ಲಿಂಗಾಯತ ಧರ್ಮವನ್ನಾಗಿ ಮಾಡಲು ನಾವು ಸರ್ಕಾರಗಳಿಗೆ ಯಾವುದೇ ಗಡುವು ನೀಡುವುದಿಲ್ಲ. ಬದಲಾಗಿ ಹೋರಾಟ ಮಾಡುತ್ತೇವೆ. ಇಂದು ಸಿಖ್ ಮತ್ತು ಜೈನ ಧರ್ಮಗಳು ಸ್ವತಂತ್ರ ಧರ್ಮಾಗಿರುವುದಕ್ಕೆ ಹೋರಾಟವೇ ಕಾರಣ ಎಂದು ಗದುಗಿನ ತೋಂಟದಾರ್ಯ ಡಾ. ಸಿದ್ದರಾಮ ಸ್ವಾಮೀಜಿ ಹೇಳಿದರು.
ಧಾರವಾಡ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಸತ್ಯಕ್ಕೆ ನ್ಯಾಯ ಸಿಗುವ ಭರವಸೆ ನಮಗಿದೆ. ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮ ಮಾನ್ಯತೆ ನೀಡುವಂತೆ ಆಗ್ರಹಿಸಿ ರಾಜ್ಯ ಸರ್ಕಾರವು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲು ಲಿಂಗಾಯತ ಮಠಾಧಿಪತಿ ಒಕ್ಕೂಟದಿಂದ ಮನವಿ ಸಲ್ಲಿಸಲಾಗುವುದು” ಎಂದು ಹೇಳಿದರು.
“ಸರ್ಕಾರದ ಎಲ್ಲ ದಾಖಲೆಗಳಲ್ಲಿ ಲಿಂಗಾಯತ ಎಂಬ ಶಬ್ದ ಮಾತ್ರ ಬಳಕೆಯಲ್ಲಿದೆ. ಎಲ್ಲಿಯೂ ವೀರಶೈವ ಲಿಂಗಾಯತ ಎಂಬ ಪದವಿಲ್ಲ. ವೀರಶೈವವೂ ಕೂಡ ಲಿಂಗಾಯತ ಧರ್ಮದ ಒಂದು ಒಳಪಂಗಡ. ಕೆಲವರು ವೀರಶೈವ ಲಿಂಗಾಯತ ಶಬ್ದ ಬಳಸಿ ಜನರ ದಾರಿ ತಪ್ಪಿಸುತ್ತಿದ್ದಾರೆ. ಹೀಗಾಗಿ ಲಿಂಗಾಯತ ಧರ್ಮವನ್ನು ಸ್ವತಂತ್ರ ಧರ್ಮವನ್ನಾಗಿ ಘೋಷಿಸಬೇಕು. ಈ ಕುರಿತಂತೆ ಶಾಸಕರು, ಸಚಿವರು ಹಾಗೂ ರಾಜ್ಯ ಲೋಕಸಭಾ ಸದಸ್ಯರಿಗೆ ಮನವಿ ಮೂಲಕ ಆಗ್ರಹಿಸಲಾಗುವುದು” ಎಂದರು.
“2008ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಲಿಂಗಾಯತ ಹೋರಾಟಕ್ಕೆ ಮಣಿದು ನ್ಯಾಯಮೂರ್ತಿ ಎಚ್ ಎನ್ ನಾಗಮೋಹನದಾಸ ನೇತೃತ್ವದ ಸಮಿತಿಯನ್ನು ನೇಮಿಸಿತ್ತು. ಈ ಸಮಿತಿಯು ಸಮಗ್ರ ಅಧ್ಯಯನ ನಡೆಸಿ ವಿಸ್ತೃತವಾದ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ ಬಳಿಕ ರಾಜ್ಯ ಸರ್ಕಾರವು ಸಚಿವ ಸಂಪುಟ ಸಭೆಯಲ್ಲಿ ವರದಿ ಮಂಡಿಸಿ ಮತ್ತು ಹಿಂದುಳಿದ ವರ್ಗಗಳ ಇಲಾಖೆ ಅಭಿಪ್ರಾಯ ಪಡೆದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು” ಎಂದು ತಿಳಿಸಿದರು.
