ಭಾರತ-ಪಾಕಿಸ್ತಾನ ಸಂಘರ್ಷದ ಬಳಿಕ ‘ಕೋಮು ಸೌಹಾರ್ದ’ದ ಪಾಠ ಕಲಿತರೇ ಮೋದಿ?

Date:

Advertisements
ಬಿಜೆಪಿ ಆಡಳಿತದಲ್ಲಿ ಲೇವಡಿಗೆ ಗುರಿಯಾಗಿದ್ದ ಜಾತ್ಯತೀತತೆ ಇಂದು ಪಾಕ್‌ ವಿರುದ್ಧದ ಸಂಘರ್ಷದಲ್ಲಿ ಇದೇ 'ಜಾತ್ಯತೀತತೆ'ಯು ಭಾರತಕ್ಕೆ ಸೈದ್ಧಾಂತಿಕ ಗುರಾಣಿಯಾಗಿದೆ. ಈ ಜಾತ್ಯತೀತತೆಯನ್ನು ಮೋದಿ ತಮ್ಮ ಅಗತ್ಯಕ್ಕೆ ಬೇಕಾದಾಗ ಮಾತ್ರವೇ ಮುಖವಾಡವಾಗಿ ಹಾಕಿಕೊಳ್ಳುವರೇ? ಅಥವಾ ಜಾತ್ಯತೀತತೆಯ ಪಾಠ ಕಲಿಯುವರೇ?

“ಭಾರತವು ಜಾತ್ಯತೀತ ದೇಶ ಮತ್ತು ಭಾರತೀಯ ಸೈನ್ಯವು ಭಾರತದ ಸಾಂವಿಧಾನಿಕ ಮೌಲ್ಯಗಳ ಸುಂದರ ಪ್ರತಿಬಿಂಬವಾಗಿದೆ ಎಂಬುದನ್ನು ಸ್ಪಷ್ಟಪಡಿಸಲು ನಾನು ಬಯಸುತ್ತೇನೆ” –ಇದು ಭಾರತ ಮತ್ತು ಪಾಕಿಸ್ತಾನದ ನಡುವೆ ಉಂಟಾಗಿದ್ದ ಸಂಘರ್ಷ ಕೊನೆಗೊಂಡು, ಕದನ ವಿರಾಮ ಘೋಷಣೆಯಾದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಕರ್ನಲ್ ಸೋಫಿಯಾ ಖುರೇಷಿ ಅವರ ಮಾತುಗಳು. ಅವರ ಈ ಮಾತು ಇತ್ತೀಚಿನ ಭಾರತ-ಪಾಕಿಸ್ತಾನ ಸಂಘರ್ಷದ ಸಮಯದಲ್ಲಿ ಕೇಳಿಬಂದ ಅಸಂಖ್ಯಾತ ಹೇಳಿಕೆಗಳಲ್ಲಿ ಅತ್ಯಂತ ಮಹತ್ವದ ವಾಕ್ಯವಾಗಿದೆ.

ಭಾರತವು ಜಾತ್ಯತೀತ ರಾಷ್ಟ್ರ ಎಂಬ ಹೇಳಿಕೆ ಮೂಲಕ ತನ್ನ ಪ್ರತಿಸ್ಪರ್ಧಿ ಪಾಕಿಸ್ತಾನದ ಮೇಲೆ ತನ್ನ ಶ್ರೇಷ್ಠತೆಯನ್ನು ಸ್ಥಾಪಿಸಬಹುದು ಎಂಬುದನ್ನು ಸೋಫಿಯಾ ಅವರ ಮಾತುಗಳು ಸಾಬೀತುಪಡಿಸುತ್ತವೆ.

ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ದಾಳಿ ನಡೆಸಿ, 26 ಮಂದಿಯನ್ನು ಕೊಂದು ಕ್ರೌರ್ಯ ಮೆರೆದ ಬಳಿಕ, ಭಾರತದಲ್ಲಿ ಘಟನೆಗೆ ಕೋಮು ಆಯಾಮ ಕೊಡಲಾಯಿತು. ಬಾಹ್ಯ ಭಯೋತ್ಪಾದಕರು ಎಸಗಿದ ಕ್ರೌರ್ಯಕ್ಕೆ ಭಾರತೀಯ ಮುಸ್ಲಿಮರ ವಿರುದ್ಧ ವಾಗ್ದಾಳಿಗಳು ನಡೆದವು. ಮುಸ್ಲಿಮರ ವಿರುದ್ಧದ ಕೋಮುದ್ವೇಷವನ್ನು ಹೆಚ್ಚಿಸಲು ಆ ಘಟನೆಯನ್ನು ಬಳಸಿಕೊಳ್ಳಲಾಯಿತು. ಬಿಜೆಪಿ, ಸಂಘಪರಿವಾರದ ನಾಯಕರು, ಬೆಂಬಲಿಗರು ಹಾಗೂ ಮಾಧ್ಯಮಗಳು ಮುಸ್ಲಿಮರ ವಿರುದ್ಧ ಹರಡಿದ ಕೋಮುದ್ವೇಷಕ್ಕೆ ಮಂಗಳೂರಿನಲ್ಲಿ ಓರ್ವ ಮುಸ್ಲಿಂ ಕಾರ್ಮಿಕನ ಹತ್ಯೆಯೂ ಘಟಿಸಿತು.

Advertisements

ಅಂದಹಾಗೆ, ಭಾರತ-ಪಾಕ್ ಉದ್ವಿಗ್ನತೆಯನ್ನು ಶಮನ ಮಾಡಿದ ಕೀರ್ತಿಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಸಂಪೂರ್ಣವಾಗಿ ತಮ್ಮ ಮುಡಿಗೇರಿಸಿಕೊಳ್ಳುತ್ತಿದ್ದಾರೆ. ಇತ್ತ, ಭಾರತ ಮತ್ತು ಪಾಕಿಸ್ತಾನದ ನಾಯಕರು ತಮ್ಮ ಪ್ರಜೆಗಳಿಗೆ ಗೆದ್ದವರು ತಾವೇ, ತಾವೇ ವಿಜೇತರು ಎಂದು ಹೇಳಿಕೊಳ್ಳುವ ಯತ್ನದಲ್ಲಿದ್ದಾರೆ. ಸೋಮವಾರ ರಾತ್ರಿ 8 ಗಂಟೆಗೆ ಟಿವಿ ಲೈವ್ ಬಂದಿದ್ದ ಪ್ರಧಾನಿ ಮೋದಿ ಅವರು, ‘ಇನ್ನೊಮ್ಮೆ ನಮ್ಮ ತಂಟೆಗೆ ಪಾಕಿಸ್ತಾನ ಬಂದರೆ, ನುಗ್ಗಿ ಹೊಡೆಯುತ್ತೇವೆ’ ಎಂದು ಅಬ್ಬರಿಸಿದ್ದಾರೆ. ಆದರೆ, ಅವರ ಮಾತಿನಲ್ಲಿದ್ದ ಅಬ್ಬರ, ಅವರ ಮುಖದಲ್ಲಿರಲಿಲ್ಲ ಎಂಬುದು ಗಮನಾರ್ಹ.

ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷದಲ್ಲಿ ಗೆದ್ದವರು ಯಾರು? ಗೆಲ್ಲಿಸಿದವರು ಯಾರು? ನಿಲ್ಲಿಸಿದವರು ಯಾರು? –ಈ ಎಲ್ಲ ಚರ್ಚೆಗಳನ್ನು ಬದಿಗಿಟ್ಟು, ಸಂಘರ್ಷದ ಸಮಯದಲ್ಲಿ ಭಾರತದ ಶ್ರೇಷ್ಠತೆ, ಘನತೆಯ ಸೂಚಕವಾಗಿ ಮುನ್ನೆಲೆಯಲ್ಲಿದ್ದ ಜಾತ್ಯತೀತತೆಯ ಬಗ್ಗೆ ನೋಡುವ ಅಗತ್ಯವಿದೆ.

