ದಲಿತ ಸಾಹಿತ್ಯ ಪರಿಷತ್ತು ರಾಜ್ಯ ಘಟಕ ಪ್ರತಿ ವರ್ಷ ಪ್ರಕಟಿಸುವ ಪುಸ್ತಕ ಪ್ರಶಸ್ತಿ ವಿಭಾಗದಲ್ಲಿ ಬಿ.ಶ್ರೀನಿವಾಸ ಅವರ ಕೃತಿ “ಖಾಲಿ ಗೋಡೆಯ ಗುರುತಿಲ್ಲದ ಚಿತ್ರಗಳು” ರಾಷ್ಟ್ರೀಯ ಪುಸ್ತಕ ಪ್ರಶಸ್ತಿಗೆ ಆಯ್ಕೆಯಾಗಿದೆ. ಕೃತಿಯ ಲೇಖಕ ಬಿ. ಶ್ರೀನಿವಾಸ್ ದಾವಣಗೆರೆಯಲ್ಲಿ ವಾಸವಿದ್ದು, ನ್ಯಾಯಾಂಗ ವ್ಯವಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಸಾಹಿತ್ಯ ಕೃಷಿಯಲ್ಲಿಯೂ ತೊಡಗಿಕೊಂಡಿದ್ದಾರೆ.
ರಾಯಚೂರಿನಲ್ಲಿ 28 ಹಾಗೂ 29 ನೇ ಜೂನ್ 2025 ರಂದು ನಡೆಯುವ 11ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ದಲಿತ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ತಿಳಿಸಿದ್ದಾರೆ.

ಈ ಬಗ್ಗೆ ಪತ್ರ ವ್ಯವಹಾರ ನಡೆಸಿರುವ ದಸಾಪ ರಾಜ್ಯ ಘಟಕ ಅಧ್ಯಕ್ಷ ಡಾ.ಅರ್ಜುನ ಗೊಳಸಂಗಿ
ರಾಜ್ಯ ದಲಿತ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳ ವತಿಯಿಂದ ಲೇಖಕರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸಿದ್ದು, ಸಮ್ಮೇಳನದಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ಸ್ವೀಕರಿಸಿ ಸಮ್ಮೇಳನ ಯಶಸ್ವಿಗೊಳಿಸಲು ತಿಳಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಸಂವಿಧಾನ ಸಾಕ್ಷಿಯಾಗಿ ಮಾದರಿ ಮದುವೆ; ಬುದ್ಧ, ಬಸವ, ಅಂಬೇಡ್ಕರ್ ತತ್ವಗಳ ಪಾಲನೆಗೆ ಕಂಕಣಬದ್ದ
ಕೃತಿಯಲ್ಲಿ…..
ಕ್ರೌರ್ಯಕ್ಕೆ ಅದೆಷ್ಟು ಮುಖಗಳು, ಮನುಷ್ಯನ ಓಟದ ಹಪಾಹಪಿಯಲಿ ಬರಿದಾಗುತ್ತಿರುವ ಅಂತಃಕರಣ, ದುರಾಸೆಯಿಂದಾಗಿ ನೆಲ ಮೂಲ ಸಂಸ್ಕೃತಿಗಳ ಅಳಿವು, ಮೌಲ್ಯಗಳ ತಣ್ಣನೆಯ ಅವಸಾನ….ಇವೆಲ್ಲವನ್ನೂ ಸಲೀಸಾಗಿ ಶಬ್ದಗಳಿಗೆ ಇಳಿಸಿದ್ದಾರೆ ಲೇಖಕ ಬಿ.ಶ್ರೀನಿವಾಸರವರು “ಖಾಲಿ ಗೋಡೆಯ ಗುರುತಿಲ್ಲದ ಚಿತ್ರಗಳು” ಕೃತಿಯಲ್ಲಿ.