“ಕೇಂದ್ರ ಸರ್ಕಾರ ಆ ಕುರಿತು ಯಾವುದೇ ಸಮಾಲೋಚನೆ ಮಾಡದೇ ಸಂಬಂಧಿಸಿದ ಇಲಾಖೆಗಳ ಅಭಿಪ್ರಾಯ ಸಂಗ್ರಹಿಸದೆ ಪ್ರಸ್ತಾವನೆಯನ್ನು ವಾಪಸ್ ಕಳಿಸಿತ್ತು. ಈ ಹಿನ್ನೆಲೆಯಲ್ಲಿ ಈಗ ಸಭೆ ಸೇರಿದ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಮಹಾಸ್ವಾಮಿಗಳು ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಸಿದ್ಧಪಡಿಸಿದ ಪ್ರಸ್ತಾವನೆಯನ್ನು ಸೂಕ್ತ ಆಧಾರಗಳು ಹಾಗೂ ತಿದ್ದುಪಡಿಗಳೊಂದಿಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಈ ಚಿಂತನ ಮಂಥನ ಸಭೆಯ ಮೂಲಕ ಆಗ್ರಹಿಸುತ್ತೇವೆ” ಎಂದು ತಿಳಿಸಿದರು.
‘ಕಾನೂನು ಹೋರಾಟಕ್ಕೆ ಚಿಂತನೆ‘
ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, “ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆ ನೀಡಲು ರಾಜ್ಯದ ಸಂಸದರನ್ನು ಸಂಪರ್ಕಿಸುತ್ತೇವೆ. ಚುನಾವಣೆ ಸಂದರ್ಭದಲ್ಲಿ ರಾಜಕೀಯ ವ್ಯಕ್ತಿಗಳನ್ನು ಹೆದರಿಸುವುದಕ್ಕಾಗಿ ಈ ರೀತಿ ಮಾಡುತ್ತಿಲ್ಲ. ನ್ಯಾಯೋಚಿತವಾದ ಬೇಡಿಕೆಯನ್ನು ಈಡೇರಿಸುವಂತೆ ಹೋರಾಡುತ್ತಿದ್ದೇವೆ. ಈ ಬಗ್ಗೆ ಕಾನೂನು ಹೋರಾಟ ನಡೆಸಲು ಈಗಾಗಲೇ ಚಿಂತನೆಯೂ ಸಾಗಿದೆ” ಎಂದರು.
‘ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆ ನೀಡಬೇಕು‘
ಬಾಲ್ಕಿ ಮಠದ ಡಾ. ಬಸವಲಿಂಗ ಪಟ್ಟದ್ದೇವರು ಮಾತನಾಡಿ, “ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ನೂರಕ್ಕೂ ಅಧಿಕ ಸ್ವಾಮೀಜಿಗಳ ನೇತೃತ್ವದಲ್ಲಿ ರವಿವಾರ ಧಾರವಾಡದಲ್ಲಿ ಸಭೆ ಕೈಗೊಂಡು, ಚಿಂತನ-ಮಂಥನದ ಬಳಿಕ ಒಮ್ಮತದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟವನ್ನು ನಿರಂತರವಾಗಿ ಮುಂದುವರೆಸುತ್ತೇವೆ. ಕರ್ನಾಟಕ ರಾಜ್ಯದಲ್ಲಿ ಇರುವ ಲಿಂಗಾಯತ ಧರ್ಮದ ಎಲ್ಲ ಒಳಪಂಗಡಗಳನ್ನು ಕೇಂದ್ರ ಸರ್ಕಾರವು ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಗೆ ಸೇರಿಸಬೇಕು. ಇದರ ಜತೆಗೆ ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆ ನೀಡಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಕಾಂಗ್ರೆಸ್ ಪ್ರತಿಭಟನೆ ಕಾಣದ ಕೈಗಳ ವಿರುದ್ಧವೇ ಹೊರತು ಕೋರ್ಟ್ ವಿರುದ್ಧ ಅಲ್ಲ: ಗಂಗಾಧರ ದೊಡವಾಡ
ಈ ಸಂದರ್ಭದಲ್ಲಿ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷ ಭಾಲ್ಕಿ ಮಠದ ಬಸವಲಿಂಗ ಪಟ್ಟದದೇವರು, ಕೂಡಲಸಂಗಮ ಧರ್ಮ ಪೀಠದ ಡಾ. ಗಂಗಾಮಾತಾಜಿ, ಹುಬ್ಬಳ್ಳಿಯ ಮೂರು ಸಾವಿರ ಮಠದ ಗುರುಸಿದ್ದರಾಜ ಯೋಗೇಂದ್ರ ಸ್ವಾಮೀಜಿ, ಇಳಕಲ್ಲಿನ ಗುರುಮಹಾಂತ ಸ್ವಾಮೀಜಿ, ಮೈಸೂರಿನ ಚಿದಾನಂದ ಸ್ವಾಮೀಜಿ, ಅಥಣಿ ಪ್ರಭು ಚನ್ನಬಸವ ಸ್ವಾಮೀಜಿ ಸೇರಿದಂತೆ ಹಲವು ಮಠಾಧೀಶರು ಇದ್ದರು.