ಶಾಲಾ ಶುಲ್ಕ ಹೆಚ್ಚಳ; ಬಿಸಿತುಪ್ಪವಾದ ಗುಣಮಟ್ಟದ ಶಿಕ್ಷಣ

Date:

Advertisements

2025–26ನೇ ಸಾಲಿನ ಶೈಕ್ಷಣಿಕ ವರ್ಷ ಪ್ರಾರಂಭವಾಗುವ ಹೊಸ್ತಿಲಲ್ಲಿದೆ. ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಬಹುತೇಕ ಜಿಲ್ಲೆಗಳ ಖಾಸಗಿ ಶಾಲೆಗಳು ಶಾಲಾ ಶುಲ್ಕವನ್ನು ಶೇ.10ಕ್ಕಿಂತಲೂ ಹೆಚ್ಚು ಮಾಡಲು ಮುಂದಾಗಿವೆ. ಬೆಲೆ ಏರಿಕೆಯಿಂದ ಬೇಸತ್ತಿದ್ದ ಜನಕ್ಕೆ ಶಾಲಾ ಶುಲ್ಕ ಹೆಚ್ಚಳ ಬಿಸಿ ತುಪ್ಪವಾಗಿ ಪರಿಣಮಿಸಿರುವುದು ಈಗ ಭಾರೀ ಚರ್ಚೆಯಾಗುತ್ತಿದೆ.

ನಿಯಂತ್ರಣ ರಹಿತ ಶುಲ್ಕವಿಧಾನವು ಶಿಕ್ಷಣ ಕ್ಷೇತ್ರದಲ್ಲಿ ಸಮಾಜದ ಸಮತೆ ಕುರಿತು ಗಂಭೀರ ಪ್ರಶ್ನೆಗಳನ್ನು ಎಬ್ಬಿಸುತ್ತಿದೆ. ಈ ಪೈಪೋಟಿಯ ಯುಗದಲ್ಲಿ ಗುಣಮಟ್ಟದ ಶಿಕ್ಷಣ ಎಲ್ಲರಿಗೂ ಲಭ್ಯವಾಗಬೇಕು ಎನ್ನುವುದು ಸಮಯೋಚಿತ. ಆದರೆ ಖಾಸಗಿ ಶಿಕ್ಷಣ ಸಂಸ್ಥೆಗಳ ಶುಲ್ಕ ನೀತಿಯು ಸಾಮಾನ್ಯ ವರ್ಗದ ಪೋಷಕರ ಆರ್ಥಿಕ ಹೊರೆಯನ್ನು ಹೆಚ್ಚಿಸುತ್ತದೆ.

ಸುಮಾರು 18,000ಕ್ಕೂ ಪೋಷಕರನ್ನೊಳಗೊಂಡು ಭಾರತದಾದ್ಯಂತ 301 ಜಿಲ್ಲೆಗಳಲ್ಲಿ ʼಲೋಕಲ್ ಸರ್ಕಲ್ಸ್ʼ ಸಮೀಕ್ಷೆ ನಡೆಸಿದೆ. ಇಷ್ಟು ದೊಡ್ಡ ಮಟ್ಟದ ಸಮೀಕ್ಷೆಯು ಶಾಲಾ ಶುಲ್ಕ ಏರಿಕೆಯ ಬಿಕ್ಕಟ್ಟು ಎಷ್ಟು ವ್ಯಾಪಕವಾಗಿದೆ ಎಂಬುದರ ಸ್ಪಷ್ಟ ಚಿತ್ರಣವನ್ನು ನೀಡುತ್ತದೆ. ಸಮೀಕ್ಷೆಯ ವರದಿ ಪ್ರಕಾರ, ಶೇ.44 ರಷ್ಟು ಪೋಷಕರು ಕಳೆದ ಮೂರು ವರ್ಷಗಳಲ್ಲಿ ಶಾಲೆಗಳು ಶೇ.50–80 ಅಥವಾ ಅದಕ್ಕಿಂತ ಹೆಚ್ಚು ಶುಲ್ಕ ಏರಿಕೆ ಮಾಡಿವೆ ಎಂದು ಹೇಳಿದ್ದಾರೆ. ಹಾಗೆಯೇ ಪ್ರೌಢಶಾಲಾ ತರಗತಿಗಳಲ್ಲಿ ಮಕ್ಕಳಿರುವ ಕುಟುಂಬಗಳಿಗೆ, ವೆಚ್ಚಗಳು ಇನ್ನೂ ಹೆಚ್ಚಿರುತ್ತವೆ. ಬಹುತೇಕ ಪೋಷಕರು ನಿಯಮಿತ ಶಾಲಾ ಶುಲ್ಕದ ಜೊತೆಗೆ ಖಾಸಗಿ ತರಬೇತಿಗೂ (ಟ್ಯೂಷನ್) ಹಣ ಪಾವತಿ ಮಾಡುತ್ತಿದ್ದಾರೆ.

