‘ಲಕ್ಕಿ ಭಾಸ್ಕರ’ ಸಿನಿಮಾ ನಾಯಕನಂತೆ ದಿಢೀರ್ ಶ್ರೀಮಂತನಾಗಲು ಯತ್ನಿಸಿದ ಬ್ಯಾಂಕ್ ಅಧಿಕಾರಿಯೊಬ್ಬ ಕೊನೆಗೂ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ದಾವಣಗೆರೆ ನಗರದ ಕ್ಯಾಥೋಲಿಕ್ ಸಿರಿಯನ್ ಬ್ಯಾಂಕಿನ ಚಿನ್ನ ಸಾಲದ ಅಧಿಕಾರಿ ಟಿ.ಪಿ.ಸಂಜಯ್ (33) ಬಂಧಿತ ಆರೋಪಿ. ತಾನು ಕೆಲಸ ಮಾಡುತ್ತಿದ್ದ ಬ್ಯಾಂಕಿನಿಂದ ಕದ್ದು ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಖಾಸಗಿ ಫೈನಾನ್ಸ್ ಕಂಪನಿಯಲ್ಲಿ ಅಡವಿಟ್ಟಿದ್ದ 3 ಕೆ.ಜಿ 643 ಗ್ರಾಂ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದರೊಂದಿಗೆ ಕೆಲಸ ಮಾಡುತ್ತಿದ್ದ ಬ್ಯಾಂಕಿನಲ್ಲಿ 2 ಕೆ.ಜಿ. 744 ಗ್ರಾಂ ನಕಲಿ ಚಿನ್ನಾಭರಣವನ್ನು ಸ್ನೇಹಿತರು ಹಾಗೂ ಸಂಬಂಧಿಕರ ಹೆಸರಿನಲ್ಲಿ ತಾನೇ ಅಡವಿಟ್ಟುಕೊಂಡು ₹ 1.52 ಕೋಟಿ ಸಾಲ ಪಡೆದಿದ್ದ ಸಂಗತಿ ಕೂಡ ತನಿಖೆಯಿಂದ ಗೊತ್ತಾಗಿದೆ.
