ಯುದ್ಧ ನಿಲ್ಲಿಸಿದ್ದು ನಾನು ಎಂದಿದ್ದಾರೆ ಟ್ರಂಪ್. ಆದರೂ ಪ್ರಧಾನಿ ನಿನ್ನೆಯ ತಮ್ಮ 8 ಗಂಟೆಯ ಭಾಷಣದಲ್ಲಿ ಅದನ್ನು ಖಂಡಿಸಿಲ್ಲ, ಸಮಜಾಯಿಷಿ ಕೊಟ್ಟಿಲ್ಲ ಅಥವಾ ಪೆಹಲ್ಗಾಮ್ - ಪುಲ್ವಾಮಾದ ಯಾವುದೇ ಪ್ರಶ್ನೆಗಳಿಗೂ ಉತ್ತರಿಸಿಲ್ಲ. ಜವಾಬ್ದಾರಿಯನ್ನೂ ಹೊತ್ತುಕೊಂಡಿಲ್ಲ.
ಸದ್ಯ, ಭಾರತ ಮತ್ತು ಪಾಕಿಸ್ತಾನ ನಡುವೆ ಭುಗಿಲೆದ್ದಿದ್ದ ಉದ್ವಿಗ್ನತೆ, ಸಂಘರ್ಷದ ವಾತಾವರಣ, ಯುದ್ಧದ ಆತಂಕ ಮೂಲೆಗೆ ಸರಿದಿದೆ. ಉಭಯ ರಾಷ್ಟ್ರಗಳು ಕದನ ವಿರಾಮಕ್ಕೆ ಒಪ್ಪಿಕೊಂಡಿವೆ. ಎರಡೂ ರಾಷ್ಟ್ರಗಳ ನಡುವೆ ಕದನ ವಿರಾಮ ಘೋಷಿಸುವಲ್ಲಿ ತಮ್ಮದೇ ಪ್ರಮುಖ ಪಾತ್ರವೆಂದು ಅಮೆರಿಕ ಅಧ್ಯಕ್ಷ ಟ್ರಂಪ್ ಹೇಳಿಕೊಂಡಿದ್ದಾರೆ. ಈ ವಿಚಾರವಾಗಿ ಪ್ರಧಾನಿ ಮೋದಿ ಮೌನ ತಾಳಿದ್ದಾರೆ. ಟ್ರಂಪ್ ಮಾತು ಕೇಳಿ ಮೋದಿ ಕದನ ವಿರಾಮ ಘೋಷಿಸಿದ್ದಾರೆ ಎಂದು ಸ್ವತಃ ಬಿಜೆಪಿಗರೇ ಅಸಮಾಧಾನಗೊಂಡಿದ್ದಾರೆ.
ಅದರಲ್ಲೂ, ಮೋದಿ ಕುರಿತು ಪುಂಖಾನುಪುಂಖವಾಗಿ ಪುಂಗುವ ಹೆಂಗ್‌ಪುಂಗ್ಲೀ ಖ್ಯಾತಿಯ ಚಕ್ರವರ್ತಿ ಸೂಲಿಬೆಲೆ ಅವರು, ಭಾರತ ಸರ್ಕಾರ ಆಪರೇಷನ್ ಸಿಂಧೂರ-2.0 ಶುರು ಮಾಡಿದೆ. ಪಾಕಿಸ್ತಾನ ಛಿದ್ರವಾಗುತ್ತದೆ. ಇನ್ನು, ಪಾಕಿಸ್ತಾನ ಇರುವುದೇ ಇಲ್ಲ, ಬಲೂಚಿಸ್ತಾನ ಸೇರಿದಂತೆ ಹಲವು ರಾಜ್ಯಗಳು ಸ್ವತಂತ್ರ ರಾಷ್ಟ್ರಗಳಾಗುತ್ತವೆ. ಉಳಿದಷ್ಟು ಸ್ತಾನ ಮಾತ್ರವೇ ಪಾಕಿಸ್ತಾನವಾಗಿ ಉಳಿಯುತ್ತದೆ ಎಂದೆಲ್ಲ ಪುಂಗಿದ್ದರು.
