ಖಾಸಗಿ ಬಸ್ವೊಂದು ಚಲಿಸುವಾಗಲೇ ಹೊತ್ತಿ ಉರಿದಿದ್ದು, ಬಸ್ನಲ್ಲಿದ್ದ ಇಬ್ಬರು ಮಕ್ಕಳು ಸೇರಿ ಐವರು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಗುರುವಾರ ಮುಂಜಾನೆ ಉತ್ತರ ಪ್ರದೇಶದ ಲಕ್ನೋ ಬಳಿ ನಡೆದಿದೆ. ದರ್ಘಟನೆಯಲ್ಲಿ ಹಲವರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಲಕ್ನೋದ ಹೊರವಲಯದಲ್ಲಿರುವ ಮೋಹನ್ ಲಾಲ್ಗಂಜ್ ಪ್ರದೇಶದಲ್ಲಿ ಬಸ್ ಚಲಿಸುತ್ತಿದ್ದಾಗ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಿದೆ. ಬಸ್ ನಿಲ್ಲಿಸಿ, ಪ್ರಯಾಣಿಕರನ್ನು ಇಳಿಸುವಷ್ಟರಲ್ಲಿ ಬೆಂಕಿ ಇಡೀ ಬಸ್ಗೆ ವ್ಯಾಪಿಸಿದ್ದು, ಐವರು ದರ್ಮರಣ ಹೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
“ಬಸ್ನಲ್ಲಿ ಸುಮಾರು 80 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಬಿಹಾರದ ಬೇಗುಸರಾಯ್ನಿಂದ ದೆಹಲಿಗೆ ಬಸ್ ತೆರಳುತ್ತಿತ್ತು. ಬಸ್ನ ಗೇರ್ಬಾಕ್ಸ್ನಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿದ್ದು, ಅದರಿಂದಲೇ ಬೆಂಕಿ ಹೊತ್ತಿಕೊಂಡಿರಬಹುದು ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ” ಎಂದು ಮೋಹನ್ ಲಾಲ್ಗಂಜ್ನ ಸಹಾಯಕ ಪೊಲೀಸ್ ಆಯುಕ್ತ ರಜನೀಶ್ ವರ್ಮಾ ಹೇಳಿದ್ದಾರೆ.
“ಬೆಂಕಿ ಹೊತ್ತಿಕೊಂಡಾಗ ಹೆಚ್ಚಿನ ಪ್ರಯಾಣಿಕರು ನಿದ್ರಿಸುತ್ತಿದ್ದರು. ಬೆಂಕಿ ವೇಗವಾಗಿ ವ್ಯಾಪಿಸಿದೆ. ಇಬ್ಬರು ಮಕ್ಕಳು, ಇಬ್ಬರು ಮಹಿಳೆಯರು ಹಾಗೂ ಓರ್ವ ಪುರುಷ ಬೆಂಕಿಯಿಂದ ತಪ್ಪಿಸಿಕೊಂಡು ಹೊರಬರಲಾಗದೆ, ಸಾವನ್ನಪ್ಪಿದ್ದಾರೆ. ಹಲವಾರು ಇತರ ಪ್ರಯಾಣಿಕರು ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ” ಎಂದು ಅವರು ತಿಳಿಸಿದ್ದಾರೆ.
ಬೆಂಕಿಯ ಜ್ವಾಲೆಯು ಸುಮಾರು ಒಂದು ಕಿಲೋಮೀಟರ್ ದೂರದವರೆಗೂ ಗೋಚರಿಸುತ್ತಿತ್ತು. ಬೆಂಕಿ ಹೊತ್ತಿಕೊಂಡ ತಕ್ಷಣ ಬಸ್ ನಿಲ್ಲಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ತಲುಪಿ ಅರ್ಧ ಗಂಟೆಯೊಳಗೆ ಬೆಂಕಿಯನ್ನು ನಂದಿಸಿದ್ದಾರೆ. ಬಸ್ಸಿನ ತುರ್ತು ನಿರ್ಗಮನ ಬಾಗಿಲು ತೆರೆಯಲು ವಿಫಲವಾದ ಕಾರಣ ಹಿಂಭಾಗದಲ್ಲಿ ಕುಳಿತಿದ್ದ ಪ್ರಯಾಣಿಕರು ಒಳಗೆ ಸಿಲುಕಿಕೊಂಡಿದ್ದರು ಎಂಬುದು ಪೊಲೀಸ್ ತನಿಖೆಯಲ್ಲಿ ಗೊತ್ತಾಗಿದೆ.