ಭಾರತ-ಪಾಕ್ ಸಂಘರ್ಷದಲ್ಲಿ ಬಿಜೆಪಿ ಮತ್ತು ಅದನ್ನು ನಿಯಂತ್ರಿಸುತ್ತಿರುವ ಆರ್‌ಎಸ್‌ಎಸ್‌ – ಎರಡೂ ತಮ್ಮ ಬದ್ಧ ಸಿದ್ಧಾಂತದಲ್ಲಿ ನಿರ್ಣಾಯಕ ಸೋಲು ಕಂಡಿವೆ. ಅವರ ಹಿಂದು ರಾಷ್ಟ್ರ ಪರಿಕಲ್ಪನೆಯು ಸೋಲುಂಡಿದೆ. ಸಂವಿಧಾನದ ಜಾತ್ಯತೀತ ಕಲ್ಪನೆಯು ಗೆಲುವು ಸಾಧಿಸಿದೆ.

ಬಿಜೆಪಿ ಕಾಲಾಳುಗಳು ಭಾರತ-ಪಾಕ್ ಸಂಘರ್ಷವನ್ನೂ ಮುಂದಿಟ್ಟುಕೊಂಡು ಕೋಮುದ್ವೇಷ ಬಿತ್ತಲು ಯತ್ನಿಸಿದ್ದರ ಹೊರತಾಗಿಯು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಪ್ರಬುದ್ಧತೆಯಿಂದ ನಡೆದುಕೊಂಡಿತು. ಪಾಕ್ ವಿರುದ್ಧ ಭಾರತ ನಡೆಸಿದ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ಕುರಿತು ವಿವರಿಸಲು ನಡೆಸಿದ ಸುದ್ದಿಗೋಷ್ಠಿಯಲ್ಲಿ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ, ಕರ್ನಲ್​ ಸೋಫಿಯಾ ಖುರೇಷಿ ಹಾಗೂ ವಿಂಗ್​ ಕಮಾಂಡರ್​ ವ್ಯೋಮಿಕಾ ಸಿಂಗ್ ಭಾಗಿಯಾಗಿದ್ದರು. ವಿಶೇಷವೆಂದರೆ, ಈ ಮೂವರು ವಿಭಿನ್ನ – ಹಿಂದು, ಮುಸ್ಲಿಂ ಹಾಗೂ ಸಿಖ್ – ಸಮುದಾಯದವರು. ಇದು ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆಯಲ್ಲಿ ಸರ್ಕಾರವು ಜಾತ್ಯತೀತವಾಗಿ ಒಗ್ಗಟ್ಟಿನಿಂದ ನಿಂತಿದೆ ಎಂಬುದನ್ನು ಸೂಚಿಸುವುದರ ಭಾಗವಾಗಿತ್ತು.

ಇದು ಬಿಜೆಪಿ-ಆರ್‌ಎಸ್‌ಎಸ್‌ನ ಹಿಂದುತ್ವವಾದ, ಕೋಮುವಾದ, ಹಿಂದು ರಾಷ್ಟ್ರ ಪರಿಕಲ್ಪನೆಯನ್ನು ಬುಡಮೇಲು ಮಾಡಿ, ಸ್ವತಃ ಮೋದಿ, ಅಮಿತ್ ಶಾ ಆದಿಯಾಗಿ ಬಿಜೆಪಿ/ಆರ್‌ಎಸ್‌ಎಸ್‌ ನಾಯಕರು ಜಾತ್ಯತೀತತೆಯಿಂದ ನಡೆದುಕೊಳ್ಳುವಂತೆ ಮಾಡಿತು.

ಆದಾಗ್ಯೂ, ಪಾಕ್‌ ವಿರುದ್ಧ ಜಾತ್ಯತೀತತೆ ತೋರಿದ್ದ ಕೇಂದ್ರ ಸರ್ಕಾರ, ಮುಂದೆಯೂ ಹಾಗೆಯೇ ಇದ್ದುಬಿಡುತ್ತದೆ ಎಂದು ಹೇಳಲಾಗದು. ಈಗ, ಎರಡೂ ದೇಶಗಳು ಕದನ ವಿರಾಮಕ್ಕೆ ಒಪ್ಪಿಕೊಂಡು ಸಂಘರ್ಷದಿಂದ ಹಿಂದೆ ಸರಿದಿವೆ. ಶೀಘ್ರದಲ್ಲೇ ಬಿಜೆಪಿ ನಾಯಕರು ತಮ್ಮ ಆಕ್ರಮಣಕಾರಿ, ಹಿಂಸಾತ್ಮಕ ಮತ್ತು ಕೋಮುದ್ವೇಷ ಪ್ರಚಾರದಲ್ಲಿ ತೊಡಗುತ್ತಾರೆ ಎಂಬುದು ಸ್ಪಷ್ಟ. ಇದನ್ನು ಭಾರತೀಯರು ಕಡೆಗಣಿಸಲು ಸಾಧ್ಯವೇ ಇಲ್ಲ!

ಯುದ್ಧದಲ್ಲಿರುವ ದೇಶಗಳು, ಸಂಘರ್ಷದ ಸಮಯದಲ್ಲಿ ತಾವು ತಮ್ಮ ಎದುರಾಳಿ ದೇಶಗಳಿಗಿಂತ ಉತ್ತಮವಾದ ಆಶಯ, ಪರಿಕಲ್ಪನೆಯನ್ನು ಹೊಂದಿದ್ದೇವೆ ಎಂದು ಎಂದು ಹೇಳಿಕೊಳ್ಳುತ್ತವೆ. ಪ್ರತಿಯೊಂದು ದೇಶವು ತನ್ನ ಪರಿಕಲ್ಪನೆಯ ಗೆಲುವು ಮಾತ್ರವೇ ಇಡೀ ಜಗತ್ತಿಗೆ ಏನನ್ನಾದರೂ ಉತ್ತಮವಾದದ್ದನ್ನು ಕೊಡಲು ಸಾಧ್ಯ ಎಂದು ಹೇಳಿಕೊಳ್ಳುತ್ತವೆ. ಆ ಮೂಲಕ ಇತರ ದೇಶಗಳಿಂದ ಬೆಂಬಲವನ್ನು ಪಡೆಯುತ್ತವೆ. ಉಕ್ರೇನ್ ಮೇಲೆ ರಷ್ಯಾ ದಾಳಿ ಮಾಡಿದಾಗ, ಉಕ್ರೇನ್ ನಾಜಿ ಸಿದ್ಧಾಂತವನ್ನು ಉತ್ತೇಜಿಸುತ್ತಿದೆ ಎಂದು ಬಿಂಬಿಸುವುದು ಅಗತ್ಯವೆಂದು ರಷ್ಯಾ ಯೋಜಿಸಿತ್ತು. ಆ ಮೂಲಕ ನಾಜಿ ಸಿದ್ಧಾಂತ ವಿರೋಧಿಗಳ ಬೆಂಬಲ ಪಡೆಯಲು ಯತ್ನಿಸಿತ್ತು.

ಪಾಕಿಸ್ತಾನ ಜೊತೆಗಿನ ಭಾರತದ ಸಂಘರ್ಷದಲ್ಲಿ ಭಾಷೆ ಮತ್ತು ವಿಚಾರಗಳ ಘರ್ಷಣೆ ನಡೆಯುತ್ತಿತ್ತು. ಸಂಘರ್ಷದ ಸಮಯದಲ್ಲಿ ಭಾರತೀಯ ಸೇನೆಯು ಕಾರ್ಯಾಚರಣೆ ನಡೆಸುತ್ತಿತ್ತು ಮತ್ತು ಜನರ ಎದುರು ಮಾತನಾಡುತ್ತಿತ್ತು.

ಪಹಲ್ಗಾಮ್ ದಾಳಿಯ ಬಳಿಕ, ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರ ನಿವಾಸಗಳು ಎಂಬ ಆರೋಪದ ಮೇಲೆ ಭಾರತೀಯ ಸೇನೆಯು ಕೆಲವು ಕಟ್ಟಡಗಳನ್ನು ಕೆಡವಿತು. ಈ ವೇಳೆ, ‘ಭಾರತೀಯ ಪಡೆಗಳು ಮಸೀದಿಗಳನ್ನು ಗುರಿಯಾಗಿಸಿಕೊಂಡಿವೆ’ ಎಂಬ ಆರೋಪ ಮುನ್ನೆಲೆಗೆ ಬಂದಿತು. ತಮ್ಮ ಮೊದಲ ಸುದ್ದಿಗೋಷ್ಟಿಯಲ್ಲಿ ಆ ಆರೋಪಕ್ಕೆ ಪ್ರತಿಕ್ರಿಯಿಸಿದ ಕರ್ನಲ್ ಸೋಫಿಯಾ ಖುರೇಷಿ, ‘ಭಾರತ ಜಾತ್ಯತೀತ ದೇಶ’ ಎಂದು ಹೇಳಿದರು. ಅವರ ಹೇಳಿಕೆಯು ಭಾರತವು ಯಾವುದೇ ಧಾರ್ಮಿಕ ಚಿಹ್ನೆಯನ್ನು ಗುರಿಯಾಗಿಸಿಕೊಂಡಿಲ್ಲ, ಯಾವುದೇ ಧರ್ಮವನ್ನು ಅವಮಾನಿಸುತ್ತಿಲ್ಲ ಎಂಬುದಾಗಿತ್ತು.

