ಜೀವನದಲ್ಲಿ ಅನೇಕ ತಿರುವುಗಳ ಸುಳಿಯಲ್ಲಿ ಸಿಲುಕಿ ಗೆದ್ದು, ಗಟ್ಟಿಗೊಂಡು ‘ನಾ ಬದುಕಬಲ್ಲೆ ಬದುಕಿ ತೋರಿಸಬಲ್ಲೆ, ಜೀವನದಲ್ಲಿ ಸೋತಾಗ ಸಾವೊಂದೆ ಅಂತಿಮ ನಿರ್ಧಾರವಲ್ಲ; ಸಾವಿನ ದಡ ದಾಟಿ ಸಾಧಿಸುವ ಹಂಬಲ ಹಾಗೂ ಛಲ ನಮ್ಮಲ್ಲಿದೆ’ ಎಂದು ಮನೋಸ್ಥೈರ್ಯ ಕಳೆದುಕೊಂಡವರಿಗೆ ಪ್ರೇರಣೆಯಾದವರು, ಸ್ಪೂರ್ತಿಯಾದವರು ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಇಟಗಿ ಗ್ರಾಮದ ಜಯಶ್ರೀ ಗುಳಗಣ್ಣವರ.
ಜಯಶ್ರೀ ಅವರ ಸ್ವಾವಲಂಬಿ ಬದುಕು ಜೀವನದಲ್ಲಿ ನಿರಾಶೆ, ಹತಾಶೆ, ‘ಅಯ್ಯೋ… ಬದುಕು ಸಾಕಪ್ಪ!’ ಎನ್ನುವವರಿಗೆ ಆದರ್ಶವಾಗಿದೆ. ಭವಿಷ್ಯದ ಬರವಸೆ ಕಳೆದುಕೊಂಡು ಜರ್ಜರಿತರಾದವರಿಗೆ, ಜೀವಿಸುವುದು ಕಠಿಣವಲ್ಲ ಜೀವನದಲ್ಲಿ ಸೋತಷ್ಟು ಗೆಲುವು ಹೆಚ್ಚು ಎಂಬುದಕ್ಕೆ ನಿದರ್ಶನ, ಭರವಸೆ ಹಾಗೂ ನಂಬಿಕೆಯಾಗಿದ್ದಾರೆ.
ಜಯಶ್ರೀ ಗುಳಗಣ್ಣವರ ಅವರು ಎಂಎಸ್‌ಡಬ್ಲ್ಯೂ ಪದವೀಧರೆ. ಹುಟ್ಟಿನಿಂದ ದೈಹಿಕ ವಿಕಲತೆಗೊಗಾದವರಲ್ಲ. 5 ಜನ ಅಣ್ಣಂದಿರ ಪ್ರೀತಿಯ ತಂಗಿಯಾಗಿ ಹೆತ್ತವರ ಮುದ್ದಿನ ಮಗಳು. ಎಲ್ಲ ಮಹಿಳೆಯರಂತೆ ಜಯಶ್ರೀ ಕೂಡ ಬದುಕಿನ ಬಗ್ಗೆ ಬಣ್ಣಬಣ್ಣದ ಕನಸು ಹೊತ್ತುಕೊಂಡು 2009ರಲ್ಲಿ ಗದಗನ ಮಹಾಂತೇಶ ಪಾಟೀಲ್ ಅವರ ಜೊತೆ ಮದುವೆಯಾಗುತ್ತಾರೆ. ಇಬ್ಬರು ಅವಳಿ-ಜವಳಿ ಮಕ್ಕಳಿಗೆ ಜನ್ಮ ನೀಡಿದರು. ಹೆರಿಗೆಯಾಗುವ ಮೊದಲು ಗಂಡ ಹೆಂಡತಿ ಬಹಳ ಅನ್ಯೋನ್ಯವಾಗಿದ್ದರು. ಆದರೆ, ಹೆರಿಗೆಯಾಗಿ ಎರಡು ಅವಳಿ ಮಕ್ಕಳಿಗೆ ಜನ್ಮ ಕೊಟ್ಟ ಮೇಲೆ ಅವರ ಜೀವನ ಸಾಕು ಎನ್ನುವಷ್ಟು ಜರ್ಜರಿತರಾದರು.

