ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮದಡಿ ಕರ್ತವ್ಯ ನಿರ್ವಹಿಸುತ್ತಿರುವ ಎಂಬಿಬಿಎಸ್ ವೈದ್ಯರು, ತಜ್ಞ ವೈದ್ಯರು ಮತ್ತು ಎಸ್ಎನ್ಸಿಯು ಹಾಗೂ ಐಸಿಯುದಲ್ಲಿ ಕಾರ್ಯ ನಿರ್ವಹಿಸುವ ಸ್ಟಾಫ್ ನರ್ಸ್ಗಳ ವೇತನ ಪರಿಷ್ಕರಿಸಿ ಗಣನೀಯವಾಗಿ ಹೆಚ್ಚಳ ಮಾಡಲಾಗಿದೆ ಎಂದು ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಶೇಷಾದ್ರೀಪುರಂ ಕಚೇರಿಯಲ್ಲಿ ಆರೋಗ್ಯ ಇಲಾಖೆಯ ಕುರಿತು ಸುದ್ದಿಗೋಷ್ಠಿ ಕರೆದು ಮಾಹಿತಿ ಹಂಚಿಕೊಂಡ ಅವರು, ಎಂಬಿಬಿಎಸ್ ವೈದ್ಯರಿಗೆ 60 ಸಾವಿರ ರೂ. (ಹಿಂದಿನ ವೇತನ: 46,895-50,000 ರೂ.), ತಜ್ಞ ವೈದ್ಯರಿಗೆ 1,40,000 ರೂ. (ಹಿಂದಿನ ವೇತನ : 1,10,000 – 1,30,000) ಹಾಗೂ ಸ್ಟಾಫ್ ನರ್ಸ್‌ಗಳಿಗೆ 22 ಸಾವಿರ ರೂ. (ಹಿಂದಿನ ವೇತನ : 14,186 – 18,774 ರೂ.) ವೇತನ ನಿಗದಿಗೊಳಿಸಲಾಗಿದೆ” ಎಂದು ತಿಳಿಸಿದರು.
“ಪ್ರಮುಖ ಕ್ಲಿನಿಕಲ್ ತಜ್ಞ OBG, ಪೀಡಿಯಾಟ್ರಿಕ್, ಅರಿವಳಿಕೆ, ಜನರಲ್ ಮೆಡಿಸಿನ್, ಆರ್ಥೋ, ಸರ್ಜನ್, ನೇತ್ರಶಾಸ್ತ್ರಜ್ಞ)” ಹುದ್ದೆಗೆ ಆರಂಭಿಕ ವೇತನ ರೂ. 1,40,000.00 ನಿಗದಿಯಾಗಿದ್ದು, ಅನುಭವ ಹೊಂದಿರುವ ಅಭ್ಯರ್ಥಿಗಳು ಆಯ್ಕೆಯಾದಲ್ಲಿ, ಪ್ರತಿ ವರ್ಷದ ಅನುಭವಕ್ಕೆ 2.5 % ರಷ್ಟು ಹೆಚ್ಚುವರಿ ವೇತನವನ್ನು ಸಹ ನೀಡಲಾಗುತ್ತದೆ” ಎಂದು ಹೇಳಿದರು.
“ಪರಿಷ್ಕರಿಸಲ್ಪಟ್ಟ ವೇತನವು ಹೊಸದಾಗಿ ನೇಮಕಗೊಂಡ ಸಿಬ್ಬಂದಿಗಳಿಗೆ ಮಾತ್ರ ಅನ್ವಯಿಸುತ್ತಿದ್ದು, ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳು ಹಾಲಿ ಪಡೆಯುತ್ತಿರುವ ವೇತನ ಶ್ರೇಣಿಯಲ್ಲಿಯೇ ಮಂದುವರಿಯುತ್ತಾರೆ. ಈ ನೌಕರರು ರಾಜೀನಾಮೆ ಸಲ್ಲಿಸಿ, ಹೊಸ ನೇಮಕಾತಿಯಲ್ಲಿ ಪಾಲ್ಗೊಳ್ಳಬಹುದಾಗಿರುತ್ತದೆ. ಹೊಸ ನೇಮಕಾತಿ ಮಾಡುವ ಸಂದರ್ಭದಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಅವರ ಅನುಭವದ ಆಧಾರದ ಮೇಲೆ (ಪ್ರತಿ ವರ್ಷದ ಅನುಭವಕ್ಕೆ 2 ಅಂಕಗಳು) ಆದ್ಯತೆ ನೀಡುವುದು” ಎಂದರು.
ಈ ಸುದ್ದಿ ಓದಿದ್ದೀರಾ? ಎರಡು ವರ್ಷದಲ್ಲಿ ಒಮ್ಮೆಯೂ ರಾಜ್ಯದ ಪರವಾಗಿ ಸಂಸದರು ಮಾತನಾಡಿಲ್ಲ: ಸಿಎಂ ಸಿದ್ದರಾಮಯ್ಯ
ಸರ್ಕಾರದಿಂದಲೇ 108 ಆ್ಯಂಬುಲೆನ್ಸ್ ಸೇವೆ
“ಸರ್ಕಾರವೇ ಇನ್ಮುಂದೆ 108 ಆ್ಯಂಬುಲೆನ್ಸ್ ಸೇವೆ ನೀಡುತ್ತದೆ. ಯಾವುದೇ ಏಜೆನ್ಸಿ ಮೂಲಕ 108 ಆ್ಯಂಬುಲೆನ್ಸ್ ಕಾರ್ಯ ನಡೆಯುವುದಿಲ್ಲ. ಈಗಾಗಲೇ ಚಾಮರಾಜನಗರದಲ್ಲಿ ಪ್ರಾಯೋಗಿಕವಾಗಿ ನಡೆಸಲಾಗುತ್ತಿದೆ. ಸಂಪೂರ್ಣ ಸರ್ವಿಸ್ ಹಾಗೂ ನಿರ್ವಹಣೆ ಸರ್ಕಾರವೇ ನಡೆಸಲು ಮುಂದಾಗಿದೆ” ಎಂದು ತಿಳಿಸಿದರು.
30 ಸಾವಿರ ಸಿಬ್ಬಂದಿ ವೇತನವಾಗದ ವಿಚಾರವಾಗಿ ಪ್ರತಿಕ್ರಿಯಿಸಿ, “2023-24 ರಲ್ಲಿ ಓಪನಿಂಗ್ ಬ್ಯಾಲೆನ್ಸ್ ಹೆಚ್ಚು ಇರ್ತಾ ಇತ್ತು. ಆದರೆ ಕಳೆದ ಸರ್ಕಾರದಿಂದ ಓಪನಿಂಗ್ ಬ್ಯಾಲೆನ್ ಕಡಿಮೆಯಾಗಿದೆ. ಹೀಗಾಗಿ ನಾವು ರಾಜ್ಯ ಸರ್ಕಾರದಿಂದ ಕೊಡಲು ಆಗುತ್ತಿಲ್ಲ. ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ. ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡದ ಹಿನ್ನಲೆ ಕೊಂಚ ಲೇಟ್ ಆಗಿದೆ. ಇನ್ನೇರಡು ಮೂರು ದಿನಗಳಲ್ಲಿ ವೇತನ ಆಗಬಹುದು. ನಾವು ಯಾವುದೇ ವೇತನ ತಡೆ ಹಿಡದಿಲ್ಲ” ಎಂದು ಹೇಳಿದರು.