ಚಾಮರಾಜನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಾಗರೀಕರ ರಕ್ಷಣಾ ಕಾರ್ಯ ಚಟುವಟಿಕೆಗಳ ಕುರಿತ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವ ಸಂಬಂಧ ಮಾಕ್ ಡ್ರಿಲ್ ಆಯೋಜನೆ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಮೇ. 15 ರಂದು ಮಾಕ್ ಡ್ರಿಲ್ (ಅಣಕು ಪ್ರದರ್ಶನ) ಚಾಮರಾಜೇಶ್ವರ ದೇವಾಲಯದ ಆವರಣದಲ್ಲಿ ನಡೆಸುವ ನಿರ್ಧಾರ ಕೈಗೊಂಡರು.
ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಮಾತನಾಡಿ ” ತುರ್ತು ಸಂದರ್ಭ, ಅವಘಡಗಳು ಸಂಭವಿಸಿದ ಸಮಯದಲ್ಲಿ ಜನರು ಗಾಬರಿ ಅಥವಾ ಆತಂಕಕ್ಕೆ ಒಳಗಾಗದಂತೆ ಆತ್ಮವಿಶ್ವಾಸ ತುಂಬಿ ಅರಿವು ಮೂಡಿಸುವ ಉದ್ದೇಶದಿಂದ ಅಣಕು ಪ್ರದರ್ಶನವನ್ನು (ಮಾಕ್ ಡ್ರಿಲ್) ನಡೆಸಲಾಗುತ್ತದೆ. ಇದು ಅಣಕು ಕಾರ್ಯಾಚರಣೆ ಮಾತ್ರವಾಗಿದ್ದು ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ. ಜಿಲ್ಲಾಡಳಿತದೊಂದಿಗೆ ಸಹಕಾರ ನೀಡಬೇಕು ” ಎಂದರು.
ಚಾಮರಾಜೇಶ್ವರ ದೇವಾಲಯದ ಆವರಣದಲ್ಲಿ ಅಣಕು ಕಾರ್ಯಚರಣೆ (ಮಾಕ್ ಡ್ರಿಲ್) ಪ್ರದರ್ಶನ ಕೈಗೊಂಡು ಜಾಗೃತಿ ಮೂಡಿಸಲಾಗುತ್ತದೆ. ಈ ಅಣಕು ಕಾರ್ಯಚರಣೆಗೆ ಪೊಲೀಸ್ ಇಲಾಖೆ, ಅಗ್ನಿಶಾಮಕ ದಳ, ಹೋಂ ಗಾರ್ಡ್, ವೈದ್ಯಕೀಯ ತಂಡ, ಸಾರಿಗೆ ತಂಡ, ಕಂಟ್ರೋಲ್ ರೂಂ, ಇನ್ನಿತರ ತಂಡಗಳನ್ನು ರಚಿಸಲಾಗಿದ್ದು ಸಂಬಂಧಪಟ್ಟ ಅಧಿಕಾರಿಗಳು ಕಾರ್ಯ ನಿರ್ವಹಿಸಲಿದ್ದಾರೆ.
ತುರ್ತು ಸಂದರ್ಭದಲ್ಲಿ ನಾಗರಿಕರನ್ನು ರಕ್ಷಿಸುವ ವೇಳೆ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ, ಗಾಯಗೊಂಡವರಿಗೆ ಆಸ್ಪತ್ರೆಗೆ ದಾಖಲು ಮಾಡುವ ಬಗ್ಗೆ, ಪ್ರಥಮ ಚಿಕಿತ್ಸೆ, ಅಗ್ನಿಶಾಮಕ, ಪೊಲೀಸರು, ಇನ್ನಿತರ ಅಧಿಕಾರಿಗಳ ಕರ್ತವ್ಯ ಇನ್ನಿತರ ಕಾರ್ಯ ಚಟುವಟಿಕೆಗಳನ್ನು ಅಣಕು ಪ್ರದರ್ಶನದ ಮೂಲಕ ನಡೆಸಿ ಅರಿವು ಉಂಟು ಮಾಡಲಾಗುತ್ತದೆ ಎಂದು ಹೇಳಿದರು.
