ಮಕ್ಕಳು ಬೆಳೆಯುವುದನ್ನು ನೋಡುವುದೇ ಚಂದ ಕಣ್ರೀ. ಆದಿಮ ಮಕ್ಕಳೊಂದಿಗೆ ಈ ಬೆಟ್ಟದ ಮೇಲೆ ಒಂದು ಪವಾಡವನ್ನೇ ಸೃಷ್ಟಿಸಿದೆ. ಪವಾಡ ಎಂದರೆ ರಾತ್ರೋರಾತ್ರಿ ಅದೇನೇನೊ ಸೃಷ್ಟಿಸುತ್ತಾರಲ್ಲಾ ಅದಲ್ಲ; ಮಕ್ಕಳು ಆದಿಮ ಪರಿಸರದಲ್ಲಿ ಸುಮಾರು 15ಕ್ಕೂ ಹೆಚ್ಚು ದಿನಗಳಲ್ಲಿ ಗಳಿಸಿರುವ ಶಕ್ತಿ ಪರೀಕ್ಷಿಸಿ ಹೇಳುತ್ತಿದ್ದೇನೆ ಎಂದು ಕೋಲಾರ ಜಿಲ್ಲಾಧಿಕಾರಿ ಡಾ. ಎಂ ಆರ್ ರವಿ ಅಭಿಪ್ರಾಯ ವ್ಯಕ್ತಪಡಿಸಿದರು.
ಕೋಲಾರದ ಆದಿಮ ಕೇಂದ್ರದ ಮಕ್ಕಳ ಬೇಸಿಗೆ ಶಿಬಿರ ‘ಚುಕ್ಕಿಮೇಳ -2025’ ಕಾರ್ಯಕ್ರಮ ಅತ್ಯಂತ ಸಂಭ್ರಮ ಸಡಗರಗಳೊಂದಿಗೆ, ಹಾಡು ಕುಣಿತಗಳೊಂದಿಗೆ ನಡೆದ ಶಿಬಿರ ಮುಕ್ತಾಯದಲ್ಲಿ ಪಾಲ್ಗೊಂಡು ಸಮಾರೋಪದ ನುಡಿಗಳನ್ನಾಡಿದರು.
“ಜೀವನದಲ್ಲಿ ಏನನ್ನೇ ಕಳೆದುಕೊಂಡರೂ ಕೂಡ ಉತ್ಸಾಹ(ಜೋಷ್) ಕಳೆದುಕೊಳ್ಳಬಾರದು. ಖುಷಿಯಾಗಿ, ಜೋಷಾಗಿದ್ದರೆ ಮಾತ್ರ ಜೀವನದಲ್ಲಿ ಏನಾದರೂ ಸಾಧಿಸಲು ಸಾಧ್ಯವಾಗುತ್ತದೆ. 171 ಮಕ್ಕಳನ್ನು ಒಂದೆಡೆ ಒಗ್ಗೂಡಿಸಿ ಕಡಿಮೆ ಸಮಯದಲ್ಲಿ ವಿವಿಧ ಕಲಾಪ್ರಕಾರಗಳ ಕಲಿಕೆ ಮತ್ತು ಪ್ರದರ್ಶನಕ್ಕೆ ಸಿದ್ಧಪಡಿಸಿದೆಯಲ್ಲಾ ಅದೇ ಒಂದು ಪವಾಡ” ಎಂದು ಹೇಳಿದರು.
