ದೇಶಕ್ಕೇ ದಿಕ್ಕು ತೋರುವ ಸಂವಿಧಾನ ರಚಿಸಿದ ಅಂಬೇಡ್ಕರ್ ದಲಿತರು; ಸಂವಿಧಾನ ಕಲ್ಪಿಸಿದ ಅವಕಾಶದಿಂದ ಸಭಾಧ್ಯಕ್ಷ ಸ್ಥಾನ ಅಲಂಕರಿಸಿರುವ ಖಾದರ್ ಮುಸ್ಲಿಮರು; ಸಭಾಧ್ಯಕ್ಷರ ಕುರ್ಚಿಯಲ್ಲಿ ಕೂತ ಖಾದರ್ ಆಡಿದ್ದು ಕನ್ನಡ ಭಾಷೆ- ದಲಿತರು, ಮುಸ್ಲಿಮರು ಮತ್ತು ಕನ್ನಡ- ಬಿಜೆಪಿಗರ ಅಸಹನೆಗೆ, ಅಣಕಕ್ಕೆ ಒಳಗಾಗುವುದು ಹೊಸದೇನೂ ಅಲ್ಲ.
ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರಾದ ಯು ಟಿ ಅಬ್ದುಲ್ ಖಾದರ್ ಫರೀದ್, ಮೂಲತಃ ಮಂಗಳೂರಿನವರು. ಮನೆ ಭಾಷೆ ಮಲಾಮೆ/ಬ್ಯಾರಿ, ಸಾರ್ವಜನಿಕ ವ್ಯವಹಾರದ ಭಾಷೆ ತುಳು. ಕಲಿತದ್ದು ಕನ್ನಡ ಮತ್ತು ಇಂಗ್ಲಿಷ್. ಪಡೆದದ್ದು ಕಾನೂನು ಪದವಿ. ತಂದೆಯವರ ನಿಧನದಿಂದ ತೆರವಾದ ಸ್ಥಾನದಿಂದ ಐದು ಬಾರಿ ಗೆದ್ದು ಶಾಸಕರಾಗಿ; ಆರೋಗ್ಯ, ಆಹಾರ, ವಸತಿ, ನಗರಾಭಿವೃದ್ಧಿ ಖಾತೆಗಳ ಸಚಿವರಾಗಿ ಕಾರ್ಯ ನಿರ್ವಹಿಸಿದವರು. 2008 ರಿಂದ 2013ರ ಅವಧಿಯ ವಿಧಾನಸಭೆಯ ಅತ್ಯುತ್ತಮ ಕಾರ್ಯ ವೈಖರಿಗಾಗಿ ಸದನ ವೀರ ಹಾಗೂ ಶೈನಿಂಗ್ ಇಂಡಿಯಾ ಪ್ರಶಸ್ತಿ ಪಡೆದವರು. 2021ರಿಂದ 2023ರವರೆಗೆ ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕರಾಗಿ ಸದನದ ರೀತಿ-ರಿವಾಜುಗಳನ್ನು ಅರಿತು ಅರಗಿಸಿಕೊಂಡವರು.
