“ಜಗತ್ತಿನಾದ್ಯಂತ ಪರಿಸ್ಥಿತಿ ಸ್ಫೋಟಕವಾಗಿದೆ. ಇಸ್ರೇಲ್-ಪ್ಯಾಲೇಸ್ತೇನ್, ರಷ್ಯಾ-ಉಕ್ರೇನ್ ಯುದ್ಧ ಇನ್ನೂ ನಡೆಯುತ್ತಿದೆ. ಇಂತಹ ಯುದ್ಧಗಳಿಗೆ ದೊಡ್ಡ ಬಂಡವಾಳಗಾರರ ಮಾರುಕಟ್ಟೆ ದಾಹವೇ ಕಾರಣ. ಅಮೆರಿಕದ ಆಳ್ವಿಕರು ಪ್ರಪಂಚದೆಲ್ಲೆಡೆ ಯುದ್ಧಗಳನ್ನು ನಡೆಸಿದೆ. ಭಾರತ- ಪಾಕಿಸ್ತಾನ ಕದನವಿರಾಮ ಸ್ವಾಗತಾರ್ಹವೇ. ಆದರೆ ಟ್ರಂಪ್ ಭಾರತ-ಪಾಕಿಸ್ತಾನದ ನಡುವೆ ಸಂಧಾನ ನಡೆಸಿದೆನೆಂದು ಕೊಚ್ಚಿಕೊಳ್ಳುತ್ತಿದ್ದಾರೆ. ಇದಕ್ಕೆ ಅವಕಾಶ ಮಾಡಿರುವ ಮೋದಿ ಸರ್ಕಾರದ ನಿಲುವು ಖಂಡನೀಯ ಎಂದು ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ಪೊಲಿಟ್ ಬ್ಯೂರೋ ಸದಸ್ಯ ಕೆ ರಾಧಾಕೃಷ್ಣ ಹೇಳಿದರು.
ಬೆಂಗಳೂರು ನಗರದ ಫ್ರೀಡಂ ಪಾರ್ಕ್‌ನಲ್ಲಿ ಎಸ್‌ಯುಸಿಐ(ಸಿ) ರಾಜ್ಯ ಸಮಿತಿಯಿಂದ ಬೆಲೆ ಏರಿಕೆ ನಿಯಂತ್ರಿಸುವಂತೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಮೂಲಸೌಕರ್ಯ ಕಲ್ಪಿಸುವಂತೆ, ಉದ್ಯೋಗ ಖಾತ್ರಿ ಕೂಲಿ ದಿನಗಳನ್ನು 200 ದಿನಕ್ಕೆ ಹೆಚ್ಚಿಸುವಂತೆ, ರೈತರ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ಒದಗಿಸುವಂತೆ, 6000 ಸರ್ಕಾರಿ ಶಾಲೆ ಮುಚ್ಚದಂತೆ, ಉದ್ಯೋಗ ಅವಕಾಶ ಹೆಚ್ಚಿಸುವಂತೆ ಹಾಗೂ ಗುತ್ತಿಗೆ ಪದ್ಧತಿ ರದ್ದುಗೊಳಿಸಿ ಆಶಾ, ಅಂಗನವಾಡಿ ಹಾಗೂ ಬಿಸಿಯೂಟ ಕಾರ್ಮಿಕರಿಗೆ, ಕಾರ್ಮಿಕರ ಸ್ಥಾನಮಾನ ಒದಗಿಸುವಂತೆ ಆಗ್ರಹಿಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನರ ಜ್ವಲಂತ ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಿ ಸಂಘಟಿಸಿದ ರಾಜ್ಯ ಮಟ್ಟದ ‘ಜನ ಹೋರಾಟ’ ಪ್ರತಿಭಟನೆಯಲ್ಲಿ ಮಾತನಾಡಿದರು.
“ದುಡಿಯುವ ಜನರಿಗೆ ಶಾಂತಿ ಬೇಕು, ಬದುಕು ಬೇಕು. ದೇಶದ ಜನರ ಜೀವನ ಸಂಕಟಮಯವಾಗಿದೆ. ಇದಕ್ಕೆ ಕಾರಣ ಸರ್ಕಾರಗಳು ದೇಶದ ಅದಾನಿ, ಅಂಬಾನಿ ಕಾರ್ಪೊರೇಟ್ ಪರ ನೀತಿಗಳನ್ನು ತಂದಿರುವುದು. ಕೆಲವೇ ಜನ ಆಗರ್ಭ ಶ್ರೀಮಂತರು ದೇಶದ ಸಂಪತ್ತಿನ ಶೇ.60ರಷ್ಟು ಸಂಪತ್ತಿನ ಒಡೆಯರಾಗಿದ್ದಾರೆ. ಬಹುಸಂಖ್ಯಾತ ಶೇ 55 ರಷ್ಟು ಜನ ಕೇವಲ ಶೇ 3 ರಷ್ಟು ಸಂಪತ್ತು ಹೊಂದಿದ್ದಾರೆ.