ಮೋದಿ ಸರ್ಕಾರ ಕೂಡ ಭಾರತೀಯ ಸೇನೆಗೆ ಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದೇವೆ. ದಾಳಿ ಪ್ರತಿದಾಳಿ ಇದ್ದೇ ಇರುತ್ತದೆ ಎಂದಿತ್ತು. ದೇಶಾದ್ಯಂತ ಸೇನೆಗಳ ತಾಲೀಮು ಶುರುವಾಗಿತ್ತು. ಯುದ್ಧ ನಡೆದೇಬಿಡುತ್ತದೆ ಎಂಬಂತಹ ವಾತಾವರಣವನ್ನು ಕೇಂದ್ರ ಸರ್ಕಾರ ಸೃಷ್ಟಿಸಿತ್ತು. ಆದರೆ, ಈಗ ಮೋದಿ ಅವರು ‘ಸೀಸ್‌ಫೈಯರ್’ಗೆ ಒಪ್ಪಿಕೊಂಡಿದ್ದಾರೆ. ಕದನ ವಿರಾಮ ಘೋಷಣೆಯಾಗಿದೆ.
ಅಲ್ಲದೆ, ಸೋಮವಾರ ರಾತ್ರಿ 8 ಗಂಟೆಗೆ ಮೋದಿ ಅವರು ‘ಆಪರೇಷನ್ ಸಿಂಧೂರ’ನಿಂದ ಪಾಠ ಕಲಿತ ಪಾಕಿಸ್ತಾನ ಇಂದು ಶಾಂತಿಮಂತ್ರ ಜಪಿಸುತ್ತಿದೆ. ಆದರೆ, ನಾವು ಅದಕ್ಕೆ ಸೊಪ್ಪ ಹಾಕುವುದಿಲ್ಲ. ಅವರು ಭಯೋತ್ಪಾದನೆಯನ್ನು ಬಿಟ್ಟರಷ್ಟೇ ಮಾತುಕತೆಗಳು ಸಾಗುತ್ತವೆ. ನೀರು ಮತ್ತು ರಕ್ತ ಒಟ್ಟಿಗೇ ಹರಿಸಲಾಗದು. ಇನ್ನೊಮ್ಮೆ ನಮಗೆ ತೊಂದರೆ ಕೊಟ್ಟರೆ ಪಾಕಿಸ್ತಾನದ ಒಳಗೆ ನುಗ್ಗಿ ಹೊಡೆಯುತ್ತೇವೆ ಎಂದು ಹೇಳಿದ್ದಾರೆ.
ಅದರೆ, ಇಂತಹ ಮಾತನ್ನು ಹೇಳುವಾಗ ಮೋದಿ ಅವರಲ್ಲಿ ಈ ಹಿಂದೆ, ಅವರ ಭಾಷಣಗಳ ವೇಳೆ ಇರುತ್ತಿದ್ದ ದೃಢತೆ, ದಿಟ್ಟತೆ ಎರಡೂ ಇರಲಿಲ್ಲವೆಂಬುದನ್ನು ಇಡೀ ದೇಶದ ಜನತೆ ಗಮನಿಸಿದ್ದಾರೆ. ಮೋದಿ ಕೊಂಚ ಕಳೆಗುಂದಿದ್ದಾರೆ ಎಂದು ಹೇಳುತ್ತಿದ್ದಾರೆ. ಇನ್ನು, ಪಾಕಿಸ್ತಾನದ ಹುಟ್ಟಡಗಿಸುತ್ತೇವೆಂದು ಅಬ್ಬರಿಸುತ್ತಿದ್ದ ಬಿಜೆಪಿಗರು ಈಗ ಅಸಮಾಧಾನಗೊಂಡಿದ್ದಾರೆ. ಮೋದಿ ವಿರುದ್ಧವೇ ಕಿಡಿಕಾರುತ್ತಿದ್ದಾರೆ.
