಟ್ರಕವಿ ಕುವೆಂಪು ಪುರಸ್ಕಾರ ಮತ್ತು ಭಾರತ ಸರ್ಕಾರದ ಪದ್ಮ ಪುರಸ್ಕಾರಕ್ಕೆ ತಮ್ಮನ್ನು ಸರ್ಕಾರ ಶಿಫಾರಸು ಮಾಡುವಂತೆ ಕೇಳುತ್ತಿರುವುದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ” ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇದರ ಉದ್ದೇಶ ಹಂಪನಾ ಅವರಿಗೆ ನೋಯಿಸುವುದು ಬಿಟ್ಟರೆ ಬೇರೇನೂ ಅಲ್ಲ.

ಪತ್ರ ೨

ಸಿ ಎಂ ಗೆ ಬರೆದ ಪತ್ರದಲ್ಲಿ, “ನ್ಯಾ ಪಿ ಕೆ ಶ್ಯಾಮಸುಂದರ ಆಯೋಗದ ವರದಿಯನ್ನು ಕಸಾಪದಿಂದ ಪ್ರಕಟಿಸಲಿದ್ದೇವೆ. ಕರ್ನಾಟಕ ಮಾತ್ರವಲ್ಲ ವಿದೇಶದಿಂದಲೂ ಕನ್ನಡಿಗರು ಈ ವರದಿಯನ್ನು ಮುದ್ರಿಸಲು ಒತ್ತಾಯಿಸುತ್ತಿದ್ದಾರೆ” ಎಂದು ಬರೆದಿದ್ದಾರೆ. ಇದೇ ಮಹೇಶ್‌ ಜೋಶಿ ಅವರು ಸರ್ಕಾರಿ ವೃತ್ತಿಯಲ್ಲಿದ್ದಾಗಲೂ ತಮ್ಮ ವಿರುದ್ಧ ಮಾತನಾಡಿದವರ ತೇಜೋವಧೆ ಮಾಡುವ, ಅಪಪ್ರಚಾರ ಮಾಡುತ್ತಿದ್ದ ಬಗ್ಗೆ ಆರೋಪಗಳಿವೆ. ಈಗಲೂ ಅಷ್ಟು ದೊಡ್ಡ ಕನ್ನಡದ ಪ್ರಾಥಮಿಕ ಸಂಸ್ಥೆಯ ಅಧ್ಯಕ್ಷರಾಗಿದ್ದರೂ ಆ ಚಾಳಿಯನ್ನು ಬಿಟ್ಟಿಲ್ಲ ಎಂಬುದಕ್ಕೆ ಕಸಾಪದ ಜಿಲ್ಲಾಧ್ಯಕ್ಷರ ಹೇಳಿಕೆಗಳು ಮತ್ತು ಸಿ ಎಂಗೆ ಬರೆದ ಪತ್ರದಲ್ಲಿ ಮಾಡಿರುವ ಆರೋಪಗಳು ಹಂಪನಾ ಅವರ ವೈಯಕ್ತಿಕ ತೇಜೋವಧೆಯ ಪ್ರಯತ್ನಕ್ಕೆ ಸಾಕ್ಷಿಯಾಗಿದೆ.

ಈ ಬಗ್ಗೆ ಹಂಪನಾ ಅವರು ಅಭಿಪ್ರಾಯ ನೀಡಲು ನಿರಾಕರಿಸಿದರು. ಸ್ವಲ್ಪ ದಿನ ಈ ಬಗ್ಗೆ ಮೌನವಾಗಿರುವಂತೆ ಆಪ್ತರು ಸಲಹೆ ಕೊಟ್ಟಿದ್ದಾರೆ ಎಂದು ಈ ದಿನಕ್ಕೆ ತಿಳಿಸಿದರು.

ಸರ್ಕಾರದಿಂದ ಆಡಳಿತಾಧಿಕಾರಿ ನೇಮಕ?
ಕಸಾಪ ಅಧ್ಯಕ್ಷರನ್ನು ವಜಾ ಮಾಡಿ ಆಡಳಿತಾಧಿಕಾರಿ ನೇಮಕ ಮಾಡಬೇಕು ಎಂಬ ಸಾಹಿತ್ಯಾಸಕ್ತರ ಬೇಡಿಕೆಗೆ ಸರ್ಕಾರ ಸ್ಪಂದಿಸಿದೆ. ಆಡಳಿತಾಧಿಕಾರಿ ನೇಮಿಸುವ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಾಸಿಟಿವ್‌ ಆಗಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ ಬೈಲಾ ತಿದ್ದುಪಡಿ ಮೂಲಕ ಸಾರ್ವಭೌಮತ್ವಕ್ಕೆ ಕೈ ಹಾಕಿದ ಜೋಶಿ; ಕಸಾಪ ಉಳಿಸಿ ಹೋರಾಟಕ್ಕೆ ಸಿದ್ಧತೆ
ಇದನ್ನೂ ಓದಿ ಈ ದಿನ ಸಂಪಾದಕೀಯ | ʼಕಸಾಪ ಉಳಿಸಿʼ ಹೋರಾಟಕ್ಕೆ ಕನ್ನಡಿಗರೆಲ್ಲರೂ ಕೈಜೋಡಿಸಬೇಕಿದೆ

07e0d3e8 3f8a 4b81 8fd5 641335b91d85
ಹೇಮಾ ವೆಂಕಟ್‌
+ posts

ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು.
ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ.
ಮೂರು ಪುಸ್ತಕಗಳು ಪ್ರಕಟಗೊಂಡಿವೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಹೇಮಾ ವೆಂಕಟ್‌
ಹೇಮಾ ವೆಂಕಟ್‌
ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು. ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ. ಮೂರು ಪುಸ್ತಕಗಳು ಪ್ರಕಟಗೊಂಡಿವೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

Download Eedina App Android / iOS

X