ಅಣಕು ಕಾರ್ಯಾಚರಣೆಗೆ ಪೂರಕವಾಗಿರುವ ಎಲ್ಲ ಸಿದ್ದತೆಗಳನ್ನು ಅಧಿಕಾರಿಗಳು ಸಮರ್ಪಕವಾಗಿ ಕೈಗೊಳ್ಳಬೇಕು. ಅಗತ್ಯವಿರುವ ವಾಹನಗಳು, ಸಲಕರಣೆಗಳು, ಕಂಟ್ರೋಲ್ ರೂಂ, ಸಿಬ್ಬಂದಿ ನಿಯೋಜನೆ, ಆಂಬುಲೆನ್ಸ್ ಕಾರ್ಯಚರಣೆ ಸೇರಿದಂತೆ ಎಲ್ಲವನ್ನು ಪರಿಪೂರ್ಣವಾಗಿ ಸಿದ್ದ ಮಾಡಿಕೊಂಡಿರಬೇಕು. ಜನರ ರಕ್ಷಣೆಗೆ ಕೈಗೊಳ್ಳಲಾಗುವ ಸುರಕ್ಷತಾ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾಕ್ ಡ್ರಿಲ್ ಮುಖಾಂತರ ತಿಳಿವಳಿಕೆ ನೀಡಬೇಕಿದೆ. ಈ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ ಮಾತನಾಡಿ ‘ ಅಣಕು ಕಾರ್ಯಚರಣೆ ಬಗ್ಗೆ ಮಾಹಿತಿ ನೀಡಿ ಜನರನ್ನು ಜಾಗೃತಗೊಳಿಸಬೇಕು. ಅವಘಡದ ಸಂದರ್ಭದಲ್ಲಿ ಹೇಗೆ ಕಾರ್ಯಚರಣೆ ಮಾಡಲಾಗುತ್ತದೆ. ಈ ಸಮಯದಲ್ಲಿ ಸಾರ್ವಜನಿಕರ ಪಾತ್ರ, ವಿವಿಧ ಇಲಾಖೆಗಳು ನಿರ್ವಹಿಸಬೇಕಿರುವ ಕರ್ತವ್ಯಗಳ ಬಗ್ಗೆ ಮನವರಿಕೆ ಮಾಡಿ ಆತ್ಮಸ್ತೈರ್ಯ ತುಂಬುವ ಕೆಲಸವನ್ನು ಮಾಡಬೇಕು ‘ ಎಂದರು.
ಈ ಸುದ್ದಿ ಓದಿದ್ದೀರಾ?ಕೊಡಗು | ಬುದ್ಧನ ಸಂದೇಶ ಇಡೀ ಮಾನವ ಕುಲಕ್ಕೆ ದಿಕ್ಸೂಚಿ : ವಿನಾಯಕ ನರ್ವಡೆ
ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಶಿಕುಮಾರ್, ಉಪ ವಿಭಾಗಾಧಿಕಾರಿ ಬಿ.ಆರ್. ಮಹೇಶ್, ತಹಶೀಲ್ದಾರರಾದ ಗಿರಿಜಾ, ರಮೇಶ್ ಬಾಬು, ಬಸವರಾಜು, ಗುರುಪ್ರಸಾದ್, ಜಿಲ್ಲ ಅಗ್ನಿಶಾಮಕ ಅಧಿಕಾರಿ ಕೆ.ಪಿ. ಗುರುರಾಜ್, ಜಿಲ್ಲಾ ಗೃಹ ರಕ್ಷಕ ದಳ ಸಮಾದೇಷ್ಟ ಎಸ್.ಜಿ. ಮಹಾಲಿಂಗಸ್ವಾಮಿ, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಇದ್ದರು.