ಹೆರಿಗೆ ಬಳಿಕ ಜಯಶ್ರೀ ಅವರ ಬದುಕಿನಲ್ಲಿ ಸಂಕಷ್ಟ ಎದುರಾಯಿತು. ಮೊದಲು ದೈಹಿಕವಾಗಿ ಸದೃಢವಾಗಿದ್ದ ಅವರ ದೇಹದ ಮೇಲೆ ಅನಸ್ತೇಷಿಯಾ ಅಡ್ಡ ಪರಿಣಾಮ ಬೀರಿತ್ತು. ಅಲ್ಲಿಂದ ಅವರ ಜೀವನದ ಸಾಂಸಾರಿಕ ಬಂಡಿಯಲ್ಲಿ ಬಿರುಕು ಮೂಡಿತು. ಅನಸ್ತೇಷಿಯಾ ಅಡ್ಡ ಪರಿಣಾಮ ದಿನದಿಂದ ದಿನಕ್ಕೆ ಕಾಲುಗಳಲ್ಲಿ ಸತ್ವ ಕಳೆದುಕೊಳ್ಳುವಂತೆ ಮಾಡಿತು. ಅದು ದೇಹದ ಸೊಂಟದವರಿಗೆ, ಎದೆಯ ಭಾಗದವರೆಗೂ ಸ್ಪರ್ಷವಿಲ್ಲದಂತಾದಾಗ ಆತಂಕಗೊಂಡು ವೈದ್ಯರು ಪರೀಕ್ಷೆಗೊಳಪಡಿಸಿದಾಗ ಸತ್ಯ ಗೊತ್ತಾಗುತ್ತದೆ ಇದು ‘ಅನಸ್ತೇಷಿಯಾದ ಅಡ್ಡ ಪರಿಣಾಮ’ ಎಂದು. ಜಯಶ್ರೀ ಅವರು ದುಃಖಿತರಾಗುತ್ತಾರೆ ಸಂಪೂರ್ಣ ಕುಸಿದು ಬಿಡುತ್ತಾರೆ.
ದೈಹಿಕ ಸ್ವಾಧೀನ ಕಳೆದುಕೊಂಡ ಜಯಶ್ರೀ ಜರ್ಜರಿತರಾದ ಸಮಯದಲ್ಲೇ ಗಂಡನಿಂದ ವಿಚ್ಛೇದನಕ್ಕೆ ನಿರಂತರ ಒತ್ತಾಯ ಶುರುವಾಯಿತು. ‘ಈ ಸಂದರ್ಭದಲ್ಲಿ ಅವರಿಗೆ ತಮ್ಮ ಅಗತ್ಯ ಇದೆ’ ಎಂಬ ಚಿಕ್ಕ ಕಾಳಜಿಯೂ ಬರುವುದಿಲ್ಲ. ಕೊನೆ ಪಕ್ಷ ಅವರಿಗೆ ಸಾಂತ್ವನದ ಮಾತು ಹೇಳಲೂ ಮನಸ್ಸು ಮಾಡುವುದಿಲ್ಲ.
ಅಂತೂ ಜಯಶ್ರೀ ಅವರಿಂದ ವಿಚ್ಛೇದನ ಪಡೆದ ಮೇಲೆ ಅವರ ಮಕ್ಕಳನ್ನು ದೂರ ಮಾಡುತ್ತಾರೆ. 13 ವರ್ಷದಿಂದ ಮಕ್ಕಳ ಮುಖ ತಾಯಿ ನೋಡಿಲ್ಲ ತಾಯಿಯ ಮುಖ ಮಕ್ಕಳು ನೋಡಿಲ್ಲ. ಮರು ಮದುವೆಯಾಗಿ ಎರಡನೇ ಹೆಂಡತಿ ಜೊತೆ ವಿದೇಶದಲ್ಲಿ ಹಾಯಾಗಿದ್ದಾನೆ. ಹೆತ್ತ ತಾಯಿಯಿಂದ ಮಕ್ಕಳನ್ನು ದೂರ ಮಾಡಿದ್ದಾನೆ. ಗಂಡನ ಮನೆಯವರು ಇರುವ ಮನೆಗೆ ಹೋದ್ರೆ ಸೌಜನ್ಯಕ್ಕಾದರೂ ಅವರನ್ನ ಮನೆಯೊಳಗೆ ಕರೆಯದೆ ಹೊರಗೆ ನಿಲ್ಲಿಸಿ ‘ಮಕ್ಕಳು ಮನೆಯಲಿಲ್ಲ ಹಾಸ್ಟೆಲ್‌ನಲ್ಲಿ ಇದ್ದಾವೆ ಯಾವ ಹಾಸ್ಟೆಲ್ ಅಂತ ನಮಗೂ ಗೊತ್ತಿಲ್ಲ’ ಎಂದು ಸುಳ್ಳು ಹೇಳುತ್ತಾರೆ. ಗಟ್ಟಿಯಾಗಿ ಪ್ರತಿಭಟಿಸುವ ಶಕ್ತಿ ಇಲ್ಲ. ಎಲ್ಲವನ್ನೂ ಕಳೆದುಕೊಂಡು ಎದೆಯಿಂದ ತಲೆವರೆಗೂ ಬರಿ ಜೀವ ಇರುವ ಕಾಲ ಭಾಗ ದೇಹ ಮಾತ್ರ. ಭಾವ ಸಂಬಂಧ, ಕರುಳ ಸಂಬಂಧ ಎಲ್ಲವೂ ಕಳೆದುಕೊಂಡ ನೋವು ಈಗಲೂ ಕಾಡುತ್ತದೆ. ಆದರೂ, ನನಗುತ್ತಲೇ ತಮ್ಮ ನಿತ್ಯದ ಚಟುವಟಿಕೆಯಲ್ಲಿ ತೊಡಗುತ್ತಾರೆ ಜಯಶ್ರೀ.

ಎಲ್ಲವನ್ನೂ ಮೆಟ್ಟಿ ನಿಂತ ಸ್ವಾಲಂಭಿ ಜಯಶ್ರೀ
ಜಯಶ್ರೀ ಸಾವಿನ ನಿರ್ಧಾರ ತೆಗೆದುಕೊಂಡರೂ ಕೊನೆಗೆ ಅದರಿಂದ ಹೊರ ಬಂದು ಬದುಕುವ ಛಲ ಗಟ್ಟಿಗೊಳಿಸಿಕೊಂಡರು. ಮೊದಲು ತನ್ನನ್ನೇ ತಾನು ಪ್ರೀತಿಸಬೇಕು ಗೌರವಿಸಿಕೊಳ್ಳಬೇಕು ಎಂದು ಎಲ್ಲಾ ಗೊಂದಲಗಳಿಂದ, ನೋವುಗಳಿಂದ ಹೊರ ಬರುತ್ತಾರೆ. ಸಮುದಾಯ ಸಾಮರ್ಥ್ಯ ಎಂಬ ಸಂಸ್ಥೆ ಇವರ ಬೆನ್ನಿಗೆ ಮಾನಸಿಕ ಸ್ಥೈರ್ಯ ತುಂಬಿ ಮಾರ್ಗದರ್ಶನ ನೀಡುತ್ತದೆ.
ಸ್ಯಾಲ್ಕೋ ಸಂಸ್ಥೆಯವರು ನೀಡಿದ ರೊಟ್ಟಿ ಮಾಡುವ ಮಶಿನ್ನಿಂದ ರೊಟ್ಟಿ ತಯಾರಿಸುವುದನ್ನು ಕಲಿತರು. ರೊಟ್ಟಿ ಮಾಡಿ ಹೋಟೆಲ್, ಡಾಬಾ, ಖಾನಾವಳಿಗಳಿಗೆ ಮಾರಾಟ ಮಾಡುತ್ತಾರೆ. ಅಲ್ಲದೆ ಮೂರು ಜನರಿಗೆ ದುಡಿಮೆ ಕೊಡುವಷ್ಟು ಸ್ವತಂತ್ರ ಸ್ವಾಲಂಬಿಯಾಗಿ ಬದುಕುತ್ತಿದ್ದಾರೆ. ಜುಗುಪ್ಸೆಗೊಂಡು ಬದುಕಿನ ಭರವಸೆ ಕಳೆದು ಕೊಳ್ಳುವವರಿಗೆ ಸ್ಪೂರ್ತಿ, ಪ್ರೇರಣೆ, ಆಶಾಕಿರಣವಾಗಿದ್ದಾರೆ.