Advertisements

ಬೆಂಗಳೂರಿನ ಶೇ. 48ರಷ್ಟು ಪೋಷಕರು ಈ ವರ್ಷದ ಶಾಲಾ ಶುಲ್ಕದಲ್ಲಿ ಶೇ.10ಕ್ಕಿಂತ ಅಥವಾ ಅದಕ್ಕಿಂತ ಹೆಚ್ಚು  ಶುಲ್ಕ ಹೆಚ್ಚಳವಾಗಬಹುದು ಎಂದು ತಿಳಿಸಿದ್ದಾರೆ. ಶೇ.46 ರಷ್ಟು ಪೋಷಕರು ತಮ್ಮ ಶಾಲೆಗಳು ಇನ್ನೂ ಪರಿಷ್ಕೃತ ಶುಲ್ಕವನ್ನು ಘೋಷಿಸಿಲ್ಲ ಎಂದು ಹೇಳಿದ್ದಾರೆ. ಮುಂದುವರೆದು ರಾಷ್ಟ್ರೀಯ ಖಾಸಗಿ ಶಾಲೆಗಳಲ್ಲಿ ಮಕ್ಕಳಿರುವ ಪೋಷಕರಲ್ಲಿ ಶೇ.81ರಷ್ಟು ಜನರು ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶುಲ್ಕ ಶೇ.10ಕ್ಕಿಂತ ಹೆಚ್ಚು ಹೆಚ್ಚಳವಾಗಿದೆ ಎಂದು ತಿಳಿಸಿರುವುದಾಗಿ ಲೋಕಲ್ ಸರ್ಕಲ್ಸ್ ವರದಿ ಹೇಳುತ್ತಿದೆ.

ಅವೈಜ್ಞಾನಿಕವಾಗಿ ಅತಿಯಾದ ಬೋಧನಾ ಮತ್ತು ಪಠ್ಯಪುಸ್ತಕ ಶುಲ್ಕವನ್ನು ವಿಧಿಸುತ್ತಿವೆ ಎಂಬ ಆರೋಪದ ಹಿನ್ನೆಲೆ ಕಳೆದ ಏಪ್ರಿಲ್‌ನಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಕೆಎಸ್‌ಸಿಪಿಸಿಆರ್) ಬೆಂಗಳೂರಿನಲ್ಲಿರುವ ಮೂರು ಖಾಸಗಿ ಶಾಲೆಗಳಿಗೆ ನೋಟಿಸ್ ಜಾರಿ ಮಾಡಿತ್ತು. ಶಾಲೆಯ ಸೂಚನಾ ಫಲಕದಲ್ಲಿ ಶುಲ್ಕ ರಚನೆಯನ್ನು ಕಡ್ಡಾಯವಾಗಿ ಪ್ರಕಟಿಸಬೇಕು, ಈ ಕುರಿತು ಶಾಲೆಗಳು ಸರ್ಕಾರಕ್ಕೆ ವರದಿಯನ್ನೂ ಸಲ್ಲಿಸಬೇಕು ಎಂದು ಸುತ್ತೋಲೆ ಹೊರಡಿಸಿತ್ತು. ಆದರೆ, ಇಲ್ಲಿಯವರೆಗೆ ಖಾಸಗಿ ಶಾಲೆಗಳ ಶುಲ್ಕ ನೀತಿಯನ್ನು ಮೇಲ್ವಿಚಾರಣೆ ಮಾಡಲು ಸರ್ಕಾರಿ ಮಟ್ಟದಲ್ಲಿ ಯಾವುದೇ ಸಮಿತಿ ರಚಿಸಲಾಗಿಲ್ಲ. ಬಳಿಕ ಆ ಖಾಸಗಿ ಶಾಲೆಗಳು ಮೂಲಸೌಕರ್ಯ ಮತ್ತು ಇತರ ಸೌಲಭ್ಯಗಳ ಸಬೂಬು ನೀಡಿ ವಾರ್ಷಿಕವಾಗಿ 10% ರಿಂದ 12% ರಷ್ಟು ತಮ್ಮ ಶುಲ್ಕವನ್ನು ಹೆಚ್ಚಿಸಿಕೊಳ್ಳಲು ಅವಕಾಶವಿದೆ ಎಂದಿದ್ದವು.