ಅಂದಹಾಗೆ, ಪ್ರಧಾನಿ ಮೋದಿ ಅವರು ರಾತ್ರಿ 8 ಗಂಟೆ ಸಮಯದಲ್ಲಿ ಲೈವ್ ಬಂದು ಅಬ್ಬರದ ಭಾಷಣ, ಸಿನಿಮಾ ಡೈಲಾಗ್ ರೀತಿಯ ಖಡಕ್ ಸಂದೇಶ ನೀಡುವುದು ಇದೇ ಮೊದಲೇನೂ ಅಲ್ಲ. ಹಲವು ಬಾರಿ, ರಾತ್ರಿ 8 ಗಂಟೆಗೆ ನಿಗದಿತವಾಗಿ ಮಾಡಿದ ಹಲವು ಘೋಷಣೆಗಳು, ನಡೆಸಿದ ಚಟುವಟಿಕೆಗಳು ವಿಫಲವಾಗಿವೆ.
ಅದರಲ್ಲಿ, ಮೊದಲನೆಯದ್ದು ನೋಟು ಅಮಾನ್ಯೀಕರಣ
2016ರ ನವೆಂಬರ್ 8ರಂದು ರಾತ್ರಿ 8 ಗಂಟೆಗೆ ಟಿ.ವಿಯಲ್ಲಿ ಲೈವ್ ಬಂದ ಪ್ರಧಾನಿ ಮೋದಿ ಅವರು ನೋಟು ಅಮಾನ್ಯೀಕರಣವನ್ನು ಘೋಷಿಸಿದರು. 1,000 ರೂ. ಮುಖಬೆಲೆಯ ನೋಟುಗಳ ರದ್ದತಿ ಮತ್ತು 500 ರೂ. ಮುಖಬೆಲೆಯ ನೋಟುಗಳ ಬದಲಾವಣೆಯಿಂದ ಕಪ್ಪು ಹಣ ಹೊರಬರುತ್ತದೆ ಮತ್ತು ಭಯೋತ್ಪಾದನೆ ಸಂಪೂರ್ಣವಾಗಿ ಕೊನೆಗೊಳ್ಳುತ್ತದೆ ಎಂದು ಅಬ್ಬರಿಸಿದರು.
ಆದರೆ, ಆಗಿದ್ದೇನು? ಕಪ್ಪು ಹಣ ಹೊರಬರಲಿಲ್ಲ. ಭಯೋತ್ಪಾದನೆಯಂತೂ ಕಿಂಚಿತ್ತೂ ಕಡಿಮೆಯಾಗಲಿಲ್ಲ. ಬದಲಾಗಿ, ಇನ್ನೂ ಹೆಚ್ಚಾಯಿತು. ಅದಕ್ಕೆ ಪುಷ್ಟಿ ನೀಡುವಂತೆ ಇತ್ತೀಚಿನ ‘ಪಹಲ್ಗಾಮ್ ದಾಳಿ’ಯು ನಮ್ಮ ಕಣ್ಣೆದುರಿಗಿದೆ. ಅಲ್ಲದೆ, ನೋಟು ಅಮಾನ್ಯೀಕರಣದಿಂದ ಜನಸಾಮಾನ್ಯರ ಆರ್ಥಿಕ ಬಿಕ್ಕಟ್ಟು ಹೆಚ್ಚಾಯಿತು. ನೋಟು ಬದಲಾವಣೆಗಾಗಿ ಬ್ಯಾಂಕುಗಳ ಎದುರು ಸರತಿ ಸಾಲಿನಲ್ಲಿ ನಿಂತು ಹಲವರು ತಮ್ಮ ಪ್ರಾಣವನ್ನೇ ಕಳೆದುಕೊಂಡರು.