ಈ ಒಂದು ವಾಕ್ಯವು ಪಾಕಿಸ್ತಾನಕ್ಕೆ ಮಾತ್ರವೇ ನೀಡಿದ ಉತ್ತರವಾಗಿರಲಿಲ್ಲ. ಈ ಮಾತನ್ನು ಪ್ರಧಾನಿ ಮೋದಿ ಮತ್ತು ಅವರ ಪಕ್ಷದ ಉಳಿದ ನಾಯಕರು ಕೂಡ ಕೇಳಿಸಿಕೊಳ್ಳಬೇಕು. ಜೊತೆಗೆ, ಭಕ್ತರು (ಬೆಂಬಲಿಗರು) ಕೂಡ ಆಲಿಸಬೇಕು. ಯಾಕೆಂದರೆ, ಅವರೆಲ್ಲರೂ ಭಾರತದ ಜಾತ್ಯತೀತತೆಯನ್ನು ಬದಿಗೊತ್ತಿ, ಭಾರತವನ್ನು ಹಿಂದು ರಾಷ್ಟ್ರ ಮಾಡುತ್ತೇವೆಂದು ಹೇಳುತ್ತಿರುವವರು. ಅವರೆಲ್ಲರೂ, ಖುರೇಷಿ ಅವರು ಹೇಳಿದ ‘ಜಾತ್ಯತೀತ ರಾಷ್ಟ್ರ’ದ ಮಹತ್ವ ಮತ್ತು ಶ್ರೇಷ್ಠತೆಯನ್ನು ಅರ್ಥ ಮಾಡಿಕೊಳ್ಳಬೇಕು.

ಮುಖ್ಯವಾಗಿ, ಪ್ರಧಾನಿ ಮೋದಿ ಅವರು ಖುರೇಷಿ ಮಾತನ್ನು ಮತ್ತೆ-ಮತ್ತೆ ಕೇಳಬೇಕು. 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಗೆದ್ದ ಬಳಿಕ ತಮ್ಮ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದ ಮೋದಿ, ”2014ರ ನಂತರ ಜಾತ್ಯತೀತತೆ ಎಂಬ ಪದವನ್ನು ತೆಗೆದುಹಾಕಲಾಗಿದೆ. 2019ರ ಚುನಾವಣೆಯಲ್ಲಿ ಯಾವುದೇ ರಾಜಕೀಯ ಪಕ್ಷವು ಜಾತ್ಯತೀತತೆಯ ಮುಖವಾಡ ಧರಿಸಿ ಜನರನ್ನು ದಾರಿ ತಪ್ಪಿಸಲು ಸಾಧ್ಯವಾಗಲಿಲ್ಲ” ಎಂದು ಬಡಾಯಿ ಕೊಚ್ಚಿಕೊಂಡು, ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡಿದ್ದರು.

ಅಂತೆಯೇ, ಉತ್ತರ ಪ್ರದೇಶ ಮುಖ್ಯಮಂತ್ರಿ, ಬಿಜೆಪಿ ನಾಯಕ ಯೋಗಿ ಆದಿತ್ಯನಾಥ್ ಕೂಡ 2017ರಲ್ಲಿ ‘ಜಾತ್ಯತೀತ’ ಎಂಬ ಪದವು ದೊಡ್ಡ ಸುಳ್ಳು ಎಂದು ಬಣ್ಣಿಸಿದ್ದರು.

ಅಲ್ಲದೆ, 2023ರಲ್ಲಿ, ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ ವಿತರಿಸಿದ ಸಂವಿಧಾನದ ಪ್ರತಿಗಳಲ್ಲಿ ಸಮಾಜವಾದ ಮತ್ತು ಜಾತ್ಯತೀತತೆ ಎಂಬ ಪದಗಳನ್ನು ತೆಗೆದುಹಾಕಿತ್ತು.

