ಪ್ರಪಾತವೊಂದರಲ್ಲಿ ವ್ಯಕ್ತಿಯ ಮೃತದೇಹ ಪತ್ತೆಯಾಗಿರುವ ಘಟನೆ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ, ಯಸಳೂರು ಹೋಬಳಿಯ ಮಾಗೇರಿ ಸಮೀಪದ ಕಲ್ಲಹಳ್ಳಿ ಗ್ರಾಮದ ಬಳಿ ವರದಿಯಾಗಿದೆ.
ಪೊಲೀಸ್ ಮೂಲಗಳ ಮಾಹಿತಿಯ ಪ್ರಕಾರ, ಕೊಲೆಯಾದವರು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಕಕ್ಕೆಹೊಳೆ ಜಂಗ್ಲನ್ ನಿವಾಸಿ ಸಂಪತ್ ಅಲಿಯಾಸ್ ಶಂಭು. ಈತನು ತನ್ನ ಗೆಳೆಯನ ಕಾರು ಪಡೆದುಕೊಂಡು ಹೋಗಿದ್ದ. ಅಲ್ಲದೆ, ಕಳೆದ ಶನಿವಾರ ಯಸಳೂರು ಸಮೀಪದ ಪ್ರದೇಶದಲ್ಲಿ ರಕ್ತದ ಕಲೆಗಳಿರುವ ಕಾರು ಪತ್ತೆಯಾಗಿತ್ತು. ತನಿಖೆ ನಡೆಸಿದ ಪೊಲೀಸರು ಕಲ್ಲಹಳ್ಳಿ ಬಳಿಯ ಪ್ರಪಾತದಲ್ಲಿ ಸಂಪತ್‌ನ ಶವವನ್ನು ಪತ್ತೆ ಹಚ್ಚಿದ್ದಾರೆ.

ಅಪರಿಚಿತರು ಸಂಪತ್‌ನನ್ನು ಬರ್ಬರವಾಗಿ ಕೊಚ್ಚಿ ಹತ್ಯೆಗೈದು, ಶವವನ್ನು ಕಾರಿನಲ್ಲಿ ತಂದು ಪ್ರಪಾತದಲ್ಲಿ ಬಿಸಾಡಿದ್ದಾರೆ. ಆತನು ಕೆಲ ತಿಂಗಳ ಹಿಂದೆ ಸಿಎಂ ಸಿದ್ದರಾಮಯ್ಯ ಅವರು ಕೊಡಗು ಜಿಲ್ಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅವರ ಕಾರು ಮೇಲೆ ಮೊಟ್ಟೆ ಎಸೆದ ಪ್ರಕರಣದಲ್ಲಿ ಆರೋಪಿಯಾಗಿದ್ದ.
ಕಳೆದ ಏಪ್ರಿಲ್ 9 ರಂದು ಕುಶಾಲನಗರದ ಗೆಳೆಯನಿಂದ ಸಂಪತ್ ತೆಗೆದುಕೊಂಡು ಹೋಗಿದ್ದ ಕಾರು, ಮೇ 10ರಂದು ಕಲ್ಲಹಳ್ಳಿಯಲ್ಲಿ ಬಿಟ್ಟುಹೋಗಲಾಗಿತ್ತು. ಶನಿವಾರ ಬೆಳಿಗ್ಗೆ ಗ್ರಾಮಸ್ಥರು ಸಂಶಯಾಸ್ಪದವಾಗಿ ನಿಂತಿದ್ದ ಕಾರನ್ನು ಗಮನಿಸಿದ ಬಳಿಕ, ತೋಟದ ಕಾರ್ಮಿಕರನ್ನು ಕರೆತಂದ ಚಾಲಕನೊಬ್ಬ ಅದರಲ್ಲಿದ್ದ ರಕ್ತದ ಕಲೆಗಳ ಬಗ್ಗೆ ಮಾಹಿತಿ ನೀಡಿದ ನಂತರ, ಯಸಳೂರು ಠಾಣೆಗೆ ದೂರು ನೀಡಲಾಗಿತ್ತು.
ಘಟನೆ ನಡೆದ ಸ್ಥಳಕ್ಕೆ ಸರ್ಕಲ್ ಇನ್ಸ್‌ಪೆಕ್ಟರ್ ಹಾಗೂ ಎಸ್‌ಐ ಶ್ರೀನಿವಾಸ್ ನೇತೃತ್ವದ ಪೊಲೀಸ್ ತಂಡ, ಶ್ವಾನದಳ ಮತ್ತು ಬೆರಳಚ್ಚು ತಜ್ಞರೊಂದಿಗೆ ತೆರಳಿ ಮಹಜರು ಕೈಗೊಂಡಿತು. ಪ್ರಾಥಮಿಕ ತನಿಖೆಯಲ್ಲಿ ಪತ್ತೆಯಾದ ಕಾರು ಕುಶಾಲನಗರದ ವ್ಯಾಪಾರಿ ಜಾನ್ ಅವರದ್ದು ಎಂದು ಖಚಿತವಾಗಿದೆ. ಸಂಪತ್ ಅದನ್ನು ಶನಿವಾರ ತೆಗೆದುಕೊಂಡು ಹೋಗಿದ್ದನು. ಆ ನಂತರ ಸಂಪತ್‌ನ ಮೊಬೈಲ್ ಸ್ವಿಚ್‌ಆಫ್ ಆಗಿದ್ದು, ಅವರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿರಲಿಲ್ಲ.
ಕುಶಾಲನಗರ ಠಾಣೆಯಲ್ಲಿ ಸಂಪತ್ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿತ್ತು. ಇತ್ತ ಯಸಳೂರು ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದರು. ನಾಲ್ಕು ದಿನಗಳ ಶೋಧದ ಬಳಿಕ ಶವ ಪತ್ತೆಯಾಗಿದೆ. ಬೇರೆಡೆ ಕೊಲೆ ಮಾಡಿ ಮಲೆನಾಡು ಪ್ರದೇಶಕ್ಕೆ ಶವವನ್ನು ಬಿಸಾಕಿ ಹೋಗಿರಬಹುದು ಎಂದು ಶಂಕಿಸಲಾಗಿದೆ.
ಇದನ್ನೂ ಓದಿದ್ದೀರಾ?ಹಾಸನ l ಜನವಸತಿ ಪ್ರದೇಶದಲ್ಲಿ ಅಪರಿಚಿತ ಕಾರು ಪತ್ತೆ
ಈ ಹಿಂದೆ ಸಾಕಷ್ಟು ಗಲಾಟೆಗಳಲ್ಲಿ ಸಂಪತ್ ಭಾಗಿಯಾಗಿದ್ದನೆಂಬ ಮಾಹಿತಿಯ ಹಿನ್ನೆಲೆಯಲ್ಲಿ ಬಂಧಿತ ವ್ಯಕ್ತಿಗಳ ವಿಚಾರಣೆ ಕೈಗೊಂಡಿದ್ದರು. ಆದರೂ ನಿರ್ದಿಷ್ಟ ಸುಳಿವು ಸಿಗದ ಪರಿಸ್ಥಿತಿಯಲ್ಲಿ, ಈಗ ಶವ ಪತ್ತೆಯಾಗಿದ್ದು ಪ್ರಕರಣವು ಹೊಸ ತಿರುವು ಪಡೆದಿದೆ. ಮೃತದೇಹವನ್ನು ಮಡಿಕೇರಿಯ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಪ್ರಕರಣದ ಬಗ್ಗೆ ಪೊಲೀಸ್ ತನಿಖೆ ಮುಂದುವರೆಸಿದ್ದಾರೆ.