ಇದನ್ನೂ ಓದಿ: ಭಾರತ-ಪಾಕಿಸ್ತಾನ ಸಂಘರ್ಷದ ಬಳಿಕ ‘ಕೋಮು ಸೌಹಾರ್ದ’ದ ಪಾಠ ಕಲಿತರೇ ಮೋದಿ?

ಇದಕ್ಕೆ ಪ್ರತಿಕ್ರಿಯಿಸಿದ್ದ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ, “ಖಾಸಗಿ ಶಾಲಾ ಶುಲ್ಕವನ್ನು ನಿಯಂತ್ರಿಸುವ ಅಧಿಕಾರ ಸರ್ಕಾರಕ್ಕೆ ಇಲ್ಲ. ನಾವು ಶುಲ್ಕ ನಿಗದಿಪಡಿಸಿದರೆ, ಖಾಸಗಿ ಶಾಲಾ ಆಡಳಿತ ಮಂಡಳಿಗಳು ನ್ಯಾಯಾಲಯದ ಮೊರೆ ಹೋಗುತ್ತವೆ. ಆದ್ದರಿಂದ, ಪೋಷಕರು ಖಾಸಗಿ ಶಾಲೆಗಳಿಗೆ ಶುಲ್ಕ ಪಾವತಿಸಲು ಸಾಧ್ಯವಾಗದಿದ್ದರೆ, ಅವರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಬಹುದು. ಉತ್ತಮ ಶಿಕ್ಷಣದ ಜೊತೆಗೆ, ಸರ್ಕಾರಿ ಶಾಲೆಗಳಲ್ಲಿ ಪುಸ್ತಕಗಳು, ಸಮವಸ್ತ್ರ, ಹಾಲು, ಮೊಟ್ಟೆ ಮತ್ತು ಮಧ್ಯಾಹ್ನದ ಊಟವನ್ನು ಉಚಿತವಾಗಿ ಪಡೆಯುತ್ತಾರೆ” ಎಂದು ಹೇಳಿದ್ದರು.