ಉದ್ಧವ್ ಠಾಕ್ರೆ ಬಿಜೆಪಿ ಜೊತೆಗಿನ ಮೈತ್ರಿ ತೊರೆದು, ಕಾಂಗ್ರೆಸ್ ಜೊತೆ ಸೇರಿದಾಗ, ಠಾಕ್ರೆ ಅವರು ‘ಜಾತ್ಯತೀತ’ರಾಗಿದ್ದಾರೆ ಎಂದು ಬಿಜೆಪಿಗರು ಲೇವಡಿ ಮಾಡಿದ್ದರು.

ಬಿಜೆಪಿ ಮತ್ತು ಅದರ ಮಾತೃ ಸಂಸ್ಥೆ ಆರ್‌ಎಸ್‌ಎಸ್‌ನ ಎಲ್ಲ ನಾಯಕರು ಹೆಚ್ಚಾಗಿ ದ್ವೇಷಿಸುವ ಒಂದು ಸಾಂವಿಧಾನಿಕ ಪರಿಕಲ್ಪನೆ ‘ಜಾತ್ಯತೀತತೆ’. ಭಾರತವನ್ನು ಜಾತ್ಯತೀತ ಗಣರಾಜ್ಯವನ್ನಾಗಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನೆಹರೂ ಅವರನ್ನು ಬಿಜೆಪಿ/ಆರ್‌ಎಸ್‌ಎಸ್ ದ್ವೇಷಿಸುತ್ತವೆ. ಕಳೆದ 11 ವರ್ಷಗಳಲ್ಲಿ, ಪದೇ ಪದೇ ‘ಜಾತ್ಯತೀತತೆ’ ಪದ ಮತ್ತು ಪರಿಕಲ್ಪನೆಯ ಮೇಲೆ ತೀವ್ರ ದಾಳಿಗಳು ನಡೆದಿವೆ.

ಈ ವರದಿ ಓದಿದ್ದೀರಾ?: ಈ ದಿನ ಸ್ಪೆಷಲ್ | ಇದು ಅಮೆರಿಕ-ಚೀನಾಗಳ ಷಡ್ಯಂತ್ರ; ಭಾರತ-ಪಾಕ್ ಬಲಿಯಾಗದಿರಲಿ

ಜಾತ್ಯತೀತತೆಯು ವಾಸ್ತವವಾಗಿ ರಾಜಕೀಯ ಹಕ್ಕುಗಳ ಸಮಾನತೆಗೆ ಸಂಬಂಧಿಸಿದೆ. ಪ್ರತಿಯೊಂದು ಧರ್ಮ ಮತ್ತು ಪಂಗಡದ ಜನರು ಸಮಾನ ರಾಜಕೀಯ ಹಕ್ಕುಗಳನ್ನು ಹೊಂದಿದ್ದಾರೆ. ಅದರಂತೆ, ಪ್ರತಿಯೊಂದು ಧರ್ಮ ಅಥವಾ ಸಮುದಾಯದ ಜನರು ತಾವು ದೇಶದ ಪ್ರತಿನಿಧಿಗಳಾಗುವ ಅವಕಾಶ ಹೊಂದಿದ್ದಾರೆ.

ಜಾತ್ಯತೀತತೆ ವಿರುದ್ಧ ನಿರಂತರ ವಾಗ್ದಾಳಿ ನಡೆಸುವ ಮೋದಿ ಅವರು, ಗುಜರಾತ್‌ ಚುನಾವಣೆ ಸಮಯದಲ್ಲಿ ಪ್ರಚಾರ ಮಾಡುವಾಗ, ‘ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಅಹ್ಮದ್ ಪಟೇಲ್ ಮುಖ್ಯಮಂತ್ರಿಯಾಗುತ್ತಾರೆ’ ಎಂದು ಹೇಳಿದರು, ಹಿಂದುಗಳನ್ನು ಹೆದರಿಸಲು ಯತ್ನಿಸಿದರು. ಆ ಸಮಯದಲ್ಲಿ, ಕಾಂಗ್ರೆಸ್ ಸೇರಿದಂತೆ ಯಾರೊಬ್ಬರೂ, ‘ಮುಸ್ಲಿಂ ನಾಯಕರೊಬ್ಬರು ಗುಜರಾತ್ ಮುಖ್ಯಮಂತ್ರಿಯಾಗುವ ಹಕ್ಕು ಇರಬಾರದೇ’ ಎಂದು ಪ್ರಶ್ನಿಸಲಿಲ್ಲ.