ಇದನ್ನೂ ಓದಿ:ಕೊಪ್ಪಳ | ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ; ಇಬ್ಬರ ಬಂಧನ
ಬೆಂಗಳೂರು ವ್ಹೀಲ್ ಚೇರ್ ಮ್ಯಾರಥಾನ್ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನದಲ್ಲಿ ಜಯಶಾಲಿಯಾಗುತ್ತಾರೆ. ನಂತರ ತಮಿಳುನಾಡಿನ ಕ್ರೀಡೆಯಲ್ಲಿ ಎರಡನೇ ಸ್ಥಾನ, ಹೀಗೆ ಹಲವಾರು ಕ್ರೀಡೆಗಳಲ್ಲಿ ಸ್ಪರ್ಧಿಸಿ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಇತ್ತೀಚೆಗೆ ಕೊಪ್ಪಳ ಗವಿ ಮಠ ‘ಬಸವ ಪ್ರಶಸ್ತಿ’ ನೀಡಿ ಗೌರವಿಸಿದೆ.

ಹಡೆದು 7 ತಿಂಗಳಿಗೆ ದೂರವಾದ ಮಕ್ಕಳನ್ನು ಪಡೆಯಲು ಕಾನೂನು ಹೋರಾಟ ಮಾಡುತ್ತಿದ್ದಾರೆ. ಆರ್ಥಿಕ ಕೊರತೆಯಿಂದ ಮುಂದುವರೆಸಲಾಗದೇ ತಟಸ್ಥರಾಗಿದ್ದಾರೆ.
ಜಯಶ್ರೀ ಗುಳಗಣ್ಣವರ ಈದಿನ.ಕಾಮ್ನೊಂದಿಗೆ ಮಾತಾಡಿ, “13 ವರ್ಷದಿಂದ ನಾ ಬಾಳ ಗಟ್ಟಿಯಾಗೇನ್ರಿ, ಜೀವನ್ಧಾಗ ಭರವಸೆ ಕಳಕೊಂಡಿದ್ದೆ. ಸಾವು ಸೈತ ನನ್ನ ದ್ವೇಷ ಮಾಡಿತು. ಹಂಗಾಗಿ ಸಾಯ ನಿರ್ಧಾರ ಬಿಟ್ಟೆ ಬದಕ್ನ ಕಲಿಯದ ಹ್ಯಾಂಗ್ ಅಂತ ಕಲಿತೆ. ನನ್ನ ಮಕ್ಳನ ಪಡಿಯಾಕ ಲೀಗಲ್ ಹೋರಾಟ ಮಾಡಕತ್ತೇನಿ, ಆರ್ಥಿಕ ತೊಂದರೆ ಐತಿ. ಉಚಿತ ಕಾನೂನು ಸೇವೆ ಐತಿ, ಆದ್ರ ಈಗ ಎಲ್ದಕೂ ರೊಕ್ಕನ ಅಂತಾರ. ಸ್ವಲ್ಪ ಕಷ್ಟ ಅಕೈತಿ ಆದ್ರ ನನ್ನ ಮಕ್ಕಳನ್ನ ಪಡಿತೇನಿ ಎಂಬ ಭರವಸೆ ಐತ್ರಿ” ಎನ್ನುತ್ತಾರೆ.
ಇದನ್ನೂ ಓದಿ: ದಶಕಗಳ ಸಮಸ್ಯೆಗಳಿಗೆ ಶಾಶ್ವತ ಮುಕ್ತಿ: 1 ಲಕ್ಷ ಫಲಾನುಭವಿಗಳಿಗೆ ಕಂದಾಯ ಗ್ರಾಮಗಳ ಹಕ್ಕುಪತ್ರ
ಮನುಷ್ಯನ ಜೀವನ ಸಮಸ್ಯಗಳ ಸಾಗರದಲ್ಲಿ ತೇಲುವ ಹಡಗು. ನೂರಾರು ದುಃಖ, ದುಮ್ಮಾನ, ಬರುತ್ತವೆ ಹೋಗುತ್ತವೆ ಅದನ್ನು ಎದುರಿಸುವ ಧೈರ್ಯ, ಸಾಮರ್ಥ್ಯ, ಛಲ ಇರಬೇಕು. ಭರವಸೆ, ನಂಬಿಕೆ ಕಳೆದುಕೊಳ್ಳವಾರದು. ಇದಕ್ಕೆ ಜಯಶ್ರೀ ಗುಳಗಣ್ಣವರ ಮಾದರಿಯಾಗುತ್ತಾರೆ.