“ಮಕ್ಕಳು ಪೋಷಕರಿಗೆ ಎಂದೂ ಕೂಡ ಹೊರೆಯಲ್ಲ. ಮಕ್ಕಳ ಬೆಳವಣಿಗೆಯನ್ನು ನೋಡುತ್ತ ಪೋಷಕರು ಬೆಳೆಯಬೇಕಿದೆ. ನಗರ ಪ್ರದೇಶಗಳ ಉದ್ಯೋಗಸ್ಥ ಪೋಷಕರು ಮಕ್ಕಳೊಂದಿಗೆ ಇರುವುದು ವೀಕೆಂಡ್‌ನಲ್ಲಿ ಮಾತ್ರ. ಸನ್ ಡೇ ಮದರ್, ಸನ್ ಡೇ ಫಾದರ್ ಥರ ಇರುತ್ತಾರೆ. ಅವತ್ತೂ ಯಾವುದೋ ಹೋಟೆಲ್‌ನಲ್ಲಿ ಮಾಲ್‌ಗಳಲ್ಲಿ ಸಿಗುವ ತಿಂಡಿಗಳನ್ನು ತಿಂದು, ಅದನ್ನು ಅಜೀರ್ಣ ಮಾಡಿಕೊಳ್ಳುವುದೇ ಆಗುತ್ತದೆ. ಇಂತಹ ಕಾಲದಲ್ಲಿ ಆದಿಮ ಮಕ್ಕಳನ್ನು ಪ್ರಕೃತಿಯ ಮಡಿಲಲ್ಲಿ ಆಟ ಪಾಟ, ಕುಣಿದು ಕುಪ್ಪಳಿಸಿ, ಬೀಳು ಏಳುಗಳು ಇವೆಲ್ಲಾ ಅದು ನಿಜವಾದ ಬದುಕು ಮತ್ತು ಜೀವನ. ಅದನ್ನು ಮಕ್ಕಳಿಗೆ ಆದಿಮ ಕಲ್ಪಿಸಿಕೊಟ್ಟಿದೆ. ಅದಕ್ಕಾಗಿ ಆದಿಮಕ್ಕೆ ಹೃತ್ಪೂರ್ವಕ ಧನ್ಯವಾದಗಳು” ಎಂದರು.

“ಮಕ್ಕಳ ಮೇಲೆ ಅತಿಯಾದ ನೀರೀಕ್ಷೆಗಳನ್ನಿಟ್ಟುಕೊಳ್ಳುವುದು ಅಷ್ಟು ಸರಿಯಲ್ಲ. ಮಕ್ಕಳು ಹೂಗಳಂತೆ ಬೆಳೆಯಲು ಬಿಡಿ, ಅವರಿಗೆ ಆಸಕ್ತಿ ಇರುವ ಕ್ಷೇತ್ರ ಯಾವುದು ಎನ್ನುವುದನ್ನು ಕಂಡುಕೊಂಡು ಆ ಕ್ಷೇತ್ರದಲ್ಲಿ ಮುಂದುವರೆಯುವಂತೆ ಪ್ರೋತ್ಸಾಹಿಸಿ. ವಿವೇಕಾನಂದರು ಹೇಳುವಂತೆ, ʼಶಿಕ್ಷಣ ಎಂದರೆ ನಾಲ್ಕು ಗೋಡೆಗಳ ನಡುವೆ ಕುಳಿತು ಯಾವುದೋ ಒಂದು ಪಠ್ಯಕ್ರಮವನ್ನು ಅಭ್ಯಾಸ ಮಾಡುವುದಲ್ಲ; ಶಿಕ್ಷಣ ಎನ್ನುವುದು ಚಾರಿತ್ರಿಕ ನಿರ್ಮಾಣದತ್ತ, ವ್ಯಕ್ತಿತ್ವ ಕಟ್ಟಿಕೊಳ್ಳುವತ್ತ ಕೊಂಡೋಗಬೇಕುʼ ಎನ್ನುತ್ತಾರೆ. ನಾನು ವಿಶ್ವವಿದ್ಯಾಲಯದಲ್ಲಿ ಏನನ್ನೂ ಕಲಿಯಲು ಸಾಧ್ಯವಾಗಲಿಲ್ಲ. ಶಿಕ್ಷಕನಾಗಿದ್ದಷ್ಟು ಕಾಲ ನಾನೂ ಕೂಡ ಮಕ್ಕಳಿಗೆ ಬೇಕಾಗಿಲ್ಲದ ವಿಷಯಗಳನ್ನು ಪಾಠ ಮಾಡಿದ್ದೇನೆ” ಎಂದು ಹೇಳಿದರು.