ಈದಿನ ಡಾಟ್‌ ಕಾಮ್‌ನೊಂದಿಗೆ ಮಾತನಾಡಿದ ಕರ್ನಾಟಕ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಅಸೋಸಿಯೇಟೆಡ್ ಮ್ಯಾನೇಜ್‌ಮೆಂಟ್‌ಗಳ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್, “ನಿಯಮಗಳ ಪ್ರಕಾರ ಪ್ರತಿ ವರ್ಷ ಶಾಲಾ ಶುಲ್ಕದಲ್ಲಿ ಶೇ. 10-15 ರಷ್ಟು ಏರಿಕೆಯಾಗುತ್ತಲೇ ಇರುತ್ತದೆ. ಅದಕ್ಕಿಂತ ಹೆಚ್ಚಾದರೆ ಅದನ್ನು ಖಂಡಿಸಿ ಶಾಲೆಗಳು ಹಾಗೆ ಮಾಡದಂತೆ ಸಲಹೆ ನೀಡುತ್ತೇವೆ. ಶೇ.20ಕ್ಕಿಂತಲೂ ಹೆಚ್ಚು ಶುಲ್ಕ ವಿಧಿಸುವ ಶಾಲೆಗಳು ರಾಜ್ಯದ ಒಟ್ಟು ಶಾಲೆಗಳ ಸಂಖ್ಯೆಯಲ್ಲಿ ಕೇವಲ 0.5% ರಿಂದ 3% ರಷ್ಟಿವೆ. ಶೇ. 95ರಷ್ಟು ಶಾಲೆಗಳು ₹10,000 ರಿಂದ ₹50,000 ವರೆಗೆ ಶುಲ್ಕ ವಿಧಿಸುತ್ತವೆ. ತಮ್ಮ ಮಕ್ಕಳನ್ನು ಪ್ರತಿಷ್ಠಿತ ಮತ್ತು ದುಬಾರಿ ಶಾಲೆಗಳಿಗೆ ಕಳುಹಿಸಲು ಬಯಸುವ ಪೋಷಕರು ಶುಲ್ಕ ಹೆಚ್ಚಳವನ್ನೂ ಅಷ್ಟೇ ಪ್ರತಿಷ್ಠೆಯಾಗಿ ನೋಡುವುದಿಲ್ಲ. ಕೈಗೆಟುಕುವ ಶಾಲೆಗಳಲ್ಲಿ ಹಾಗೂ ದುಬಾರಿ ಶಾಲೆಗಳಲ್ಲಿ ಒಂದೇ ರೀತಿಯ ಬೋಧನಾ ವಿಧಾನದ ಬಗ್ಗೆ ನಿಜವಾಗಿಯೂ ಕಾಳಜಿ ವಹಿಸುವುದಿಲ್ಲ. ಶುಲ್ಕವನ್ನು ನಿಯಂತ್ರಿಸುವ ಮತ್ತು ಕಠಿಣ ನಿಯಮಗಳನ್ನು ತರುವ ಅಧಿಕಾರ ಸರ್ಕಾರಕ್ಕೆ ಇಲ್ಲದ ಕಾರಣ, ಶುಲ್ಕ ನಿಯಂತ್ರಣವನ್ನು ಬೆಂಬಲಿಸಲು ಬರುವುದಿಲ್ಲ” ಎಂದರು.

“ಸ್ವಾಭಾವಿಕವಾಗಿ ಪ್ರತಿ ವರ್ಷ ಶುಲ್ಕ ಹೆಚ್ಚಳ ಮಾಡಲೇಬೇಕಾಗುತ್ತದೆ. ಅದನ್ನು ಆಕ್ಷೇಪಿಸುವವರು ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲಿಸಬಹುದು. ಸರ್ಕಾರ ಎಲ್ಲ ವಿಭಾಗಗಳಲ್ಲಿಯೂ ಬೆಲೆ ಏರಿಕೆ ಮಾಡಿರುವುದು ಕೂಡ ಕೆಲ ಶಾಲೆಗಳು ಅಸ್ವಾಭಾವಿಕ ಶುಲ್ಕ ವಿಧಿಸಲು ಕಾರಣವಾಗಬಹುದು. ಒಂದು ವೇಳೆ ನಿಯಮಗಳಾಚೆಗೆ ಹೆಚ್ಚಾಗಿ ಶುಲ್ಕ ವಿಧಿಸಿದ್ದು ಕಂಡುಬಂದರೆ ಅಂತಹ ಶಾಲೆಗಳ ವಿರುದ್ಧ ದೂರು ನೀಡಬಹುದು” ಎಂದು ವಿವರಿಸಿದರು.