ರಾಹುಲ್ ಗಾಂಧಿ ಅವರನ್ನು ‘ಶಹಜಾದಾ’ ಎಂದು, ಮುಲಾಯಂ ಸಿಂಗ್ ಯಾದವ್ ಅವರನ್ನು ‘ಮೌಲಾನಾ ಮುಲಾಯಂ’ ಎಂದು ಅಪಹಾಸ್ಯ ಮಾಡಲಾಗುತ್ತಿದೆ. ಸೋನಿಯಾ ಗಾಂಧಿ ಅವರು ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದವರು ಎಂಬ ಕಾರಣಕ್ಕೆ ಅವರ ವಿರುದ್ಧ ದಾಳಿಗಳ ನಡೆದಿವೆ.

ಪುಸ್ತಕಗಳು ಮತ್ತು ಶಾಲಾ ಪಠ್ಯಕ್ರಮಗಳಿಂದ ಮುಸ್ಲಿಂ ಪ್ರಾತಿನಿಧ್ಯ ಇರುವ ಎಲ್ಲ ವಿಷಯಗಳನ್ನೂ ತೆಗೆದುಹಾಕಲು ನಿರಂತರ ಅಭಿಯಾನಗಳು ನಡೆಯುತ್ತಿವೆ. ದೇಶಾದ್ಯಂತ ನಗರಗಳು, ಪಟ್ಟಣಗಳು ​​ಹಾಗೂ ರಸ್ತೆಗಳಿಗೆ ಇರುವ ಮುಸ್ಲಿಂ ಹೆಸರುಗಳನ್ನು ಹಿಂದೂಕರಣ ಮಾಡಲಾಗುತ್ತಿದೆ.

ಇಷ್ಟೆಲ್ಲ ನಡೆಯುತ್ತಿರುವ ಇದೇ ಸಂದರ್ಭದಲ್ಲಿ, ಇಂದು ಪಾಕ್‌ ವಿರುದ್ಧದ ಸಂಘರ್ಷದಲ್ಲಿ ಇದೇ ‘ಜಾತ್ಯತೀತತೆ’ಯು ಭಾರತಕ್ಕೆ ಸೈದ್ಧಾಂತಿಕ ಗುರಾಣಿಯಾಗಿದೆ. ಈ ಜಾತ್ಯತೀತತೆಯನ್ನು ಮೋದಿ ತಮ್ಮ ಅಗತ್ಯಕ್ಕೆ ಬೇಕಾದಾಗ ಮಾತ್ರವೇ ಮುಖವಾಡವಾಗಿ ಹಾಕಿಕೊಳ್ಳುವರೇ? ಅಥವಾ ಜಾತ್ಯತೀತತೆಯ ಪಾಠ ಕಲಿಯುವರೇ? ಪಾಠ ಕಲಿಯುವುದು ಅವರ ಪಕ್ಷದ ಸೈದ್ಧಾಂತಿಕ ನಿಲುವಿಗೆ ವಿರುದ್ಧವಾದದ್ದು. ಕೋಮುದ್ವೇಷವೇ ಅವರ ಬಂಡವಾಳ, ಜೀವಾಳ. ಅವರು ಮುಂದೆಯೂ ಅದನ್ನೇ ಉಂಡು-ಉಸಿರಾಡುತ್ತಾರೆ. ಇದೇ ವಾಸ್ತವ.

ಮಾಹಿತಿ ಮೂಲ: ದಿ ವೈರ್

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. S Chalya can elected to PM post of starving Pakistan with his philosophy of sabathani hatred?
    Good luck Chslyaji?
    Freind says this m’fucker (that is you?) must be a fucjed up ISI agent out to subvert India and establish a real 24 carat Qaliphate?
    I am a retired chief secretary of GOI, I have seen combat in Pak as well as in Tibet borders?
    Fact is China had a bounty 10 million Yuan bounty on my head and I collected it by kidnapping a top Chinese general?

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X