- ನಗರದಲ್ಲಿ ಅಕ್ರಮವಾಗಿ ಒತ್ತುವರಿಯಾದ ಪಾದಚಾರಿ ಮಾರ್ಗಗಳು
- ಅಕ್ರಮವಾಗಿ ನಿಲುಗಡೆ ಮಾಡಿದ ವಾಹನ ಮತ್ತು ಅವಶೇಷಗಳ ತೆರವು
ಬೆಂಗಳೂರಿನ ಫುಟ್‌ಪಾತ್‌ಗಳನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವುದನ್ನು ತೆರವು ಮಾಡಿ, ಪಾದಚಾರಿಗಳ ಓಡಾಟಕ್ಕೆ ಅನುಕೂಲ ಮಾಡಿಕೊಡಲು ಬೆಂಗಳೂರು ಸಂಚಾರ ಪೊಲೀಸರು ಮುಂದಾಗಿದ್ದಾರೆ.
ಜುಲೈ 10ರಂದು ಬೆಳ್ಳಂಬೆಳಗ್ಗೆ ಬೆಂಗಳೂರಿನಲ್ಲಿ ಸಂಚಾರಿ ಪೊಲೀಸರು ‘ಮುಕ್ತ ಕಾಲುದಾರಿ’ ಎಂಬ ಅಭಿಯಾನವನ್ನು ಪ್ರಾರಂಭಿಸಿದ್ದಾರೆ.
“ಬೆಂಗಳೂರಿನಲ್ಲಿ ಪಾದಚಾರಿಗಳು, ನಿರ್ಗತಿಕರು ಇತ್ತೀಚಿಗೆ ಅಪಘಾತಕ್ಕೆ ಈಡಾಗುತ್ತಿದ್ದರು. ಹಾಗಾಗಿ, ಬೆಳ್ಳಂಬೆಳಗ್ಗೆ ಸ್ಪೆಷಲ್ ಡ್ರೈವ್ ಮಾಡಿದ್ದಿವಿ. ಹಲವಾರು ನಿರ್ಗತಿಕರಿಗೆ ತಿಂಡಿ ಕೊಟ್ಟು ತಿಳಿವಳಿಕೆ ಹೇಳಿ ಭಿಕ್ಷುಕರ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಿಕೊಡಲಾಗಿದೆ. ಎಲ್ಲರೂ ಮನುಷ್ಯರೇ. ನಾವು ಮಾಡಿದ್ದು ಸರಿ ಅಂತ ನಮಗನಿಸ್ತಿದೆ ನಿಮ್ಗೆ?” ಎಂದು ಬೆಂಗಳೂರು ಸಂಚಾರ ಪೊಲೀಸ್ ಟ್ವೀಟ್ ಮಾಡಿದೆ.
48 ಟ್ರಾಫಿಕ್ ಪೊಲೀಸ್ ಠಾಣೆಗಳಲ್ಲಿ ಪ್ರತಿ ದಿನವೂ ತಮ್ಮ ವ್ಯಾಪ್ತಿಗೆ ಬರುವ ಒಂದು ಫುಟ್‌ಪಾತ್ ಮೇಲೆ ಕೇಂದ್ರೀಕರಿಸಿ, ಅಕ್ರಮವಾಗಿ ನಿಲುಗಡೆ ಮಾಡಿದ ವಾಹನಗಳು ಮತ್ತು ಅವಶೇಷಗಳನ್ನು ತೆರವುಗೊಳಿಸುತ್ತಿದೆ.
ಜಂಟಿ ಪೊಲೀಸ್ ಕಮಿಷನರ್ (ಸಂಚಾರ) ಎಮ್ ಎನ್ ಅನುಚೇತ್ ಮಾತನಾಡಿ, “ಈ ಡ್ರೈವ್ ಚಾಲ್ತಿಯಲ್ಲಿರುವ ‘ಮುಕ್ತ ಕಾಲುದಾರಿ’ (ReclaimFootpaths) ಅಭಿಯಾನದ ಭಾಗವಾಗಿದೆ. ಇದನ್ನು ಇತರ ಅಭಿಯಾನಗಳೊಂದಿಗೆ ಏಕಕಾಲದಲ್ಲಿ ನಡೆಸಲಾಗುವುದು” ಎಂದರು.
“ಈ ಅಭಿಯಾನದಲ್ಲಿ ಫುಟ್‌ಪಾತ್‌ಗಳಲ್ಲಿ ಅಕ್ರಮವಾಗಿ ನಿಲುಗಡೆ ಮಾಡಿದ ವಾಹನಗಳನ್ನು ತೆರವುಗೊಳಿಸುತ್ತೇವೆ. ಇದರಿಂದ ಪಾದಚಾರಿಗಳು ಫುಟ್‌ಪಾತ್‌ಗಳನ್ನು ಮುಕ್ತವಾಗಿ ಬಳಸಬಹುದು. ಫುಟ್‌ಪಾತ್‌ಗಳ ಸುಧಾರಣೆ ಅಥವಾ ಮೂಲಸೌಕರ್ಯ ಬದಲಾವಣೆಗಳ ಅಗತ್ಯವಿದ್ದರೆ ಸಂಚಾರ ಪೊಲೀಸರು ಪುರಸಭೆಯ ಅಧಿಕಾರಿಗಳಿಗೆ ಮಾಹಿತಿ ನೀಡುತ್ತಾರೆ” ಎಂದು ಅವರು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮಸೀದಿಯಲ್ಲಿ ಮಲಗಲು ಜಾಗ ನೀಡಿಲ್ಲವೆಂದು ಹುಸಿ ಬಾಂಬ್ ಕರೆ; ಬಿಎಸ್‌ಸಿ ಪದವೀಧರ ಬಂಧನ
2022ರಲ್ಲಿ ಬೆಂಗಳೂರಿನಲ್ಲಿ 248 ಜನ ಪಾದಚಾರಿಗಳು ಸಾವನ್ನಪ್ಪಿದ್ದಾರೆ. ಇನ್ನೂ 819 ಪಾದಚಾರಿಗಳು ಗಾಯಗೊಂಡಿದ್ದಾರೆ. ಪಾದಚಾರಿ ಮಾರ್ಗಗಳು ಅಕ್ರಮವಾಗಿ ಒತ್ತುವರಿಯಾದ ಕಾರಣ ಜನರು ಓಡಾಡಲು ಸ್ಥಳಾವಕಾಶದ ಕೊರತೆಯಾಗುತ್ತದೆ. ಇದರಿಂದ ಜನರು ರಸ್ತೆಯ ಮೇಲೆ ನಡೆಯಬೇಕಾಗುತ್ತದೆ. ಈ ವೇಳೆ, ಪಾದಚಾರಿಗಳು ಅಪಘಾತ ಮತ್ತು ಸಾವುಗಳಿಗೆ ಒಳಗಾಗುತ್ತಾರೆ.