ಪತಿಯ ವಿವಾಹೇತರ ಸಂಬಂಧವು ಪತ್ನಿಗೆ ತೊಂದರೆ ಉಂಟುಮಾಡಿದೆ ಎಂದು ಸಾಬೀತಾಗದ ಹೊರತು, ಅದು ಕ್ರೌರ್ಯ ಅಥವಾ ಆತ್ಮಹತ್ಯೆಗೆ ಪ್ರಚೋದನೆ ಆಗುವುದಿಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದೆ.
ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿದ ಮತ್ತು ಕೊಲೆ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಆರೋಪಿ ಪತಿಗೆ ಜಾಮೀನು ಮಂಜೂರು ಮಾಡಿದೆ.
ಮಹಿಳೆಯೊಬ್ಬರು 2024ರ ಮಾರ್ಚ್ 18ರಂದು ತನ್ನ ಪತಿಯ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಸಾವಿಗೆ ಆತ್ಮಹತ್ಯೆಗೆ ಪ್ರಚೋದನೆ, ವರದಕ್ಷಿಣೆ ಕಿರುಕುಳ ಹಾಗೂ ಪತಿಯ ವಿವಾಹೇತರ ಸಂಬಂಧ ಕಾರಣವೆಂದು ಆರೋಪಿಸಲಾಗಿತ್ತು. ಮಹಿಳೆಯ ಪತಿಯನ್ನು ಪೊಲೀಸರು ಬಂಧಿಸಿದ್ದರು.
ಆರೋಪಿ ಪತಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿ ಸಂಜೀವ್ ನರುಲಾ ವಿಚಾರಣೆ ನಡೆಸಿದ್ದಾರೆ. “ವಿವಾಹೇತರ ಸಂಬಂಧವು ಪತಿಯನ್ನು ವರದಕ್ಷಿಣೆ, ಕೊಲೆಗೆ ಸಿಲುಕಿಸಲು ಆಧಾರವಲ್ಲ” ಎಂದು ಹೇಳಿದ್ದಾರೆ.
“ಮೃತ ಮಹಿಳೆಯು ಪತಿಯ ವಿವಾಹೇತರ ಸಂಬಂಧದ ಕಾರಣಕ್ಕಾಗಿ ಸಾವನ್ನಪ್ಪಿದ್ದರೆ (ಆತ್ಮಹತ್ಯೆ ಮಾಡಿಕೊಂಡಿದ್ದರೆ) ಪ್ರಕರಣದಲ್ಲಿ ವರದಕ್ಷಿಣೆ ಬೇಡಿಕೆ ಅಥವಾ ಕಿರುಕುಳ ಹೇಗೆ ಬರುತ್ತದೆ. ವಿವಾಹೇತರ ಸಂಬಂಧ ಮತ್ತು ವರದಕ್ಷಿಣೆ ಕಿರುಕುಳ ನಡುವಿನ ಸಂಬಂಧವನ್ನು ಸಾಕ್ಷ್ಯಗಳ ಆಧಾರದ ಮೇಲೆ ಸಾಬೀತುಪಡಿಸಬೇಕು” ಎಂದು ನ್ಯಾಯಾಧೀಶರು ಹೇಳಿದ್ದಾರೆ.
“ಪ್ರಕರಣದಲ್ಲಿ ಮಹಿಳೆ ಜೀವಂತವಾಗಿರುವವರೆಗೆ, ಮಹಿಳೆಯಾಗಲೀ ಅಥವಾ ಆಕೆಯ ಪೋಷಕರಾಗಲೀ ವರದಕ್ಷಿಣೆ ಕಿರುಕುಳದ ಯಾವುದೇ ಆರೋಪ ಮಾಡಿಲ್ಲ. ದೂರನ್ನೂ ನೀಡಿಲ್ಲ. ಮಹಿಳೆ ಮೃತಪಟ್ಟ ಬಳಿಕ ವರದಕ್ಷಿಣೆ ಆರೋಪ ಮಾಡಲಾಗಿದೆ. ಇಂತಹ ಆರೋಪಗಳು ನಂಬಿಕಾರ್ಹವಲ್ಲ. ಪ್ರಕರಣದ ಪೂರ್ಣ ವಿಚಾರಣೆಯ ನಂತರವೇ ನ್ಯಾಯಾಲಯವು ತನ್ನ ಅಂತಿಮ ನಿರ್ಧಾರವನ್ನು ನೀಡಲು ಸಾಧ್ಯ” ಎಂದು ಹೇಳಿದ್ದಾರೆ.