ಬಿಜೆಪಿ ಭಾರತೀಯ ಸೇನೆಯನ್ನು ಮತಗಳಿಗಾಗಿ, ರಾಜಕೀಯ ಲಾಭಕ್ಕಾಗಿ ಬಳಸುತ್ತಿದೆ ಎಂದು ಉತ್ತರಾಖಂಡ ಕಾಂಗ್ರೆಸ್ ಆರೋಪಿಸಿದೆ. ಈ ಹಿಂದೆ ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ನಡೆಸಿದ ಕೇಂದ್ರ ಮತ್ತು ಸೇನೆಯ ಕ್ರಮವನ್ನೂ ಕಾಂಗ್ರೆಸ್ ಶ್ಲಾಘಿಸಿತ್ತು. ಆದರೆ ಇದೀಗ ಬಿಜೆಪಿ ಈ ಕಾರ್ಯಾಚರಣೆಯನ್ನು ರಾಜಕೀಯ ಲಾಭಕ್ಕಾಗಿ ಬಳಸುತ್ತಿದೆ ಎಂದು ಹೇಳಿದೆ.
ಪಾಕಿಸ್ತಾನದ ಉಗ್ರ ಸಂಘಟನೆ ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ದಾಳಿ ನಡೆಸಿ ಸುಮಾರು 26 ಪ್ರವಾಸಿಗರನ್ನು ಕೊಲೆ ಮಾಡಿದೆ. ಇದಕ್ಕೆ ಪ್ರತೀಕಾರವಾಗಿ ಭಾರತೀಯ ಸೇನೆಯು ‘ಆಪರೇಷನ್ ಸಿಂಧೂರ’ ಹೆಸರಿನಲ್ಲಿ ಕಾರ್ಯಾಚರಣೆ ನಡೆಸಿದೆ. ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ 9 ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ನಡೆಸಿದೆ.
ಇದನ್ನು ಓದಿದ್ದೀರಾ? ಬಿಜೆಪಿಯಿಂದ ತಿರಂಗಾ ಯಾತ್ರೆ; ಅನುಮತಿ ಪಡೆದಿಲ್ಲ ಎಂದು ಪೊಲೀಸರಿಂದ ತಡೆ
ಆಪರೇಷನ್ ಸಿಂಧೂರವನ್ನು ದೇಶದ ಎಲ್ಲಾ ರಾಜಕೀಯ ಪಕ್ಷಗಳು ಶ್ಲಾಘಿಸಿದೆ. ಕಾಂಗ್ರೆಸ್ ಕೂಡಾ ಈ ವಿಚಾರದಲ್ಲಿ ಭಾರತೀಯ ಸೇನೆಯೊಂದಿಗೆ ನಾವಿದ್ದೇವೆ ಎಂದು ಹೇಳಿದೆ. ಆದರೆ ಈ ಕಾರ್ಯಾಚರಣೆಯು ಭಾರತೀಯ ಸೇನೆ ಬದಲಾಗಿ ಕೇಂದ್ರ ಸರ್ಕಾರದ ಜಯ ಎಂಬಂತೆ ಬಿಂಬಿಸಿ ಬಿಜೆಪಿ ‘ತಿರಂಗ ಯಾತ್ರೆ’ ನಡೆಸುತ್ತಿದೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಉತ್ತರಾಖಂಡ ಪ್ರದೇಶ ಕಾಂಗ್ರೆಸ್ ಸಮಿತಿಯ ಹಿರಿಯ ಉಪಾಧ್ಯಕ್ಷ ಸೂರ್ಯಕಾಂತ್ ಧಸ್ಮಾನಾ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಭಾರತೀಯ ಸೇನೆಗೆ ಬೆಂಬಲ ಸೂಚಿಸಿ ತಿರಂಗ ಯಾತ್ರೆಯನ್ನು ನಡೆಸಿದೆ. ಆದರೆ ಬಿಜೆಪಿ ರಾಜಕೀಯ ಲಾಭಕ್ಕಾಗಿ ಈ ಯಾತ್ರೆ ಮಾಡುತ್ತಿದೆ ಎಂದು ದೂರಿದ್ದಾರೆ.