ಇದನ್ನ ಸಣ್ಣ ಕಥೆಯೋ,ಮಿನಿ ಕಥೆಯೋ,ನ್ಯಾನೋ ಕಥೆಯೋ ಇನ್ಯಾವುದೋ ಪ್ರಕಾರದ ಕಥೆಯ ಕೃತಿಯೆಂದು ಕರೆದು ಕೊಳ್ಳುವುದು ಓದುಗರಿಗೆ ಬಿಟ್ಟು… ತಮಗೆ ಕಾಡಿದ ತಾವು ನೋಡಿದ, ತಮಗೆ ಹೊಳೆದ ದಟ್ಟ ವಿಷಾದದ ಘಟನೆ ಸಂಗತಿಗಳನ್ನು, ಪ್ರಶ್ನೆಗಳನ್ನೂ ಹರಿವಿ ತಣ್ಣಗೆ ಓದುಗನಿಗೂ ದಾಟಿಸುವ ಪ್ರಯತ್ನವನ್ನು ಈ ಕೃತಿಯಲ್ಲಿ ಮಾಡಲಾಗಿದೆ.
ಆ ಮೂಲಕ ಎಲ್ಲರೊಳಗಿನ ಜೀವ ತಂತುಗಳು ನಿಷ್ಕ್ರಿಯ ಗೊಳ್ಳದಂತೆ ಬಡಿದು ಜೀವ ತುಂಬುವ ಕೆಲಸ ಮಾಡುವಲ್ಲಿ, ಚಿಂತನೆಗೆ ಹಚ್ಚುವಲ್ಲಿ ಗುರುತಿಲ್ಲದ ಚಿತ್ರಗಳ ಕಥೆಗಳು ಸಫಲವಾಗುತ್ತವೆ. ಅವರ ಅನುಭವಗಳನ್ನ ಅವರು ಐದು ಉಪ ಶೀರ್ಷಿಕೆ ಅಡಿಯಲ್ಲಿ ಕಟ್ಟಿ ಕೊಟ್ಟಿದ್ದಾರೆ.

ಕೋರ್ಟಿನ ಚಿತ್ರಗಳಲ್ಲಿ ಬರುವ ಕತೆಗಳು ಬಹುತೇಕ ಎಲ್ಲವೂ ಮನಕಲಕುವಂತಿವೆ. ಅದರಲ್ಲೂ ದಂಡ ಕಟ್ಟಿದ ವೇಶ್ಯೆ ಈಗ ನಾನೆಲ್ಲಿಗೆ ಹೋಗಲಿ ಎಂದು ಕೇಳುವುದು, ಹುಡುಗ ಕೋರ್ಟಿನ ಅಂಗಳದಲ್ಲಿ ತನ್ನ ಅವ್ವನನ್ನು ಹುಡುಕುವುದು, ಅಜ್ಜಿ ಖಾಲಿ ಚೀಲವನ್ನು ಮರಳಿ ಪಡೆಯಲು ಬಂದ ಸನ್ನಿವೇಶ, ಜಪ್ತಿ ಮಾಡಲು ಬಂದವರಿಗೆ ಮನೆಯಲ್ಲಿ ಕಂಡುಬಂದ ಚಿತ್ರಣ ಅಕ್ಷರಶಃ ಕಣ್ಣೀರು ತರಿಸುತ್ತವೆ. ಇದಲ್ಲದೆ ದಮನಿತರು ಹೇಗೆ ಶೋಷಣೆಗೊಳಪಟ್ಟಿದ್ದಾರೆ ಮತ್ತು ಅವರು ಹೇಗೆ ನೋವುಂಡಿದ್ದಾರೆ ಎಂಬುದು ಈ ಬರಹಗಳಲ್ಲಿ ಬಹು ಪರಿಣಾಮಕಾರಿಯಾಗಿ ವ್ಯಕ್ತವಾಗಿದೆ. ಒಟ್ಟಾರೆ ಎಲ್ಲಾ ಕಥೆಗಳು ಮತ್ತು ಪುಟ್ಟ ಬರಹಗಳು ಚಿಕ್ಕವಾಗಿ ಕಂಡರೂ ಪ್ರತಿಯೊಂದೂ ಕೂಡಾ ಬಹು ಮೌಲ್ಯಯುತವಾದವುಗಳಾಗಿವೆ.
ಇದನ್ನೂ ಓದಿ ; ದಾವಣಗೆರೆ | ಗೌತಮ ಬುದ್ಧನ ತತ್ವ, ಚಿಂತನೆಗಳ ಸ್ಮರಣೆಯೊಂದಿಗೆ ಬುದ್ಧ ಪೂರ್ಣಿಮೆ ಆಚರಣೆ.