ಇಂತಹ ಹಿನ್ನೆಲೆ ಹೊಂದಿರುವ ಖಾದರ್ ಅವರನ್ನು ಬಹುಮತ ಗಳಿಸಿ ಅಧಿಕಾರ ಹಿಡಿದ ಕಾಂಗ್ರೆಸ್ ಪಕ್ಷ ವಿಧಾನಸಭೆಯ ಸಭಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ. ಮಂತ್ರಿಗಿರಿಯ ಕನಸು ಕಂಡಿದ್ದ, ಅಧಿಕಾರ ಅನುಭವಿಸಿ ಸುರಕ್ಷಿತ ವಲಯದಲ್ಲಿ ಉಳಿಯಬೇಕೆಂದುಕೊಂಡಿದ್ದ ವೃತ್ತಿವಂತ ರಾಜಕಾರಣಿ ಖಾದರ್ ಅವರಿಗೆ ಇದು ಕೊಂಚ ಕಸಿವಿಸಿ ತಂದ ವಿಚಾರವಾಗಿರಬಹುದು. ಆದರೆ ಕಾಂಗ್ರೆಸ್ ಪಕ್ಷದ ಈ ನಡೆ ಸಂವಿಧಾನವನ್ನು ಗೌರವಿಸುವ ಮಹತ್ವದ ನಡೆಯಾಗಿದೆ. ಸಾಮಾನ್ಯ ಪ್ರಜೆಯೊಬ್ಬ ಸಭಾಧ್ಯಕ್ಷನಾಗುವುದು ಪ್ರಜಾಪ್ರಭುತ್ವದ ಸೊಗಸನ್ನು ಸಾರಿದೆ. ಪ್ರಜೆಗಳೇ ಪ್ರಭುಗಳು ಎಂಬುದನ್ನು ಮತ್ತೆ ಮತ್ತೆ ಸಾಬೀತು ಮಾಡಿದೆ. ಕರ್ನಾಟಕ ವಿಧಾನಸಭೆಗೆ ಮೊದಲ ಬಾರಿಗೆ ಮುಸ್ಲಿಂ ಸಮುದಾಯದ ನಾಯಕರೊಬ್ಬರು ಸಭಾಧ್ಯಕ್ಷರಾಗಿರುವುದು ಕೂಡ ಇವತ್ತಿನ ರಾಜಕೀಯ ಸಂದರ್ಭದಲ್ಲಿ ಅತಿ ಮಹತ್ವದ ವಿದ್ಯಮಾನವಾಗಿದೆ.
ಸ್ಪೀಕರ್ ಹುದ್ದೆಯ ವಿಚಾರವಾಗಿ ರಾಜಕೀಯ ಮಹತ್ವಾಕಾಂಕ್ಷಿಗಳ ನಿಲುವು ಏನೇ ಇದ್ದರೂ, ನಿರ್ದಿಷ್ಟ ಪಕ್ಷದಿಂದ ಆರಿಸಿ ಬಂದಿದ್ದರೂ ಸಂವಿಧಾನಕ್ಕೆ ಬದ್ಧರಾಗಿ ಹುದ್ದೆಯನ್ನು ನಿಭಾಯಿಸಬೇಕಾಗುತ್ತದೆ. ಪಕ್ಷಾತೀತರಾಗಿ ವರ್ತಿಸಬೇಕಾಗುತ್ತದೆ. ಎಲ್ಲರಿಗೂ ಅವಕಾಶ ನೀಡುವ, ಅವರ ಮಾತುಗಳನ್ನು ಆಲಿಸುವ, ಜವಾಬ್ದಾರಿಯುತ ಮಾತುಗಳನ್ನಾಡುವ ಅರಿವು ಮತ್ತು ಎಚ್ಚರ ಇರಬೇಕಾಗುತ್ತದೆ. ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಆಡಳಿತ ಮತ್ತು ವಿಪಕ್ಷಗಳ ನಡುವಿನ ಸಮನ್ವಯಕಾರನ ಪಾತ್ರ ನಿರ್ವಹಿಸುವ ಸ್ಪೀಕರ್ ಹುದ್ದೆಗೆ ಅದರದ್ದೇ ಆದ ಘನತೆಯಿದೆ. ಸಭಾಧ್ಯಕ್ಷ ಹುದ್ದೆ ರಾಜ್ಯಪಾಲರ ಬಳಿಕ ರಾಜ್ಯದ ಎರಡನೇ ಅತ್ಯುನ್ನತ ಸಾಂವಿಧಾನಿಕ ಹುದ್ದೆ. ನಿರ್ಣಾಯಕ ಸಂದರ್ಭದಲ್ಲಿ ಮುಖ್ಯಮಂತ್ರಿ, ಪ್ರಧಾನಮಂತ್ರಿ ಸ್ಥಾನಕ್ಕಿಂತಲೂ ಹಿರಿದಾದ ಹುದ್ದೆ. ಹಲವು ಬಾರಿ ಸ್ಪೀಕರ್ ಅವರ ವಿವೇಚನೆಯೇ ಕಾನೂನು. ಅಂಬೇಡ್ಕರ್ ರಚಿಸಿದ ಸಂವಿಧಾನವೇ ಆ ಹುದ್ದೆಗೆ ಅಷ್ಟು ಅಧಿಕಾರ ನೀಡಿದೆ.