ಎರಡನೆಯದು, ಕೊರೋನ ವಿರುದ್ಧ ತಟ್ಟೆ-ಲೋಟ-ಗಂಟೆ ಬಾರಿಸಿದ್ದು
2020ರ ಮಾರ್ಚ್ 19ರ ರಾತ್ರಿ 8 ಗಂಟೆಗೆ ಮತ್ತೆ ಲೈವ್ ಬಂದ ಪ್ರಧಾನಿ ಮೋದಿ, ಕೋವಿಡ್ ವಿರುದ್ಧ ಹೋರಾಟದ ಭಾಗವಾಗಿ ಮಾರ್ಚ್ 22ರಂದು ಸಂಜೆ ದೇಶದ ಪ್ರತಿಯೊಬ್ಬರು ತಮ್ಮ ಮನೆಯ ಬಾಲ್ಕನಿಯಲ್ಲಿ ನಿಂತು 5 ನಿಮಿಷ ತಟ್ಟೆ, ಗಂಟೆ, ಶಂಖ ಬಾರಿಸಬೇಕು. ಚಪ್ಪಾಳೆ ತಟ್ಟಬೇಕು. ಇದರಿಂದ ಕೊರೋನ ವೈರಸ್ ಓಡಿಹೋಗುತ್ತದೆ ಎಂದು ಕರೆಕೊಟ್ಟರು. ಅವರ ಮಾತು ಕೇಳಿ, ದೇಶದ ಬಹುಸಂಖ್ಯಾತರು ಮಾರ್ಚ್ 22ರಂದು ತಮ್ಮ ಮನೆಗಳ ಹೊರಗೆ ನಿಂತು ತಟ್ಟೆ, ಲೋಟ, ಗಂಟೆ ಬಾರಿಸಿದರು.
ಇದರಿಂದ ಕೊರೋನ ಓಡಿಹೋಗಲಿಲ್ಲ. ಬದಲಾಗಿ, 2021ರಲ್ಲಿ ಕೋವಿಡ್ 2ನೇ ಅಲೆಯಲ್ಲಿ ಕೊರೋನ ವೈರಸ್ ಜನರ ಮಾರಣಹೋಮವನ್ನೇ ನಡೆಸಿತು. ಆಮ್ಲಜನಕ ಕೊರತೆ, ವೆಂಟಿಲೇಟರ್ ಕೊರತೆ, ಬೆಡ್‌ಗಳ ಕೊರತೆಯಿಂದಾಗಿ ಕೊರೋನ ಸೋಂಕಿತರು ಸಾಲು-ಸಾಲಾಗಿ ಮೃತಪಟ್ಟರು. ಕೋವಿಡ್ ಸೋಂಕಿತರ ಮೃತದೇಹಗಳು ಗಂಗಾ ನದಿಯಲ್ಲಿ ತೇಲಿದ ದೃಶ್ಯಗಳು ಕಂಡುಬಂದವು. ಕಳೆದ ವಾರ, ಸರ್ಕಾರವೇ ಬಿಡುಗಡೆ ಮಾಡಿರುವ ಅಂಕಿಅಂಶದ ಪ್ರಕಾರ ಕೋವಿಡ್ ಅವಧಿಯಲ್ಲಿ 21 ಲಕ್ಷ ಮಂದಿ ಸಾವನ್ನಪ್ಪಿದ್ದಾರೆ. ಆದಾಗ್ಯೂ, ಡಬ್ಲ್ಯೂಎಚ್‌ಒ ಪ್ರಕಾರ, ಭಾರತದಲ್ಲಿ 45 ಲಕ್ಷಕ್ಕೂ ಅಧಿಕ ಕೋವಿಡ್ ಸಾವುಗಳ ಸಂಭವಿಸಿವೆ ಎಂದು ಅಂದಾಜಿಸಲಾಗಿದೆ.
3ನೆಯದಾಗಿ ಪ್ರಸ್ತುತ ಸಂದರ್ಭದ್ದು; ಭಯೋತ್ಪಾದನೆಯ ವಿರುದ್ಧದ ಸಮರ
ಸೋಮವಾರ ರಾತ್ರಿ 8 ಗಂಟೆಗೆ ಲೈವ್ ಬಂದ ಪ್ರಧಾನಿ ಮೋದಿ, ಭಯೋತ್ಪಾದನೆ ವಿರುದ್ಧ ಆಪರೇಷನ್ ಸಿಂಧೂರ ಹೊಸ ಘಟ್ಟವನ್ನು ಹುಟ್ಟು ಹಾಕಿದೆ. ಮುಂದೆ ಭಾರತಕ್ಕೆ ಪಾಕಿಸ್ತಾನ ತೊಂದರೆ ಕೊಟ್ಟರೆ ನುಗ್ಗಿ ಹೊಡೆಯುತ್ತೇವೆ ಎಂದಿದ್ದಾರೆ.