“ಇವತ್ತು ಶಿಬಿರದಲ್ಲಿ ಆಯ್ಕೆ ಮಾಡಿಕೊಂಡಿರುವ ವಿಷಯ ತುಂಬಾ ಮುಖ್ಯವಾಗಿ ಜನರ ಗಮನಕ್ಕೆ ತರಲು ಪ್ರಯತ್ನಿಸಿರುವುದು ಒಳ್ಳೆಯದು. ‘ನಾವು ಪಟ್ಟ ಕಷ್ಟ ನಮ್ಮ ಮಕ್ಕಳು ಪಡಬಾರದು’ ಎನ್ನುವುದು ಎಷ್ಟು ಸರಿ?” ಎಂದು ಪ್ರೇಕ್ಷಕರೊಂದಿಗೆ ಸಂವಾದಿಸಿ ಹಂಚಿಕೊಂಡರು. ಶಿವರಾಮಕಾರಂತರ ಬಾಲವನ ಕಲಿಕಾ ಕೇಂದ್ರವನ್ನು ನೆನಪಿಗೆ ತಂದರು.
“ಈ ಬೆಟ್ಟದ ವಾತಾವರಣದಲ್ಲಿ ನಾವೂ ಒಂದಷ್ಟು ಕಾಲ ಇದ್ದಿದ್ದರೆ ಚೆನ್ನಾಗಿತ್ತು ಅನ್ನಿಸುತ್ತದೆ. ಆದರೆ, ಒಂದು; ಇಲ್ಲಿನ ಎಲ್ಲ ಮಕ್ಕಳು ಒಳ್ಳೆಯ ಪ್ರಜೆಗಳಾಗುತ್ತಾರೆ. ಮಕ್ಕಳು ಸರಕುಗಳಲ್ಲ, ಬರೀ ಅಂಕ ಗಳಿಕೆಯಷ್ಟೇ ಅಲ್ಲ, ನೌಕರಿಗೆ ಸೇರುವುದೇ ಮುಖ್ಯ ಅಲ್ಲ, ಲಕ್ಷ ಲಕ್ಷ ಸಂಬಳ ಮುಖ್ಯ ಆಗಲ್ಲ. ಮಕ್ಕಳು ಕಷ್ಟ ಕಾಲಕ್ಕೆ ಆಗುವರೇ ಎನ್ನುವುದು ಮುಖ್ಯ. ತಂದೆ ಶಿಕ್ಷಣ ಕೊಟ್ಟರೆ ತಾಯಿ ಸಂಸ್ಕಾರ ಕೊಡುತ್ತಾಳೆ. ಅತಿಯಾದ ನಿರೀಕ್ಷೆಗಳನ್ನು ಬಿಟ್ಟು ಪೋಷಕರು ಅವರ ಜವಾಬ್ಧಾರಿಯನ್ನು ಮಾತ್ರ ನಿರ್ವಹಿಸಬೇಕು. ಆಗ ಮಾತ್ರ ನಿಮ್ಮ ಮಕ್ಕಳು ಜವಾಬ್ಧಾರಿಯುತ ನಾಗರಿಕರಾಗಿ ಸಮಾಜಕ್ಕೆ ಬಹುದೊಡ್ಡ ಕೊಡುಗೆ ನೀಡಲು ಸಾಧ್ಯ. ಅಂತಹ ಸಂಸ್ಕಾರ ಇಂತಹ ಬೇಸಿಗೆ ಶಿಬಿರಗಳಿಂದ ಸಿಗಲಿದೆ. ಕಡೆಯದಾಗಿ ದಯವಿಟ್ಟು ನಿಮ್ಮ ಮಕ್ಕಳ ಜತೆ ಬೇರೆ ಮಕ್ಕಳನ್ನು ಹೋಲಿಕೆ ಮಾಡಬೇಡಿ” ಎಂದು ಪೋಷಕರಿಗೆ ಕಿವಿಮಾತು ಹೇಳಿದರು.
ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ ಮಾತನಾಡಿ, “ಪರಿಸರದೊಂದಿಗೆ ಮಕ್ಕಳನ್ನು ಇಷ್ಟು ದಿನ ಇರಲು ಕಳುಹಿಸಿಕೊಟ್ಟಿರುವ ಪೋಷಕರಿಗೆ ಅಭಿನಂದನೆ. ಆದಿಮ ಮಕ್ಕಳಲ್ಲಿನ ಪ್ರತಿಭೆಯನ್ನು ಗುರುತಿಸಿದೆ. ಪೋಷಕರಾದ ನೀವು ಅದಕ್ಕೆ ಪ್ರೋತ್ಸಾಹ ನೀಡುವ ಕೆಲಸ ಮಾಡಬೇಕಿದೆ. ಇಷ್ಟು ದಿನಗಳು ಆದಿಮ ಪದಾಧಿಕಾರಿಗಳು ತುಂಬಾ ಶಿಸ್ತಿನಿಂದ, ಸಂಯಮದಿಂದ ಮಕ್ಕಳೊಂದಿಗೆ ಬೆರೆತು ವಿವಿಧ ಕಲಾಪ್ರಕಾರಗಳನ್ನು ಪೀಠಿಕೆ ಹಾಕಿಕೊಟ್ಟಿದ್ದಾರೆ. ಮಕ್ಕಳು ಮೊದಲು ಉತ್ತಮ ಪ್ರಜೆಗಳಾಗಬೇಕು, ಸಮಾಜಕ್ಕೆ ಒಳಿತು ಮಾಡುವುದನ್ನು ಬೆಳೆಸಿಕೊಳ್ಳಬೇಕು. ಕೆಡುಕು ಮಾಡುವ ಮನಸ್ಥಿತಿ ಬೆಳೆಸಿಕೊಳ್ಳಬಾರದು” ಎಂದು ಕರೆಕೊಟ್ಟರು.

“ಆದಿಮ ಪರಿಸರದಲ್ಲಿ ಚಿಗುರಿರುವ ಮರ ಗಿಡಗಳು ಒಂದೊಂದಕ್ಕೂ ಒಂದೊಂದು ಶಕ್ತಿ ಇದೆ. ಹಾಗೆಯೇ ಮಕ್ಕಳಲ್ಲಿಯೂ ಒಂದೊಂದು ಶಕ್ತಿ ಇರುತ್ತದೆ. ನಿಜಕ್ಕೂ ಮಕ್ಕಳು ಇಂತಹ ಶಿಬಿರಗಳಲ್ಲಿ ಪಾಲ್ಗೊಂಡಾಗ ಬದುಕಿನ ನಿಜವಾದ ಅರ್ಥ ಅರಿಯುತ್ತಾರೆ. ಇಂದಿನ ಮಕ್ಕಳು ಮುಂದಿನ ಪ್ರಜೆಗಳು, ಆ ಪ್ರಜೆಗಳು ಉತ್ತಮವಾದ ಪ್ರಜೆಗಳಾಗಿ ರೂಪುಗೊಳ್ಳಬೇಕು. ಅದಕ್ಕೆ ಆದಿಮದಂತಹ ಕೇಂದ್ರಗಳ ಬೇಸಿಗೆ ಶಿಬಿರಗಳು ಸಾಂಸ್ಕೃತಿಕವಾಗಿ ಕಟ್ಟಲ್ಪಡುತ್ತವೆ. ಹಾಗೆಯೇ ದ್ವಿಚಕ್ರ ವಾಹನಗಳನ್ನು ಚಾಲನೆ ಮಾಡುವಾಗ ನಿಮ್ಮ ನಿಮ್ಮ ಪೋಷಕರಿಗೆ ಹೆಲ್ಮೆಟ್ ಧರಿಸುವಂತೆ ಹಟ ಹಿಡಿದು ಹೇಳುವ ಕೆಲಸ ಮಾಡಬೇಕಿದೆ. ಜೀವ ಅಮೂಲ್ಯ ಅದನ್ನು ಕಾಪಾಡಿಕೊಳ್ಳುವ ಜವಾಬ್ಧಾರಿ ನಮ್ಮದಾಗಿದೆ” ಎಂದು ಎಲ್ಲಾ ಮಕ್ಕಳಿಗೂ ಶುಭ ಹಾರೈಸಿದರು.