ರೈತ ಕಾರ್ಮಿಕರ ಬದುಕನ್ನು ಬದುಕಿನ ಹಕ್ಕನ್ನು ನಿರ್ದಯವಾಗಿ ಕಿತ್ತುಕೊಳ್ಳುತ್ತಿವೆ. ಈ ಶೋಷಕ ವ್ಯವಸ್ಥೆ ವಿರುದ್ಧ ಬಲಿಷ್ಠ ಹೋರಾಟ ಬೆಳೆಸಬೇಕು, ಅಂತಿಮವಾಗಿ ಶೋಷಣೆ ದೌರ್ಜನ್ಯಗಳಿಲ್ಲದ ಸಮಾಜವಾದಿ ವ್ಯವಸ್ಥೆಯ ಕಡೆ ಹೋರಾಟಗಳನ್ನು ಬೆಳೆಸಬೇಕು” ಎಂದು ಕರೆ ನೀಡಿದರು.

ಕೇಂದ್ರ ಸಮಿತಿ ಸದಸ್ಯೆ ಹಾಗೂ ರಾಜ್ಯ ಕಾರ್ಯದರ್ಶಿ ಕೆ ಉಮಾ ಜನ ಹೋರಾಟ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, “ದೇಶದಲ್ಲಿ 20 ಕೋಟಿ ಜನ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. 7000 ಜನ ಹಸಿವಿನಿಂದ ಸಾಯುತ್ತಿದ್ದಾರೆ. ಅದರಲ್ಲಿ 4000ದಷ್ಟು ಮಕ್ಕಳು ಸಾಯುತ್ತಿವೆ. ಕಳೆದ ಕೆಲವು ವರ್ಷಗಳಲ್ಲಿ ಬಂಡವಾಳಗಾರರ ₹50 ಲಕ್ಷ ಕೋಟಿಯಷ್ಟು ಸಾಲ ಮತ್ತು ತೆರಿಗೆಯನ್ನು ಮನ್ನಾ ಮಾಡಲಾಗಿದೆ. ಆದರೆ ಜನರಿಗೆ ತೆರಿಗೆ ಏರಿಕೆಯಾಗಿದೆ. ವಿದ್ಯಾಭ್ಯಾಸ ದುಬಾರಿಯಾಗಿದ್ದು, ಮೂಲ ಸೌಕರ್ಯಗಳಿಲ್ಲದೆ ಅಳಿದುಳಿದಿರುವ ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ” ಎಂದರು.
“ಒಂದು ವರ್ಷದಲ್ಲಿ 10,000 ರೈತರು ಸತ್ತರೆ, 13,000 ವಿದ್ಯಾರ್ಥಿಗಳು ಸಾಯುತ್ತಿದ್ದಾರೆ. 1 ನಿಮಿಷಕ್ಕೆ 11 ಜನ ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತಿದೆ. ಅಸ್ತಿಗಾಗಿ ಮಗ ತಂದೆಯನ್ನು ಸಾಯಿಸುವಂತಹ ಅಮಾನುಷ ಘಟನೆಗಳು ನಡೆಯುತ್ತಿವೆ. ಬೆಲೆಗಳು ಗಗನಕ್ಕೆರುತ್ತಿವೆ, ಸರ್ಕಾರಿ ಆಸ್ಪತ್ರೆಗಳು ನರಕದ ಕೂಪಗಳಾಗಿವೆ. ಮಕ್ಕಳು, ಯುವಜನರು ಮೊಬೈಲ್ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ. ಜನ ಹೋರಾಟಕ್ಕೆ ಬರದಂತೆ ಜನರ ನಡುವೆ ಜಾತಿ, ಧರ್ಮಗಳ ಹೆಸರಿನಲ್ಲಿ ವಿಷಬೀಜ ಬಿತ್ತಿ ಒಗ್ಗಟ್ಟನ್ನು ಮುರಿಯಲಾಗುತ್ತಿದೆ, ಯುದ್ಧೋನ್ಮಾದ ಸೃಷ್ಟಿಸಲಾಗುತ್ತಿದೆ” ಎಂದು ಕಿಡಿಕಾರಿದರು.