ಇದನ್ನೂ ಓದಿ: ದಶಕಗಳ ಸಮಸ್ಯೆಗಳಿಗೆ ಶಾಶ್ವತ ಮುಕ್ತಿ: 1 ಲಕ್ಷ ಫಲಾನುಭವಿಗಳಿಗೆ ಕಂದಾಯ ಗ್ರಾಮಗಳ ಹಕ್ಕುಪತ್ರ

ಶಿಕ್ಷಣ ಹಕ್ಕು, ವ್ಯಾಪಾರವಲ್ಲ ಎಂಬ ತತ್ವವನ್ನು ನೆನಪಿನಲ್ಲಿಟ್ಟುಕೊಳ್ಳುವ ಹೊಣೆ ಸರ್ಕಾರದ ಮೇಲೆ ಇದೆ. ಶಿಕ್ಷಕರ ವೇತನ, ಮೂಲಸೌಕರ್ಯ ಹಾಗೂ ಗುಣಮಟ್ಟದ ಬೋಧನೆ ಎಂಬ ಖಾಸಗಿ ಶಾಲೆಗಳ ನಿಖರವಾದ ಆಂತರಿಕ ಖರ್ಚುಗಳ ಕುರಿತ ನಿಖರ ಲೆಕ್ಕಪತ್ರದ ಪರಿಶೀಲನೆಯಿಂದಲೇ ನೈಜವಾದ ಶುಲ್ಕ ಪರಿಷ್ಕರಣೆ ಸಾಧ್ಯವಾಗಬಹುದು. ಇಲ್ಲದಿದ್ದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಶುಲ್ಕ ನೀತಿಯನ್ನು ನಿಭಾಯಿಸಲು ನಿರ್ಬಂಧಗಳಿಲ್ಲವೆಂಬ ತರ್ಕ ಶುಲ್ಕ ಹೆಚ್ಚಳಕ್ಕೆ ಇನ್ನೊಂದು ಮೆಟ್ಟಿಲಾಗಬಹುದು.

ಸರ್ಕಾರಿ ಶಾಲೆಗಳನ್ನು ಪೋಷಕರಿಗೆ ಪರ್ಯಾಯವನ್ನಾಗಿ ಸೂಚಿಸುವುದು ಒಂದೆಡೆ. ಆದರೆ, ಆ ಪರ್ಯಾಯ ಆಯ್ಕೆ ಖಾಸಗಿ ಸಂಸ್ಥೆಗಳಿಗೆ ಪರ್ಯಾಯವಾಗುವಷ್ಟು ಉತ್ತಮವಾಗಿರಬೇಕಾದ ಹೊಣೆಯಿಂದ ಸರ್ಕಾರ ತಪ್ಪಿಕೊಳ್ಳಲಾರದು. ಕೈಗೆಟುಕುವ ಶಿಕ್ಷಣ ಮಾತ್ರವಲ್ಲ, ಗುಣಮಟ್ಟದ ಶಿಕ್ಷಣ ದೊರೆಯುವಂತಾಗಬೇಕು. ಆಧುನಿಕ ಪಠ್ಯಕ್ರಮ, ಬೋಧನಾ ಸಲಕರಣೆ, ಶಿಕ್ಷಕರ ನಿರಂತರ ತರಬೇತಿ, ವಿದ್ಯಾರ್ಥಿ-ಗುರು ಅನುಪಾತ ಇತ್ಯಾದಿ ಅಂಶಗಳಲ್ಲಿ ಪ್ರಾಮಾಣಿಕ ಬದಲಾವಣೆಯಿಲ್ಲದೆ ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯಲು ಸಾಧ್ಯವಿಲ್ಲ.

ಇಂದಿನ ಪರಿಸ್ಥಿತಿಯಲ್ಲಿ ಬಹುತೇಕ ಪೋಷಕರು ಖಾಸಗಿ ಶಾಲೆಗಳ ದುಬಾರಿ ಶುಲ್ಕವನ್ನು ಸಹ ಭರಿಸುತ್ತಿರುವುದು ಸರ್ಕಾರಿ ಶಾಲೆಗಳ ಮೇಲಿನ ನಂಬಿಕೆಯ ಕೊರತೆಯ ಸ್ಪಷ್ಟ ಸೂಚನೆ. ಈ ಧೋರಣೆಯನ್ನು, ಅನಿಸಿಕೆಯನ್ನು ಬದಲಾಯಿಸಲು ಯೋಜನೆ ರೂಪಿಸುವ ಹೊಣೆ ಸರ್ಕಾರದ್ದಾಗಿದೆ.

WhatsApp Image 2025 05 16 at 6.54.26 PM
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X