ಆದಿಮ ಕೇಂದ್ರದ ಅಧ್ಯಕ್ಷ ಎನ್ ಮುನಿಸ್ವಾಮಿ ಮಾತನಾಡಿ, “ಶಿಬಿರಕ್ಕೆ ಪೂರ್ವ ನಾಟಕ ರಚನಾ ಕಮ್ಮಟ ಹಮ್ಮಿಕೊಂಡಿತ್ತು. ಆ ಮೂಲಕ ಮೂರು ನಾಟಕಗಳು ನಿಮ್ಮ ಮುಂದೆ ಪ್ರದರ್ಶನಗೊಳ್ಳಲಿವೆ. ಇದೇ ಸಂದರ್ಭದಲ್ಲಿ ಆದಿಮದ ಒಡನಾಡಿ ರಂಗ ಸಂಗೀತ ದಿಗ್ಗಜ ಇಸ್ಮಾಯಿಲ್ ಗೊನಾಳರ ಹೆಸರನಲ್ಲಿ ಆಂಧ್ರ ಪ್ರದೇಶದ ಸುರಭಿ ಥಿಯೇಟರ್ ಅವರಿಗೆ ಪ್ರಶಸ್ತಿ ನೀಡಲು ತೀರ್ಮಾನಿಸಲಾಗಿತ್ತು. ಕಾರಣಾಂತರದಿಂದ ಅವರು ಬರಲು ಸಾಧ್ಯವಾಗಿರುವುದಿಲ್ಲ ಎಂಬ ಸಂದೇಶ ತಲುಪಿಸಿದ್ದಾರೆ. ಅದನ್ನು ಮುಂದಿನ ಹುಣ್ಣಿಮೆ ಹಾಡು ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುತ್ತದೆ” ಎಂದು ಹೇಳಿದರು.
ಶಿಬಿರದ ನಿರ್ದೇಶಕ ಕೆ ವಿ ನಾಯಕ್(ಅಮಾಸ) ಮಾತನಾಡಿ, ಮಕ್ಕಳೊಂದಿಗಿನ ಇಷ್ಟೂ ದಿನಗಳ ಅನುಭವವನ್ನು ಮನಬಿಚ್ಚಿ ಹಂಚಿಕೊಂಡು, “ಮಕ್ಕಳೊಂದಿಗೆ ಮಕ್ಕಳಿಗೆ ಏರ್ಪಡುವ ಸಂಬಂಧ, ಕೂಡಿ ಬೆಳೆಯುವ, ಹಂಚಿ ತಿನ್ನುವ ಗೆಳೆತನ ಇವೆಲ್ಲವೂ ಮಕ್ಕಳಿಗೆ ಆದಿಮ ಬೇಸಿಗೆ ಶಿಬಿರ ಮೊದಲಿಂದಲೂ ನೀಡುತ್ತಲೇ ಬಂದಿದೆ. ಅದಕ್ಕೆ ಅವಿರತ ಶ್ರಮಿಸಿದ ಅತಿ ಪ್ರಮುಖರಲ್ಲಿ ಇತ್ತೀಚಿಗೆ ಅಗಲಿದ ಕೆ ಎಂ ಕೊಮ್ಮಣ್ಣ ಪ್ರಮುಖ ಸ್ಥಾನವನ್ನು ತುಂಬಿದ್ದರು. ಅವರ ನೆನಪಿನಲ್ಲಿಯೇ 2025ರ ಈ ಚುಕ್ಕಿ ಮೇಳ ನಡೆಯುತ್ತಿದೆ” ಎಂದು ಈ ಸಂಬಂಧ ಶಿಬಿರದ ಪ್ರತಿ ವಿಭಾಗದಲ್ಲಿ ಸೇವೆ ಸಲ್ಲಿಸಿದ ಎಲ್ಲರನ್ನೂ ಅಭಿನಂದಿಸಿ ಮಾತನಾಡಿದರು.