“ಬಿಜೆಪಿಯ ಯಾತ್ರೆಗೆ ಕಾಂಗ್ರೆಸ್ ‘ಯಾವುದೇ ಆಕ್ಷೇಪಣೆ’ ಹೊಂದಿಲ್ಲ. ಬಿಜೆಪಿ ಮತ್ತು ದೇಶದ ಪ್ರಧಾನ ಮಂತ್ರಿಗಳು ಜನರ ಮನಸ್ಸಿನಲ್ಲಿರುವ ದೊಡ್ಡ ಪ್ರಶ್ನೆಗೆ ಉತ್ತರಿಸಬೇಕು. ಭಾರತದ ಭದ್ರತೆ, ಸ್ವರಕ್ಷಣೆ ಮತ್ತು ಸಾರ್ವಭೌಮತ್ವವನ್ನು ನಿರ್ಧರಿಸುವ ಹಕ್ಕನ್ನು ಅಮೆರಿಕಕ್ಕೆ ಯಾರು ನೀಡಿದರು” ಎಂದು ಪ್ರಶ್ನಿಸಿದರು.
ಇದನ್ನು ಓದಿದ್ದೀರಾ? ಆಪರೇಷನ್ ಸಿಂಧೂರ ಯಶಸ್ಸಿಗೆ ರಾಜ್ಯಾದ್ಯಂತ ತಿರಂಗಾ ಯಾತ್ರೆ, ಬಿಜೆಪಿ ಚಿಹ್ನೆ ಪ್ರದರ್ಶಿಸಲ್ಲ: ಆರ್ ಅಶೋಕ್
ಆಪರೇಷನ್ ಸಿಂಧೂರ ಬಳಿಕ ಉಭಯ ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚಾಗುತ್ತಿದ್ದಂತೆ ಕದನ ವಿರಾಮ ಒಪ್ಪಂದ ಮಾಡಿಕೊಳ್ಳಲಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಮಧ್ಯಸ್ಥಿಕೆಯಲ್ಲಿ ಈ ಒಪ್ಪಂದ ನಡೆದಿದೆ ಎಂದು ಸ್ವತಃ ಟ್ರಂಪ್ ಹೇಳಿಕೊಂಡಿದ್ದಾರೆ. ಮೊದಲು ಈ ಕದನ ವಿರಾಮದ ಘೋಷಣೆ ಮಾಡಿರುವುದೂ ಅಮೆರಿಕ ಅಧ್ಯಕ್ಷರೇ. ಅದಾದ ಬಳಿಕ ಟ್ರಂಪ್ ತಾಳಕ್ಕೆ ತಕ್ಕ ಕುಣಿಯುವುದು ಎಷ್ಟು ಸರಿ ಎಂಬ ವಾದಗಳು ಹುಟ್ಟಿಕೊಂಡಿದೆ.
“ಭಾರತ ಮತ್ತು ಪಾಕಿಸ್ತಾನವನ್ನು ಗದರಿಸುವ ಮತ್ತು ಬೆದರಿಕೆ ಹಾಕುವ ಮೂಲಕ ಕದನ ವಿರಾಮ ಮಾಡಿಸಿಕೊಂಡಿದ್ದಾರೆ ಎಂದು ಟ್ರಂಪ್ ಸ್ಪಷ್ಟವಾಗಿ ಹೇಳಿದ್ದಾರೆ. ಇದನ್ನು ನೋಡಿದಾಗ ದೇಶದ ರಕ್ಷಣೆ, ವ್ಯಾಪಾರ ಮತ್ತು ವಿದೇಶಾಂಗ ನೀತಿಯನ್ನು ಭಾರತ ನಡೆಸುತ್ತಿದೆಯೇ ಅಥವಾ ಅಮೆರಿಕದ ಅಧ್ಯಕ್ಷರು ನಡೆಸುತ್ತಿದ್ದಾರೆಯೇ ಎಂಬುದನ್ನು ಪ್ರಧಾನಿ ಮೋದಿ, ಬಿಜೆಪಿ ಸರ್ಕಾರ ಜನರಿಗೆ ತಿಳಿಸಬೇಕು ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ.