ರಾಜ್ಯ ಸೆಕ್ರೆಟೇರಿಯೆಟ್ ಸದಸ್ಯ ರಾಮಾಂಜಿನಪ್ಪ ಮಾತನಾಡಿ “ಅಧಿಕಾರದಲ್ಲಿರುವ ರಾಜ್ಯ ಕೇಂದ್ರ ಸರ್ಕಾರಗಳು ಅಧಿಕಾರದ ಕಿತ್ತಾಟದಲ್ಲಿ ಮುಳುಗಿವೆ. ಚುನಾವಣೆ ಮೂಲಕ ಗದ್ದುಗೆಯೇರಲು ಕೆಳಮಟ್ಟದ ಪ್ರಚಾರದಲ್ಲಿ ತೊಡಗಿವೆ. 40% ಕಮಿಷನ್ ಬಿಜೆಪಿ ಸರ್ಕಾರ ಅಂತ ಹೇಳಿ, ಗ್ಯಾರಂಟಿ ಭರವಸೆಗಳ ಮೂಲಕ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಈಗ 60% ಕಮಿಷನ್ ಪಡೆಯುತ್ತಿದೆಯೆಂದು ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ರಾಜ್ಯದ ಮೂರು ದೊಡ್ಡ ಪಕ್ಷಗಳು ಅತ್ಯಂತ ಅವಕಾಶವಾದಿಗಳಾಗಿವೆ. ಇವರ ಜನವಿರೋಧಿ ನೀತಿ ವಿರುದ್ಧ ಬಲಿಷ್ಠ ಹೋರಾಟ ಬೆಳೆಸಬೇಕು” ಎಂದು ಕರೆ ನೀಡಿದರು.
ಇದನ್ನೂ ಓದಿದ್ದೀರಾ? ಕೊಪ್ಪಳ | ಅಂಗವೈಕಲ್ಯ ಮೆಟ್ಟಿ ನಿಂತ ಜಯಶ್ರೀ; ಬದುಕಿಗೊಂದು ಸ್ಫೂರ್ತಿಯ ಸೆಲೆ
ಆರಂಭದಲ್ಲಿ ಪ್ರತಿಭಟನೆ ನಡೆಸಿ ಬೆಲೆ ಏರಿಕೆಗೆ ಧಿಕ್ಕಾರ! ಸರ್ಕಾರಿ ಶಾಲೆಗಳನ್ನು ಮುಚ್ಚಬೇಡಿ! ಆಸ್ಪತ್ರೆಗಳಿಗೆ ಮೂಲ ಸೌಕರ್ಯ ಒದಗಿಸಿ! ರೈತರ ಬೆಳೆಗೆ ಬೆಂಬಲ ಬೆಲೆ ಒದಗಿಸಿ ಮುಂತಾದ ಬೇಡಿಕೆಗಳನ್ನು ಸಹಸ್ರಾರು ಜನರು ಮುಗಿಲು ಮುಟ್ಟುವಂತೆ ಕೂಗಿದರು. ನಂತರ 11 ಬೇಡಿಕೆಗಳ ಮನವಿಪತ್ರ ಸರ್ಕಾರಕ್ಕೆ ಸಲ್ಲಿಸಲಾಯಿತು.
ಇಂದಿನ ಜನಹೋರಾಟದ ವೇದಿಕೆಯಲ್ಲಿ ಪಕ್ಷದ ರಾಜ್ಯ ಸಮಿತಿಯ ಸದಸ್ಯರಾದ ಕೆ ಸೋಮಶೇಖರ್, ಎಂ ಶಶಿಧರ್, ಎಂ ಎನ್ ಶ್ರೀರಾಮ್, ಡಾ ಟಿ ಎಸ್ ಸುನಿತ್ ಕುಮಾರ್, ಬಿ ಆರ್ ಅಪರ್ಣ, ವಿ ಎನ್ ರಾಜಶೇಖರ್, ಬಿ ರವಿ, ವಿ ಜ್ಞಾನಮೂರ್ತಿ ಸೇರಿದಂತೆ ಬಹುತೇಕರು ಇದ್ದರು.