‘ವಿಷವ ಬಿತ್ತಿ.. ಅಮೃತ ಬೆಳೆಯಲುಂಟೆ..?’ ಎಂಬ ಶೀರ್ಷಿಕೆಯಲ್ಲಿ ಸುಮಾರು 17 ದಿವಸಗಳ ಕಾಲ ವಿವಿಧ ಸಾಂಸ್ಕೃತಿಕ ಕಲಾಪ್ರಕಾರಗಳ ಕಲಿಕೆ ಹಾಗೂ ಪ್ರದರ್ಶನ ನಡೆಯಿತು. ಈ ಶಿಬಿರದಲ್ಲಿ 171 ಮಕ್ಕಳು ಪಾಲ್ಗೊಂಡಿದ್ದರು. *ಮೂರು ನಾಟಕಗಳು; ಹೂಸ್ಬಾಬು, ಸ್ವೀಟ್ ಸೆವೆಂಟಿ, ಭೂಮಿ ಹುಳ ಪ್ರದರ್ಶನಗೊಂಡವು.
*ಚಕ್ಕೆ ಜಡೆ- ಕೋಲಾಟ, ರಂಗ ಕುಣಿತ, ಪಟ ಕುಣಿತ, ಪೂಜಾ ಕುಣಿತ, ಸೂತ್ರದ ಗೊಂಬೆ,
ಕಂಸಾಳೆ, ತಮಟೆ ಮತ್ತು ನಗಾರಿ ವಾದನ ಕಲಾ ಪ್ರಕಾರಗಳ ಪ್ರದರ್ಶನವಾಯಿತು. ಅದ್ಭುತ ಪ್ರದರ್ಶನಗಳು ಶಿಬಿರದಲ್ಲಿ ಪಾಲ್ಗೊಂಡಿದ್ದ ಕಲಾಪ್ರತಿಭೆಗಳಾದ ಮಕ್ಕಳು ಆದಿಮ ತೆರೆದ ರಂಗ ವೇದಿಕೆಯಲ್ಲಿ ಅನಾವರಣಗೊಳಿಸಿದರು.
ಶಿಬಿರದಲ್ಲಿ ಒಂದೊಂದು ಕಲಾಪ್ರಕಾರವನ್ನು ನುರಿತ ಅನುಭವಿ ಕಲಾವಿದರಿಂದ ತರಬೇತಿಗೊಳಿಸಲಾಗಿದೆ. ಮಕ್ಕಳು ಕಡಿಮೆ ಸಮಯದಲ್ಲಿ ಪಾರಂಪರಿಕ ಕಲೆಗಳನ್ನು ಕಲಿತು ಪ್ರದರ್ಶಿಸಿದ್ದು, ಮಕ್ಕಳ ಕಾಳಜಿ, ಬದ್ಧತೆಗೆ ಅಭಿನಂದಿಸಬೇಕು. ಮಕ್ಕಳು ಒಬ್ಬರಿಗಿಂತ ಒಬ್ಬರು ಎನ್ನುವಂತೆ ಅವರವರು ತೊಡಗಿದ್ದ ಕಲೆಯನ್ನು ಪ್ರದರ್ಶಿಸಿ ಪೋಷಕರು ಮತ್ತು ವೀಕ್ಷಕರಿಂದ ಸಭಾಷ್ ಎನಿಸಿಕೊಂಡರು.
ಸೂತ್ರದ ಗೊಂಬೆ ‘ಭೂಮ್ತಾಯಿ ನೋವು’ ರಚನೆ, ತರಬೇತಿ; ಹರೀಷ್ ಕುಮಾರ್. ‘ಹೂಸ್ಬಾಬು’ ನಾಟಕ ರಚನೆ ಕೆ ವಿ ಕಾಳಿದಾಸ್, ನಿರ್ದೇಶನ; ಭಾನು ಪ್ರಕಾಶ್ ಕಡಗತ್ತೂರು. ‘ಸ್ವೀಟ್ ಸೆವೆಂಟಿ’ ನಾಟಕ ರಚನೆ ಜನಾರ್ಧನ ಕೆಸರ ಗದ್ದೆ, ನಿರ್ದೇಶನ; ಸಲ್ಮಾ ದಂಡೀನ್, ‘ಭೂಮಿ ಹುಳ’ ರಚನೆ ಬೇಲೂರು ರಘುನಂದನ, ನಿರ್ದೇಶನ; ರವಿ ಅರ್ಥವ ಮೈಸೂರು, ಮೂರು ನಾಟಕಗಳ ಸಂಗೀತ ನಿರ್ದೇಶನ ನಾಡು ಕಂಡ ನುರಿತ ರಂಗಸಂಗೀತಗಾರ ಗಜಾನನ ಟಿ ನಾಯ್ಕ ನಿರ್ವಹಿಸಿದ್ದರು.
