ದ್ವೇಷದಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಪ್ರೀತಿ, ಸೌಹಾರ್ದತೆಯಿಂದ ಬದುಕುವುದೊಂದೇ ಶಾಂತಿಯ ಮಾರ್ಗ ಎನ್ನುವ ಬುದ್ಧನ ತತ್ವವನ್ನು ಅಳವಡಿಸಿಕೊಳ್ಳುವುದು ಇಂದಿಗೆ ತೀರಾ ಅಗತ್ಯ ಎಂದು ಉಪನ್ಯಾಸಕಿ ಡಾ. ಪುಟ್ಟಮಣಿ ದೇವಿದಾಸ ಹೇಳಿದರು.
ಧಾರವಾಡ ನಗರದ ಆಲೂರು ವೆಂಕಟರಾವ್ ಸಭಾ ಭವನದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತವಾಗಿ ಆಯೋಜಿಸಿದ್ದ ಬುದ್ಧ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಬುದ್ಧರು ನಮಗೆ ಸತ್ ಸಂಗತಿಗಳನ್ನು ಬೋಧನೆ ಮಾಡಿದ್ದಾರೆ. ಅದನ್ನು ನಾವು ಜೀವನದಲ್ಲಿ ಅಳವಡಿಸಿಕೊಂಡರೆ ಬುದ್ಧ ಜಯಂತಿ ಮಾಡುವುದಕ್ಕೂ ಅರ್ಥವಿರುತ್ತದೆ. ಭಗವಾನ್ ಎಂದರೆ ದೇವರಲ್ಲ. ಬುದ್ಧ ದೇವರು, ಧರ್ಮದಲ್ಲಿ ನಂಬಿಕೆ ಇಟ್ಟಿರಲಿಲ್ಲ. ಬುದ್ಧ ಧಮ್ಮದಲ್ಲಿ ಸ್ವರ್ಗ ನರಕಗಳ ಕಲ್ಪನೆಯಿಲ್ಲ. ಅಂತಹ ವಿಷಯ ಬಂದಾಗ ಗೊತ್ತಿಲ್ಲ ಎಂದು ಉತ್ತರಿಸಿದ್ದರು. ಅವರು ಅಹಿಂಸೆ, ಸತ್ಯತೆಯನ್ನು ಬೋಧಿಸಿದವರು. ಇತ್ತೀಚೆಗೆ ಅಧರ್ಮ, ಹಿಂಸೆಯು ತಾಂಡವವಾಡುತ್ತಿದೆ. ನಮ್ಮ ಜೀವನದಿಂದ ಶಾಂತಿ ಮತ್ತು ಅಹಿಂಸೆಯು ದೂರ ಹೋಗುತ್ತಿದೆ. ಆತ್ಮ ಜಾಗೃತಿ ಮತ್ತು ಸ್ವಯಂ ಜಾಗೃತಿಯಲ್ಲಿ ಮನಸ್ಸಿಗೆ ಶಾಂತಿ ಸತ್ಯತೆ ದೊರೆಯುತ್ತದೆ. ಜಗತ್ತಿಗೆ ಶಾಂತಿ, ಅಹಿಂಸೆಯ ಸಂದೇಶವನ್ನು ಸಾರೋಣ, ಇಡೀ ವಿಶ್ವವನ್ನೇ ಬೆಳಗೋಣ. ಕೋಪ, ತಾಪ, ಮೋಹ, ರಾಗ, ದ್ವೇಷ ಎಲ್ಲವನ್ನೂ ಬಿಟ್ಟು ಒಳ್ಳೆಯ ವಿಚಾರಗಳನ್ನು ಮಾಡಿ, ಅದರಿಂದ ಜೀವನ ಸುಂದರವಾಗಿಸಿಕೊಳ್ಳಬೇಕು” ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಗೀತಾ ಸಿ ಡಿ ಮಾತನಾಡಿ, “ನಮ್ಮ ಜೀವನದಲ್ಲಿ ಬುದ್ಧರ ಏಕಾಗ್ರತೆ, ತತ್ವ, ಬೋಧನೆಗಳನ್ನು ಬೆಳೆಸಿಕೊಂಡರೆ, ಜೀವನ ಸರಳ ರೀತಿಯಲ್ಲಿ ಸುಂದರವಾಗಿರುತ್ತದೆ. ನಮಗೆ ಬುದ್ಧರ ಬೋಧನೆಗಳು ಅತ್ಯವಶ್ಯಕ ಇವೆ. ಅವರು ತೋರಿಸಿಕೊಟ್ಟ ಮಾರ್ಗದಲ್ಲಿ ಮುಂದೆ ನಡೆಯೋಣ. ಏಕಾಗ್ರತೆ ಎಂಬುದು ಮನುಷ್ಯನಿಗೆ ಬಹಳ ಮುಖ್ಯವಾದ ಸಂಗತಿ. ಮನೆಯಲ್ಲಿ ತಾಯಂದಿರು ಮಕ್ಕಳಿಗೆ ಬುದ್ಧರು ಬೋಧಿಸಿರುವ ತಾಳ್ಮೆ, ಏಕಾಗ್ರತೆ ಶಾಂತಿಯನ್ನು ತಿಳಿಸಿ, ಬೆಳೆಸುವ ಪ್ರಯತ್ನ ಮಾಡಬೇಕು ಮತ್ತು ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಮಕ್ಕಳಿಗೆ ಭಗವಾನ ಬುದ್ಧರ ಬೋಧನೆಗಳನ್ನು ಹೇಳುವ ಮೂಲಕ ಅವರಲ್ಲಿ ನೈತಿಕ ಜಾಗೃತಿಯ ಬಗ್ಗೆ ಅರಿವು ಮೂಡಿಸಬೇಕಿದೆ” ಎಂದರು.
ಇದನ್ನೂ ಓದಿ: ಧಾರವಾಡ | ಜೂಜು ಅಡ್ಡೆ ಮೇಲೆ ಪೊಲೀಸ್ ದಾಳಿ; 10 ಮಂದಿ ವಿರುದ್ಧ ದೂರು
ಕಾರ್ಯಕ್ರಮದಲ್ಲಿ ಪಬ್ಬಜ್ಜೊರವಿತಿಪಾಲಿಮುನಿಯೊ, ಬಂತೇಜಿ ಧಮ್ಮ ವೀರ, ಈಶ್ವರೀಯ ವಿಶ್ವವಿದ್ಯಾಲಯದ ನಂದಿನಿ ಬಿ ಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್ ಬೆಕ್ಕೇರಿ, ಅನಿಲ್ ಮೇತ್ರಿ ಹಾಗೂ ವೃಂದ, ಆರತಿ ದೇವಶಿಖಾಮಣಿ, ಹಿಪ್ಪರಗಿ ಸಿದ್ದರಾಮ ಸೇರಿದಂತೆ ಹಲವರು ಇದ್ದರು.