ಆ ಕಾರಣದಿಂದಲೇ ಅಪಾರ ರಾಜಕೀಯ ಅನುಭವ, ಕಾನೂನಿನ ಅರಿವು, ಮುತ್ಸದ್ದಿತನವುಳ್ಳ ವ್ಯಕ್ತಿಯನ್ನು ಆ ಸ್ಥಾನಕ್ಕೆ ಆಯ್ಕೆ ಮಾಡಲಾಗುತ್ತದೆ. ಹಾಗೆ ನೋಡಿದರೆ 54 ವರ್ಷಕ್ಕೆ ಸ್ಪೀಕರ್ ಹುದ್ದೆ ಅಲಂಕರಿಸಿರುವ ಖಾದರ್ ಅವರಿಗೆ ಹಿರಿತನ, ಅನುಭವ ಕೊಂಚ ಕಡಿಮೆ ಇರಬಹುದು. ಆದರೆ ಆ ಹುದ್ದೆ ಬೇಡುವ ಅರ್ಹತೆ-ಯೋಗ್ಯತೆಯಂತೂ ಅವರಲ್ಲಿದೆ. ಅದನ್ನು ಅವರೀಗಾಗಲೇ ಸದನವನ್ನು ನಿಭಾಯಿಸುವ ಮೂಲಕ ಸಾಬೀತು ಮಾಡಿದ್ದಾರೆ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಪುರಾವೆಯಿದ್ದೂ ಬಹಿರಂಗಗೊಳಿಸದೆ ಇರುವವರ ಆರೋಪಗಳು ಅನೈತಿಕ
ಆದರೆ ಮುಸ್ಲಿಮರನ್ನು ಮನುಷ್ಯರಿಗಿಂತಲೂ ಕಡೆಯಾಗಿ ಕಾಣುವ ಬಿಜೆಪಿಗೆ; ಮುಸ್ಲಿಮರೆಂದರೆ ಭಯೋತ್ಪಾದಕರೆಂದು ಭಯ ಬಿತ್ತುವ ಮೆದುಳು ಮಾರಿಕೊಂಡವರಿಗೆ ‘ಸ್ಪೀಕರ್ ಖಾದರ್ʼ ಎನ್ನುವುದೇ ಅರಗಿಸಿಕೊಳ್ಳದಾಗಿದೆ. ಹೊಟ್ಟೆಯೊಳಗಿರುವ ಹೊಲಸೆಲ್ಲ ಹೊರಬರಲಾರಂಭಿಸಿದೆ. ಮುಸಲ್ಮಾನನೊಬ್ಬನಿಗೆ ‘ಮಾನ್ಯ ಸಭಾಧ್ಯಕ್ಷರೆʼ ಎಂದು ಸಂಬೋಧಿಸುವುದು ಸಹಿಸಲಸಾಧ್ಯವಾದ ಸಂಕಟಕ್ಕೆ ಈಡುಮಾಡಿದೆ. ಮೊಸರಲ್ಲಿ ಕಲ್ಲು ಹುಡುಕಿದಂತೆ, ಸ್ಪೀಕರ್ ಅವರ ಕನ್ನಡ ಉಚ್ಚಾರಣೆ ಸರಿ ಇಲ್ಲವೆಂದು ಬಿಜೆಪಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸದನದಲ್ಲಿ ಗೇಲಿ ಮಾಡಿದ್ದಾರೆ. ಯತ್ನಾಳರ ಹಿಂದೆ ಸಂಘಪರಿವಾರವಿದೆ, ಬಹುಸಂಖ್ಯಾತ ಲಿಂಗಾಯತರಿದ್ದಾರೆ, ಪ್ರಂಗಿ ಊದುವ ಪತ್ರಕರ್ತರಿದ್ದಾರೆ. ಜೊತೆಗೆ ಬಿಜೆಪಿಯ ಐಟಿ ಸೆಲ್ ಇದೆ. ಇದರ ಪರಿಣಾಮವಾಗಿ ಖಾದರ್ ಕನ್ನಡ ಟ್ರೋಲ್ನ ವಸ್ತುವಾಗಿದೆ, ವಾಟ್ಸ್ ಆಪ್ನಲ್ಲಿ ಹರಿದಾಡುತ್ತಿದೆ. ಒಬ್ಬರಿಂದೊಬ್ಬರಿಗೆ ಹಂಚುವಾಗ ಖಾದರ್ ಅವರನ್ನು ಹಂದಿಗೆ ಹೋಲಿಸುವ ವಿಕೃತಿಯೂ ಹೊರಬಂದಿದೆ.