ಈ ಸುದ್ದಿ ಓದಿದ್ದೀರಾ? ಸಂವಿಧಾನ ಸಾಕ್ಷಿಯಾಗಿ ಮಾದರಿ ಮದುವೆ; ಬುದ್ಧ, ಬಸವ, ಅಂಬೇಡ್ಕರ್ ತತ್ವಗಳ ಪಾಲನೆಗೆ ಕಂಕಣಬದ್ದ
ಮಕ್ಕಳ ನಾಟಕಗಳಾದ್ದರಿಂದ ಹೆಚ್ಚು ಹಾಡುಗಳು ಇರುತ್ತವೆ. ಎಲ್ಲ ಹಾಡುಗಳಿಗೂ ಸ್ವರ ಸಂಯೋಜಿಸಿ ತಕ್ಕ ರಾಗಗಳೊಂದಿಗೆ ಸುಶ್ರಾವ್ಯವಾಗಿ ಹಾಡಿ ಪ್ರೇಕ್ಷಕರ ಗಮನ ಸೆಳೆದಿದ್ದರು. ಪಕ್ಕವಾದ್ಯ; ಶ್ರೀನಿವಾಸ್ ತುರಾಂಡಹಳ್ಳಿ, ಹರೀಷ್ ಕುಮಾರ್, ಚಲಪತಿ, ಹಾಡುಗಾರಿಕೆಯಲ್ಲಿ; ವಿದ್ಯಾಶ್ರೀ, ರತ್ನಮ್ಮ, ಚಂದ್ರಮ್ಮ ಇದ್ದರು. ಆದಿಮ ಆಶಯ ಗೀತೆ ಡಿ ಆರ್ ರಾಜಪ್ಪ ಹಾಗೂ ತಂಡ ಹಾಡಿದರು.
ರಂಗಪರಿಕರ, ರಂಗ ಸಜ್ಜಿಕೆ; ಮಂಜುನಾಥ್ ಕಡತೂರು, ನಾರಾಯಣಸ್ವಾಮಿ, ಕೆ ವಿ ಕಾಳಿದಾಸ್, ಪ್ರಸಾದನ; ರಾಮಕೃಷ್ಣ ಬೆಳ್ತೂರ್ ಮಾಡಿದ್ದರು. ಸಮಾರೋಪ ಸಮಾರಂಭದ ಮೇಲುಸ್ತುವಾರಿ ಹ ಮಾ ರಾಮಚಂದ್ರ, ರಮೇಶ್ ಅಗ್ರಹಾರ, ನೀಲಕಂಠೇಗೌಡ, ಶ್ರೀನಿವಾಸ್ ಬಾಲಾಜಿ ಪ್ರಿಂಟರ್ಸ್ ಹಾಗೂ ಆದಿಮ ಪದಾಧಿಕಾರಿಗಳು ನಿರ್ವಹಿಸಿದ್ದರು.
ಕಾರ್ಯಕ್ರಮ ನಿರೂಪಣೆ ಆದಿಮ ಅಮರೇಶ್ ನಡೆಸಿಕೊಟ್ಟರು. ಆದಿಮ ಟ್ರಸ್ಟಿ ಮಾರ್ಕೊಂಡಯ್ಯ ಸ್ವಾಗತಿಸಿದರು. ಶಿಬಿರದ ಸಂಯೋಜಕ ಕೆ ವಿ ಕಾಳಿದಾಸ್ ಸಾಂಸ್ಕೃತಿಕ ಕಾರ್ಯಕ್ರಮಗಳ ನಿರ್ವಹಣೆ ಮಾಡಿದರು. ಶಿಬಿರದ ಸಂಯೋಜಕ ತುರಾಂಡಹಳ್ಳಿ ಶ್ರೀನಿವಾಸ್ ವಂದಿಸಿದರು.