ಆದರೆ, ಈ ಹಿಂದೆಯೂ ಇದೇ ರೀತಿ ನುಗ್ಗಿ ಹೊಡೆಯುತ್ತೇವೆ, ಹೊಡೆದಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿಕೊಂಡಿದ್ದರು. ಉರಿ, ಬಾಲಾಕೋಟ್ ದಾಳಿಯ ಸಮಯದಲ್ಲಿ ಒಳನುಗ್ಗಿ ಹೊಡೆದಿದ್ದಾಗಿ ಕೇಂದ್ರ ಸರ್ಕಾರ ಹೇಳಿಕೊಂಡಿತ್ತು. ಆದಾಗ್ಯೂ, ಪುಲ್ವಾಮಾ, ಪಹಲ್ಗಾಮ್ ರೀತಿಯ ದಾಳಿಗಳು ಸಂಭವಿಸುತ್ತಲೇ ಇವೆ. ಜೊತೆಗೆ, ಭಯೋತ್ಪಾದನೆಯು ಪ್ರವಾಸಿಗರನ್ನು ಕೊಲ್ಲುವ ಹೊಸ ಆಯಾಮವನ್ನು ಪಡೆದುಕೊಂಡಿದೆ.
ಈ ವರದಿ ಓದಿದ್ದೀರಾ?: ಬಹುಶಃ ದೊರೆಯ ’56 ಇಂಚು’ ಇದ್ದಕ್ಕಿದ್ದಂತೆ ಕುಗ್ಗಿಹೋಯಿತೇನೋ !
ಪಾಕಿಸ್ತಾನವೇ ಕದನವಿರಾಮಕ್ಕೆ ಗೋಗರೆಯಿತು ಎಂದು ಪ್ರಧಾನಿ ಹೇಳಿದರೂ ಯುದ್ಧವನ್ನು ನಿಲ್ಲಿಸಿದ್ದು ತಾನೆಂದು ಟ್ರಂಪ್ ಘೋಷಿಸಿಕೊಂಡಿದ್ದಾರೆ. ಆದರೂ ಪ್ರಧಾನಿ ನಿನ್ನೆಯ ತಮ್ಮ ಭಾಷಣದಲ್ಲಿ ಅದನ್ನು ಖಂಡಿಸಿಲ್ಲ, ಸಮಜಾಯಿಷಿ ಹೇಳಿಲ್ಲ ಅಥವಾ ಪೆಹಲ್ಗಾಮ್ ಮತ್ತು ಪುಲ್ವಾಮಾದ ಯಾವುದೇ ಪ್ರಶ್ನೆಗಳಿಗೂ ಉತ್ತರಿಸಿಲ್ಲ. ಜವಾಬ್ದಾರಿಯನ್ನೂ ಹೊತ್ತುಕೊಂಡಿಲ್ಲ.
ಹೀಗಾಗಿ, ಮೋದಿ ಅವರ ಮೋಡಿ ಭಾಷಣಗಳಾಚೆ, ಗೋದಿ ಮಾಧ್ಯಮಗಳಾಚೆ, ಮೋದಿಕೃತ ಪ್ರಚಾರಗಳಾಚೆ ಹತ್ತಾರು ಸತ್ಯಗಳನ್ನು ಅರಿತುಕೊಳ್ಳಬೇಕಿದೆ. ಎಚ್ಚೆತ್ತುಕೊಳ್ಳಬೇಕಿದೆ. ಪ್ರಶ್ನಿಸಬೇಕಿದೆ. ನೈಜ ಮತ್ತು ಶಾಶ್ವತ ಪರಿಹಾರಗಳಿಗಾಗಿ ಒತ್ತಾಯಿಸಬೇಕಿದೆ.