ಸ್ಪೀಕರ್ ಖಾದರ್ ಅವರನ್ನು ಯಾವ ಕಾರಣಕ್ಕಾಗಿ ಬಿಜೆಪಿಗರು ಗೇಲಿ ಮಾಡುತ್ತಿದ್ದಾರೋ ಅದೇ ಕಾರಣಗಳನ್ನಿಟ್ಟು ಬಿಜೆಪಿಗರನ್ನು, ಅವರ ಭಕ್ತರನ್ನು ಬೀದಿಯಲ್ಲಿ ಬೆತ್ತಲಾಗಿ ನಿಲ್ಲಿಸಬಲ್ಲ ಸಾವಿರಾರು ಕಾರಣಗಳು ನಮ್ಮ ಕಣ್ಣ ಮುಂದಿವೆ. ಆದರೆ ನೆಲದ ಕಾನೂನನ್ನು ಗೌರವಿಸುವ ಸ್ಪೀಕರ್ ಖಾದರ್, ‘ನನ್ನ ಕನ್ನಡ ಹೆಚ್ಚು ಕಡಿಮೆ ಇರಬಹುದು, ಆದರೆ ಅದು ನಮ್ಮ ಪ್ರೀತಿಯ ಭಾಷೆ. ಪ್ರೀತಿ, ಸೋದರತೆ ಸಾಮರಸ್ಯದ ಭಾಷೆʼ ಎಂದು ಮರ್ಮಕ್ಕೆ ತಾಗುವ ಮಾತುಗಳನ್ನಾಡಿ ತಣ್ಣಗಿರುವುದು ಸರಿಯಾಗಿಯೇ ಇದೆ.
ದೇಶಕ್ಕೇ ದಿಕ್ಕು ತೋರುವ ಸಂವಿಧಾನ ರಚಿಸಿದ ಅಂಬೇಡ್ಕರ್ ದಲಿತರು; ಸಂವಿಧಾನ ಕಲ್ಪಿಸಿದ ಅವಕಾಶದಿಂದ ಸಭಾಧ್ಯಕ್ಷ ಸ್ಥಾನ ಅಲಂಕರಿಸಿರುವ ಖಾದರ್ ಮುಸ್ಲಿಮರು; ಸಭಾಧ್ಯಕ್ಷರ ಕುರ್ಚಿಯಲ್ಲಿ ಕೂತ ಖಾದರ್ ಆಡಿದ್ದು ಕನ್ನಡ ಭಾಷೆ- ದಲಿತರು, ಮುಸ್ಲಿಮರು ಮತ್ತು ಕನ್ನಡ- ಮತಾಂಧ ಬಿಜೆಪಿಗರ ಅಸಹನೆಗೆ, ಅಣಕಕ್ಕೆ ಒಳಗಾಗುವುದು ಹೊಸದೇನೂ ಅಲ್ಲ.
ಅಷ್ಟಕ್ಕೂ ಭಾಷೆ ಅಂದರೆ ಕೇವಲ ಉಚ್ಚಾರಣೆ ಅಲ್ಲ, ಭಾಷೆ ಅಂದರೆ ಪದಗಳ ಹಿಂದಿನ ಭಾವ; ಅದನ್ನಾಡುವಾತನ ಪ್ರೀತಿ. ಇವತ್ತು ಖಾದರ್ ಅವರ ಕನ್ನಡವನ್ನು ಆಡಿಕೊಳ್ಳುತ್ತಿರುವ ಜನಗಳೇ ಶತಮಾನಗಳಿಂದಲೂ ಕನ್ನಡ ಕಡೆಗಣಿಸಿ ಹಿಂದಿ ಹೇರಲು ಹವಣಿಸಿದ್ದಾರೆ. ಕನ್ನಡದ ವೈವಿಧ್ಯಮಯವಾದ ಉಪಭಾಷೆಗಳನ್ನು, ಉಪರಾಷ್ಟ್ರೀಯತೆಗಳನ್ನು ಅವಮಾನಿಸುತ್ತಾ ಬಂದಿದ್ದಾರೆ ಎಂಬುದನ್ನು ಮರೆಯದಿರೋಣ.
